[ಶಿರೂರು ಮಠದ ಪ್ರಕರಣ] ತಾನು ಮಾಡುತ್ತಿರುವುದರ ಪರಿಣಾಮ ಏನೆಂಬುದು ಅಪ್ರಾಪ್ತ ಬಾಲಕನಿಗೆ ಅರ್ಥವಾಗದಿರಬಹುದು: ಹೈಕೋರ್ಟ್‌

ಬಾಲಕನ ಮೇಲೆ ಐಹಿಕ ಭೋಗಗಳ ನಿಷೇಧ ಹೇರಲಾಗಿದ್ದು, ಇದು ಸಂವಿಧಾನದ 21ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರ ಪರ ವಕೀಲರು ತಗಾದೆ ಎತ್ತಿದ್ದಾರೆ.
Child Sanyasa
Child Sanyasa

ಅಪ್ರಾಪ್ತ ಬಾಲಕನಿಗೆ ತಾನು ಕೈಗೊಳ್ಳುವ ಕೆಲಸ ಉಂಟುಮಾಡಬಹುದಾದ ಪರಿಣಾಮದ ಬಗ್ಗೆ ತಿಳಿದಿರುವುದಿಲ್ಲ. ಹೀಗಾಗಿ, ಉಡುಪಿಯ ಶಿರೂರು ಮಠಕ್ಕೆ 16 ವರ್ಷದ ಬಾಲಕನನ್ನು ಮಠಾಧಿಪತಿಯಾಗಿ ನೇಮಿಸಿರುವ ಸಂಬಂಧದ ತನ್ನ ನಿಲುವನ್ನು ರಾಜ್ಯ ಸರ್ಕಾರವು ಪುನರ್‌ ಪರಿಶೀಲಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಸೂಚಿಸಿದೆ.

“ಈ ವಿಚಾರದಲ್ಲಿ ರಾಜ್ಯ ಸರ್ಕಾರವು ಮರು ಚಿಂತನೆ ಮಾಡಬೇಕಿದೆ… ಇಲ್ಲವಾದರೆ ರಾಜ್ಯದಲ್ಲಿ ನಡೆಯುವ ಹಲವು ವಿಚಾರಗಳಿಗೆ ಸರ್ಕಾರವು ಜಾಣಕುರುಡಾಗ ಬೇಕಾಗುತ್ತದೆ. ತಾನು ಕೈಗೊಳ್ಳುವ ನಿರ್ಧಾರದ ಪರಿಣಾಮ ಏನಾಗಬಹುದು ಎಂದು ಅಪ್ರಾಪ್ತರಿಗೆ ಅರ್ಥವಾಗದಿರಬಹುದು” ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಎನ್‌ ಸಂಜಯ್‌ ಗೌಡ ನೇತೃತ್ವದ ವಿಭಾಗೀಯ ಪೀಠವು ಮೌಖಿಕವಾಗಿ ಹೇಳಿತು.

ಮಠಾಧೀಶರನ್ನಾಗಿ ಮಾಡಿದ್ದಕೆ 16 ವರ್ಷದ ಬಾಲಕ ಅಥವಾ ಅವರ ಪೋಷಕರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ವಿಷಯವನ್ನು ಅಗತ್ಯಕ್ಕಿಂತ ಹೆಚ್ಚು ಸರಳಗೊಳಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಉಡುಪಿಯ ಶಿರೂರು ಮಠದ 31ನೇ ಉತ್ತರಾಧಿಕಾರಿಯನ್ನಾಗಿ ಅಪ್ರಾಪ್ತ ಬಾಲಕನನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿರುವ ಮನವಿಯ ವಿಚಾರಣೆಯನ್ನು ಪೀಠ ನಡೆಸಿತು. ವಿಚಾರಣೆ ಆರಂಭವಾಗುತ್ತಿದ್ದಂತೆ ಅರ್ಜಿದಾರರ ಪರ ವಕೀಲರು “ಬಾಲಕನ ಮೇಲೆ ಐಹಿಕ ಭೋಗಗಳ ನಿಷೇಧ ಹೇರಲಾಗಿದ್ದು, ಇದು ಸಂವಿಧಾನದ 21ನೇ ವಿಧಿಯ ಉಲ್ಲಂಘನೆಯಾಗಿದೆ” ಎಂದು ತಗಾದೆ ಎತ್ತಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಸರ್ಕಾರವು “ಅಪ್ರಾಪ್ತರನ್ನು ಮಠಾಧಿಪತಿಯನ್ನಾಗಿ ನೇಮಿಸಬಾರದು ಎಂದು ಎಲ್ಲಿಯೂ ಹೇಳಲಾಗಿಲ್ಲ. ಈ ಸಂಬಂಧ ಕ್ರಮಕೈಗೊಳ್ಳುವುದು ನಮಗೂ ಕಷ್ಟದ ವಿಚಾರ…” ಎಂದಿತು.

ಆಗ ನ್ಯಾಯಾಲಯವು “ ಅಪ್ರಾಪ್ತರೋರ್ವರನ್ನು ಇದಕ್ಕೆ ಒಡ್ಡಬಹುದೇ? ಕೆಲವು ಸಂದರ್ಭದಲ್ಲಿ ನಾವು ಸ್ಪಷ್ಟ ನಿಲುವು ತೆಗೆದುಕೊಳ್ಳ ಬೇಕಾಗುತ್ತದೆ. ಇದು ಕಾನೂನುಬಾಹಿರ ಎಂದಾದರೆ ಕಾನೂನುಬಾಹಿರವೇ. ಅಪ್ರಾಪ್ತರ ಬಗ್ಗೆ ಪೋಷಕರು ಕಾಳಜಿವಹಿಸಬೇಕು …” ಎಂದಿತು.

ಅಂತಿಮವಾಗಿ ಪೀಠವು ರಾಜ್ಯ ಸರ್ಕಾರ ಮತ್ತು ಇತರೆ ಪ್ರತಿವಾದಿಗಳಿಗೆ ಮೂರು ವಾರಗಳಲ್ಲಿ ಆಕ್ಷೇಪಣೆ ದಾಖಲಿಸುವಂತೆ ಆದೇಶಿಸಿ, ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್‌ 13ಕ್ಕೆ ಮುಂದೂಡಿತು.

Also Read
ಅಪ್ರಾಪ್ತರಿಗೆ ಸನ್ಯಾಸತ್ವ ನೀಡುವಾಗ ಸರ್ಕಾರ ಸುಮ್ಮನೆ ಕೂರಲಾಗದು: ಶಿರೂರು ಯತಿ ನೇಮಕ ಕುರಿತು ಕರ್ನಾಟಕ ಹೈಕೋರ್ಟ್

ಉಡುಪಿ ಶಿರೂರು ಮಠದ 31ನೇ ಯತಿಯಾಗಿ ಧರ್ಮಸ್ಥಳ ಸಮೀಪದ ನಿಡ್ಲೆಯ ಎಂ ಉದಯಕುಮಾರ್‌ ಸರಳತ್ತಾಯ ಹಾಗೂ ಶ್ರೀ ವಿದ್ಯಾ ದಂಪತಿಯ 16 ವರ್ಷದ ಪುತ್ರ ಅನಿರುದ್ಧ ಸರಳತ್ತಾಯ ಅವರನ್ನು ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಇತ್ತೀಚೆಗೆ ಘೋಷಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮಠದ ನಿಕಟಪೂರ್ವ ಯತಿ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಸಹೋದರ ಪಿ ಲಾತವ್ಯ ಆಚಾರ್ಯ ನೇತೃತ್ವದ ಉಡುಪಿಯ ಶ್ರೀ ಶಿರೂರು ಮಠ ಭಕ್ತರ ಸಮಿತಿ ಮತ್ತಿತರರು ಅರ್ಜಿ ಸಲ್ಲಿಸಿದ್ದರು. 2018ರಲ್ಲಿ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಮೃತಪಟ್ಟಿದ್ದರು.

ಮಠದ ಯತಿಯಾಗಿ ನೇಮಕವಾಗಿರುವುದು 16 ವರ್ಷದ ಬಾಲಕ ಎಂದು ಹಲವು ಪತ್ರಿಕಾ ವರದಿಗಳು ಹೇಳುತ್ತಿವೆ. ಇದಕ್ಕೆ ಮಠದ ಭಕ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅಪ್ರಾಪ್ತ ವಯಸ್ಕ ಮಠದ ಶಿಷ್ಯ ಕೂಡ ಅಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.

ಯಾವುದೇ ವ್ಯಕ್ತಿಯನ್ನು ಮಠದ ಪೀಠಾಧಿಪತಿ ಎಂದು ಘೋಷಿಸದಂತೆ ಮತ್ತು ಮಠದ ಯಾವುದೇ ಸ್ಥಿರಾಸ್ತಿ ಮತ್ತು ವಿಗ್ರಹಗಳ ಕುರಿತು ವ್ಯವಹಾರ ನಡೆಸದಂತೆ ಕಳೆದ ಮಾರ್ಚ್‌ನಲ್ಲಿ ಸಂಬಂಧಪಟ್ಟವರಿಗೆ ಕಾನೂನು ನೋಟಿಸ್‌ ನೀಡಲಾಗಿತ್ತು. ಇಷ್ಟಾದರೂ ಶಿರೂರು ಮಠಕ್ಕೆ ಯತಿಯನ್ನು ಘೋಷಿಸಲಾಗಿದೆ. ಇದು ಅಪ್ರಾಪ್ತ ವಯಸ್ಕರ ಹಕ್ಕುಗಳ ಉಲ್ಲಂಘನೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಮತ್ತೂ ಆಶ್ಚರ್ಯಕರ ವಿಚಾರವೇನೆಂದರೆ ಅಪ್ರಾಪ್ತ ಬಾಲಕನು ಶಿರೂರು ಮಠಕ್ಕೆ ನಡೆದುಕೊಳ್ಳುವವರಲ್ಲ ಎಂದು ಹೇಳಲಾಗಿದೆ. ಯಾವುದೇ ವ್ಯಕ್ತಿಯನ್ನು ಪೀಠಾಧಿಪತಿ ಎಂದು ಘೋಷಿಸುವುದರಿಂದ ಹಿಂದೆ ಸರಿಯಬೇಕು. ಅಲ್ಲದೇ, ಮಠದ ಸ್ಥಿರಾಸ್ತಿ ಅಥವಾ ಮೂರ್ತಿಗಳ ವಿಚಾರದಲ್ಲಿ ತಲೆಹಾಕದಂತೆ ಕಾನೂನಾತ್ಮಕವಾಗಿ ಕಳೆದ ಮಾರ್ಚ್‌ನಲ್ಲಿ ಸೋಧೆ ಮಠಾಧೀಶರಿಗೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com