
ರೋಗಿಯ ಅನುಮತಿ ಪಡೆಯದೇ ಶಸ್ತ್ರಚಿಕಿತ್ಸೆ ಮಾಡಿದ ಇಬ್ಬರು ವೈದ್ಯರ ವಿರುದ್ದ ಪ್ರಥಮ ವರ್ತಮಾನ ವರದಿ ದಾಖಲಿಸುವಂತೆ ಈಚೆಗೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.
ನಿರ್ಲಕ್ಷ್ಯದಿಂದ ವೈದ್ಯಕೀಯ ಆರೈಕೆಯ ಪಾವಿತ್ರ್ಯತೆಯನ್ನು ಉಲ್ಲಂಘಿಸಿರುವುದು ಪ್ರಕ್ರಿಯೆಯ ಲೋಪವಲ್ಲ. ಬದಲಿಗೆ ಮಾನವ ಜೀವನದಲ್ಲಿ ಅಂತರ್ಗತವಾಗಿರುವ ಘನತೆಯ ಅಪವಿತ್ರೀಕರಣವಾಗಿದೆ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
"ರೋಗಿಯು ತನ್ನ ದುರ್ಬಲತೆಯನ್ನು ವೈದ್ಯರ ಕೈಗೆ ಒಪ್ಪಿಸಿ, ನಿರಾಸಕ್ತಿಗೆ ಮೌನ ಬಲಿಪಶುವಾಗುತ್ತಾನೆ. ಘನತೆಯಿಂದ ಬದುಕುವ ಹಕ್ಕು ನಾಶವಾಗುತ್ತದೆ, ವಿಧಿಯಿಂದಲ್ಲ, ಬದಲಿಗೆ ವೈಫಲ್ಯದಿಂದ. ವಾಸ್ತವಿಕ ಅಂಶಗಳು ಮತ್ತು ಮೇಲೆ ಉಲ್ಲೇಖಿತ ಸ್ಥಾಪಿತ ಪೂರ್ವನಿದರ್ಶನಗಳ ಹಿನ್ನೆಲೆಯಲ್ಲಿ ಮಾನವ ಜನ್ಮದ ಘನತೆಯನ್ನು ಎತ್ತಿಹಿಡಿಯುವುದು ಕಡ್ಡಾಯ ಎಂದು ಈ ನ್ಯಾಯಾಲಯ ಭಾವಿಸಿದೆ. ಇಂಥ ಸಂದರ್ಭದಲ್ಲಿ ತನ್ನ ತಂದೆಯನ್ನು ಕಳೆದುಕೊಂಡಿರುವ ಅರ್ಜಿದಾರರು ತನಿಖೆಗೆ ಮೊರೆಯಿಟ್ಟಿರುವುದರಿಂದ ಅದನ್ನು ನಿರಾಕರಿಸಲಾಗದು. ಈ ನೆಲೆಯಲ್ಲಿ ಅರ್ಜಿಯು ಊರ್ಜಿತವಾಗಬೇಕಿದೆ” ಎಂದು ನ್ಯಾಯಾಲಯ ಹೇಳಿದೆ.
“ತೂರು ನಳಿಕೆಯನ್ನು ಅರ್ಜಿದಾರರ ಸಮ್ಮತಿ ಪಡೆಯದೇ ಬೇರೆಕಡೆಗೆ ಅಳವಡಿಕೆ ಮಾಡಲಾಗಿದೆ. ಇನ್ನೊಮ್ಮ ಪೆರ್ಮಾ ಕ್ಯಾತಟರ್ ಅಳವಡಿಕೆಗೆ ಅನುನತಿ ಪಡೆದು ಎಚ್ ಡಿ ತೂರು ನಳಿಕೆ ಅಳವಡಿಸಲಾಗಿದೆ. ತಜ್ಞ ವೈದ್ಯರ ಬದಲಿಗೆ ಕರ್ತವ್ಯದಲ್ಲಿದ್ದ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಇದೆಲ್ಲದರ ನಡುವೆ ತುರ್ತು ನಿಗಾ ಘಟಕದಲ್ಲಿ ರೋಗಿಯ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದರೂ ಅದನ್ನು ಸರಿಪಡಿಸುವ ಕ್ರಮವನ್ನು ವೈದ್ಯರು ಮಾಡಿಲ್ಲ” ಎಂದು ನ್ಯಾಯಾಲಯ ಹೇಳಿದೆ.
“ರಾಜ್ಯ ಸರ್ಕಾರ ಮತ್ತು ಆಸ್ಪತ್ರೆ ರಚಿಸಿದ್ದ ವೈದ್ಯಕೀಯ ಸಮಿತಿಯ ವರದಿಯಲ್ಲಿ ತೂರು ನಳಿಕೆ ಅಳವಡಿಕೆಯಿಂದಾಗಿ ಹಿಮೋಪ್ನ್ಯೂಮೋಥೊರಾಕ್ಸ್ ಆಗಿದ್ದು, ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿದ್ದರೆ ಸುಧಾರಣೆಯಾಗುತ್ತಿತ್ತು ಎಂದು ಹೇಳಲಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.
ಅರ್ಜಿದಾರರ ಪರ ವಕೀಲ ಸಮೀರ್ ಶರ್ಮಾ ಅವರು “ತಪ್ಪಾಗಿ ತೂರು ನಳಿಕೆ ಅಳವಡಿಸುವ ಮೂಲಕ ವೈದ್ಯರು ಅತ್ಯಂತ ನಿರ್ಲಕ್ಷ್ಯದಿಂದ ನಡೆದುಕೊಂಡಿದ್ದು, ಇದರಿಂದ ಕಂಠನಾಳ (ಜಗ್ಯುಲರ್ ವೆಯ್ನ್) ಬಂದ್ ಆಗಿ, ರಕ್ತ ಸಂಚಾರದಲ್ಲಿ ವ್ಯತ್ಯಯ ಉಂಟು ಮಾಡಿತ್ತು. ಇಲ್ಲಿ ವಿಚಾರ ದೀರ್ಘಕಾಲದ ಮೂತ್ರ ಪಿಂಡದ ಸಮಸ್ಯೆಯಿಂದ ತಂದೆಯ ಸಾವಾಗಿಲ್ಲ. ತಪ್ಪಾದ ಪ್ರಕ್ರಿಯೆಯಿಂದ ಅವರು ಸತ್ತಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಪ್ರಾಥಮಿಕ ವರದಿಯಲ್ಲಿ ತೂರು ನಳಿಕೆ ಅಳವಡಿಸಿರುವ ವೈದ್ಯರು ಜವಾಬ್ದಾರಿಯಾಗಿದ್ದಾರೆ ಎಂದು ಹೇಳಲಾಗಿದೆ” ಎಂದು ವಾದಿಸಿದರು.
ಸರ್ಕಾರದ ಪರ ವಕೀಲರು “ಆರೋಪಗಳು ಕ್ರಿಮಿನಲ್ ನಿರ್ಲಕ್ಷ್ಯವಲ್ಲ. ಹೆಚ್ಚೆಂದರೆ ಕರ್ನಾಟಕ ವೈದ್ಯಕೀಯ ನೋಂದಣಿ ಕಾಯಿದೆಯ ಅಡಿ ಕರ್ನಾಟಕ ವೈದ್ಯಕೀಯ ಮಂಡಳಿಗೆ ದೂರು ನೀಡಬಹುದು. ವೈದ್ಯಕೀಯ ಮಂಡಳಿಗೆ ದೂರು ನೀಡಲಾಗಿದ್ದು, ಇಬ್ಬರೂ ವಕೀಲರಿಗೆ ಮಂಡಳಿ ನೋಟಿಸ್ ಜಾರಿ ಮಾಡಲಾಗಿದೆ” ಎಂದರು.
ಬೆಂಗಳೂರು ಮೂಲದ ಜಿಎಂ ಆಸ್ಪತ್ರೆಯಲ್ಲಿನ ಮೊದಲ ಆರೋಪಿ ವೈದ್ಯರು ತನ್ನ ತಂದೆಯ ದೇಹದ ಒಳ ಬಲಭಾಗಕ್ಕೆ ಹಿಮೊಡಯಾಲಿಸಿಸ್ ಕ್ಯಾತಿಟರ್ ಅಳವಡಿಸಲು ತನ್ನ ಒಪ್ಪಿಗೆ ಪಡೆದಿದ್ದರು. ಆದರೆ, ಪ್ರಕ್ರಿಯೆಯನ್ನು ಎಡಭಾಗಕ್ಕೆ ನಡೆಸಲಾಗಿತ್ತು. ಇದರಿಂದ ತಂದೆಯ ಪರಿಸ್ಥಿತಿ ಹದಗೆಟ್ಟಿದ್ದು, ಫೋರ್ಟಿಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಎರಡನೇ ಬಾರಿಗೆ ಶಸ್ತ್ರಚಿಕಿತ್ಸೆ ನಡೆಸುವಾಗ ಹೃದಯ ಸ್ಥಂಭನದಿಂದ ಸಾವನ್ನಪ್ಪಿದ್ದರು. ಇದಕ್ಕೂ ಮುನ್ನ ವೈದ್ಯರೂ ಸೂಕ್ತ ರೀತಿಯಲ್ಲಿ ಒಪ್ಪಿಗೆ ಪಡೆದಿರಲಿಲ್ಲ ಎಂದು ಅರ್ಜಿದಾರ ವಿಕಾಸ್ ದೇವ್ ವಾದಿಸಿದ್ದರು.