ಸಿನಿಮಾ ಟಿಕೆಟ್‌ಗಳ ಮೇಲೆ ಶೇ.2 ಸೆಸ್‌ ಸುತ್ತೋಲೆ ವಜಾಗೊಳಿಸಿದ ಹೈಕೋರ್ಟ್‌

ಸೆಸ್ ಸಂಗ್ರಹ ಕುರಿತು ಸುತ್ತೋಲೆ ಮತ್ತು ನೋಟಿಸ್‌ಗಳನ್ನು ಪ್ರಶ್ನಿಸಿ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಪಿವಿಆರ್ ಐನಾಕ್ಸ್ ಲಿಮಿಟೆಡ್ ಮತ್ತು ಇದರ ಶೇರುದಾರ ಶಂತನು ಪೈ ಅರ್ಜಿ ಸಲ್ಲಿಸಿದ್ದರು.
Karnataka High Court and movie theatre
Karnataka High Court and movie theatre
Published on

ಸಿನಿಮಾ ಹಾಗೂ ಸಾಂಸ್ಕೃತಿಕ ಕಾರ್ಯಕರ್ತರ ಕಲ್ಯಾಣ ಯೋಜನೆಗಳಿಗೆ ಅನುದಾನ ಒದಗಿಸಲು ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನೆಮಾ ಟಿಕೆಟ್ ದರದ ಮೇಲೆ ಕಡ್ಡಾಯವಾಗಿ ಶೇ. 2ರಷ್ಟು ಸೆಸ್ (ಉಪಕರ) ಸಂಗ್ರಹಿಸುವಂತೆ ಸೂಚಿಸಿ ಸರ್ಕಾರ ಹೊರಡಿಸಿದ್ದ ನೋಟಿಸ್‌ಗಳನ್ನು ಕರ್ನಾಟಕ ಹೈಕೋರ್ಟ್ ಗುರುವಾರ ರದ್ದುಪಡಿಸಿದೆ.

ಸೆಸ್ ಸಂಗ್ರಹ ಕುರಿತು ಸುತ್ತೋಲೆ ಮತ್ತು ನೋಟಿಸ್‌ಗಳನ್ನು ಪ್ರಶ್ನಿಸಿ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಪಿವಿಆರ್ ಐನಾಕ್ಸ್ ಲಿಮಿಟೆಡ್ ಮತ್ತು ಇದರ ಶೇರುದಾರ ಶಂತನು ಪೈ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಚ್ ಟಿ ನರೇಂದ್ರಪ್ರಸಾದ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಸರ್ಕಾರದ ಪರ ವಕೀಲರು ಹಾಜರಾಗಿ, ಕರ್ನಾಟಕ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಾರ್ಮಿಕರ (ಕ್ಷೇಮಾಭಿವೃದ್ದಿ) ಕಾಯಿದೆ-2024ರಡಿ ಸಿನಿಮಾ ಹಾಗೂ ಸಾಂಸ್ಕೃತಿಕ ಕಾರ್ಯಕರ್ತರ ಕಲ್ಯಾಣ ಯೋಜನೆಗಳಿಗೆ ಅನುದಾನ ಒದಗಿಸಲು 2026ರ ಸೆಪ್ಟೆಂಬರ್‌ 1ರಿಂದ ಕಡ್ಡಾಯವಾಗಿ ಎಲ್ಲಾ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್ ಗಳಲ್ಲಿ ಟಿಕೆಟ್ ದರದ ಮೇಲೆ ಶೇ.2ರಷ್ಟು ಸೆಸ್ ಸಂಗ್ರಹ ಮಾಡಬೇಕು ಎಂದು ರಾಜ್ಯ ಸರ್ಕಾರದ ಪರವಾಗಿ ಕಾರ್ಮಿಕ ಆಯುಕ್ತರು 2026ರ ಆಗಸ್ಟ್ 29ರಂದು ಹೊರಡಿಸಿರುವ ಕಚೇರಿ ಆದೇಶವನ್ನು ಸೆಪ್ಟೆಂಬರ್‌ 9ರಂದು ವಾಪಸ್ ಪಡೆಯಲಾಗಿದೆ. ಅಲ್ಲದೇ, ಅಧಿನಿಯಮ ಜಾರಿಗೆ ಸಂಬಂಧಿಸಿದಂತೆ ಇಲ್ಲಿವರೆಗೆ ಯಾವುದೇ ಅಧಿಕೃತ ಅಧಿಸೂಚನೆ ಹೊರಡಿಸಲಾಗಿಲ್ಲ” ಎಂದು ಪೀಠಕ್ಕೆ ತಿಳಿಸಿದರು.

ಅರ್ಜಿದಾರರ ಪರ ಹಿರಿಯ ವಕೀಲ ಉದಯ್ ಹೊಳ್ಳ ಅವರು “ಕಾಯಿದೆ ಸೆಕ್ಷನ್ 1(2)ರ ಪ್ರಕಾರ ಸರ್ಕಾರವು ಈ ಕಾಯಿದೆ ಎಂದು ಜಾರಿಗೆ ಬರಲಿದೆ ಎಂದು ಪ್ರತ್ಯೇಕ ಅಧಿಕೃತ ಅಧಿಸೂಚನೆ ಹೊರಡಿಸಬೇಕು. ಆದರೆ, ಸರ್ಕಾರ ಇನ್ನೂ ಯಾವುದೇ ಅಧಿಸೂಚನೆ ಹೊರಡಿಸಿಲ್ಲ. ಹೀಗಿದ್ದರೂ ಕಾಯಿದೆ ಜಾರಿಯಲ್ಲಿದೆ ಎಂದು ನೋಟಿಸ್ ಕಳುಹಿಸಿ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ” ಎಂದು ಪೀಠಕ್ಕೆ ವಿವರಿಸಿದರು.

ವಾದ-ಪ್ರತಿವಾದ ಆಲಿಸಿದ ಪೀಠವು ಕಾಯಿದೆ ಜಾರಿ ಬಗ್ಗೆ ಅಧಿಕೃತ ಅಧಿಸೂಚನೆ ಹೊರಡಿಸದೇ ಸೆಸ್ ಸಂಗ್ರಹಕ್ಕೆ ನೋಟಿಸ್ ಕೊಡಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದಾರೆ. ಇದೇ ವೇಳೆ ಈ ಕುರಿತ ಕಚೇರಿ ಆದೇಶವನ್ನು ವಾಪಸ್ ಪಡೆದುಕೊಳ್ಳಲಾಗಿದೆ ಮತ್ತು ಕಾಯಿದೆ ಜಾರಿ ಬಗ್ಗೆ ಈವರೆಗೆ ಗೆಜೆಟ್ ಅಧಿಸೂಚನೆ ಪ್ರಕಟಿಸಲಾಗಿಲ್ಲ ಎಂದು ಸರ್ಕಾರದ ಪರ ವಕೀಲರ ತಿಳಿಸಿದ್ದಾರೆ. ಹೀಗಾಗಿ, ಇನ್ನೂ ಜಾರಿಗೇ ಬರದ ಕಾಯಿದೆ ಆಧರಿಸಿ ಸೆಸ್ ಸಂಗ್ರಹ ಸಂಬಂಧ ಸಿನಿಮಾ ಮಂದಿರ, ಮಲ್ಟಿಪ್ಲೆಕ್ಸ್‌ಗಳಿಗೆ ಕಾರ್ಮಿಕ ಇಲಾಖೆ ನೀಡಿರುವ ನೋಟಿಸ್ ಗಳನ್ನು ರದ್ದುಪಡಿಸಲಾಗಿದೆ ಎಂದಿತು.

Kannada Bar & Bench
kannada.barandbench.com