ಮುಡಾ ಹಗರಣದ ತನಿಖೆ ನಡೆಸುತ್ತಿರುವ ನ್ಯಾ. ದೇಸಾಯಿ ಡಿಬಾರ್‌ ಆದೇಶ ವಜಾ ಮಾಡಿದ ಹೈಕೋರ್ಟ್‌

ಸಿಬ್ಬಂದಿ ಮತ್ತು ತರಬೇತಿ ಇಲಾಖೆ ನ್ಯಾ. ದೇಸಾಯಿಯವರನ್ನು ಡಿಬಾರ್‌ ಮಾಡುವ ಕಠಿಣ ಕ್ರಮಕೈಗೊಂಡಿದೆ. ಈ ಮುನ್ನ ಇಲಾಖೆಯು ನ್ಯಾ. ದೇಸಾಯಿ ಒಪ್ಪಿಗೆ ಪಡೆದಿಲ್ಲ. ನೇಮಕ ಅಂತಿಮವಾದ ಬಳಿಕ 15 ದಿನ ಕಾಲಾವಕಾಶ ನೀಡಿ ನೋಟಿಸ್‌ ನೀಡಬೇಕಿತ್ತು ಎಂದ ಪೀಠ.
ಮುಡಾ ಹಗರಣದ ತನಿಖೆ ನಡೆಸುತ್ತಿರುವ ನ್ಯಾ. ದೇಸಾಯಿ ಡಿಬಾರ್‌ ಆದೇಶ ವಜಾ ಮಾಡಿದ ಹೈಕೋರ್ಟ್‌
Published on

ಮುಡಾ ಹಗರಣದ ತನಿಖೆಗಾಗಿ ರಾಜ್ಯ ಸರ್ಕಾರವು ನೇಮಿಸಿರುವ ಏಕಸದಸ್ಯ ನ್ಯಾಯಾಂಗ ಆಯೋಗದ ನೇತೃತ್ವ ವಹಿಸಿರುವ ನಿವೃತ್ತ ನ್ಯಾಯಮೂರ್ತಿ ಪಿ ಎನ್‌ ದೇಸಾಯಿ ಅವರನ್ನು ಕೇಂದ್ರ ಸರ್ಕಾರವು ಮೂರು ವರ್ಷಗಳ ಕಾಲ ಸರ್ಕಾರದ ಎಲ್ಲಾ ನೇಮಕಾತಿಗಳಿಂದ ಡಿಬಾರ್‌ ಮಾಡಿ ಹೊರಡಿಸಿರುವ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ವಜಾ ಮಾಡಿದೆ.

ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು 2024ರ ನವೆಂಬರ್‌ 7ರಂದು ಹೊರಡಿಸಿದ್ದ ಡಿಬಾರ್ ಮಾಡಿರುವ ಆದೇಶವನ್ನು ಪ್ರಶ್ನಿಸಿ ನ್ಯಾ. ದೇಸಾಯಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್‌ ದೇವದಾಸ್‌ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

“ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ನ್ಯಾ. ದೇಸಾಯಿ ಅವರನ್ನು ಡಿಬಾರ್‌ ಮಾಡುವ ಕಠಿಣ ಕ್ರಮಕೈಗೊಂಡಿದೆ. ಇದಕ್ಕೂ ಮುನ್ನ ಇಲಾಖೆಯು ನ್ಯಾ. ದೇಸಾಯಿ ಅವರ ಒಪ್ಪಿಗೆ ಪಡೆದಿಲ್ಲ. ಅಲ್ಲದೇ, ಅವರ ನೇಮಕಾತಿ ಅಂತಿಮವಾದ ಬಳಿಕ 15 ದಿನ ಕಾಲಾವಕಾಶ ನೀಡಿ ನೋಟಿಸ್‌ ನೀಡಬೇಕಿತ್ತು. ಅದನ್ನೂ ಮಾಡಲಾಗಿಲ್ಲ. ಈ ಪ್ರಕ್ರಿಯೆ ಪಾಲಿಸದೇ ಕೇಂದ್ರ ಸರ್ಕಾರವು ಡಿಬಾರ್‌ ಆದೇಶ ಮಾಡಬಾರದಿತ್ತು” ಎಂದು ನ್ಯಾಯಾಲಯ ಹೇಳಿದೆ.

“ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಯಾಂತ್ರಿಕವಾಗಿ ಆಕ್ಷೇಪಾರ್ಹವಾದ ಆದೇಶ ಮಾಡಿದ್ದು, ನಿಯಮಗಳನ್ನು ಪಾಲಿಸಿದ್ದರೆ ಆಕ್ಷೇಪಾರ್ಹವಾದ ಆದೇಶ ಮಾಡುತ್ತಿರಲಿಲ್ಲ. ಹೀಗಾಗಿ, ಅರ್ಜಿಯನ್ನು ಪುರಸ್ಕರಿಸಲಾಗಿದ್ದು, ಆಕ್ಷೇಪಾರ್ಹವಾದ ಆದೇಶವನ್ನು ಬದಿಗೆ ಸರಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ನ್ಯಾ.ದೇಸಾಯಿ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್‌ ಹೊಳ್ಳ ಅವರು “ನ್ಯಾ. ದೇಸಾಯಿ ಅವರ ವಾದವನ್ನು ನ್ಯಾಯಯುತವಾಗಿ ಆಲಿಸಲಾಗಿಲ್ಲ. ಕೇಂದ್ರ ಸರ್ಕಾರವು ನ್ಯಾಯದಾನ ತತ್ವವನ್ನು ಉಲ್ಲಂಘಿಸಿ ಡಿಬಾರ್‌ ಆದೇಶ ಮಾಡಿದೆ” ಎಂದರು.

Also Read
ಮುಡಾ ಹಗರಣದ ತನಿಖೆ ನಡೆಸುತ್ತಿರುವ ನ್ಯಾ. ದೇಸಾಯಿ ಡಿಬಾರ್‌ ಮಾಡಿದ್ದ ಕೇಂದ್ರದ ಆದೇಶಕ್ಕೆ ಹೈಕೋರ್ಟ್‌ ತಡೆ

“ನೇಮಕಾತಿ ಆದೇಶ ಮಾಡುವುದಕ್ಕೂ ಮುನ್ನ ನ್ಯಾ. ದೇಸಾಯಿ ಅವರ ಒಪ್ಪಿಗೆ ಕೇಳಬೇಕಿತ್ತು. ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಿದ ಬಳಿಕ ಅವರ ಜೊತೆ ವೈಯಕ್ತಿಕ ಸಮಾಲೋಚನೆ ನಡೆಸಬೇಕು ಎಂದು ನಿಯಮಗಳು ಹೇಳುತ್ತವೆ. ಒಂದೊಮ್ಮೆ ಅವರು ಸೇವೆಗೆ ಹಾಜರಾಗದಿದ್ದರೆ ಅವರನ್ನು ಡಿಬಾರ್‌ ಮಾಡುವುದಕ್ಕೂ ಮುನ್ನ 15 ದಿನ ಕಾಲಾವಕಾಶ ನೀಡಿ ನೋಟಿಸ್‌ ನೀಡಬೇಕು. ಆದರೆ, ನ್ಯಾ. ದೇಸಾಯಿ ಅವರನ್ನು ಡಿಬಾರ್‌ ಮಾಡುವುದಕ್ಕೂ ಮುನ್ನ ಇದ್ಯಾವುದನ್ನೂ ಪಾಲಿಸಲಾಗಿಲ್ಲ” ಎಂದರು.

ಕೇಂದ್ರ ಸರ್ಕಾರ ಪ್ರತಿನಿಧಿಸಿದ್ದ ಸಹಾಯಕ ಸಾಲಿಸಿಟರ್‌ ಜನರಲ್‌ ಎಚ್‌ ಶಾಂತಿಭೂಷಣ್‌ ಅವರು “ಕೇಂದ್ರೀಯ ಆಡಳಿತಾತ್ಮಕ ನ್ಯಾಯಾಧಿಕರಣದ ಸದಸ್ಯತ್ವಕ್ಕೆ ನ್ಯಾ. ದೇಸಾಯಿ ಅರ್ಜಿ ಹಾಕಿದ್ದು, ಹುದ್ದೆಯನ್ನು ನಿರಾಕರಿಸುವುದಿಲ್ಲ. ಒಂದೊಮ್ಮೆ ನಿರಾಕರಿಸಿದರೆ ಡಿಬಾರ್‌ ಆಗಬೇಕಾಗುತ್ತದೆ ಎಂಬ ಘೋಷಣೆಗೆ ಸಹಿ ಹಾಕಿದ್ದರು” ಎಂದರು.

Kannada Bar & Bench
kannada.barandbench.com