ಅಕ್ರಮ ಸಿಮ್ ಕಾರ್ಡ್‌ಗಳ ಜಾಲ ಪತ್ತೆಗೆ ಮಾರ್ಗಸೂಚಿ ರೂಪಿಸಿ: ಸೈಬರ್ ಕಮಾಂಡ್ ಡಿಜಿಪಿಗೆ ಹೈಕೋರ್ಟ್ ನಿರ್ದೇಶನ

ಅಮಾಯಕರ ಗುರುತಿನ ದಾಖಲೆ ದುರ್ಬಳಕೆಯಿಂದ ಸೈಬರ್ ಅಪರಾಧ, ಹಣಕಾಸು ವಂಚನೆ ಸಾಧ್ಯತೆ; ಜಿಯೋ, ವೊಡಾಫೋನ್ ಸೇರಿದಂತೆ ಟೆಲಿಕಾಂ ಸಂಸ್ಥೆಗಳಿಗೂ ಸುರಕ್ಷತಾ ಕ್ರಮಗಳ ಪರಿಶೀಲನೆಗೆ ಸೂಚಿಸಿದ ಹೈಕೋರ್ಟ್‌.
Karnataka HC and Justice Suraj Govindaraj
Karnataka HC and Justice Suraj Govindaraj
Published on: 

ಆಧಾರ್ ದತ್ತಾಂಶ ಹಾಗೂ ಗ್ರಾಹಕರ ಗುರುತಿನ ದಾಖಲೆಗಳನ್ನು ಅವರ ಅನುಮತಿಯಿಲ್ಲದೆ ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಸಿಮ್ ಕಾರ್ಡ್‌ಗಳನ್ನು ಸಕ್ರಿಯಗೊಳಿಸಿ ಮಾರಾಟ ಮಾಡುವ ಜಾಲವನ್ನು ಪತ್ತೆಹಚ್ಚಲು ಅಗತ್ಯ ಮಾರ್ಗಸೂಚಿಗಳನ್ನು ರೂಪಿಸುವಂತೆ ಕರ್ನಾಟಕ ಹೈಕೋರ್ಟ್ ಸೈಬರ್ ಕಮಾಂಡ್‌ನ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಈಚೆಗೆ ನಿರ್ದೇಶಿಸಿದೆ.

ತಮ್ಮ ವಶದಲ್ಲಿ 75 ಪೂರ್ವಸಕ್ರಿಯಗೊಳಿಸಿದ (ಪ್ರಿ-ಆಕ್ಟಿವೇಟೆಡ್) ಸಿಮ್ ಕಾರ್ಡ್‌ಗಳನ್ನು ಹೊಂದಿದ್ದ ಆರೋಪಕ್ಕೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಮಲ್ಲಿಕಾರ್ಜುನ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ಈ ನಿರ್ದೇಶನಗಳನ್ನು ನೀಡಿದೆ.

ಸಿಮ್ ಕಾರ್ಡ್‌ಗಳು ಕೇವಲ ದೂರಸಂಪರ್ಕ ಜಾಲವನ್ನು ಬಳಸುವ ಸಾಧನಗಳಲ್ಲ. ಅವು ಡಿಜಿಟಲ್ ಗುರುತು, ಒನ್ ಟೈಮ್ ಪಾಸ್‌ವರ್ಡ್ (ಒಟಿಪಿ), ಬ್ಯಾಂಕಿಂಗ್ ಮತ್ತು ಹಣಕಾಸು ವಹಿವಾಟುಗಳಿಗೆ ಸಂಬಂಧಿಸಿದ ಪ್ರಮುಖ ಸಾಧನಗಳಾಗಿವೆ. ಅಮಾಯಕರ ಹೆಸರಿನಲ್ಲಿ ಅವರ ಅರಿವಿಗೆ ಬಾರದಂತೆ ಸಿಮ್ ಕಾರ್ಡ್‌ಗಳನ್ನು ಸಕ್ರಿಯಗೊಳಿಸುವುದರಿಂದ ಸೈಬರ್ ಅಪರಾಧ, ಗುರುತಿನ ಕಳವು ಮತ್ತು ಹಣಕಾಸು ವಂಚನೆಗೆ ದಾರಿಯಾಗಬಹುದು ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.

ಅಮಾಯಕರ ಹೆಸರಿನಲ್ಲಿ ನೋಂದಾಯಿಸಲಾದ ಸಿಮ್ ಕಾರ್ಡ್‌ಗಳ ದುರ್ಬಳಕೆಯನ್ನು ತಡೆಯಲು ಹಾಗೂ ಅವುಗಳನ್ನು ಅಪರಾಧ ಕೃತ್ಯಗಳಿಗೆ ಬಳಸುವುದನ್ನು ನಿಯಂತ್ರಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪೀಠ ಸೂಚಿಸಿದೆ.

ಅನಧಿಕೃತ ಸಿಮ್ ಸಕ್ರಿಯಗೊಳಿಸುವಿಕೆ ಕುರಿತು ಮಾಹಿತಿ ಲಭ್ಯವಾದ ತಕ್ಷಣ ಸಂಬಂಧಪಟ್ಟ ಪೊಲೀಸ್ ಪ್ರಾಧಿಕಾರಗಳೊಂದಿಗೆ ಸಮನ್ವಯ ಸಾಧಿಸಿ ಪರಿಶೀಲನೆ ನಡೆಸಬೇಕು ಮತ್ತು ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದೆ.

ಅಕ್ರಮವಾಗಿ ಸಿಮ್ ಕಾರ್ಡ್‌ಗಳನ್ನು ಸಕ್ರಿಯಗೊಳಿಸಿ ಮಾರಾಟ ಮಾಡುವ ಜಾಲವನ್ನು ಪತ್ತೆಹಚ್ಚಲು ತನಿಖಾ ವಿಧಾನಗಳನ್ನು ಬಲಪಡಿಸಬೇಕು. ಭವಿಷ್ಯದಲ್ಲಿ ಇಂತಹ ಕೃತ್ಯಗಳು ಮರುಕಳಿಸದಂತೆ ಸೂಕ್ತ ಕ್ರಮಗಳನ್ನು ರೂಪಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಜಿಯೋ ಮತ್ತು ವೊಡಾಫೋನ್ ಸೇರಿದಂತೆ ಸಂಬಂಧಪಟ್ಟ ಮೊಬೈಲ್ ಸೇವಾ ಪೂರೈಕೆದಾರರು ಸಿಮ್ ಕಾರ್ಡ್‌ಗಳ ವಿತರಣೆ ಮತ್ತು ಸಕ್ರಿಯಗೊಳಿಸುವಿಕೆಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಪರಿಶೀಲಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.

ಸಕ್ರಿಯಗೊಳಿಸದ ಸಿಮ್ ಕಾರ್ಡ್‌ಗಳ ಸಂಗ್ರಹಣೆ, ಸಾಗಣೆ ಮತ್ತು ನಿರ್ವಹಣೆಗೆ ಅನುಮತಿ ಪಡೆದ ವ್ಯಕ್ತಿಗಳ ವಿವರಗಳನ್ನು ಸಮರ್ಪಕವಾಗಿ ದಾಖಲಿಸಬೇಕು. ವಿತರಕರು ಮತ್ತು ಮಧ್ಯವರ್ತಿಗಳಿಗೆ ಪೂರೈಸಿದ ಹಾಗೂ ಅವರಿಂದ ಹಿಂದಿರುಗಿಸಲಾದ ಸಿಮ್ ಕಾರ್ಡ್‌ಗಳ ಲೆಕ್ಕಪತ್ರವನ್ನೂ ಪರಿಶೀಲಿಸಬೇಕು ಎಂದು ಸೂಚಿಸಿದೆ.

ವಿತರಕರು ಮತ್ತು ಮಧ್ಯವರ್ತಿಗಳಿಗೆ ಪೂರೈಸಿದ ಸಿಮ್ ಕಾರ್ಡ್‌ಗಳ ಸಂಖ್ಯೆ, ಮಾರಾಟವಾದವು, ಹಿಂದಿರುಗಿಸಲಾದವು, ರದ್ದುಗೊಂಡವು ಹಾಗೂ ಇತರ ರೀತಿಯಲ್ಲಿ ವಿಲೇವಾರಿಯಾದವುಗಳ ವಿವರಗಳನ್ನು ಸಮನ್ವಯಗೊಳಿಸುವ ವ್ಯವಸ್ಥೆ ಇರಬೇಕು ಎಂದು ನ್ಯಾಯಾಲಯ ಹೇಳಿದೆ.

ಗ್ರಾಹಕರಿಗೆ ತಿಳಿಯದಂತೆ ಅಥವಾ ಅವರ ಅನುಮತಿಯಿಲ್ಲದೆ ಗುರುತಿನ ದಾಖಲೆಗಳನ್ನು ಬಳಸಿ ಸಿಮ್ ಕಾರ್ಡ್‌ಗಳನ್ನು ಸಕ್ರಿಯಗೊಳಿಸುವುದನ್ನು ತಡೆಯಲು ಪರಿಣಾಮಕಾರಿ ಪರಿಶೀಲನಾ ಕ್ರಮಗಳನ್ನು ಜಾರಿಗೊಳಿಸಬೇಕು. ತಮ್ಮ ಹೆಸರಿನಲ್ಲಿ ಅನಧಿಕೃತವಾಗಿ ಸಿಮ್ ಕಾರ್ಡ್‌ಗಳನ್ನು ಸಕ್ರಿಯಗೊಳಿಸಿರುವ ಬಗ್ಗೆ ದೂರು ಸಲ್ಲಿಸಲು ಗ್ರಾಹಕರಿಗೆ ಸುಲಭವಾಗಿ ಲಭ್ಯವಾಗುವ ವ್ಯವಸ್ಥೆಯನ್ನೂ ಕಲ್ಪಿಸಬೇಕು ಎಂದು ನಿರ್ದೇಶಿಸಿದೆ.

ಟೆಲಿಕಾಂ ಸಂಸ್ಥೆಗಳು ಪ್ರಮೋಟರ್‌ಗಳು ಮತ್ತು ವಿತರಕರ ನೇಮಕಾತಿ, ಅವರಿಗೆ ಪೂರೈಸುವ ಸಿಮ್ ಕಾರ್ಡ್‌ಗಳ ದಾಸ್ತಾನು ನಿರ್ವಹಣೆ ಹಾಗೂ ಗ್ರಾಹಕರ ದಾಖಲೆಗಳ ಪರಿಶೀಲನೆಯ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ಪೀಠ ಸೂಚಿಸಿದೆ.

ಆದರೆ, ತನಿಖೆಗಾಗಿ ರೂಪಿಸುವ ಮಾರ್ಗಸೂಚಿಗಳು ಕಾನೂನಿನ ಚೌಕಟ್ಟಿನಲ್ಲಿರಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರ ವೈಯಕ್ತಿಕ ದತ್ತಾಂಶದ ಮೇಲೆ ಅನಗತ್ಯ ನಿಗಾ ಇರಿಸುವುದಾಗಲಿ, ಅವರ ಗೌಪ್ಯತೆಯನ್ನು ಉಲ್ಲಂಘಿಸುವುದಾಗಲಿ ನಡೆಯಬಾರದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರ ಮಲ್ಲಿಕಾರ್ಜುನ ಜಿಯೋ ಸಂಸ್ಥೆಯ ಪ್ರಮೋಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸಿಮ್ ಕಾರ್ಡ್ ಖರೀದಿಸಲು ತಮ್ಮ ಬಳಿ ಬರುತ್ತಿದ್ದ ಗ್ರಾಹಕರ ಗುರುತಿನ ದಾಖಲೆಗಳು ಮತ್ತು ಭಾವಚಿತ್ರಗಳನ್ನು ದುರ್ಬಳಕೆ ಮಾಡಿಕೊಂಡು, ಅವರ ಹೆಸರಿನಲ್ಲಿ ಅನಧಿಕೃತವಾಗಿ ಸಿಮ್ ಕಾರ್ಡ್‌ಗಳನ್ನು ಸಕ್ರಿಯಗೊಳಿಸುತ್ತಿದ್ದರು ಎಂಬುದು ಆರೋಪವಾಗಿತ್ತು.

ಈ ಸಂಬಂಧ ಎಚ್‌ಎಎಲ್ ಪೊಲೀಸ್ ಠಾಣೆಗೆ ಬಂದ ಮಾಹಿತಿಯ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು. ತನಿಖೆಯ ಬಳಿಕ ಆರೋಪಿಯ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.

ತನಿಖೆಯ ಸಂದರ್ಭದಲ್ಲಿ ಅರ್ಜಿದಾರನ ವಶದಲ್ಲಿದ್ದ 55 ಜಿಯೋ ಮತ್ತು 20 ವೊಡಾಫೋನ್ ಸಿಮ್ ಕಾರ್ಡ್‌ಗಳು ಸೇರಿದಂತೆ ಒಟ್ಟು 75 ಪೂರ್ವಸಕ್ರಿಯಗೊಳಿಸಿದ ಸಿಮ್ ಕಾರ್ಡ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದರು.

ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಮಲ್ಲಿಕಾರ್ಜುನ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ, ಅಕ್ರಮ ಸಿಮ್ ಸಕ್ರಿಯಗೊಳಿಸುವಿಕೆ ಮತ್ತು ಮಾರಾಟದ ಜಾಲವನ್ನು ಪತ್ತೆಹಚ್ಚಲು ಹಾಗೂ ಇಂತಹ ಕೃತ್ಯಗಳನ್ನು ತಡೆಯಲು ತನಿಖಾ ಮಾರ್ಗಸೂಚಿಗಳನ್ನು ರೂಪಿಸುವಂತೆ ನಿರ್ದೇಶಿಸಿದೆ.

Attachment
PDF
Mallikarjuna vs State of Karnataka
Preview
Kannada Bar & Bench
kannada.barandbench.com