

ಕಾಳಿಂಗ ಸರ್ಪ ಸೆರೆಹಿಡಿದು, ಅದರ ಫೋಟೋ ತೆಗೆದ ಆರೋಪದ ಮೇಲೆ ಹಾವು ರಕ್ಷರೊಬ್ಬರ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿದೆ.
ಕಾಳಿಂಗ ಸೆಂಟರ್ ಫಾರ್ ರೈನ್‌ಫಾರೆಸ್ಟ್ ಇಕಾಲಜಿಯ ಡಾ. ಪಿ ಗೌರಿಶಂಕರ್ ಅವರು ತಮ್ಮ ವಿರುದ್ದ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
ಹಾವನ್ನು ಬಂಧನದಲ್ಲಿಟ್ಟಿದ್ದ, ಕೊಂದಿದ್ದ ಅಥವಾ ಗಾಯಗೊಳಿಸಿದ್ದ ಹಾಗೂ ಅದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದ ಎಂಬ ಆರೋಪಗಳನ್ನು ಅರ್ಜಿದಾರರ ವಿರುದ್ಧ ಮಾಡಲಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
“ಅರ್ಜಿದಾರರು ಕಾಳಿಂಗ ಸರ್ಪವನ್ನು ಬಂಧನದಲ್ಲಿಟ್ಟಿದ್ದರು, ಕೊಂದಿದ್ದರು ಅಥವಾ ಗಾಯಗೊಳಿಸಿದ್ದರು ಅಥವಾ ಅದರ ಫೋಟೋವನ್ನು ಅಪ್‌ಲೋಡ್ ಮಾಡಿದ್ದರು ಎಂಬ ಆರೋಪವಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ಕಾಳಿಂಗ ಸರ್ಪವನ್ನು ಸೆರೆಹಿಡಿದು ಬಂಧನದಲ್ಲಿದ್ದಾಗ ಅದರ ಫೋಟೋ ತೆಗೆದಿದ್ದರು ಹಾಗೂ ಇತರರಿಗೂ ಅದರ ಫೋಟೋ ತೆಗೆಯಲು ಅವಕಾಶ ಮಾಡಿಕೊಟ್ಟಿದ್ದರು ಎಂಬುದು ಶಂಕರ್ ವಿರುದ್ಧದ ಆರೋಪವಾಗಿತ್ತು.
ಮೂರನೇ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದ ವಿಡಿಯೋದಲ್ಲಿ ಅರ್ಜಿದಾರರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರ ವಿರುದ್ಧ ದೂರು ದಾಖಲಿಸಲಾಗಿತ್ತು.
ವನ್ಯಜೀವಿ ಸಂರಕ್ಷಣಾ ಕಾಯಿದೆ 1972ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣವನ್ನು ರದ್ದುಗೊಳಿಸುವಂತೆ ಶಂಕರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಆರೋಪ ಪಟ್ಟಿಯಲ್ಲಿರುವ ದಾಖಲೆಗಳು ತಾವು ಕಿಂಗ್ ಕೋಬ್ರಾವನ್ನು ಬೇಟೆಯಾಡಿದ್ದ ಅಥವಾ ಸೆರೆಹಿಡಿದಿದ್ದನ್ನು ಸಾಬೀತುಪಡಿಸುವುದಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು. ಅಲ್ಲದೆ, ಪ್ರಾಸಿಕ್ಯೂಷನ್ ಅವಲಂಬಿಸಿದ್ದ ಫೋಟೋಗಳಲ್ಲಿ ಹಾವು ಅರಣ್ಯದ ತೆರೆದ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ಅದನ್ನು ಬಂಧನದಲ್ಲಿಟ್ಟಿರುವುದು ಕಂಡುಬರುವುದಿಲ್ಲ ಎಂದು ಅವರು ವಾದಿಸಿದ್ದರು.
ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರವು ಆರೋಪ ಪಟ್ಟಿಯಲ್ಲಿನ ದಾಖಲೆಗಳ ಪ್ರಕಾರ ಅರ್ಜಿದಾರರು ಇತರರಿಗೆ ಕಾಳಿಂಗ ಸರ್ಪದ ಫೋಟೋ ತೆಗೆಯಲು ಅವಕಾಶ ಮಾಡಿಕೊಟ್ಟಿದ್ದರು ಮತ್ತು ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಲು ಕಾರಣರಾಗಿದ್ದರು ಎಂದು ವಾದಿಸಿತ್ತು.
ಆದರೆ, ಕಾಳಿಂಗ ಸರ್ಪವನ್ನು ಅರ್ಜಿದಾರರು ವಾಸ್ತವವಾಗಿ ಸೆರೆಹಿಡಿದಿದ್ದರು ಎಂಬುದನ್ನು ಪ್ರಾಸಿಕ್ಯೂಷನ್ ದಾಖಲೆಗಳು ಸಾಬೀತುಪಡಿಸಿಲ್ಲ ಎಂದು ಹೈಕೋರ್ಟ್ ಗಮನಿಸಿದೆ.
“ಆರೋಪ ಪಟ್ಟಿಯೊಂದಿಗೆ ಸಲ್ಲಿಸಿರುವ ಫೋಟೋಗಳನ್ನು ಗಮನಿಸಿದರೆ, ಕಾಳಿಂಗ ಸರ್ಪವು ಅರಣ್ಯದ ತೆರೆದ ಪ್ರದೇಶದಲ್ಲಿರುವುದು ಕಂಡುಬರುತ್ತದೆ. ಅದನ್ನು ಬಂಧನದಲ್ಲಿಟ್ಟಿರಲಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿದ್ದವೇ ಹೊರತು ಅರ್ಜಿದಾರರಿಂದ ವಶಪಡಿಸಿಕೊಳ್ಳಲಾಗಿರಲಿಲ್ಲ ಎಂದು ನ್ಯಾಯಾಲಯ ಗಮನಿಸಿದೆ. ಅಲ್ಲದೆ, ಅರ್ಜಿದಾರರು ರಕ್ಷಿಸಿದ ಕಾಳಿಂಗ ಸರ್ಪದ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮಾಹಿತಿ ನೀಡಿದ್ದರು ಎಂಬ ಅಂಶವನ್ನೂ ಪರಿಗಣಿಸಿದೆ.
“ಈ ಹಿನ್ನೆಲೆಯಲ್ಲಿ, ಅರ್ಜಿದಾರರು ದೂರಿನಲ್ಲಿ ಆರೋಪಿಸಿರುವ ಯಾವುದೇ ಅಪರಾಧವನ್ನು ಎಸಗಿದ್ದಾರೆ ಎಂಬ ತೀರ್ಮಾನಕ್ಕೆ ನ್ಯಾಯಾಲಯ ಬರಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಈ ಹಿನ್ನೆಲೆಯಲ್ಲಿ, ಅರ್ಜಿದಾರರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಪ್ರಾಸಿಕ್ಯೂಷನ್ ಪರವಾಗಿ ಎಂ ವಿ ಅನೂಪ್ ಕುಮಾರ್ ವಾದಿಸಿದ್ದರು. ಅರ್ಜಿದಾರರ ಪರವಾಗಿ ಅಕ್ಷಯ್ ಸ್ವಾಮಿ ವಾದಿಸಿದ್ದರು.