ಸೇನಾ ಪಡೆಗಳಿಗೆ ಡ್ರೋನ್‌ ಪೂರೈಸುವ ಸಂಸ್ಥೆಯಿಂದ ದತ್ತಾಂಶ ಕಳವು ಆರೋಪ: ಎಸ್‌ಐಟಿ ತನಿಖೆಗೆ ಆದೇಶಿಸಿದ ಹೈಕೋರ್ಟ್‌

ಡಿಜಿಪಿ ಪ್ರಣಬ್‌ ಮೊಹಂತಿ ನೇತೃತ್ವದಲ್ಲಿ ಐಪಿಎಸ್ ಅಧಿಕಾರಿಗಳಾದ ಭೂಷಣ್‌ ಗುಲಾಬ್‌ ಬೊರಾಸೆ ಮತ್ತು ನಿಶಾ ಜೇಮ್ಸ್‌ ಅವರನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ಹೈಕೋರ್ಟ್‌ ರಚಿಸಿದ್ದು, ಮೂರು ತಿಂಗಳಲ್ಲಿ ವರದಿ ಸಲ್ಲಿಸಲು ಸೂಚಿಸಿದೆ.
Karnataka High Court, drones
Karnataka High Court, drones
Published on

“ಸೈಬರ್‌ ಅಪರಾಧಗಳನ್ನು ನಿಭಾಯಿಸುವಲ್ಲಿ ಸಾಂಪ್ರದಾಯಿಕ ಪೊಲೀಸಿಂಗ್‌ ವಿಧಾನಗಳು ನಿರೀಕ್ಷಿತ ಕ್ಷಮತೆಯಿಂದ ಕೂಡಿಲ್ಲ” ಎಂದು ಈಚೆಗೆ ಹೇಳಿರುವ ಕರ್ನಾಟಕ  ಹೈಕೋರ್ಟ್‌, ಸೈಬರ್‌ ಅಪರಾಧಗಳಿಗೆ ಎಂದೇ ಮೀಸಲಾದ “ಸೈಬರ್‌ ಅಪರಾಧಗಳ ತನಿಖಾ ಬ್ಯೂರೊ” ಸ್ಥಾಪಿಸುವಂತೆ ರಾಜ್ಯ ಸರ್ಕಾರಕ್ಕೆ ಮಹತ್ವದ ಸಲಹೆ ನೀಡಿದೆ.

ಡ್ರೋನ್‌ ತಂತ್ರಜ್ಞಾನ ದತ್ತಾಂಶ ಕಳವು ಪ್ರಕರಣದ ತನಿಖೆಗಾಗಿ ಎಸ್ಐಟಿ (ವಿಶೇಷ ತನಿಖಾ ತಂಡ) ರಚಿಸಲು ನಿರ್ದೇಶಿಸಬೇಕು ಎಂದು ಕೋರಿ ಭಾರತೀಯ ಸೇನಾ ಪಡೆಗಳಿಗೆ ಡ್ರೋನ್‌ ಪೂರೈಸುವ ಬೆಂಗಳೂರಿನ ನ್ಯೂ ಸ್ಪೇಸ್‌ ರಿಸರ್ಚ್‌ ಅಂಡ್‌ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ಭಾವನಾ ವಿಜಯಕುಮಾರ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಪುರಸ್ಕರಿಸಿದೆ.

Justice M Nagaprasanna
Justice M Nagaprasanna

ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ತನಿಖೆ ನಡೆಸಲು ಡಿಜಿಪಿ ಪ್ರಣಬ್‌ ಮೊಹಂತಿ ನೇತೃತ್ವದಲ್ಲಿ ಐಪಿಎಸ್ ಅಧಿಕಾರಿಗಳಾದ ಭೂಷಣ್‌ ಗುಲಾಬ್‌ ಬೊರಾಸೆ ಮತ್ತು ನಿಶಾ ಜೇಮ್ಸ್‌ ಅವರನ್ನು ಒಳಗೊಂಡ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದು, ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ಒಪ್ಪಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ.

ಎಸ್‌ಐಟಿ ಮೂರು ತಿಂಗಳಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ಈ ಆದೇಶದ ಪ್ರತಿಯನ್ನು ಹೈಕೋರ್ಟ್‌ ರಿಜಿಸ್ಟ್ರಾರ್‌ ಅವರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಗೃಹ ಕಾರ್ಯದರ್ಶಿಗೆ ರವಾನಿಸಬೇಕು ಎಂದು ತಾಕೀತು ಮಾಡಿದೆ. 

“ಇತ್ತೀಚೆಗೆ ಹೊಸ ಬಗೆಯ ಸೈಬರ್‌ ಬೇಹುಗಾರಿಕೆಯ ಅಪರಾಧಗಳು ಹೆಚ್ಚುತ್ತಿದ್ದು, ಇವು ರಾಷ್ಟ್ರೀಯ ಭದ್ರತೆಯ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕವಿದೆ” ಎಂದು ನ್ಯಾಯಾಲಯ ಹೇಳಿದೆ.

“ಹಾಲಿ ಇರುವ ಸೈಬರ್‌ ಅಪರಾಧಗಳ ತನಿಖೆಯಿಂದ ನಿರೀಕ್ಷಿತ ಪ್ರಮಾಣದ ಪ್ರಯೋಜನವಾಗುತ್ತಿಲ್ಲ. ಸಾಕಷ್ಟು ತನಿಖಾಧಿಕಾರಿಗಳಿಗೆ ತಾಂತ್ರಿಕ ನೈಪುಣ್ಯತೆಯೇ ಇಲ್ಲ.  ಹೀಗಾಗಿ, ತಾಂತ್ರಿಕ ಪರಿಣತಿ ಮತ್ತು ವಿಧಿವಿಜ್ಞಾನಗಳ ಅರಿವಿರುವ ಅಧಿಕಾರಿಗಳು ಮಾತ್ರ ಡಿಜಿಟಲ್‌ ಹಾಗೂ ಸೈಬರ್‌ ಅಪರಾಧಗಳ ತನಿಖೆ ಮಾಡುವಂತಾಗಬೇಕು” ಎಂದು ಪೀಠ ಆದೇಶದಲ್ಲಿ ಉಲ್ಲೇಖಿಸಿದೆ.

“ಮಾಹಿತಿಯೇ ಆಧುನಿಕ ನಾಗರಿಕತೆಯ ಜೀವನಾಡಿಯಾಗಿರುವ ಇಂದಿನ ಯುಗದಲ್ಲಿ ಸೈಬರ್‌ ಅಪರಾಧಗಳು ಜಟಿಲವಾಗಿರುತ್ತವೆ. ಇದಕ್ಕೆ ತಕ್ಕಂತೆ ತನಿಖಾಧಿಕಾರಿಗಳೂ ಸಮರ್ಥರಾಗಿರಬೇಕು. ಡಿಜಿಟಲ್‌ ಜಗತ್ತಿನಲ್ಲಿ ಕುಳಿತವರು ಕೇವಲ ಬಟನ್‌ ಕ್ಲಿಕ್‌ ಮಾಡಿ ಏನು ಬೇಕಾದರೂ ಅವಾಂತರ ಸೃಷ್ಟಿಸಬಹುದು. ಸೈಬರ್‌ ಅಪರಾಧಗಳನ್ನು ಹತ್ತಿಕ್ಕಲು ಸರ್ಕಾರ ಕಮಾಂಡ್‌ ಸೆಂಟರ್‌ ಆರಂಭಿಸಿದ್ದರೂ ಅದು ಸಾಲದು. ಹೀಗಾಗಿ, ಸಿಸಿಬಿಯಂತೆ ಸೈಬರ್‌ ಅಪರಾಧದ ತನಿಖೆಗೆ ಬ್ಯೂರೊ ರಚಿಸುವುದು ಸೂಕ್ತ” ಎಂದು ಪೀಠ ಆದೇಶದಲ್ಲಿ ವಿವರಿಸಿದೆ.

Kannada Bar & Bench
kannada.barandbench.com