ಮದುವೆಯಾಗುವುದು, ಪತಿಯಿಂದ ಹಣಕ್ಕೆ ಬೇಡಿಕೆ ಇಡುವುದು, ಬಳಿಕ ಕ್ರಿಮಿನಲ್ ಪ್ರಕರಣ ದಾಖಲಿಸಿ ವಿಚ್ಛೇದನ ಪಡೆಯುವ ಮೂಲಕ ಮರುಮದುವೆಯಾಗುವ ಆರೋಪ ಎದುರಿಸುತ್ತಿರುವ ಮಹಿಳೆಯ ವಿರುದ್ಧ ಕರ್ನಾಟಕ ಹೈಕೋರ್ಟ್ ಕಟುವಾದ ಅಭಿಪ್ರಾಯ ವ್ಯಕ್ತಪಡಿಸಿದೆ.
ಮಹಿಳೆಯು ತನ್ನ ಏಳನೇ ಪತಿ ಎಂದು ಹೇಳಿಕೊಂಡಿರುವ ಹೊಸಪೇಟೆಯ ರಾಜಕಾರಣಿ ವಿರುದ್ಧ ದಾಖಲಿಸಲಾಗಿದ್ದ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ರದ್ದುಗೊಳಿಸಿದೆ.
ಭಾರತೀಯ ದಂಡ ಸಂಹಿತೆ ಸೆಕ್ಷನ್ 498A ಅಡಿಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಿದ್ದು, ಮಹಿಳೆಯು ಕಾನೂನು ಪ್ರಕ್ರಿಯೆಯನ್ನು ದುರುದ್ದೇಶಪೂರಿತವಾಗಿ ಬಳಸಿಕೊಂಡಿರುವುದನ್ನು ಗಮನಿಸಿದೆ.
“ದುರ್ಬಲರಿಗೆ ರಕ್ಷಣೆ ನೀಡಲು ರೂಪಿಸಲಾದ ಐಪಿಸಿ ಸೆಕ್ಷನ್ 498ಎ ಅನ್ನು ತಬಸ್ಸುಮ್ ಅನ್ಯ ಉದ್ದೇಶಕ್ಕಾಗಿ ಬಳಸಿಕೊಂಡಿದ್ದಾರೆ. ಅವರ ಪುನರಾವರ್ತಿತ ಮದುವೆಗಳು ದುರದೃಷ್ಟಕರ ಘಟನೆಗಳ ಆಕಸ್ಮಿಕ ಸಂಯೋಜನೆಯಲ್ಲ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪ್ರಕರಣದ ಪ್ರತಿವಾದಿ ಪತ್ನಿ ಮದುವೆಯಾದ ಬಳಿಕ ತನ್ನ ಪತಿಯಿಂದ ಹಣ ಪಡೆಯಲು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುತ್ತಾ ಬಂದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದು ಪೀಠ ಹೇಳಿದೆ.
“ತನ್ನ ವೈಯಕ್ತಿಕ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಕಾನೂನು ಪ್ರಕ್ರಿಯೆಯನ್ನು ಅನುಕೂಲಕರ ಸಾಧನವನ್ನಾಗಿ ಬಳಸಿಕೊಳ್ಳುತ್ತಿರುವುದು ಹಿಂದಿನ ಘಟನೆಗಳಿಂದ ಸ್ಪಷ್ಟವಾಗುತ್ತದೆ. ನಿಸ್ಸಂಶಯವಾಗಿ ಇದು ಅಪರಾಧಿಕ ಕಾನೂನು ಪ್ರಕ್ರಿಯೆಯ ದುರುಪಯೋಗ” ಎಂದು ನ್ಯಾಯಾಲಯ ಹೇಳಿದೆ.
ಪತ್ನಿಯು ಕಾನೂನುಬದ್ಧ ವಿಚ್ಛೇದನ, ತಲಾಖ್ ಅಥವಾ ಖುಲಾ ಪಡೆದುಕೊಂಡಿರುವುದಾಗಿ ಹೇಳಿಕೊಂಡಿದ್ದರೂ, ಮುಸ್ಲಿಂ ವೈಯಕ್ತಿಕ ಕಾನೂನಿನಡಿ ನಾಲ್ಕು ಮದುವೆಗಳಿಗೆ ಮಾತ್ರ ಅವಕಾಶವಿದೆ ಎಂದು ಪೀಠ ಉಲ್ಲೇಖಿಸಿದೆ.
ಪತಿ ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿದಾಗ, ಅವರು ದೂರುದಾರ ಮಹಿಳೆಯ ಏಳನೇ ಪತಿ ಎಂಬುದು ಕಂಡುಬಂದಿದೆ. ಅಲ್ಲದೆ, 2023ರ ನಂತರ ಅವರು ಎಂಟನೇ ಮತ್ತು ಒಂಬತ್ತನೇ ಮದುವೆಗಳನ್ನು ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳೂ ಲಭ್ಯವಿವೆ ಎಂದು ನ್ಯಾಯಾಲಯ ಗಮನಿಸಿದೆ.
ಅರ್ಜಿದಾರರ ವಿರುದ್ಧ ಪತ್ನಿ ಮಾಡಿರುವ ಆರೋಪಗಳು ಕಾನೂನಿನ ಅಡಿಯಲ್ಲಿ ಅಪರಾಧವನ್ನು ಸ್ಥಾಪಿಸಲು ಅಗತ್ಯವಾದ ನಿರ್ದಿಷ್ಟ ವಾಸ್ತವಿಕ ಆಧಾರವನ್ನು ಹೊಂದಿಲ್ಲ ಎಂದು ಪೀಠ ಹೇಳಿದೆ.
“ಕೇವಲ ಆರೋಪಗಳನ್ನು ಹೊರಿಸಿದ ಮಾತ್ರಕ್ಕೆ ಪ್ರಕರಣವನ್ನು ಮುಂದುವರಿಸಲಾಗುವುದಿಲ್ಲ. ಆರೋಪಗಳು ವಿಚಾರಣೆಯನ್ನು ಮುಂದುವರಿಸಲು ಅಗತ್ಯವಾದ ವಾಸ್ತವಿಕ ಅಡಿಪಾಯವನ್ನು ಹೊಂದಿರಬೇಕು. ಇಂತಹ ಟೊಳ್ಳಾದ ದೂರಿನ ಆಧಾರದ ಮೇಲೆ ಪ್ರಾಸಿಕ್ಯೂಷನ್ ಮುಂದುವರಿಯುವುದನ್ನು ಸಮರ್ಥಿಸಲಾಗುವುದಿಲ್ಲ. ನ್ಯಾಯ ಪಡೆಯಲು ಕೈಗೊಳ್ಳುವ ಪ್ರತಿಯೊಂದು ಹಂತವೂ ನ್ಯಾಯಸಮ್ಮತವಾಗಿರಬೇಕು” ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರ ಪರ ವಕೀಲ ಸಿ ಪರಮೇಶ್ವರಪ್ಪ ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ: ಉಡುಪಿಯ ಮೀನು ಮಾರುಕಟ್ಟೆ ಸಮೀಪ ಸಂಸ್ಥೆಯೊಂದರ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿರುವ ದೂರುದಾರ ಮಹಿಳೆಯ ಅವರ ಮೊದಲ ಮದುವೆ 2004ರಲ್ಲಿ ನಡೆದಿತ್ತು. ಆಗ ಅವರಿಗೆ 16 ವರ್ಷ ವಯಸ್ಸಾಗಿತ್ತು.
ಪರಸ್ಪರ ಸ್ನೇಹದ ಹಿನ್ನೆಲೆಯಲ್ಲಿ ಅರ್ಜಿದಾರ ಪತಿ ಅವರು 2022ರ ಜನವರಿ 13ರಂದು ಉಡುಪಿಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ದೂರುದಾರ ಮಹಿಳೆಯನ್ನು ವಿವಾಹವಾಗಿದ್ದರು.
ಆದರೆ, ಮದುವೆಯಾದ ನಾಲ್ಕೇ ದಿನಗಳಲ್ಲಿ ದೂರುದಾರೆಯು ₹5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಅರ್ಜಿದಾರ ಪತಿ ಆರೋಪಿಸಿದ್ದರು. ಈ ಹಣಕಾಸಿನ ಬೇಡಿಕೆಗಳಿಂದಾಗಿ ತಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉಂಟಾದವು ಎಂದು ಅವರು ಹೇಳಿದ್ದರು.
2022ರ ಜುಲೈನಲ್ಲಿ ದೂರುದಾರ ಮಹಿಳೆಯು ಅರ್ಜಿದಾರ ಪತಿ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪತಿ ಮತ್ತು ಅವರ ಕುಟುಂಬದವರು ಕಿರುಕುಳ ನೀಡಿ, ಮಾನಸಿಕ ಹಿಂಸೆ ನೀಡಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು.
ಈ ದೂರಿನ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ತನಿಖೆಯ ಬಳಿಕ ರಾಜಾ ಹುಸೇನ್ ಅವರ ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ಕೈಬಿಟ್ಟು, ಅವರ ವಿರುದ್ಧ ಮಾತ್ರ ಐಪಿಸಿ ಕಲಂ 498ಎ (ವಿವಾಹಿತ ಮಹಿಳೆಯ ವಿರುದ್ಧ ಕ್ರೌರ್ಯ), 323 (ಸ್ವಯಂಪ್ರೇರಿತವಾಗಿ ನೋವು ಉಂಟುಮಾಡುವುದು), 504 (ಉದ್ದೇಶಪೂರ್ವಕ ಅವಮಾನ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ 2023ರ ಏಪ್ರಿಲ್ 3ರಂದು ಉಡುಪಿಯ ಎರಡನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಎಸಿಜೆಎಂ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು.
ಇದಕ್ಕೆ ಪ್ರತಿಯಾಗಿ, ಮಹಿಳೆಯು 2023ರಲ್ಲಿ ಎಂಟನೇ ಮತ್ತು ಒಂಬತ್ತನೇ ಮದುವೆಗಳನ್ನು ಮಾಡಿಕೊಂಡಿರುವ ವಿಚಾರ ತಿಳಿದ ಬಳಿಕ ಪತಿ ಅವರ ವಿರುದ್ಧ ಪ್ರತಿದೂರು ದಾಖಲಿಸಿದ್ದರು.
ತಮ್ಮ ವಿರುದ್ಧ ಸಲ್ಲಿಸಲಾಗಿರುವ ಆರೋಪ ಪಟ್ಟಿಯನ್ನು ರದ್ದುಪಡಿಸುವಂತೆ ಕೋರಿ ಪತಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆಯ ವೇಳೆ ಮಹಿಳೆಯು ಅವರ ಮದುವೆಗಳ ಕುರಿತು ವಿಸ್ತೃತ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಒಂಬತ್ತನೇ ಪತಿ ಕೂಡ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿ, ಹಣಕಾಸಿನ ಬೇಡಿಕೆಗಳನ್ನು ಈಡೇರಿಸದಿದ್ದರೆ ವರದಕ್ಷಿಣೆ ಕಿರುಕುಳ ಮತ್ತು ಕ್ರೌರ್ಯದ ಪ್ರಕರಣ ದಾಖಲಿಸುವುದಾಗಿ ಮಹಿಳೆ ಬೆದರಿಕೆ ಹಾಕಿದ್ದರು ಎಂದು ವಿವರಿಸಿದ್ದರು.
ಇದನ್ನು ನಿರಾಕರಿಸಿದ್ದ ಮಹಿಳೆಯು ಕೆಲವು ವಿವಾಹ ಪ್ರಮಾಣಪತ್ರಗಳು ನಕಲಿ ಎಂದು ವಾದಿಸಿದ್ದರು. ಆದರೆ, ಹಿಂದಿನ ಪತಿಗಳಿಂದ ವಿಚ್ಛೇದನ, ತಲಾಖ್ ಅಥವಾ ಖುಲಾ ಪಡೆದು ನಾಲ್ಕು ಬಾರಿ ಮದುವೆಯಾಗಿರುವುದನ್ನು ಒಪ್ಪಿಕೊಂಡಿದ್ದರು.
ಈ ಎಲ್ಲ ಅಂಶಗಳನ್ನು ಪರಿಗಣಿಸಿದ ಹೈಕೋರ್ಟ್, ಪತಿ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಿದೆ.