

ರಸ್ತೆಯಲ್ಲಿ ಹಲ್ಲೆ (ರೋಡ್ ರೇಜ್) ಪ್ರಕರಣದ ಸಂಬಂಧ ದೂರು ನೀಡಲು ತೆರಳಿದ್ದ ಮಹಿಳಾ ವಕೀಲೆ ಠಾಣೆಯಲ್ಲಿ ದಾಂದಲೆ ಎಬ್ಬಿಸಿದ್ದಾರೆ ಎಂದು ಬೂಟಿನ ಕಾಲಿನಲ್ಲಿ ಒದ್ದ ಮಹಿಳಾ ಪೊಲೀಸ್ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಲು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.
ಬೆಂಗಳೂರಿನ ನಬೋನಿತಾ ಸೇನ್ ಅವರು ತಮ್ಮ ವಿರುದ್ಧ ಮೈಕೊ ಲೇಔಟ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.
“ಟೇಬಲ್ ಮೇಲಿನ ಕೆಲವು ದಾಖಲೆಗಳನ್ನು ಅರ್ಜಿದಾರೆ ಎಳೆದು ಬಿಸಾಡಿದರು ಎಂಬ ಕಾರಣಕ್ಕೆ ಪದ್ಮಾವತಿ ಅವರು ಸಕಾರಣವಿಲ್ಲದೇ ಬೂಟಿನ ಕಾಲಿನಲ್ಲಿ ಒದ್ದಿದ್ದಾರೆ ಎಂಬುದು ಠಾಣೆಯ ಸಿಸಿಟಿವಿ ದೃಶ್ಯಾವಳಿಯಿಂದ ಖಾತರಿಯಾಗಿದೆ. ಅದರೂ ಪದ್ಮಾವತಿ ವಿರುದ್ಧ ಪ್ರಕರಣ ದಾಖಲಾಗಿಲ್ಲ. ಹೀಗಾಗಿ, ಇಂಥ ಕೃತ್ಯ ಎಸಗಿದ ಅಧಿಕಾರಿಗೆ ಇಲಾಖಾ ವಿಚಾರಣೆಯ ಮೂಲಕ ಎಚ್ಚರಿಕೆ ನೀಡುವುದಲ್ಲ, ಅವರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸಬೇಕು” ಎಂದು ಆದೇಶಿಸಿದೆ. ಅಲ್ಲದೇ, ವಕೀಲೆಯ ವಿರುದ್ಧದ ಪ್ರಕರಣಕ್ಕೂ ತಡೆ ನೀಡಲು ನಿರಾಕರಿಸಿತು.
ಅರ್ಜಿಯ ವಿಚಾರಣೆಯ ಒಂದು ಹಂತದಲ್ಲಿ ಪೀಠವು ಅರ್ಜಿದಾರೆ ವಕೀಲೆ ಕುರಿತು “ಪೊಲೀಸ್ ಠಾಣೆಯಲ್ಲಿ ದಾಂಧಲೆ ಸೃಷ್ಟಿಸಿದ್ದು ಯಾಕೆ? ಠಾಣೆಯ ಕಾಗದಗಳನ್ನು ಬಿಸಾಡಿರುವುದು ಏಕೆ? ಪ್ರಕರಣ ದಾಖಲಿಸಿದ್ದು, ವಿಳಂಬವಾಯಿತು ಎಂದು ಹೀಗೆಲ್ಲಾ ಮಾಡಬಹುದೇ? ನಿಮಗೆ ಬೂಟಿನ ಕಾಲಿನಲ್ಲಿ ಒದ್ದ ಮಹಿಳಾ ಪೊಲೀಸ್ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಲು ಆದೇಶಿಸಲಾಗುವುದು. ವಕೀಲೆಯಾಗಿದ್ದು ಕೊಂಡು ನೀವು ನಡೆದುಕೊಂಡಿರುವ ರೀತಿಯೂ ಸರಿಯಿಲ್ಲ. ಪೊಲೀಸ್ ಅಧಿಕಾರಿಯಾಗಿ ಅವರು ನಡೆದುಕೊಂಡಿರುವುದೂ ಸರಿಯಿಲ್ಲ. ಹೀಗಾಗಿ, ನಿಮ್ಮ ವಿರುದ್ಧದ ಪ್ರಕರಣವೂ ಮುಂದುವರಿಯಲಿದೆ” ಎಂದಿತು.
ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಪೊಲೀಸ್ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಲು ಆದೇಶಿಸುವುದಕ್ಕೆ ವಿರೋಧವಿಲ್ಲ. ಆದರೆ, ಈ ಅರ್ಜಿಯನ್ನು ಮುಕ್ತಾಯಗೊಳಿಸಬಾರದು. ಅರ್ಜಿದಾರೆಯು ಅತ್ಯಂತ ಕೆಟ್ಟ ಭಾಷೆ ಬಳಸಿದ್ದಾರೆ” ಎಂದರು.
ಅರ್ಜಿದಾರೆಯ ಪರ ವಕೀಲ ಡಿ ಎಲ್ ಮೂರ್ತಿ ಅವರು “ಪೊಲೀಸರು ಎರಡು ಗಂಟೆ ಕಾಯುವಂತೆ ಮಾಡಿದ್ದಾರೆ. ಪ್ರಕರಣದಿಂದಾಗಿ ಕೆಲಸವೂ ಹೋಗಿದೆ” ಎಂದರು.
ಆಗ ಪೀಠವು “ಪೊಲೀಸ್ ಅಧಿಕಾರಿ ಪದ್ಮಾವತಿ ಅವರ ಸೇವಾ ದಾಖಲೆಗಳಲ್ಲಿ ಪ್ರಕರಣ ದಾಖಲಾಗಿರುವುದನ್ನು ಉಲ್ಲೇಖಿಸಬೇಕು. ಅವರಿಗೆ ಯಾವುದೇ ಪದೋನ್ನತಿ ನೀಡಬಾರದು. ಇನ್‌ಸ್ಪೆಕ್ಟರ್ (ಮಡಿವಾಳ ಪೊಲೀಸ್ ಠಾಣೆ) ಆಗಿಯೇ ಅವರು ನಿವೃತ್ತಿ ಹೊಂದಬೇಕು” ಎಂದಿತು.
ಎರಡು ಗಂಟೆ ಕಾಯಿಸಲಾಗಿದೆ ಎಂದು ಠಾಣೆಯ ಟೇಬಲ್ ಮೇಲಿನ ದಾಖಲೆಗಳನ್ನು ಆಕ್ರೋಶದಿಂದ ಮಹಿಳಾ ವಕೀಲೆಯು ಎತ್ತಿ ಬಿಸಾಡಿದ್ದರು. ಇದರಿಂದ ರಾತ್ರಿ ಗಸ್ತನಿಲ್ಲಿದ್ದ ಇನ್‌ಸ್ಪೆಕ್ಟರ್ ಪದ್ಮಾವತಿ ಅವರು ಬೂಟಿನ ಕಾಲಿನಲ್ಲಿ ವಕೀಲೆಯ ಮೇಲೆ ಹಲ್ಲೆ ನಡೆಸಿದ್ದರು. ಪೊಲೀಸ್ ಅಧಿಕಾರಿಯ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪೀಠವು ಇತರೆ ಪೊಲೀಸರು ಏಕೆ ಇದನ್ನು ತಡೆಯಲಿಲ್ಲ ಎಂದು ಕಿಡಿಕಾರಿತು.
ಪ್ರಕರಣದ ಹಿನ್ನೆಲೆ: 2025ರ ಫೆಬ್ರವರಿ 23ರಂದು ರಸ್ತೆಯಲ್ಲಿ ತೆರಳುತ್ತಿದ್ದಾಗ ಆಟೊ ಚಾಲಕನೊಬ್ಬ ಅರ್ಜಿದಾರೆ ವಕೀಲೆ ಕಾರನ್ನು ಹಿಂದಿಕ್ಕಿ ಅಡ್ಡಗಟ್ಟಿ ಕಾರಿಗೆ ಕಲ್ಲಿನಿಂದ ಹಲ್ಲೆ ನಡೆಸಿ, ಕಾರಿನ ಕಿಟಕಿಯ ಗಾಜು ಪುಡಿಗಟ್ಟಿದ್ದನು. ಈ ಸಂಬಂಧ ಪ್ರಕರಣ ದಾಖಲಿಸಲು ವಕೀಲೆಯು ಠಾಣೆಗೆ ತೆರಳಿದ್ದರು. ಈ ವೇಳೆ ಎರಡು ಗಂಟೆ ಪೊಲೀಸರು ಆಕೆಯನ್ನು ಕಾಯುವಂತೆ ಮಾಡಿದ್ದರಿಂದ ಸಿಟ್ಟಿಗೆದ್ದು, ವಕೀಲೆಯು ಠಾಣೆಯಲ್ಲಿ ದಾಂದಲೆ ಎಬ್ಬಿಸಿದ್ದರು. ಈ ವೇಳೆ ಪೊಲೀಸ್ ಅಧಿಕಾರಿಯು ವಕೀಲೆಗೆ ಬೂಟಿನ ಕಾಲಿನಿಂದ ಹಲ್ಲೆ ನಡೆಸಿದ್ದರು.