
2018ರಲ್ಲಿ ಬೆಂಗಳೂರಿನಲ್ಲಿ ಬಿಟ್‌ಕಾಯಿನ್ ಎಟಿಎಂ ಸ್ಥಾಪಿಸಿದ್ದಕ್ಕಾಗಿ ಯುನೊಕಾಯಿನ್ ಎಂಬ ಬಿಟ್‌ಕಾಯಿನ್ ಸಂಸ್ಥಾಪಕರ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ರದ್ದುಪಡಿಸಿದೆ. 2018ರ ಅಕ್ಟೋಬರ್ 23ರಂದು ಆರೋಪಿಗಳಾದ ಬಿ ವಿ ಹರೀಶ್ ಮತ್ತು ಸಾತ್ವಿಕ್ ವಿಶ್ವನಾಥ್ ವಿರುದ್ಧ ಸೈಬರ್ ಕ್ರೈಮ್ ಪೊಲೀಸರು ಹೂಡಿದ್ದ ಮೊಕದ್ದಮೆಯನ್ನು ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರಿದ್ದ ಪೀಠ ತಳ್ಳಿಹಾಕಿತು.
ಇಂಟರ್ನೆಟ್ ಅಂಡ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ಆಧರಿಸಿ ಈ ಆದೇಶ ಹೊರಬಿದ್ದಿದೆ. ವರ್ಚುವಲ್ ಕರೆನ್ಸಿಗಳನ್ನು ನಿಷೇಧಿಸುವಂತೆ ಸೂಚಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿದ್ದ ಸುತ್ತೋಲೆಯನ್ನು ಆಗ ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ನಿಯಂತ್ರಕ ಘಟಕಗಳಾದ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ) ವರ್ಚುವಲ್ ಕರೆನ್ಸಿಗಳೊಂದಿಗೆ ವ್ಯವಹರಿಸಬಾರದು ಮತ್ತು ಕ್ರಿಪ್ಟೋ ವ್ಯವಹಾರಗಳಿಗೆ ಸೇವೆ ಒದಗಿಸುವಂತಿಲ್ಲ ಎಂದು 2018ರ ಏಪ್ರಿಲ್ 6ರಂದು ಹೊರಡಿಸಲಾದ ಸುತ್ತೋಲೆ ತಿಳಿಸಿತ್ತು. ಸುತ್ತೋಲೆ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿತ್ತು.
ಆರೋಪಿಗಳ ಪರವಾಗಿ ಹಾಜರಾದ ವಕೀಲರಾದ ಜೈದೀಪ್ ರೆಡ್ಡಿ ಮತ್ತು ಸಿರಿಲ್ ಪ್ರಸಾದ್ ಪೈಸ್ ಅವರು ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಪ್ರಸ್ತಾಪಿಸಿದರು. ಪಬ್ಲಿಕ್ ಪ್ರಾಸಿಕ್ಯೂಟರ್ ಅವರಿಂದ ಯಾವುದೇ ಆಕ್ಷೇಪ ವ್ಯಕ್ತವಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ವಾದವನ್ನು ಪುರಸ್ಕರಿಸಿತು. ಸುತ್ತೋಲೆ ಆಧರಿಸಿ ಅರ್ಜಿದಾರರನ್ನು ಬಂಧಿಸಲಾಗಿದೆ. ಆದರೆ ಸುತ್ತೋಲೆ ಈಗಾಗಲೇ ತಿರಸ್ಕೃತವಾಗಿರುವುದರಿಂದ ಬಂಧನವನ್ನು ಊರ್ಜಿತಗೊಳಿಸಲಾಗದು ಎಂಬ ನೆಲೆಯಲ್ಲಿ ನ್ಯಾಯಾಲಯ ಎಫ್‌ಐಆರ್ ಮತ್ತು ಆರೋಪಪಟ್ಟಿಯನ್ನು ರದ್ದುಗೊಳಿಸಿತು.
[ಆದೇಶವನ್ನು ಇಲ್ಲಿ ಓದಿ]