ರಾಹುಲ್‌ ಗಾಂಧಿ, ಪಾಕ್‌ ಸೇನಾಧಿಕಾರಿ ಮುಖ ಜೋಡಿಸಿ ಪೋಸ್ಟರ್‌ ಹಂಚಿಕೆ: ಶಿವಮೊಗ್ಗದ ವ್ಯಕ್ತಿ ವಿರುದ್ಧದ ಪ್ರಕರಣ ರದ್ದು

ಕೆಳ ನ್ಯಾಯಾಲಯದ ಪ್ರಕರಣದ ಪ್ರಕ್ರಿಯೆಗಳು ಹಾಗೂ ಜಿಲ್ಲಾಧಿಕಾರಿಯ ಅನುಮತಿ ಆದೇಶವನ್ನು ರದ್ದುಗೊಳಿಸಿ ಅರ್ಜಿಯನ್ನು ಹೈಕೋರ್ಟ್‌ ಪುರಸ್ಕರಿಸಿದೆ.
Karnataka HC & Rahul Gandhi
Karnataka HC & Rahul Gandhi
Published on: 

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಹಾಗೂ ಪಾಕಿಸ್ತಾನ ಸೇನಾಧಿಕಾರಿಯ ಮುಖಗಳನ್ನು ಜೋಡಿಸಿದ ಪೋಸ್ಟರ್‌ ಅನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಆರೋಪ ಸಂಬಂಧ ಶಿವಮೊಗ್ಗ ಜಿಲ್ಲೆಯ ಜಿ ನಾಗೇಶ್‌ ಅಲಿಯಾಸ್‌ ರಾಜೇಶ ಹಿರಿಮನೆ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ರದ್ದುಗೊಳಿಸಿದೆ.

ಅಲ್ಲದೆ, ಪ್ರಕರಣದ ವಿಚಾರಣೆ ಮುಂದುವರಿಸಲು ಅವಕಾಶ ನೀಡುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗಲಿದೆ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.

Justice M Nagaprasanna
Justice M Nagaprasanna

ನಾಗೇಶ್‌ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಪೀಠಬವು ಹೊಸನಗರದ ಪ್ರಧಾನ ಸಿವಿಲ್‌ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಬಾಕಿಯಿದ್ದ ವಿಚಾರಣಾ ಪ್ರಕ್ರಿಯೆ ರದ್ದುಗೊಳಿಸಿದೆ. ಅಭಿಯೋಜನೆಗೆ ಅನುಮತಿ ನೀಡಿ ಶಿವಮೊಗ್ಗ ಜಿಲ್ಲಾಧಿಕಾರಿ  ಹೊರಡಿಸಿದ್ದ ಆದೇಶವನ್ನೂ ರದ್ದುಪಡಿಸಿದೆ.

ಒಂದು ಅಭಿವ್ಯಕ್ತಿಯ ಪರಿಣಾಮವನ್ನು ಅಳೆಯುವಾಗ ವಿವೇಚನಾಶೀಲ, ದೃಢಮನಸ್ಕ ಮತ್ತು ಧೈರ್ಯಶಾಲಿ ವ್ಯಕ್ತಿಗಳ ಮಾನದಂಡವನ್ನು ಬಳಸಬೇಕು; ಪ್ರತಿಯೊಂದು ಪ್ರತಿಕೂಲ ಅಭಿಪ್ರಾಯದಲ್ಲಿಯೂ ಅಪಾಯ ಹುಡುಕುವವರ ದೂರದೃಷ್ಟಿಯನ್ನು ಆಧರಿಸಬಾರದು ಎಂಬ ನ್ಯಾಯಾಂಗ ತತ್ವವನ್ನೂ ಹೈಕೋರ್ಟ್‌ ಉಲ್ಲೇಖಿಸಿದೆ.

ಅಲ್ಲದೆ, ಸುಪ್ರೀಂ ಕೋರ್ಟ್‌ ತತ್ವಗಳ ಆಧಾರದಲ್ಲಿ ನಾಗೇಶ್‌ ವಿರುದ್ಧದ ಪ್ರಕರಣದ ಸಂಗತಿಗಳನ್ನು ಪರಿಗಣಿಸಿದ ಪೀಠವು ವಿಚಾರಣೆಯನ್ನು ಮುಂದುವರಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ತೀರ್ಮಾನಿಸಿದೆ. ಅದರಂತೆ, ಕೆಳ ನ್ಯಾಯಾಲಯದ ಪ್ರಕರಣದ ಪ್ರಕ್ರಿಯೆಗಳು ಹಾಗೂ ಜಿಲ್ಲಾಧಿಕಾರಿಯ ಅನುಮತಿ ಆದೇಶವನ್ನು ರದ್ದುಗೊಳಿಸಿ ಅರ್ಜಿಯನ್ನು ಪುರಸ್ಕರಿಸಿದೆ.

ಮಾತು ಅಥವಾ ಬರಹದ ಆಧಾರದಲ್ಲಿ ಅಪರಾಧದ ಆರೋಪ ಬಂದಾಗ, ಪೊಲೀಸರು ಸಂವಿಧಾನದ 19(1)(ಎ)ನೇ ವಿಧಿ ಖಾತರಿಪಡಿಸಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು 19(2)ನೇ ವಿಧಿ ನಿಗದಿಪಡಿಸಿರುವ ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಳ್ಳಬೇಕೆಂಬ ಸುಪ್ರೀಂಕೋರ್ಟ್‌ನ ಅಭಿಪ್ರಾಯವನ್ನು ಪೀಠ ತನ್ನ ಆದೇಶದಲ್ಲಿ ದಾಖಲಿಸಿದೆ.

Senior Advocate M Aruna Shyam
Senior Advocate M Aruna Shyam

ಅರ್ಜಿದಾರರ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಎಂ ಅರುಣ ಶ್ಯಾಮ್‌ ಅವರು “ನಾಗೇಶ್‌ ವಿವಾದಿತ ಚಿತ್ರದ ಸೃಷ್ಟಿಕರ್ತರಲ್ಲ. ಅದನ್ನು ಹಂಚಿಕೊಂಡಿರುವುದಷ್ಟೇ. ಅಷ್ಟೇ ಅಲ್ಲದೆ, ಪ್ರಕರಣದ ಆರೋಪಗಳು ಬಿಎನ್‌ಎಸ್‌ ಸೆಕ್ಷನ್‌ 353(2)ರ ಅಡಿಯಲ್ಲಿ ಅಪರಾಧವನ್ನು ನಿರೂಪಿಸಿಲ್ಲ” ಎಂದಿದ್ದರು.

SPP B N Jagadeesha
SPP B N Jagadeesha

ರಾಜ್ಯ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಸಮುದಾಯಗಳ ನಡುವೆ ವೈಮನಸ್ಯ ಉತ್ತೇಜಿಸಿರುವ ಆರೋಪ ಅರ್ಜಿದಾರರ ವಿರುದ್ಧ ಮೇಲ್ನೋಟಕ್ಕೆ ಕಂಡುಬರುತ್ತದೆ. ಹೀಗಾಗಿ, ಅವರು ಪೂರ್ಣ ಪ್ರಮಾಣದ ವಿಚಾರಣೆಯನ್ನು ಎದುರಿಸಿ ಆರೋಪದಿಂದ ಮುಕ್ತರಾಗಬೇಕು. ಹೈಕೋರ್ಟ್‌ ಅರ್ಜಿದಾರರಿಗೆ ರಕ್ಷಣೆ ನೀಡಬಾರದು, ಅರ್ಜಿಯನ್ನು ವಜಾಗೊಳಿಸಬೇಕು” ಎಂದು ಕೋರಿದ್ದರು.

ಪ್ರಕರಣದ ಹಿನ್ನೆಲೆ: ನಾಗೇಶ್‌ 2025ರ ಮೇ 20ರಂದು ‘ರಾಜೇಶ ಹಿರಿಮನೆ’ ಹೆಸರಿನ ಫೇಸ್‌ಬುಕ್‌ನಲ್ಲಿ ಪೋಸ್ಟರ್‌ವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ರಾಹುಲ್‌ ಗಾಂಧಿ ಅವರ ಮುಖದ ಅರ್ಧಭಾಗ ಹಾಗೂ ಪಾಕಿಸ್ತಾನ ಸೇನಾ ಸಮವಸ್ತ್ರ ಧರಿಸಿದ್ದ ಅಧಿಕಾರಿಯ ಮುಖದ ಅರ್ಧಭಾಗ ಜೋಡಿಸಲಾಗಿತ್ತು. ಸೇನಾಧಿಕಾರಿಯ ಸಮವಸ್ತ್ರದಲ್ಲಿ ‘ASIM’ ಎಂಬ ನಾಮಫಲಕವಿದ್ದು, ಪೋಸ್ಟರ್‌ಗೆ ‘ONE AGENDA’ ಎಂಬ ಬರಹ ಅಳವಡಿಸಲಾಗಿತ್ತು. ಆ ಪೋಸ್ಟರ್ ಸಮುದಾಯಗಳು ಹಾಗೂ ಪ್ರಾದೇಶಿಕ ಗುಂಪುಗಳ ನಡುವೆ ವೈಷಮ್ಯ, ದ್ವೇಷ ಮತ್ತು ವೈಮನಸ್ಯ ಉಂಟುಮಾಡುವ ಉದ್ದೇಶದಿಂದ ಪೋಸ್ಟ್‌ ಸೃಷ್ಟಿಸಲಾಗಿದೆ ಎಂದು ಆರೋಪಿಸಲಾಗಿತ್ತು.

ಈ ಸಂಬಂಧ ನಗರ ಪೊಲೀಸ್‌ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 353(2) ಅನ್ವಯ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು. ಕೆಳ ನ್ಯಾಯಾಲಯವು 2025ರ ಡಿ. 1ರಂದು ಅಪರಾಧದ ಸಂಜ್ಞೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿತ್ತ. ತಮ್ಮ ವಿರುದ್ಧದ ಪ್ರಕರಣ ಹಾಗೂ ಅಭಿಯೋಜನೆಗೆ ಅನುಮತಿ ನೀಡಿದ ಆದೇಶ ಪ್ರಶ್ನಿಸಿ, ಶಿವಮೊಗ್ಗ ಜಿಲ್ಲೆಯ ಮಳಲಿ ಗ್ರಾಮದ ಹಿರಿಮನೆಯ ನಿವಾಸಿ ನಾಗೇಶ್‌ ಹೈಕೋರ್ಟ್‌ ಮೊರೆ ಹೋಗಿದ್ದರು.