ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಬ್ಯಾಂಕ್‌ ಖಾತೆ ನಿರ್ಬಂಧಿಸಲು ಆದೇಶಿಸಿದ್ದ ಇ ಡಿ ನಿರ್ದೇಶನ ವಜಾಗೊಳಿಸಿದ ಹೈಕೋರ್ಟ್‌

ಅರವತ್ತು ದಿನಗಳಿಗಿಂತ ಹೆಚ್ಚಿನ ಅವಧಿಗೆ ಜಾರಿ ನಿರ್ದೇಶನಾಲಯದ ನೋಟಿಸ್‌ಗಳು ಜಾರಿಯಲ್ಲಿರಲು ಸಾಧ್ಯವಿಲ್ಲದ ಕಾರಣ ಅವುಗಳು ತಮ್ಮ ಪರಿಣಾಮ ಕಳೆದುಕೊಂಡಿವೆ ಎಂದು ನ್ಯಾಯಾಲಯವು ಹೇಳಿದೆ.
Amnesty International, Karnataka High Court
Amnesty International, Karnataka High Court

ಸರ್ಕಾರೇತರ ಸಂಸ್ಥೆಗಳಾದ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾ ಮತ್ತು ಇಂಡಿಯನ್ಸ್‌ ಫಾರ್‌ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಟ್ರಸ್ಟ್‌ಗಳ ಬ್ಯಾಂಕ್‌ ಖಾತೆ ಜಪ್ತಿಗೆ 2018ರ ಅಕ್ಟೋಬರ್‌ನಲ್ಲಿ ಜಾರಿ ನಿರ್ದೇಶನಾಲಯ ಮಾಡಿದ್ದ ನಿರ್ದೇಶನಗಳನ್ನು ಈಚೆಗೆ ಕರ್ನಾಟಕ ಹೈಕೋರ್ಟ್‌ ವಜಾ ಮಾಡಿದೆ.

ಜಾರಿ ನಿರ್ದೇಶನಾಲಯವು ನಡೆಸಿದ ಶೋಧನೆ ಮತ್ತು ಜಪ್ತಿ ಹಾಗೂ ಆ ಬಳಿಕ ಕೋಟಕ್‌ ಮಹೀಂದ್ರಾ, ಎಚ್‌ಡಿಎಫ್‌ಸಿ ಮತ್ತು ಯೆಸ್‌ ಬ್ಯಾಂಕ್‌ಗಳಿಗೆ ಅಮ್ನೆಸ್ಟಿ ಖಾತೆಗಳನ್ನು ಚಾಲ್ತಿಯಲ್ಲಿಡದಂತೆ ನೀಡಿದ್ದ ನಿರ್ದೇಶನಗಳನ್ನು ಪ್ರಶ್ನಿಸಿ ಅಮ್ನೆಸ್ಟಿ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ ಎಸ್‌ ಹೇಮಲೇಖಾ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.

“ಕಾಯಿದೆಯ ಸೆಕ್ಷನ್‌ 132(8ಎ) ಪರಿಶೀಲಿಸಿದರೆ ಆದಾಯ ತೆರಿಗೆ ಕಾಯಿದೆ ಸೆಕ್ಷನ್‌ 132 ಮತ್ತು ಉಪ ಸೆಕ್ಷನ್‌ (3) ಅಡಿ ಆದೇಶವು ಅರವತ್ತು ದಿನಗಳ ನಂತರ ಅಸ್ತಿತ್ವದಲ್ಲಿರುವುದಿಲ್ಲ. ಹಾಲಿ ಪ್ರಕರಣದಲ್ಲಿ ಅರವತ್ತು ದಿನಗಳು ಪೂರ್ಣಗೊಂಡಿರುವುದರಿಂದ 2018ರ ಅಕ್ಟೋಬರ್‌ 25ರಂದು ಮಾಡಿರುವ ಆದೇಶಗಳು ತಮ್ಮ ಪರಿಣಾಮ ಕಳೆದುಕೊಂಡಿವೆ” ಎಂದು ಆದೇಶದಲ್ಲಿ ಹೇಳಲಾಗಿದೆ.

ತಾನು ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಮೂವ್‌ಮೆಂಟ್‌ನ ಸದಸ್ಯನಾಗಿದ್ದು, ಮಾನವ ಹಕ್ಕುಗಳ ಪರವಾಗಿ ಹೋರಾಡುವ ರಾಜಕಿಯೇತರ ಸಂಸ್ಥೆ ಎಂದು ಅಮ್ನೆಸ್ಟಿ ಟ್ರಸ್ಟ್‌ ಹೇಳಿದೆ. ತನಗೆ ಯಾವುದೇ ನೋಟಿಸ್‌ ನೀಡದೆ ನೋಂದಾಯಿತ ಮತ್ತು ಆಡಳಿತಾತ್ಮಕ ಕಚೇರಿಯಲ್ಲಿ ಶೋಧನೆ ಮತ್ತು ಜಪ್ತಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಹಣಕಾಸು ದಾಖಲೆಗಳಿಗೆ ಸಂಬಂಧಿಸಿದ ಪತ್ರಗಳೂ ಸೇರಿ ವಿವಿಧ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಉದ್ಯೋಗಿಗಳ ಫೋನ್‌ಗಳನ್ನು ಪರಿಶೀಲಿಸಿ, ಕೆಲವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ವಾದಿಸಲಾಗಿತ್ತು.

ಬ್ಯಾಂಕ್‌ ಖಾತೆ ನಿರ್ಬಂಧಿಸಲು ಆದೇಶ ಮಾಡಿರುವುದು ಆದಾಯ ತೆರಿಗೆ ಕಾಯಿದೆಯ ನಿಬಂಧನೆಗಳ ಉಲ್ಲಂಘನೆಯಾಗಿದೆ ಎಂದು ಜಾರಿ ನಿರ್ದೇಶನಾಲಯ ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ವಾದ ಮಂಡಿಸಿದ್ದರು. ಇದನ್ನು ನ್ಯಾಯಾಲಯ ಮಾನ್ಯ ಮಾಡಿದೆ.

Related Stories

No stories found.
Kannada Bar & Bench
kannada.barandbench.com