
ಹಾರ್ಲಿಕ್ಸ್ ಬಿಸ್ಕತ್ತಿನಲ್ಲಿ ಕ್ರಿಮಿನಾಶಕ ಪತ್ತೆ ಆರೋಪದ ಸಂಬಂಧ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ (ಎಚ್‌ಯುಎಲ್) ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೋಹಿತ್ ಜಾವಾ ವಿರುದ್ಧ ದಾಖಲಾಗಿದ್ದ ಆಹಾರ ಸುರಕ್ಷತಾ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ವಜಾಗೊಳಿಸಿದೆ.
“ಕಂಪನಿಯನ್ನು ಆರೋಪಿಯನ್ನಾಗಿಸದೇ ಇರುವುದರಿಂದ ಪ್ರಾಸಿಕ್ಯೂಷನ್ ಸಮರ್ಥನೀಯವಲ್ಲ” ಎಂದು ನ್ಯಾಯಮೂರ್ತಿ ಜೆ ಎಂ ಖಾಜಿ ಅವರ ಏಕಸದಸ್ಯ ಪೀಠ ಹೇಳಿದೆ.
“ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ 2006ರ ಅಡಿ ಕಂಪನಿಯನ್ನು ಕಕ್ಷಿದಾರರನ್ನಾಗಿಸದ ಹೊರತು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರನ್ನು ವ್ಯಕ್ತಿಗತವಾಗಿ ವಿಚಾರಣೆಗೆ ಒಳಪಡಿಸಲಾಗದು. ಹಾಲಿ ಪ್ರಕರಣದಲ್ಲಿ ಕಂಪನಿಯನ್ನು ಆರೋಪಿಯನ್ನಾಗಿಸಲಾಗಿಲ್ಲ. ಏಕೈಕ ಆರೋಪಿಯಾಗಿರುವ ರೋಹಿತ್ ಜಾವಾ ವಿರುದ್ಧ ಪ್ರಕ್ರಿಯೆ ಮುಂದುವರಿಸಲಾಗದು” ಎಂದು ನ್ಯಾಯಾಲಯ ಹೇಳಿದೆ.
“ನಿರ್ದಿಷ್ಟ ವ್ಯಕ್ತಿಯನ್ನು ಹೊಣೆಗಾರರನ್ನಾಗಿಸಲು ಕಂಪನಿಯ ಉಪಸ್ಥಿತಿ ಅಗತ್ಯವಾಗಿದೆ. ಈ ಕಾರಣಕ್ಕಾಗಿ ಆರೋಪಿಯ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆ ವಜಾಗೊಳಿಸಬೇಕಿದೆ. ಆರೋಪಿಗಳ ವಿರುದ್ಧ ಹೆಚ್ಚುವರಿಯಾಗಿ ಕಂಪನಿಯನ್ನೂ ಸೇರಿಸಿ ಹೊಸದಾಗಿ ದೂರು ದಾಖಲಿಸಲು ದೂರುದಾರರಿಗೆ ಸ್ವಾತಂತ್ರ್ಯವಿದೆ” ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಡೌನ್‌ಟೌನ್ ಸೂಪರ್ ಮಾರ್ಕೆಟ್‌ನಲ್ಲಿ ತೆಗೆದುಕೊಂಡಿದ್ದ ಹಾರ್ಲಿಕ್ಸ್ ಬಿಸ್ಕತ್ತಿನಲ್ಲಿ ಆಹಾರ ಸುರಕ್ಷೆ ಮತ್ತು ಗುಣಮಟ್ಟ ನಿಯಂತ್ರಣ ಕಾಯಿದೆ ಅಡಿ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಕ್ಲೋರ್‌ಪಿರಿಫೋಸ್ ಅಂಶ ಪತ್ತೆಯಾಗಿದೆ ಎಂದು ಆರೋಪಿಸಿ ಬಿಬಿಎಂಪಿಯ ಆಹಾರ ಸುರಕ್ಷತಾ ಅಧಿಕಾರಿ 2023ರ ಜೂನ್‌ನಲ್ಲಿ ಪ್ರಕರಣ ದಾಖಲಿಸಿದ್ದರು.
ಆರ್ಥಿಕ ಅಪರಾಧಗಳಿಗಾಗಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ಮುಂದೆ ದಾಖಲಾಗಿದ್ದ ಪ್ರಕರಣದಲ್ಲಿ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಆರೋಪಿಯನ್ನಾಗಿ ಮಾಡಲಾಗಿರಲಿಲ್ಲ. ಬದಲಿಗೆ ಜಾವ ವಿರುದ್ ಎಫ್‌ಸಿಸಿ ಕಾಯಿದೆ ಸೆಕ್ಷನ್ 51 ಮತ್ತು 59ರ ಅಡಿ ಪ್ರಕರಣ ದಾಖಲಿಸಿ, ಕಂಪನಿಯ ನಿರ್ವಹಣೆಗೆ ಜಾವ ಕಾರಣ ಎಂದು ದೂರಲಾಗಿತ್ತು. 2023ರ ಜೂನ್ 26ರಂದು ವಿಚಾರಣಾಧೀನ ನ್ಯಾಯಾಲಯವು ಸಂಜ್ಞೇ ಪರಿಗಣಿಸಿ ಸಮನ್ಸ್ ಜಾರಿಗೊಳಿಸಿತ್ತು.
ಜಾವಾ ಅವರನ್ನು ವಕೀಲ ಅಹಾನ್ ಮೋಹನ್ ಪ್ರತಿನಿಧಿಸಿದ್ದರು. ಸರ್ಕಾರದ ಪರವಾಗಿ ವಕೀಲ ವೆಂಕಟ್ ಸತ್ಯನಾರಾಯಣ್ ವಾದಿಸಿದ್ದರು.