ನಿಯಮ ಉಲ್ಲಂಘನೆ ಆರೋಪ; ಎಸಿಸಿ ಕಂಪನಿಗೆ ಗಣಿ ಇಲಾಖೆ ನೀಡಿದ್ದ ₹482 ಕೋಟಿ ಡಿಮಾಂಡ್ ನೋಟಿಸ್ ರದ್ದು

ಡಿಜಿಟಲ್ ವೇದಿಕೆಯಾದ ಸಮಗ್ರ ಗುತ್ತಿಗೆ ನಿರ್ವಹಣಾ ವ್ಯವಸ್ಥೆಯಲ್ಲಿ (ಐಎಲ್‌ಎಂಸ್‌) ಪ್ರವೇಶಿಸಲು ಕಂಪನಿಯನ್ನು ನಿರ್ಬಂಧಿಸಬಾರದು. ಎಸಿಸಿ ಠೇವಣಿ ಇರಿಸಿರುವ ಮೊತ್ತವನ್ನು ಮರು ಪಾವತಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಪೀಠ ನಿರ್ದೇಶಿಸಿದೆ.
Adani ACC
Adani ACC
Published on

ಪೂರಕ ಗುತ್ತಿಗೆ ಒಪ್ಪಂದ ಪತ್ರಕ್ಕೆ (ಸಪ್ಲಿಮೆಂಟರಿ ಲೀಸ್‌ ಡೀಡ್‌) ಸಹಿ ಮಾಡದೇ ನಿಯಮ ಉಲ್ಲಂಘಿಸಿ ಕಲಬುರಗಿ ಜಿಲ್ಲೆಯ ಇಂಗಳಗಿ ಮತ್ತು ರಾವೂರ್‌ ಗ್ರಾಮಗಳಲ್ಲಿ ಮುಕ್ತ ಗಣಿಗಾರಿಕೆ ನಡೆಸುತ್ತಿದ್ದ ಆರೋಪದಡಿ ಅದಾನಿ ಸಮೂಹದ ಎಸಿಸಿ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗೆ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೀಡಿದ್ದ ₹482.69 ಕೋಟಿ ಮೊತ್ತದ ಡಿಮಾಂಡ್‌ (ಬೇಡಿಕೆ) ನೋಟಿಸ್‌ ಅನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ರದ್ದುಪಡಿಸಿದೆ.

ಡಿಮಾಂಡ್ ನೋಟಿಸ್ ಪ್ರಶ್ನಿಸಿ ಎಸಿಸಿ ಲಿಮಿಟೆಡ್‌ ಕಂಪನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಕೆ ಎಸ್‌ ಹೇಮಲೇಖಾ ಅವರ ವಿಭಾಗೀಯ ಪೀಠ ಸೆಪ್ಟೆಂರ್ 8ರಂದು ಪ್ರಕಟಿಸಿದೆ.

Chief Justice Vibhu Bakhru & Justice K S Hemalekha
Chief Justice Vibhu Bakhru & Justice K S Hemalekha

ಗುತ್ತಿಗೆಯ ಅವಧಿ ಈಗಾಗಲೇ ಶಾಸನಬದ್ಧವಾಗಿ ವಿಸ್ತರಣೆಯಾಗಿರುವಾಗ ಸಂಬಂಧಪಟ್ಟ ಅಧಿಕಾರಿಗಳು ಕಂಪನಿಗೆ 'ಯಾವುದೇ ಬಾಕಿ ಇಲ್ಲ' ಎಂಬ ಪ್ರಮಾಣಪತ್ರಕ್ಕೆ ಒತ್ತಾಯಿಸಬಾರದು. ಡಿಜಿಟಲ್ ವೇದಿಕೆಯಾದ 'ಸಮಗ್ರ ಗುತ್ತಿಗೆ ನಿರ್ವಹಣಾ ವ್ಯವಸ್ಥೆ'ಯಲ್ಲಿ (ಐಎಲ್‌ಎಂಸ್‌) ಪ್ರವೇಶಿಸಲು ಕಂಪನಿಯನ್ನು ನಿರ್ಬಂಧಿಸಬಾರದು. ಎಸಿಸಿ ಠೇವಣಿ ಇರಿಸಿರುವ ಮೊತ್ತವನ್ನು ಮರು ಪಾವತಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಪೀಠ ನಿರ್ದೇಶಿಸಿದೆ.

ಈ ವಿಷಯದಲ್ಲಿ ರಾಜ್ಯ ಸರ್ಕಾರ ನೈಜ ಪ್ರಮಾಣದ ಬದಲು ತನ್ನದೇ ಆದ ಕಾಲ್ಪನಿಕ ಸೂತ್ರ ಬಳಸಿದೆ ಎಂದು ಅಭಿಪ್ರಾಯಪಟ್ಟಿರುವ ಪೀಠವು ಸ್ವಾಯತ್ತ ಸಂಶೋಧನಾ ಸಂಸ್ಥೆಯಾದ, ಸಿಮೆಂಟ್‌ ಮತ್ತು ಕಟ್ಟಡ ಸಾಮಗ್ರಿಗಳ ರಾಷ್ಟ್ರೀಯ ಮಂಡಳಿ ನೀಡಿರುವ ವರದಿಯನ್ನೇ ರಾಯಧನಕ್ಕೆ ಆಧಾರವಾಗಿ ಪರಿಗಣಿಸಬೇಕು ಎಂದು ಆದೇಶಿಸಿದೆ.

ಎಸಿಸಿ ಕಂಪನಿಯು ಸಿಮೆಂಟ್‌ ತಯಾರಿಕೆಗಾಗಿ ಸುಣ್ಣದ ಕಲ್ಲು ಗಣಿಗಾರಿಕೆಗೆ 1963ರಲ್ಲಿ ಗುತ್ತಿಗೆ ಪಡೆದಿತ್ತು. ಗುತ್ತಿಗೆ ಅವಧಿ 2023ರ ಫೆಬ್ರವರಿಗೆ ಅಂತ್ಯಗೊಂಡಿದೆ ಎಂಬ ಆಕ್ಷೇಪ ಸಲ್ಲದು. 2015ರ ತಿದ್ದುಪಡಿ ಕಾಯಿದೆಯ ಅನುಸಾರ, ನಮ್ಮ ಕಂಪನಿಯ ಗುತ್ತಿಗೆ ಅವಧಿ 2030ರ ಮಾರ್ಚ್‌ ಅಂತ್ಯದವರೆಗೂ ಸ್ವಯಂಚಾಲಿತವಾಗಿ ವಿಸ್ತರಣೆಯಾಗಿದೆ. ಆದ್ದರಿಂದ, ಪೂರಕ ಗುತ್ತಿಗೆ ಪತ್ರಕ್ಕೆ ಸಹಿ ಮಾಡಿಲ್ಲ ಎಂಬ ಕಾರಣಕ್ಕೆ 2023ರ ನಂತರ ಕಂಪನಿಗೆ ವಿಧಿಸಲಾಗಿರುವ ₹482 ಕೋಟಿ ಮೊತ್ತದ ದಂಡದ ಆಧಾರದಲ್ಲಿ ಯಾವುದೇ ಅವಸರದ ಕ್ರಮಕ್ಕೆ ಮುಂದಾಗದಂತೆ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ನಿರ್ದೇಶಿಬೇಕು ಎಂದು ಕಂಪನಿ ಕೋರಿತ್ತು.

ರಾಜ್ಯ ಸರ್ಕಾರ 2022ರ ಆಗಸ್ಟ್‌ 25ರಂದು ಹೊರಡಿಸಿರುವ ಆದೇಶಕ್ಕೆ ಅನುಗುಣವಾಗಿ ಪೂರಕ ಗುತ್ತಿಗೆ ಒಪ್ಪಂದ ಪತ್ರದಲ್ಲಿ 2030ರ ಮಾರ್ಚ್‌ 31ರವರೆಗೆ ಹೊಂದಿರುವ ವಿಸ್ತೃತ ಅವಧಿಯನ್ನು ಕಾರ್ಯಗತಗೊಳಿಸಲು ಆದೇಶಿಸಬೇಕು ಎಂದು ಕೋರಿತ್ತು.

Kannada Bar & Bench
kannada.barandbench.com