

ಚುನಾವಣೆ ವೇಳೆ ನಿರ್ದಿಷ್ಟ ಬಿಜೆಪಿ ಶಾಲು ಧರಿಸುವಂತೆ ಜನರಿಗೆ ಬಲವಂತಪಡಿಸಿದ ಆರೋಪದ ಮೇಲೆ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ದಾಖಲಾಗಿದ್ದ ಎಫ್ಐಆರ್ ಅನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದುಪಡಿಸಿದೆ.
ಬೆಂಗಳೂರಿನ ನಂದಿನಿ ಲೇಔಟ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ರದ್ದುಕೋರಿ ಮುನಿರತ್ನ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿ, ಆದೇಶಿಸಿದೆ.
ಪ್ರಕರಣದಲ್ಲಿ ದಾಖಲಿಸಲಾಗಿರುವ ಸೆಕ್ಷನ್‌ಗಳು ತೀರಾ ಸಡಿಲವಾಗಿದ್ದು, ಸೂಕ್ತ ಆಧಾರಗಳಿಲ್ಲದೆ ಸೇರ್ಪಡೆ ಮಾಡಲಾಗಿದೆ. ಐಪಿಸಿ ಸೆಕ್ಷನ್ 363 ಅಪ್ರಾಪ್ತರ ಅಪಹರಣಕ್ಕೆ ಸಂಬಂಧಿಸಿದ್ದಾಗಿದೆ. ಆದರೆ, ಈ ಪ್ರಕರಣದಲ್ಲಿ ಯಾವುದೇ ಅಪ್ರಾಪ್ತರ ಅಪಹರಣ ನಡೆದಿಲ್ಲ. ಹೀಗಿದ್ದರೂ, ಪೊಲೀಸರು ಈ ಸೆಕ್ಷನ್ ಅಳವಡಿಸಿರುವುದು ಸರಿಯಾದ ಕ್ರಮವಲ್ಲ ಎಂದು ಪೀಠ ಹೇಳಿದೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮತ್ತು ಐಪಿಸಿ ಸೆಕ್ಷನ್ 171-ಸಿ ಅಡಿಯಲ್ಲಿನ ಆರೋಪಗಳಿಗೆ ಸಂಬಂಧಿಸಿದಂತೆ ಈ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿರುವ ಪೀಠವು, ಇಂತಹ ಸಣ್ಣಪುಟ್ಟ ವಿಷಯಗಳಲ್ಲಿ ತನಿಖೆಯನ್ನು ಮುಂದುವರಿಸಲು ಅನುಮತಿ ನೀಡುವುದು ಕಾನೂನು ಪ್ರಕ್ರಿಯೆಯ ದುರುಪಯೋಗಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದೆ.
ಈ ಪ್ರಕರಣದಲ್ಲಿ ಕಾನೂನು ಕ್ರಮಗಳನ್ನು ಮುಂದುವರಿಸಲು ಬಿಟ್ಟರೆ ಅದು ನ್ಯಾಯದ ಹಾದಿ ತಪ್ಪಿಸಿದಂತಾಗುತ್ತದೆ ಮತ್ತು ಕಾನೂನಿನ ದುರ್ಬಳಕೆಗೆ ದಾರಿ ಮಾಡಿಕೊಡುತ್ತದೆ ಎಂದು ತಿಳಿಸಿರುವ ಪೀಠವು ವಿಚಾರಣಾ ನ್ಯಾಯಾಲಯದಲ್ಲಿನ ನ್ಯಾಯಿಕ ಪ್ರಕ್ರಿಯೆಯನ್ನು ರದ್ದುಪಡಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಶಾಸಕ ಮುನಿರತ್ನ ಅವರು ಮತದಾರರಿಗೆ ಬಿಜೆಪಿ ಶಾಲು ಧರಿಸುವಂತೆ ಬಲವಂತಪಡಿಸಿದ್ದರು. ಅಲ್ಲದೆ, ಬೆದರಿಕೆ ಹಾಕಿದ್ದರು ಎಂದು ಆರೋಪಿಸಿ ಜೆ ಸ್ಯಾಮ್ಯುವೆಲ್ ದೂರು ನೀಡಿದ್ದರು.
ಈ ದೂರಿನ ಅನ್ವಯ ನಂದಿನಿ ಲೇಔಟ್ ಪೊಲೀಸರು ಮುನಿರತ್ನ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ), 149 (ಕಾನೂನುಬಾಹಿರ ಕೂಟ), 363 (ಅಪಹರಣ) ಮತ್ತು 171-ಸಿ (ಚುನಾವಣೆಯಲ್ಲಿ ಅನುಚಿತ ಪ್ರಭಾವ ಬೀರಲು ಯತ್ನ) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದರು.