ಇನ್ಫೋಸಿಸ್‌ ಸಹ ಸಂಸ್ಥಾಪಕ ಕ್ರಿಸ್‌ ಗೋಪಾಲಕೃಷ್ಣನ್‌ ಸೇರಿ 16 ಮಂದಿ ವಿರುದ್ಧ ಜಾತಿ ನಿಂದನೆ ಪ್ರಕರಣ ರದ್ದು

ಪಕ್ಷಕಾರರ ನಡುವಿನ ವಿವಾದವು ಸಿವಿಲ್‌ ಸ್ವರೂಪದ್ದಾಗಿದ್ದು, ಅದಕ್ಕೆ ಕ್ರಿಮಿನಲ್‌ ಬಣ್ಣ ಹಚ್ಚಲಾಗಿದೆ. ಈ ದೂರು ಕಾನೂನಿನ ದುರ್ಬಳಕೆ ಎಂದು ನ್ಯಾಯಾಲಯ ಹೇಳಿದೆ.
Senapathy Kris Gopalakrishnan & Karnataka HC
Senapathy Kris Gopalakrishnan & Karnataka HC
Published on

ಪ್ರತಿಷ್ಠಿತ ಇನ್ಫೋಸಿಸ್‌ ಸಹ ಸಂಸ್ಥಾಪಕ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಆಡಳಿತ ಮಂಡಳಿ ಅಧ್ಯಕ್ಷ ಸೇನಾಪತಿ ಕ್ರಿಸ್‌ ಗೋಪಾಲಕೃಷ್ಣನ್‌, ಐಐಎಸ್‌ಸಿ ನಿರ್ದೇಶಕ ಪ್ರೊ. ಗೋವಿಂದನ್‌ ರಂಗರಾಜನ್‌ ಸೇರಿ 16 ಮಂದಿಯ ವಿರುದ್ಧ ಜಾತಿ ನಿಂದನೆ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ರದ್ದುಪಡಿಸಿದೆ.

ವಿಶೇಷ ನ್ಯಾಯಾಲಯವು ಡಾ. ಡಿ ಸಣ್ಣ ದುರ್ಗಪ್ಪ ಅವರ ಖಾಸಗಿ ದೂರಿನ ಸಂಜ್ಞೇ ಪರಿಗಣಿಸಿರುವುದು ಮತ್ತು ಬೆಂಗಳೂರಿನ ಸದಾಶಿವನಗರ ಠಾಣೆಯ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಸೇನಾಪತಿ ಕ್ರಿಸ್‌ ಗೋಪಾಲಕೃಷ್ಣನ್‌, ಐಐಎಸ್‌ಸಿ ನಿರ್ದೇಶಕ ಗೋವಿಂದನ್‌ ರಂಗರಾಜನ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್‌ ಚಂದನಗೌಡರ್‌ ಅವರ ಏಕಸದಸ್ಯ ಪೀಠವು ಪುರಸ್ಕರಿಸಿದೆ.

“ಸಿವಿಲ್‌ ಪ್ರಕರಣಕ್ಕೆ ಕ್ರಿಮಿನಲ್‌ ಬಣ್ಣ ನೀಡಲಾಗಿದೆ ಎಂಬುದನ್ನು ಆಧರಿಸಿ ಈ ಹಿಂದೆ ದೂರುದಾರರು ದಾಖಲಿಸಿದ್ದ ಎರಡು ಕ್ರಿಮಿನಲ್‌ ದೂರುಗಳನ್ನು ನ್ಯಾಯಾಲಯ ವಜಾಗೊಳಿಸಿದೆ. ಹಾಲಿ ಪ್ರಕರಣವು ಅಂಥವೇ ಆರೋಪಗಳನ್ನು ಒಳಗೊಂಡಿದೆ. ದೂರುದಾರ ದುರ್ಗಪ್ಪ ಅವರನ್ನು ಸೇವೆಯಿಂದ ವಜಾಗೊಳಿಸಿರುವುದರಿಂದ ಅವರು ರಾಜೀನಾಮೆ ನೀಡಿದ್ದರು. ಇದಕ್ಕೆ ಪ್ರತೀಕಾರವಾಗಿ ಮೂರನೇ ದೂರು ನೀಡಿದ್ದಾರೆ. ಪಕ್ಷಕಾರರ ನಡುವಿನ ವಿವಾದವು ಸಿವಿಲ್‌ ಸ್ವರೂಪದ್ದಾಗಿದ್ದು, ಅದಕ್ಕೆ ಕ್ರಿಮಿನಲ್‌ ಬಣ್ಣ ಹಚ್ಚಲಾಗಿದೆ” ಎಂದು ನ್ಯಾಯಾಲಯ ಹೇಳಿದ್ದು, ಹಾಲಿ ದೂರು ಕಾನೂನಿನ ದುರ್ಬಳಕೆ ಎಂದು ಪೀಠ ದಾಖಲಿಸಿದೆ.

“ಸಣ್ಣ ದುರ್ಗಪ್ಪ ಮತ್ತು ಐಐಎಸ್‌ಸಿ ಪ್ರತಿನಿಧಿಗಳು ರಾಜೀ ಮಾಡಿಕೊಂಡ ಹಿನ್ನೆಲೆಯಲ್ಲಿ ಅವರನ್ನು ವಜಾಗೊಳಿಸಿದ್ದನ್ನು ರಾಜೀನಾಮೆಯನ್ನಾಗಿ ಪರಿವರ್ತಿಸಲಾಗಿತ್ತು. ವಿವಿಧ ಕಡೆ ಐಐಎಸ್‌ಸಿ ಪ್ರತಿನಿಧಿಗಳ ವಿರುದ್ಧ ದಾಖಲಿಸಿರುವ ದೂರುಗಳನ್ನು ಹಿಂಪಡೆಯಬೇಕು ಎಂಬುದು ಷರತ್ತುಗಳ ಪೈಕಿ ಒಂದಾಗಿತ್ತು. ರಾಜೀನಾಮೆ ಹಿನ್ನೆಲೆಯಲ್ಲಿ ಲಭ್ಯವಿರುವ ಸವಲತ್ತುಗಳನ್ನು ಪಡೆದ ಬಳಿಕವೂ ಸಣ್ಣ ದುರ್ಗಪ್ಪ ಅವರು ಐಐಎಸ್‌ಸಿ ಪ್ರತಿನಿಧಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ಮುಂದುವರಿಸಿದ್ದರು ಎಂಬುದನ್ನು ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದೆ. ಅಲ್ಲದೇ, ಸಣ್ಣ ದುರ್ಗಪ್ಪ ವಿರುದ್ಧ ಐಐಎಸ್‌ಸಿ ಪ್ರತಿನಿಧಿಗಳು ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಮುಂದುವರಿಸಲು ಕ್ರಮಕೈಗೊಳ್ಳಬಹುದು” ಎಂದು ಆದೇಶಿಸಿದೆ.

ದೂರಿನಲ್ಲಿ ಏನಿತ್ತು?: ಐಐಎಸ್‌ಸಿಯಲ್ಲಿ 2014ರಲ್ಲಿ ಹನಿಟ್ರ್ಯಾಪ್‌ ಮೂಲಕ ತನ್ನನ್ನು ಸೇವೆಯಿಂದ ವಜಾ ಮಾಡಿಸಲಾಗಿದೆ ಎಂದು ದುರ್ಗಪ್ಪ ದೂರಿದ್ದರು. ಅಲ್ಲದೇ, ಗೋಂವಿದನ್‌ ರಂಗರಾವ್‌, ಶ್ರೀಧರ್‌ ವಾರಿಯರ್‌, ಸೇನಾಪತಿ ಕ್ರಿಶ್‌ ಗೋಪಾಲಕೃಷ್ಣನ್‌, ಅನಿಲ್‌ ಕುಮಾರ್‌, ದೀಪ್ಸಿಕಾ ಚಕ್ರವರ್ತಿ, ನಮ್ರತಾ ಗುಂಡಯ್ಯ, ಡಾ. ನಿರ್ಮಲಾ, ಸಂಧ್ಯಾ ವಿಶ್ವೇಶ್ವರಯ್ಯ, ಕೆವಿಎಸ್‌ ಹರಿ, ದಾಸಪ್ಪ, ಪಿ ಬಾಲಚಂದ್ರ, ಪಿ ಬಲರಾಮ, ಅಂಜಲಿ ಕೆ ಕಾರಂಡೆ, ಹೇಮಲತಾ ಮ್ಹಿಷಿ, ಕೆ ಚಟ್ಟೋಪಾಧ್ಯಾಯ, ಪ್ರದೀಪ್‌ ಸಾವ್ಕಾರ್‌, ಅಭಿಲಾಷ್‌ ರಾಜು, ವಿಕ್ಟರ್‌ ಮನೋಹರನ್‌ ಅವರು 2008ರಿಂದ 2025ರವರೆಗೆ ತನ್ನ ಮೇಲೆ ಜಾತಿ ನಿಂದನೆ ಮಾಡಿ, ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದರು.

ಐಐಎಸ್‌ಸಿಯಲ್ಲಿರುವ ಲೈಂಗಿಕ ಕಿರುಕುಳ ನಿಷೇಧ ಸಮಿತಿಯು ಒಬ್ಬೇ ಒಬ್ಬರು ಎನ್‌ಜಿಒ ಸದಸ್ಯರನ್ನು ಒಳಗೊಂಡಿಲ್ಲ. ಈ ಸಮಿತಿಗೆ ಕೆಲಸದಿಂದ ವಜಾ ಮಾಡುವ ಅಧಿಕಾರವಿಲ್ಲ ಎಂದು ಕರ್ನಾಟಕ ಶಾಸನ ಸಭೆ ತನಿಖೆಯಲ್ಲಿ ಹೇಳಲಾಗಿದೆ. ತನಿಖೆಯ ಸಂದರ್ಭದಲ್ಲಿ ತನ್ನನ್ನು ಪುನಾ ಕೆಲಸಕ್ಕೆ ಮರು ನೇಮಕ ಮಾಡಲಾಗುವುದು ಎಂದು ನಿರ್ದೇಶಕರು ಒಪ್ಪಿಕೊಂಡಿದ್ದರೂ ಇದುವರೆಗೆ ಮರು ನೇಮಕವಾಗಿಲ್ಲ ಎನ್ನುವ ದೂರುದಾರರ ಆರೋಪವನ್ನು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿತ್ತು.

Also Read
ಜಾತಿ ನಿಂದನೆ ಪ್ರಕರಣ: ಕ್ರಿಸ್‌ ಗೋಪಾಲಕೃಷ್ಣನ್‌ ಸೇರಿ 16 ಮಂದಿ ವಿರುದ್ದದ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್‌ ತಡೆ

ತನ್ನ ಹೆಸರಿಗೆ ಕಳಂಕ ಹಚ್ಚಿದ್ದು, ದೇಶದ ಬೇರೆಲ್ಲಿಯೂ ಕೆಲಸ ಸಿಗದಂತೆ ಮಾಡಲಾಗಿದೆ. ನ್ಯಾಯ ಕೋರಿ ಕೋರ್ಟ್‌ ಮೆಟ್ಟಿಲೇರಲು ಮುಂದಾದಾಗ ರೌಡಿಗಳನ್ನು ಬಿಟ್ಟು ಬೆದರಿಕೆ ಹಾಕಲಾಗಿದೆ. ದೂರುದಾರ ಮಹಿಳೆಯು ಐಐಎಸ್‌ಸಿ ತೊರೆದಿದ್ದರೂ ತಮ್ಮನ್ನು ಇನ್ನೂ ಮರು ನೇಮಕ ಮಾಡಿಲ್ಲ. ಈ ಕುರಿತು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗೆ ಇಮೇಲ್‌ ದೂರು ನೀಡಲಾಗಿದ್ದು, ಅದಕ್ಕೂ ಆರೋಪಿಗಳು ತಪ್ಪು ಉತ್ತರ ನೀಡಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದರು.

ಐಐಎಸ್‌ಸಿಯಲ್ಲಿ ಇದುವರೆಗೆ 30 ಲೈಂಗಿಕ ಕಿರುಕುಳ ದೂರು ದಾಖಲಾಗಿದ್ದು, ಇದುವರೆಗೆ ಯಾರನ್ನೂ ಸೇವೆಯಿಂದ ವಜಾಗೊಳಿಸಲಾಗಿಲ್ಲ. ಐಐಎಸ್‌ಸಿಯಲ್ಲಿ ಎಸ್‌ಸಿಪಿ-ಟಿಎಸ್‌ಪಿಯ ಸುಮಾರು ರೂ. 2,500 ಕೋಟಿ ಅನುದಾನವನ್ನು ಲೂಟಿ ಮಾಡಲಾಗಿದೆ. ಐಐಎಸ್‌ಸಿ ನಿರ್ದೇಶಕರು 15 ಬಾರಿ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿದ್ದಾರೆ. ತನಗೆ ಬೆದರಿಕೆ ಹಾಕುವುದಲ್ಲದೇ, ನ್ಯಾಯಮೂರ್ತಿಗಳನ್ನು ಬುಕ್‌ ಮಾಡಿಕೊಂಡು ಪ್ರಕರಣ ಗೆಲ್ಲುವುದಾಗಿ ಹೇಳಿದ್ದಾರೆ. ಹಾಗಾಗಿ, ಸದರಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಡಾ. ಸಣ್ಣ ದುರ್ಗಪ್ಪ ದೂರಿನಲ್ಲಿ ವಿವರಿಸಿದ್ದನ್ನು ಎಫ್‌ಐಆರ್‌ನಲ್ಲಿ ವಿವರಿಸಲಾಗಿತ್ತು.

ಇದನ್ನು ಆಧರಿಸಿ ಜನವರಿ 27ರಂದು ಸದಾಶಿವನಗರ ಪೊಲೀಸರು ಗೋಂವಿದನ್‌ ರಂಗರಾನ್‌, ಶ್ರೀಧರ್‌ ವಾರಿಯರ್‌, ಸೇನಾಪತಿ ಕ್ರಿಶ್‌ ಗೋಪಾಲಕೃಷ್ಣನ್‌, ಅನಿಲ್‌ ಕುಮಾರ್‌, ದೀಪ್ಸಿಕಾ ಚಕ್ರವರ್ತಿ, ನಮ್ರತಾ ಗುಂಡಯ್ಯ, ಡಾ. ನಿರ್ಮಲಾ, ಸಂಧ್ಯಾ ವಿಶ್ವೇಶ್ವರಯ್ಯ, ಕೆವಿಎಸ್‌ ಹರಿ, ದಾಸಪ್ಪ, ಪಿ ಬಾಲಚಂದ್ರ, ಪಿ ಬಲರಾಮ, ಅಂಜಲಿ ಕೆ ಕಾರಂಡೆ, ಹೇಮಲತಾ ಮ್ಹಿಷಿ, ಕೆ ಚಟ್ಟೋಪಾಧ್ಯಾಯ, ಪ್ರದೀಪ್‌ ಸಾವ್ಕಾರ್‌, ಅಭಿಲಾಷ್‌ ರಾಜು, ವಿಕ್ಟರ್‌ ಮನೋಹರನ್‌ ಅವರನ್ನು ಕ್ರಮವಾಗಿ 18 ಆರೋಪಿಗಳನ್ನಾಗಿಸಿ ಎಸ್‌ಸಿ/ಎಸ್‌ಟಿ ಕಾಯಿದೆ ಸೆಕ್ಷನ್‌ 3(8), 3(14), 3(1)(2), 3(x) ಅಡಿ ಎಫ್‌ಐಆರ್‌ ದಾಖಲಿಸಿದ್ದರು.

Kannada Bar & Bench
kannada.barandbench.com