ಮುಟ್ಟಿನ ರಜೆ ನೀತಿಯನ್ನು ಎಲ್ಲಾ ವಲಯಗಳಲ್ಲೂ ಜಾರಿಗೊಳಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

“ಗುಣಮಟ್ಟದ ಹಕ್ಕನ್ನು ಖಾತರಿಪಡಿಸುವ 14ನೇ ವಿಧಿಯ ತಪ್ಪಾದ ಅರ್ಥೈಸುವಿಕೆ ಆಧಾರದ ಮೇಲೆ ಎತ್ತಲಾದ ಕಳವಳಗಳಿಂದ ರಾಜ್ಯವು ಹಿಂದೆ ಸರಿಯಬಾರದು” ಎಂದು ನ್ಯಾಯಾಲಯ ಹೇಳಿದೆ.
ಮುಟ್ಟಿನ ರಜೆ ನೀತಿಯನ್ನು ಎಲ್ಲಾ ವಲಯಗಳಲ್ಲೂ ಜಾರಿಗೊಳಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ
Published on

ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನಸಹಿತ ರಜೆ ನೀಡುವ ಸಂಬಂಧ ರೂಪಿಸಲಾಗಿರುವ ನೀತಿಯನ್ನು ಕಟ್ಟುನಿಟ್ಟಾಗಿ ಸಂಘಟಿತ ಮತ್ತು ಅಸಂಘಟಿತ ವಲಯಗಳಲ್ಲಿ ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಬುಧವಾರ ನಿರ್ದೇಶಿಸಿದೆ.

ಕರ್ನಾಟಕ ಗೆಜೆಟ್‌ನಲ್ಲಿ ಪ್ರಕಟಗೊಂಡಿರುವ ಹೊರತಾಗಿಯೂ ಋತುಚಕ್ರದ ರಜೆ ನೀತಿಯನ್ನು ಹೋಟೆಲ್‌ಗಳು ಮತ್ತಿತರ ಸಂಸ್ಥೆಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿಲ್ಲ ಎಂದು ಆಕ್ಷೇಪಿಸಿ ಬೆಳಗಾವಿ ಜಿಲ್ಲೆಯ ಹೋಟೆಲ್ ಉದ್ಯೋಗಿ ಚಂದ್ರವ್ವ ಹಣಮಂತ ಗೋಕಾವಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಇತ್ಯರ್ಥಪಡಿಸಿದೆ.

“ಅಸಂಘಟಿತ ವಲಯ ಸೇರಿ ಎಲ್ಲಾ ವಲಯಗಳಲ್ಲೂ ಸರ್ಕಾರವು ತನ್ನ ನೀತಿ ಜಾರಿಗೊಳಿಸುವುದನ್ನು ಖಾತರಿಪಡಿಸಬೇಕು” ಎಂದು ನ್ಯಾಯಾಲಯ ಹೇಳಿದೆ.

“ಸಂವಿಧಾನದಲ್ಲಿ ಅಡಕವಾಗಿರುವ ಜೀವಿಸುವ ಮತ್ತು ಸಮಾನತೆಯ ಹಕ್ಕನ್ನು ಮುಟ್ಟಿನ ರಜೆಯ ನೀತಿ ಮತ್ತು ಇದರ ಸಂಬಂಧ ವಿಧಾನಸಭೆಯಲ್ಲಿ ಮಂಡಿಸಲಾಗಿರುವ ಮಸೂದೆಯಲ್ಲಿ ವಿಸ್ತರಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.

“ಮಹಿಳೆ ಮತ್ತು ಪುರುಷ ಸಮಾನರು ಎಂದು ಕಾನೂನು ಹೇಳಿದರೂ ಜೈವಿಕ ಅನುಭವಗಳು ಅವರನ್ನು ಪ್ರತ್ಯೇಕಿಸುತ್ತವೆ. ಹೀಗಾಗಿ, ಮುಟ್ಟಿನ ರಜೆಯ ಮನವಿಯು ವಿಶೇಷದ ವಿಚಾರವಲ್ಲ. ಬದಲಿಗೆ ಅದು ಘನತೆ, ನ್ಯಾಯಯುತ ಮತ್ತು ಮಹಿಳೆಯ ವಾಸ್ತವಿಕ ಬದುಕಿನ ಮಾನವೀಯ ಅರಿವು” ಎಂದು ನ್ಯಾಯಾಲಯ ಹೇಳಿದೆ.

“ಕಾನೂನಿನ ದೃಷ್ಟಿಯಲ್ಲಿ ಪುರುಷರು ಮತ್ತು ಮಹಿಳೆಯರು ಸಮಾನರು; ಆದರೂ, ಅವರು ಜೈವಿಕವಾಗಿ ಭಿನ್ನರು. ಅಂತಹ ವ್ಯತ್ಯಾಸಗಳನ್ನು ಒಪ್ಪಿಕೊಳ್ಳುವುದು, ವಿಶೇಷವಾಗಿ ಆರೋಗ್ಯ, ಘನತೆ ಮತ್ತು ದೈಹಿಕ ಸ್ವಾಯತ್ತತೆಗೆ ಸಂಬಂಧಿಸಿದ ವಿಷಯಗಳಲ್ಲಿ, ಸಮಾನತೆಯ ಗ್ಯಾರಂಟಿಯನ್ನು ತುಳಿಯುವುದಕ್ಕೆ ಬದಲಾಗಿ ಗಣನೀಯ ಅರ್ಥವನ್ನು ನೀಡುವುದಾಗಿದೆ” ಎಂದು ನ್ಯಾಯಾಲಯ ಹೇಳಿದೆ.

“ನಿರ್ದಿಷ್ಟವಾಗಿ ಹೇಳುವುದಾದರೆ, ಗುಣಮಟ್ಟದ ಹಕ್ಕನ್ನು ಖಾತರಿಪಡಿಸುವ 14ನೇ ವಿಧಿಯ ತಪ್ಪಾದ ಅರ್ಥೈಸುವಿಕೆ ಆಧಾರದ ಮೇಲೆ ಎತ್ತಲಾದ ಕಳವಳಗಳಿಂದ ರಾಜ್ಯವು ಹಿಂದೆ ಸರಿಯಬಾರದು” ಎಂದು ನ್ಯಾಯಾಲಯ ಹೇಳಿದೆ.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಪ್ರತಿಮಾ ಹೊನ್ನಾಪುರ ಅವರು “ ಸರ್ಕಾರದ ನೀತಿಯು ಪ್ರಗತಿಪರ ನಿಟ್ಟಿನಲ್ಲಿನ ಹೆಜ್ಜೆಯಾಗಿದ್ದು, ವಿಶಾಲ ಮತ್ತು ವೈವಿಧ್ಯಮಯ ಅಸಂಘಟಿತ ವಲಯದಿಂದಾಗಿ ಕೆಲವು ಪ್ರಾಯೋಗಿಕ ಅಡೆತಡೆ ಉದ್ಭವಿಸಿವೆ. ಮುಟ್ಟಿನ ರಜೆಗೆ ಸಂಬಂಧಿಸಿದ ಮಸೂದೆಯು ವಿಧಾನಸಭೆಯ ಪರಿಗಣನೆಯಲ್ಲಿದೆ” ಎಂದಿದ್ದರು.

ಅರ್ಜಿದಾರೆಯ ಪರವಾಗಿ ದೀಕ್ಷಾ ಅಮೃತೇಶ್‌ ವಾದಿಸಿದ್ದರು. ರಾಜ್ಯ ಸರ್ಕಾರದ ಋತುಚಕ್ರ ರಜೆ ನೀತಿ ಪ್ರಶ್ನಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದು, ನ್ಯಾ. ಅನಂತ ರಾಮನಾಥ ಹೆಗ್ಡೆ ಅವರ ಏಕಸದಸ್ಯ ಪೀಠವು ವಿಚಾರಣೆ ನಡೆಸುತ್ತಿದೆ.

Also Read
ಮುಟ್ಟಿನ ರಜೆ ನೀತಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಮನವಿ: ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ ಹೈಕೋರ್ಟ್‌

ಪ್ರಕರಣದ ಹಿನ್ನೆಲೆ: ಬೆಳಗಾವಿಯ ಹೋಟೆಲ್ ಒಂದರಲ್ಲಿ ಅಡುಗೆ ಕೆಲಸಗಾರರಾಗಿರುವ ಚಂದ್ರವ್ವ ಹಣಮಂತ ಗೋಕಾವಿ ಮುಟ್ಟಿನ‌ ಸಂದರ್ಭದಲ್ಲಿ ರಜೆ ನೀಡುವಂತೆ ಕೋರಿದ್ದರು. ಆದರೆ, ರಜೆ ನೀಡಲು ಹೋಟೆಲ್ ಮಾಲೀಕರು ನಿರಾಕರಿಸಿದ್ದರು. ಇದರಿಂದ, ಕಾರ್ಮಿಕ ಇಲಾಖೆಗೆ ಮನವಿ ಪತ್ರ ಸಲ್ಲಿಸಿದ್ದ ಚಂದ್ರವ್ವ, ಮಹಿಳಾ ನೌಕರರಿಗೆ ಮುಟ್ಟಿನ ಸಂದರ್ಭದಲ್ಲಿ ಒಂದು ದಿನ ವೇತನಸಹಿತ ರಜೆ ನೀಡುವ ನೀತಿಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಕೋರಿದ್ದರು.

ಮುಂದುವರೆದು, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಅಧಿನಿಯಮ ಹಾಗೂ ಕಾರ್ಖಾನೆಗಳ ಅಧಿನಿಯಮಕ್ಕೆ ಒಳಪಡುವ ಎಲ್ಲ ಸಂಸ್ಥೆಗಳಲ್ಲಿ ಸರ್ಕಾರದ ನೀತಿಯ ಏಕರೂಪ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ರಜೆ ಪಡೆಯುವ ಮಹಿಳಾ ನೌಕರರಿಗೆ ವೇತನ ಕಡಿತ, ಬೆದರಿಕೆ ಅಥವಾ ಕೆಲಸದಿಂದ ದೂರವಿಡುವ ಕ್ರಮಗಳು ‌ನಡೆದರೆ ಅದನ್ನು ಕಾರ್ಮಿಕ ಕಾನೂನು ಉಲ್ಲಂಘನೆ ಎಂದು ಪರಿಗಣಿಸಿ ಕ್ರಮ ಜರುಗಿಸಬೇಕು. ತಳಮಟ್ಟದ ಮಹಿಳಾ ಕಾರ್ಮಿಕರಿಗೆ ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಕೋರಿದ್ದರು. ಆ ಮನವಿಗೆ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಚಂದ್ರವ್ವ ಹೈಕೋರ್ಟ್‌‌ಗೆ ಅರ್ಜಿ ಸಲ್ಲಿಸಿದ್ದರು.

Attachment
PDF
Chandravva Hanamant Gokavi Vs State of Karnataka
Preview
Kannada Bar & Bench
kannada.barandbench.com