

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ (ಕೆಎಸ್‌ಎಲ್‌ಯು) 5 ಮತ್ತು 3 ವರ್ಷಗಳ ಕೋರ್ಸ್‌ಗಳಿಗೆ ಪ್ರವೇಶಾತಿ ಶುಲ್ಕ ಹೆಚ್ಚಳ ಮಾಡಿ ಹೊರಡಿಸಲಾಗಿದ್ದ ಸುತ್ತೋಲೆಯನ್ನು ಈಚೆಗೆ ರದ್ದುಪಡಿಸಿರುವ ಕರ್ನಾಟಕ ಹೈಕೋರ್ಟ್, ಸುತ್ತೋಲೆ ಆಧರಿಸಿ ಸಂಗ್ರಹಿಸಲಾಗಿರುವ ಹೆಚ್ಚುವರಿ ಶುಲ್ಕವನ್ನು ಎರಡು ತಿಂಗಳ ಒಳಗೆ ಎಲ್ಲ ವಿದ್ಯಾರ್ಥಿಗಳಿಗೆ ಮರುಪಾವತಿಸುವಂತೆ ವಿಶ್ವವಿದ್ಯಾಲಯಕ್ಕೆ ನಿರ್ದೇಶಿಸಿದೆ.
ಕೆಎಸ್‌ಎಲ್‌ಯು ಸಂಯೋಜಿತ ಕಾಲೇಜುಗಳಿಗೆ 2025-26ನೇ ಸಾಲಿನ ವಿವಿಧ ಕೋರ್ಸ್‌ಗಳ ಪ್ರವೇಶ ಶುಲ್ಕ ಪರಿಷ್ಕರಿಸಿ 2025ರ ಜುಲೈ 2ರಂದು ಹೊರಡಿಸಲಾಗಿದ್ದ ಸುತ್ತೋಲೆ ರದ್ದು ಕೋರಿ ಬೆಂಗಳೂರಿನ ಕೆ ಎನ್ ಪ್ರಣವ, ಎನ್ ಪ್ರಿಯಾಂಕ ಸೇರಿ ಏಳು ಮಂದಿ ಕಾನೂನು ವಿದ್ಯಾರ್ಥಿಗಳು ಸಲ್ಲಿಸಿದ್ದ ಮೂರು ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಆರ್ ದೇವದಾಸ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
ಸುತ್ತೋಲೆಯ ಅನುಸಾರ ಸಂಗ್ರಹಿಸಲಾಗಿರುವ ಹೆಚ್ಚುವರಿ ಶುಲ್ಕದ ಮೊತ್ತವನ್ನು ಸಾಧ್ಯವಾದಷ್ಟೂ ಶೀಘ್ರವಾಗಿ, ನ್ಯಾಯಾಲಯದ ಆದೇಶ ಪ್ರತಿ ದೊರೆತ ಎರಡು ತಿಂಗಳ ಒಳಗೆ ಹಿಂದಿರುಗಿಸಬೇಕು. ಸುತ್ತೋಲೆಯನ್ನು ಪ್ರಶ್ನಿಸಿ ಈ ನ್ಯಾಯಾಲಯದ ಮುಂದೆ ಬಾರದವರೂ ಸೇರಿ ಎಲ್ಲ ವಿದ್ಯಾರ್ಥಿಗಳಿಗೂ ಹೆಚ್ಚುವರಿ ಶುಲ್ಕದ ಹಣವನ್ನು ಮರುಪಾವತಿಸಬೇಕು ಎಂದು ಕೆಎಸ್‌ಎಲ್‌ಯುಗೆ ನ್ಯಾಯಾಲಯ ನಿರ್ದೇಶಿಸಿದೆ.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿರುವಂತೆ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕಾಯಿದೆ 2009ರ ಸೆಕ್ಷನ್ 5ರ ಪ್ರಕಾರ ಪ್ರವೇಶ ಶುಲ್ಕ ಹಾಗೂ ಇತರ ಶುಲ್ಕಗಳಿಗೆ ಬೇಡಿಕೆ ಇಡಲು ಮತ್ತು ಸ್ವೀಕರಿಸಲು ವಿಶ್ವವಿದ್ಯಾಲಯಕ್ಕೆ ಅಧಿಕಾರವಿದ್ದರೂ, ಅಂತಹ ಶುಲ್ಕ ವಿಧಿಸುವಿಕೆ ಮತ್ತು ಸಂಗ್ರಹಣೆಯನ್ನು ಶಾಸನಗಳು, ನಿಯಮಗಳು ಅಥವಾ ಸುಗ್ರೀವಾಜ್ಞೆಗಳ ಮೂಲಕ ಮಾಡಬೇಕಾಗುತ್ತದೆ ಎಂದು ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಈ ಪ್ರಕರಣದಲ್ಲಿ ಶುಲ್ಕ ವಿಧಿಸಲು ಅಥವಾ ಸಂಗ್ರಹಿಸಲು ಯಾವುದೇ ಶಾಸನ ಅಥವಾ ಸುಗ್ರೀವಾಜ್ಞೆ ಜಾರಿಗೆ ತಂದಿರುವುದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಪ್ರತಿವಾದಿ ವಿಶ್ವವಿದ್ಯಾಲಯ ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ. ಶಾಸನಾತ್ಮಕವಾಗಿ ಸೂಚಿಸಲಾದ ಶುಲ್ಕ ವಿಧಿಸಲು ಮತ್ತು ಸಂಗ್ರಹಿಸಲು ವಿಶ್ವವಿದ್ಯಾಲಯದ ಸಿಂಡಿಕೇಟ್ ಅಧಿಕಾರ ಹೊಂದಿದೆಯಾದರೂ, ಅಂತಹ ಯಾವುದೇ ಶಾಸನಗಳ ಅನುಪಸ್ಥಿತಿಯಲ್ಲಿ, ಶುಲ್ಕ ಹೆಚ್ಚಳ ಮಾಡುವ ಸಂಬಂಧ ಹೊರಡಿಸಲಾಗಿರುವ ಆಕ್ಷೇಪಾರ್ಹ ಸುತ್ತೋಲೆಯು ಮಾನ್ಯವಾಗುವುದಿಲ್ಲ. ಈ ಎಲ್ಲ ಕಾರಣಗಳಿಂದಾಗಿ 2025ರ ಜುಲೈ 2ರಂದು ವಿಶ್ವವಿದ್ಯಾಲಯ ಹೊರಡಿಸಿರುವ ಸುತ್ತೋಲೆಯನ್ನು ರದ್ದುಪಡಿಸಲಾಗಿದೆ ಎಂದು ನ್ಯಾಯಾಲಯ ಆದೇಶಿಸಿದೆ.
2025-26ನೇ ಸಾಲಿನ ವಿವಿಧ ಕೋರ್ಸ್‌ಗಳಿಗೆ ಪ್ರಥಮ ವರ್ಷ ಹಾಗೂ ನಂತರದ ವರ್ಷಗಳಿಗೆ ಪ್ರವೇಶ ಶುಲ್ಕ ಪರಿಷ್ಕರಿಸಿ 2025ರ ಜುಲೈ 2ರಂದು ಕೆಎಸ್‌ಎಲ್‌ಯು ಸುತ್ತೋಲೆ ಹೊರಡಿಸಿದೆ. ಅದರ ಪ್ರಕಾರ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ 6,580 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದ್ದು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ 4,820ರಿಂದ 5,180 ರೂ. ವರೆಗೆ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಈ ಶುಲ್ಕವು ಹಿಂದಿನ ಶೈಕ್ಷಣಿಕ ಸಾಲುಗಳಿಗೆ ಹೋಲಿಸಿದರೆ ಅತ್ಯಧಿಕವಾಗಿದೆ. ಶುಲ್ಕ ಪರಿಷ್ಕರಿಸುವಾಗ ವಿದ್ಯಾರ್ಥಿಗಳೊಂದಿಗೆ ಸಮಾಲೋಚಿಸಿ, ಅವರ ಪ್ರತಿಕ್ರಿಯೆ ಪಡೆದುಕೊಳ್ಳದೇ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ಶುಲ್ಕ ಪರಿಷ್ಕರಣೆಯು ಶೈಕ್ಷಣಿಕ ಮಂಡಳಿಯ 37ನೇ ಸಭೆಯಲ್ಲಿ ಅನುಮೋದಿಸಲ್ಪಟ್ಟಿದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಆದರೆ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕಾಯಿದೆ- 2009ರ ಸೆಕ್ಷನ್ 34ರ ಪ್ರಕಾರ, ಶುಲ್ಕ ನಿಗದಿಪಡಿಸಲು, ಸಂಗ್ರಹಿಸಲು ಅಥವಾ ಪರಿಷ್ಕರಿಸಲು ಯಾವುದೇ ಶಾಸನಬದ್ಧ ಅಧಿಕಾರವನ್ನು ಶೈಕ್ಷಣಿಕ ಮಂಡಳಿಯಾಗಲಿ, ಕುಲಪತಿಯಾಗಲಿ ಹೊಂದಿಲ್ಲ. ವಿದ್ಯಾರ್ಥಿಗಳಿಗೆ ಯಾವುದೇ ಸೇವೆ ಅಥವಾ ಪ್ರಯೋಜನ ಒದಗಿಸಿದಯೇ ಈ ರೀತಿಯ ಶುಲ್ಕಗಳನ್ನು ವಿಧಿಸುವುದು ಕಾನೂನುಬಾಹಿರ ಕ್ರಮವಾಗಿದೆ. ಆದ್ದರಿಂದ, ಶುಲ್ಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಕೆಎಸ್‌ಎಲ್‌ಯು ಹೊರಡಿಸಿರುವ ಸುತ್ತೋಲೆ ರದ್ದುಪಡಿಸಬೇಕು ಎಂದು ಕೋರಿದ್ದರು.
ಅರ್ಜಿದಾರ ವಿದ್ಯಾರ್ಥಿಗಳ ಪರವಾಗಿ ಹಿರಿಯ ವಕೀಲ ಕೆ ಜಿ ರಾಘವನ್ ಹಾಗೂ ಎಚ್ ಪವನ ಚಂದ್ರ ಶೆಟ್ಟಿ ವಾದಿಸಿದ್ದರು.