ಕರ್ನಾಟಕ ಮತ್ತು ಬಾಂಬೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಸಾಲ್ಡಾನಾ ವಿರುದ್ಧದ ಕ್ರಿಮಿನಲ್ ಮಾನಹಾನಿ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದುಪಡಿಸಿದೆ.
ನಿವೃತ್ತ ನ್ಯಾಯಮೂರ್ತಿ ಸಾಲ್ಡಾನಾ ಅವರ ಬೇಷರತ್ ಕ್ಷಮೆ ಮತ್ತು ಪ್ರಕರಣ ಮುಂದುವರಿಸುವುದಿಲ್ಲ ಎಂಬ ಅವರ ಮುಚ್ಚಳಿಕೆಯನ್ನು ಪರಿಗಣಿಸಿ ನ್ಯಾಯಮೂರ್ತಿ ಎನ್ ಎಸ್ ಸಂಜಯ್ ಗೌಡ ಅವರು ಮಾನಹಾನಿ ಪ್ರಕರಣ ರದ್ದುಪಡಿಸಿದ್ದಾರೆ.
ವಕೀಲ ಎಂ ಪಿ ನರೋನಾ ಅವರು ದಾಖಲಿಸಿದ್ದ ಖಾಸಗಿ ದೂರಿನ ಸಂಜ್ಞೇ ಪರಿಗಣಿಸಿದ್ದ ವಿಚಾರಣಾಧೀನ ನ್ಯಾಯಾಲಯವು ನಿವೃತ್ತ ನ್ಯಾಯಮೂರ್ತಿ ಸಾಲ್ಡಾನಾ ಸೇರಿ ನಾಲ್ವರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 499 (ಮಾನಹಾನಿ), 384, 385, 389, 500, 501, 506 ಜೊತೆಗೆ 34 ಅಡಿ ಪ್ರಕರಣ ದಾಖಲಿಸಲು ಆದೇಶಿಸಿತ್ತು.
ಮಂಗಳೂರಿನ ನಿವಾಸಿ ಬ್ಯಾಪ್ಟಿಸ್ಟ್ ಡಿಸೋಜಾ ಅವರ ನಿವಾಸವನ್ನು ಸೇಂಟ್ ಅಲೋಶಿಯಸ್ ಕಾಲೇಜಿನ ಜೆಸ್ಯೂಟ್ ಪಾದ್ರಿ ಅವರು ಕೆಡವುವ ಮೂಲಕ ಅನ್ಯಾಯ ಮಾಡಿದ್ದಾರೆ ಎಂದು ನಿವೃತ್ತ ನ್ಯಾಯಮೂರ್ತಿ ಸಾಲ್ಡಾನಾ ಅವರು ಮಾಧ್ಯಮಗೋಷ್ಠಿ ನಡೆಸಿದ್ದರು. ಪೊಲೀಸರ ವೈಫಲ್ಯದಿಂದ ಡಿಸೋಜಾ ಅವರ ಆಸ್ತಿಗೆ ಹಾನಿಯಾಗಿದ್ದು, ಅವರ ಇಬ್ಬರು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಲಾಗಿತ್ತು.
ಇದಕ್ಕೆ ಆಕ್ಷೇಪಿಸಿದ್ದ ವಕೀಲ ನರೋನಾ ಅವರು ಸುದ್ದಿಗೋಷ್ಠಿಯಿಂದ ಮಾನಹಾನಿಯಾಗಿದೆ ಎಂದು ದೂರು ನೀಡಿದ್ದರು. ಈ ಸಂಬಂಧ ಮಂಗಳೂರಿನ ಉತ್ತರ ಠಾಣೆಯ ಪೊಲೀಸರು ದೂರು ದಾಖಲಿಸದ ಹಿನ್ನೆಲೆಯಲ್ಲಿ ಅವರು ಖಾಸಗಿ ದೂರು ದಾಖಲಿಸಿದ್ದರು. ಇದರ ಸಂಜ್ಞೇ ಪರಿಗಣಿಸಿದ್ದ ವಿಚಾರಣಾಧೀನ ನ್ಯಾಯಾಲಯವು ನಿವೃತ್ತ ನ್ಯಾಯಮೂರ್ತಿ ಸಾಲ್ಡಾನಾ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲು ಮಂಗಳೂರು ಉತ್ತರ ಪೊಲೀಸರಿಗೆ ಆದೇಶಿಸಿತ್ತು. ಇದರ ವಿಚಾರಣೆ ನಡೆಸಿದ್ದ ಪೊಲೀಸರು ಬಿ ವರದಿ ಸಲ್ಲಿಸಿದ್ದರು.
ಪೊಲೀಸರ ಬಿ ವರದಿಯನ್ನು ಪ್ರಶ್ನಿಸಿ ನರೋನಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ ವಿಚಾರಣಾಧೀನ ನ್ಯಾಯಾಲಯವು ನಿವೃತ್ತ ನ್ಯಾಯಮೂರ್ತಿ ಸಾಲ್ಡಾನಾ, ಪಿ ಬಿ ಡಸಾ, ವಾಲ್ಟರ್ ಜೆ ಮಬಿನ್ ಮತ್ತು ಸುರೇಶ್ ಭಟ್ ಬಾಕ್ರಬೈಲ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಆದೇಶಿಸಿತ್ತು. ಇದನ್ನು ವಜಾ ಮಾಡುವಂತೆ ಕೋರಿ ನಿವೃತ್ತ ನ್ಯಾಯಮೂರ್ತಿ ಸಾಲ್ಡಾನಾ ಮತ್ತು ಪಿ ಬಿ ಡಸಾ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿದೆ.
ಅರ್ಜಿದಾರರ ಪರವಾಗಿ ವಕೀಲ ದಿಲ್‌ರಾಜ್ ರೋಹಿತ್ ಸೀಕ್ವೆರಾ ಮತ್ತು ಸರ್ಕಾರದ ಪರವಾಗಿ ರಶ್ಮಿ ಪಟೇಲ್ ಮತ್ತು ಎಂ ಪಿ ನರೋನಾ ಪರವಾಗಿ ಸಿರಲ್ ಪ್ರಸಾದ್ ಪೈಸ್ ವಾದಿಸಿದ್ದರು.