ಅತ್ಯಾಚಾರ ಅಥವಾ ಪೋಕ್ಸೊ ಕಾಯಿದೆ ಅಡಿ ಪ್ರಕರಣ ದಾಖಲಿಸಿದ ತಕ್ಷಣ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಬೇಕು ಎಂದು ಈಚೆಗೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.
17 ವರ್ಷದ ಬಾಲಕಿಯು ತನ್ನ 24 ವಾರಗಳ ಗರ್ಭಪಾತಕ್ಕೆ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ದವ ಏಕಸದಸ್ಯ ಪೀಠವು ಅನುಮತಿಸಿದೆ.
ಅತ್ಯಾಚಾರದಿಂದ ಗರ್ಭ ಧರಿಸಿದರೆ ಅವರಿಗೆ ಇರುವ ಹಕ್ಕುಗಳ ಕುರಿತು ಸಂತ್ರಸ್ತರಿಗೆ ತಿಳಿಸಬೇಕು. ಇದರಿಂದ ಸಂತ್ರಸ್ತೆ ಮತ್ತು ಆಕೆಯ ಕುಟುಂಬದವರು ತುಂಬಾ ತಡವಾದ ಮೇಲೆ ಗರ್ಭಪಾತಕ್ಕೆ ಅನುಮತಿ ಕೋರಿ ನ್ಯಾಯಾಲಯದ ಕದತಟ್ಟುವುದು ತಪ್ಪಲಿದೆ ಎಂದು ನ್ಯಾಯಾಲಯ ಹೇಳಿದೆ.
ಹಾಲಿ ಪ್ರಕರಣದಲ್ಲಿ ಅತ್ಯಾಚಾರ ಸಂತ್ರಸ್ತೆಗೆ ಮುಂಚಿತವಾಗಿ ಗರ್ಭಪಾತ ಹಕ್ಕುಗಳ ಕುರಿತು ಮೊದಲೇ ತಿಳಿಸಿದ್ದರೆ ಆಕೆಯ ತಂದೆ ಹೈಕೋರ್ಟ್ ಮೆಟ್ಟಿಲೇರುತ್ತಿರಲಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ತಡವಾಗಿ ಗರ್ಭಪಾತಕ್ಕೆ ಅನುಮತಿ ಕೋರುವಾಗ ಸಂತ್ರಸ್ತೆ ಮತ್ತು ಆಕೆಯ ಕುಟುಂಬಸ್ಥರು ಮಾನಸಿಕ ಯಾತನೆ ಅನುಭವಿಸಬೇಕಾಗುತ್ತದೆ (ವೈದ್ಯಕೀಯ ಗರ್ಭಪಾತ ಕಾಯಿದೆ 24 ವಾರಗಳ ಬಳಿಕ). “ಸಂತ್ರಸ್ತೆ ಮತ್ತು ಆಕೆಯ ಕುಟುಂಬದವರಿಗೆ ಎಫ್‌ಐಆರ್ ದಾಖಲಿಸುವ ಸಂದರ್ಭದಲ್ಲೇ ವೈದ್ಯಕೀಯ ಗರ್ಭಪಾತದ ಸಾಧ್ಯಾಸಾಧ್ಯತೆಗಳ ಕುರಿತು ತಿಳಿಸಿದರೆ ಸಂತ್ರಸ್ತೆ ಮತ್ತು ಆಕೆಯ ಕುಟುಂಬಸ್ಥರಿಗೆ ಆಗುವ ಮಾನಸಿಕ ಯಾತನೆಯನ್ನು ತಪ್ಪಿಸಬಹುದು” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅತ್ಯಾಚಾರದಿಂದ ಗರ್ಭ ಧರಿಸಿದರೆ ಪಾಲಿಸಬೇಕಾದ ನಿರ್ದೇಶನಗಳನ್ನು ನ್ಯಾಯಾಲಯ ನೀಡಿದೆ. ಅವುಗಳು ಇಂತಿವೆ:
ಐಪಿಸಿ ಸೆಕ್ಷನ್ 376 ಅಥವಾ ಪೋಕ್ಸೊ ಕಾಯಿದೆ ಅಡಿ ಪ್ರಕರಣ ದಾಖಲಿಸಿದ ತಕ್ಷಣ ಆಕೆ ಗರ್ಭಧರಿಸಿದ್ದಾಳೆಯೇ ಇಲ್ಲವೇ ಎಂಬುದನ್ನು ತಿಳಿಯಲು ವೈದ್ಯಕೀಯ ಪರೀಕ್ಷೆ ನಡೆಸಬೇಕು. ಗರ್ಭಧಾರಣೆ ಅವಧಿ, ಸಂತ್ರಸ್ತೆಯ ಮಾನಸಿಕ ಮತ್ತು ದೈಹಿಕ ಸ್ಥಿತಿಗತಿ, ವೈದ್ಯಕೀಯ ಗರ್ಭಪಾತ ಮಾಡಿಸಿಕೊಳ್ಳುವ ಶಕ್ತಿ, ಇದರಿಂದ ಸಂತ್ರಸ್ತೆಯ ಯೋಗಕ್ಷೇಮದ ಮೇಲೆ ಪರಿಣಾಮ ಬೀರುವ ಅಂಶಗಳು ಇತ್ಯಾದಿ ತಿಳಿಯಲಿದೆ.
ಸಂತ್ರಸ್ತೆ ಗರ್ಭವತಿಯಾಗಿದ್ದರೆ ಮಕ್ಕಳ ಕಲ್ಯಾಣ ಸಮಿತಿ ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳಿಗೆ ತನಿಖಾಧಿಕಾರಿ ಮಾಹಿತಿ ನೀಡಬೇಕು. ಆನಂತರ ಆ ಸಮಿತಿಗಳು ಸಂತ್ರಸ್ತೆ ಮತ್ತು ಆಕೆಯ ಕುಟುಂಬದವರ ಜೊತೆ ಸಮಾಲೋಚನೆ ನಡೆಸಬೇಕು. ಗರ್ಭಧಾರಣೆ ಮುಂದುವರಿಕೆಯ ಪರಿಣಾಮಗಳು, ಗರ್ಭಪಾತಕ್ಕೆ ಇರುವ ಆಯ್ಕೆಗಳು, ಪ್ರಕ್ರಿಯೆ ಮತ್ತು ಕಾನೂನು ಅವಕಾಶಗಳ ಬಗ್ಗೆ ತಿಳಿಸಿಕೊಡಬೇಕು.
ಸಂತ್ರಸ್ತೆಗೆ ತಿಳಿದಿರುವ ಭಾಷೆಯಲ್ಲಿಯೇ ಸಮಾಲೋಚನೆ ನಡೆಸಬೇಕು. ಇದಕ್ಕೆ ಅಗತ್ಯವಾದರೆ ಸೂಕ್ತ ಅನುವಾದಕರನ್ನು ಬಳಕೆ ಮಾಡಿಕೊಳ್ಳಬಹುದು. ಸಂತ್ರಸ್ತೆ ಮತ್ತು ಆಕೆಯ ಕುಟುಂಬಸ್ಥರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕು.
ಗರ್ಭಪಾತ ಮಾಡಿಸಿದರೆ ಭ್ರೂಣದ ಮಾದರಿಯನ್ನು ವಂಶವಾಹಿ ವಿಶ್ಲೇಷಣೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಬೇಕು.
ಸಂತ್ರಸ್ತೆಯ ಮಾನಸಿಕ ಮತ್ತು ದೈಹಿಕ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ಮೇಲಿಂದ ಮೇಲೆ ಆರೋಗ್ಯ ತಪಾಸಣೆ ಮಾಡಬೇಕು.
ಇಂಥ ಸಂದರ್ಭದಲ್ಲಿ ಪೊಲೀಸ್ ಮಹಾನಿರ್ದೇಶಕರು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿಸ್ತೃತ ಮಾರ್ಗಸೂಚಿ ರೂಪಿಸಬೇಕು. ತಜ್ಞರ ಸಮಿತಿಯ ಜೊತೆ ಸಮಾಲೋಚನೆ ನಡೆಸಿದ ಬಳಿಕ ಮಾರ್ಗಸೂಚಿ ರೂಪಿಸಬೇಕು. ಮಾರ್ಗಸೂಚಿಯನ್ನು ಎಲ್ಲಾ ತನಿಖಾಧಿಕಾರಿಗಳು, ಮಕ್ಕಳ ಕಲ್ಯಾಣ ಸಮಿತಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು, ಸರ್ಕಾರಿ ಆಸ್ಪತ್ರೆಗಳು ಇತ್ಯಾದಿಗಳಿಗೆ ಕಳುಹಿಸಿಕೊಡಬೇಕು.
ಪ್ರಕರಣದ ಸುತ್ತಲಿನ ಘಟನೆ ಆಧರಿಸಿ ತಕ್ಷಣದ ಅಗತ್ಯಕ್ಕಾಗಿ ಸಂತ್ರಸ್ತೆ ಮತ್ತು ಆಕೆಯ ಕುಟುಂಬಸ್ಥರಿಗೆ ಕಾನೂನು ಸೇವಾ ಪ್ರಾಧಿಕಾರಗಳು ಪರಿಹಾರ ವಿತರಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಅರ್ಜಿದಾರ ಸಂತ್ರಸ್ತೆ ಮತ್ತು ಆಕೆಯ ಪರವಾಗಿ ವಕೀಲ ಪಿ ಪ್ರಸನ್ನಕುಮಾರ್ ವಾದಿಸಿದರು. ವಕೀಲ ನವೀನ್ ಚಂದ್ರಶೇಖರ್ ಮತ್ತು ಶಿಲ್ಪಾ ರಾಣಿ ಅವರು ಪ್ರತಿವಾದಿ ಸರ್ಕಾರಿ ಸಂಸ್ಥೆಗಳನ್ನು ಪ್ರತಿನಿಧಿಸಿದ್ದರು.