ಡ್ರೀಮ್ 11 ಸಹ ಸಂಸ್ಥಾಪಕರಾದ ಭವಿತ್ ಶೇಠ್ ಮತ್ತು ಹರ್ಷ ಜೈನ್ ವಿರುದ್ದದ ಎಫ್‌ಐಆರ್ ಅನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ವಜಾ ಮಾಡಿದೆ (ಭವಿತ್ ಶೇಠ್ ಮತ್ತು ಇತರರು ವರ್ಸಸ್ ಕರ್ನಾಟಕ ರಾಜ್ಯ).
ಆನ್‌ಲೈನ್ ಗೇಮ್ ನಿಷೇಧಿಸಿದ್ದ ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯಿದೆಯ ಆಯ್ದ ನಿಬಂಧನೆಗಳನ್ನು ಫೆಬ್ರವರಿ 14ರಂದು ವಜಾ ಮಾಡಿರುವ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶವನ್ನು ಪರಿಗಣಿಸಿ ಭವಿತ್ ಮತ್ತು ಹರ್ಷ ಅವರ ವಿರುದ್ಧದ ದೂರನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.
ಭವಿತ್ ಮತ್ತು ಹರ್ಷ ಅವರ ವಿರುದ್ಧ ಪೊಲೀಸ್ ಕಾಯಿದೆಯ ಸೆಕ್ಷನ್‌ಗಳಾದ 79 ಮತ್ತು 80ರ ಅಡಿ ದೂರು ದಾಖಲಿಸಲಾಗಿತ್ತು.
ಆಯ್ಕೆಯ ಆಟಕ್ಕೆ ಸಂಬಂಧಿಸಿದಂತೆ ಬೆಟ್ಟಿಂಗ್, ವರ್ಚುವಲ್ ಕರೆನ್ಸಿ, ವಿದ್ಯುನ್ಮಾನ ವಿಧಾನದಲ್ಲಿ ಹಣ ವರ್ಗಾವಣೆ ಮಾಡುವುದನ್ನು ಪೊಲೀಸ್ ಕಾಯಿದೆ ಅಡಿ ರಾಜ್ಯ ಸರ್ಕಾರ ನಿರ್ಬಂಧಿಸಿತ್ತು. ಇದನ್ನು ಉಲ್ಲಂಘಿಸಿದರೆ ಮೂರು ವರ್ಷ ಜೈಲು, ಗರಿಷ್ಠ ₹1 ಲಕ್ಷ ದಂಡ ವಿಧಿಸಲು ಅನುವು ಮಾಡಲಾಗಿತ್ತು.
ಬೆಂಗಳೂರಿನ ನಾಗರಬಾವಿಯ ಮಂಜುನಾಥ್ ಎಂಬುವರು ನೀಡಿದ ದೂರಿನ ಮೇರೆಗೆ ಅಕ್ಟೋಬರ್ 7ರಂದು ಡ್ರೀಮ್ 11 ಆ್ಯಪ್ ಸಂಸ್ಥಾಪಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.