ಜಿಹಾದಿ, ಕಾಫಿರ್‌ ಬಳಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ: ಮಧುಗಿರಿ ಮೋದಿ ವಿರುದ್ಧದ ಪ್ರಕರಣ ರದ್ದು

ಫೇಸ್‌ಬುಕ್‌ನಲ್ಲಿದ್ದ ಕನ್ನಡ ಸಂದೇಶವನ್ನು ಗಮನಿಸಿದ್ದ ಬಡವನಹಳ್ಳಿ ಪೊಲೀಸ್ ಠಾಣೆಯ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ಘಟಕದ ಸದಸ್ಯ ಪೊಲೀಸ್ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದರು.
ಜಿಹಾದಿ, ಕಾಫಿರ್‌ ಬಳಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ: ಮಧುಗಿರಿ ಮೋದಿ ವಿರುದ್ಧದ ಪ್ರಕರಣ ರದ್ದು
Published on: 

ಫೇಸ್‌ಬುಕ್ ಪೋಸ್ಟ್‌ನಲ್ಲಿ ‘ಜಿಹಾದಿ’ ಮತ್ತು ‘ಕಾಫಿರ್’ ಎಂಬ ಪದಗಳನ್ನು ಬಳಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಮತ್ತು ಸಮುದಾಯಗಳ ನಡುವೆ ದ್ವೇಷ ಪ್ರಚೋದಿಸಿದ ಆರೋಪ ಎದುರಿಸುತ್ತಿದ್ದ ಮಧುಗಿರಿ ತಾಲ್ಲೂಕಿನ ಹೊನ್ನಾಪುರದ ಅತುಲ್‌ ಕುಮಾರ್ ಸಬರ್‌ವಾಲ್‌ ಅಲಿಯಾಸ್ ಮಧುಗಿರಿ ಮೋದಿ ವಿರುದ್ಧದ ಕ್ರಿಮಿನಲ್‌ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದುಪಡಿಸಿದೆ.

ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಮತ್ತು ಇದಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ನ್ಯಾಯಾಲಯದಲ್ಲಿನ ಪ್ರಕ್ರಿಯೆ ರದ್ದತಿ ಕೋರಿ ಅತುಲ್‌ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

Justice V Srishananda
Justice V Srishananda

ಆರೋಪಿ ಮಾಡಿರುವ ಪೋಸ್ಟ್‌ನಲ್ಲಿರುವ ವಿಷಯವನ್ನು ಐಪಿಸಿ ಸೆಕ್ಷನ್ 295ಎ ಮತ್ತು 505(2) ಅಂಶಗಳೊಂದಿಗೆ ಹೋಲಿಸಿದಾಗ ಅಪರಾಧ ಪ್ರಕರಣವಾಗಿ ಮುಂದುವರಿಸುವುದಕ್ಕೆ ಅಗತ್ಯವಾದ ಮೂಲಭೂತ ಅಂಶಗಳೇ ಈ ಪ್ರಕರಣದಲ್ಲಿ ಕಂಡು ಬರುತ್ತಿಲ್ಲ ಎಂದು ಪೀಠ ಹೇಳಿದೆ.

ಫೇಸ್‌ಬುಕ್‌ನಲ್ಲಿದ್ದ ಕನ್ನಡ ಸಂದೇಶವನ್ನು ಗಮನಿಸಿದ್ದ ಬಡವನಹಳ್ಳಿ ಪೊಲೀಸ್ ಠಾಣೆಯ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ಘಟಕದ ಸದಸ್ಯ ಪೊಲೀಸ್ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದರು.

ಈ ಸಂಬಂಧ ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ 2024ರ ಏಪ್ರಿಲ್‌ 27ರಂದು ಐಪಿಸಿ ಸೆಕ್ಷನ್‌ 295ಎ (ಯಾವುದೇ ವರ್ಗದ ಜನರ ಧಾರ್ಮಿಕ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಮತ್ತು ದುರ್ದ್ದೇಶದಿಂದ ಅವಮಾನಿಸುವ ಅಥವಾ ಅವಮಾನಿಸಲು ಪ್ರಯತ್ನಿಸುವ ಕೃತ್ಯ) ಮತ್ತು 505(2) (ವಿವಿಧ ಧರ್ಮ, ಜನಾಂಗ, ಭಾಷೆ, ಪ್ರಾದೇಶಿಕ ಗುಂಪುಗಳು ಅಥವಾ ಜಾತಿಗಳ ನಡುವೆ ದ್ವೇಷ, ವೈಷಮ್ಯ ಅಥವಾ ಅಸಹನೆ ಸೃಷ್ಟಿಸುವ ಅಥವಾ ಉತ್ತೇಜಿಸುವ ಹೇಳಿಕೆ ಅಥವಾ ವದಂತಿಗಳನ್ನು ಹರಡುವುದು) ಅಡಿಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿತ್ತು.

Kannada Bar & Bench
kannada.barandbench.com