ಲಸಿಕೆ ಕೊರತೆ ಇರುವಾಗ ಎರಡನೇ ಡೋಸ್ ಹೇಗೆ ನೀಡುತ್ತೀರಿ: ಕೇಂದ್ರ, ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಪ್ರಶ್ನೆ

ಸದ್ಯಕ್ಕೆ ಮೊದಲ ಡೋಸ್ ನೀಡಿಕೆ ಸ್ಥಗಿತಗೊಳಿಸಿ ಎರಡನೇ ಡೋಸ್ ಮಾತ್ರ ನೀಡಲಾಗುತ್ತದೆ ಎಂದು ನ್ಯಾಯಾಲಯಕ್ಕೆ ಸರ್ಕಾರ ತಿಳಿಸಿತು.
ಲಸಿಕೆ ಕೊರತೆ ಇರುವಾಗ ಎರಡನೇ ಡೋಸ್ ಹೇಗೆ ನೀಡುತ್ತೀರಿ: ಕೇಂದ್ರ, ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಪ್ರಶ್ನೆ

ಕೋವಿಡ್‌ ಲಸಿಕೆಯ ಕೊರತೆ ಇರುವಾಗ ಅಧಿಕಾರಿಗಳು ಎರಡನೇ ಡೋಸ್‌ ನೀಡುವುದಾಗಿ ಹೇಗೆ ಹೇಳುತ್ತಾರೆ ಎಂದು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.

ಸದ್ಯಕ್ಕೆ ಮೊದಲ ಡೋಸ್‌ ನೀಡಿಕೆ ಸ್ಥಗಿತಗೊಳಿಸಿ ಎರಡನೇ ಡೋಸ್‌ ಮಾತ್ರ ನೀಡಲಾಗುತ್ತದೆ ಎಂದು ಸರ್ಕಾರ ಹೇಳಿದಾಗ ಮುಖ್ಯ ನ್ಯಾಯಮೂರ್ತಿ ಎ ಎಸ್‌ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ಪೀಠ ಅದನ್ನು ಒಪ್ಪಲಿಲ್ಲ.

"ಕೇವಲ 9 ಲಕ್ಷ ಡೋಸ್ ಮಾತ್ರ ಲಭ್ಯ ಇವೆ. 16 ಲಕ್ಷ ಜನರಿಗೆ ತಕ್ಷಣವೇ ಎರಡನೇ ಡೋಸ್ ಬೇಕು. 18- 44 ವಯಸ್ಸಿನವರ ವಿಚಾರ ಮರೆತುಬಿಡಿ. ಎರಡನೇ ಡೋಸ್ ನೀಡಬೇಕಾದವರಿಗೆ ನೀಡಲು ಸಹ ಸಾಧ್ಯವಿಲ್ಲ. ಸರ್ಕಾರ ಹೇಗೆ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಎರಡನೇ ಡೋಸ್ ನೀಡುತ್ತದೆ" ಎಂದು ನ್ಯಾಯಾಲಯ ಪ್ರಶ್ನಿಸಿತು.

ರಾಜ್ಯದಲ್ಲಿ ಕೋವಿಡ್‌ ನಿರ್ವಹಣೆ ಕುರಿತಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಪ್ರಕರಣದ ವಿಚಾರಣೆ ಮುಂದುವರೆಸಿದ ನ್ಯಾಯಾಲಯ ಲಸಿಕೆಯ ಮೊದಲ ಡೋಸ್‌ ನೀಡಿ ಎರಡನೇ ಡೋಸ್‌ ನೀಡದಿದ್ದರೆ ಉಂಟಾಗುವ ಪರಿಣಾಮಗಳ ಕುರಿತೂ ಪೀಠ ರಾಜ್ಯ ಸರ್ಕಾರವನ್ನು ಪ್ರಶ್ನಿಸಿತು. ಮೊದಲ ಡೋಸ್‌ ಪಡೆದು ನಾಲ್ಕು ವಾರಗಳಾಗಿರುವವರಿಗೆ ನೀಡಲು ಸುಮಾರು 26 ಲಕ್ಷ ಲಸಿಕೆಯ ವಯಲ್‌ಗಳು ಬೇಕಿವೆ. ಇದು ನಿಜಕ್ಕೂ ಅಸ್ತವ್ಯಸ್ತವಾಗಿರುವ ಸನ್ನಿವೇಶ ಎಂದು ಆತಂಕ ವ್ಯಕ್ತಪಡಿಸಿತು.

ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರನ್ನು ಉದ್ದೇಶಿಸಿ ಪೀಠ “ತಕ್ಷಣವೇ ಏನಾದರೂ ಮಾಡದೇ ಹೋದಲ್ಲಿ ಲಸಿಕಾ ಅಭಿಯಾನವೇ ಕುಸಿಯಲಿದೆ... ಮೂರನೆ ಅಲೆ ಅಥವಾ ಇನ್ನಾವುದೇ ಅಲೆಯನ್ನು ತಡೆಯಲು ಇರುವ ಏಕೈಕ ಪರಿಹಾರವೆಂದರೆ ಅದು ಲಸಿಕೆ. ಅದನ್ನು ನೀಡುವುದು ಸರ್ಕಾರದ ಹೊಣೆ. ಯಾರೂ ಅದನ್ನು ಅಂಗಡಿಗಳಿಂದ ಖರೀದಿಸಲಾಗದು” ಎಂದಿತು.

ಸದ್ಯದ ಅಂಕಿಅಂಶ ಗಮನಿಸಿದರೆ, ಎರಡನೆಯ ಡೋಸ್‌ಅನ್ನು ಪೂರ್ಣವಾಗಿ ನೀಡಲು ಅಗತ್ಯವಾದ ಲಸಿಕೆಗಳ ಲಭ್ಯತೆಗೆ 4 ತಿಂಗಳು ಹಿಡಿಯಲಿದೆ. ಮೊದಲನೆಯ ಡೋಸ್‌ ಬಗ್ಗೆಯಂತೂ ಯಾವುದೇ ನಿರ್ಧಾರ ಆಗಿಲ್ಲ. ಅಂಕಿಅಂಶಗಳನ್ನು ಗಮನಿಸಿದರೆ, ಮೊದಲನೆ ಡೋಸ್‌ ತೆಗೆದುಕೊಳ್ಳದ 45 ವರ್ಷದ ಮೇಲಿನವರಿಗೆ ಲಸಿಕೆ ನೀಡಲು ಸಹ ಕರ್ನಾಟಕ ರಾಜ್ಯಕ್ಕೆ ಸಾಧ್ಯವಿಲ್ಲ ಎಂದು ಅದು ಹೇಳಿತು.

ರಾಜ್ಯ ಸರ್ಕಾರ 13 ಲಕ್ಷಕ್ಕೂ ಹೆಚ್ಚಿನ ಡೋಸ್‌ಗಳನ್ನು ಕೇಂದ್ರದಿಂದ ತರಿಸಿಕೊಳ್ಳದಿದ್ದರೆ 18-44 ವಯೋಮಾನದವರಿಗೆ ಹೇಗೆ ಲಸಿಕೆ ನೀಡುತ್ತೀರಾ? ಈ ಸಂಬಂಧ ರಾಜ್ಯ ಸರ್ಕಾರವು ಸ್ಪಷ್ಟೀಕರಣ ನೀಡಬೇಕು.
ಕರ್ನಾಟಕ ಹೈಕೋರ್ಟ್

ಕರ್ನಾಟಕದಲ್ಲಿ 65 ಲಕ್ಷ ಮಂದಿಗೆ ಎರಡನೆಯ ಡೋಸ್‌ ಲಸಿಕೆ ಬೇಕಿದ್ದು, ಕೇವಲ 7,73,637 ಡೋಸ್‌ಗಳು ಮಾತ್ರ ಲಭ್ಯ ಇವೆ. ಕೇಂದ್ರ ಸರ್ಕಾರ ಹಿಂದಿನ ಆದೇಶಗಳ ಅನುಸರಣೆಯನ್ನು ವರದಿ ಮಾಡಿಲ್ಲ. ರಾಜ್ಯ ಸರ್ಕಾರ ಮೇ. 3ರಂದು 1 ಕೋಟಿ ಲಸಿಕೆಗೆ ಬೇಡಿಕೆ ಇಟ್ಟಿದೆ. ರಾಜ್ಯದಲ್ಲಿ ಪರಿಸ್ಥಿತಿ ಗಂಭೀರವಾಗಿದೆ.
ಹಾಗಾಗಿ, ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಮೊದಲನೆಯ ಡೋಸ್‌ ಲಸಿಕೆಯನ್ನು 18-44 ವಯೋಮಾನದವರಿಗೆ ನೀಡಲಾಗುವುದಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಸಂಪೂರ್ಣ ಲಸಿಕಾ ಅಭಿಯಾನವೇ ಪರಿಣಾಮರಹಿತವಾಗಲಿದೆ ಎಂದು ನ್ಯಾಯಾಲಯವು ಕಳವಳ ವ್ಯಕ್ತಪಡಿಸಿತು.

ಈ ಹಿನ್ನೆಲೆಯಲ್ಲಿ ಮೊದಲನೆಯ ಡೋಸ್‌ ತೆಗೆದುಕೊಳ್ಳುವವರು, ಎರಡನೆಯ ಡೋಸ್‌ಗಾಗಿ ಕಾಯುತ್ತಿರುವವರು, 45 ತುಂಬಿದ ಎಲ್ಲಾ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಹೇಗೆ ಲಸಿಕೆ ನೀಡುತ್ತದೆ ಎನ್ನುವ ಬಗ್ಗೆ ಅಧಿಕೃತ ಮಾರ್ಗಸೂಚಿ ಸಲ್ಲಿಸಬೇಕು ಎಂದ ನ್ಯಾಯಾಲಯ ಲಸಿಕೆ ಕುರಿತಾದ ಪ್ರಸಕ್ತ ಸನ್ನಿವೇಶವನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸದೆ ಹೋದರೆ, ಹೆಚ್ಚಿನ ಲಸಿಕೆಗಳನ್ನು ಸಂಗ್ರಹಿಸದೇ ಹೋದರೆ, ಆಗ ಲಸಿಕೆ ಹಾಕುವ ಮೂಲ ಉದ್ದೇಶವೇ ತೊಂದರೆಗೀಡಾಗಲಿದೆ. ಅದು ಸರಣಿ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿತು.

ಆಹಾರ ಭದ್ರತೆ ಕುರಿತು ನ್ಯಾಯಾಲಯ ಹೇಳಿದ್ದೇನು?

ಇದೇ ವೇಳೆ ನ್ಯಾಯಾಲಯ ಆಹಾರ ಭದ್ರತೆಯ ವಿಚಾರವಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರದಿಂದ ಮಾಹಿತಿ ಪಡೆಯಿತು. “ನಾಳೆಯಿಂದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಮೂರು ಹೊತ್ತು ಊಟ ನೀಡಲಾಗುವುದು. ಕಟ್ಟಡ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಲು ಬಿಲ್ಡರ್‌ಗಳಿಗೆ ಸೂಚಿಸಲಾಗಿದೆ. ಪಡಿತರ ಚೀಟಿ ಇಲ್ಲದವರಿಗಾಗಿ ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಹಾರ ವ್ಯವಸ್ಥೆ ಮಾಡಲಾಗಿದೆ ಎಂದು ಎಜಿ ಪ್ರಭುಲಿಂಗ ನಾವದಗಿ ತಿಳಿಸಿದರು. ಆದರೆ ಇದಕ್ಕೆ ತೃಪ್ತವಾಗದ ನ್ಯಾಯಾಲಯ 186 ಇಂದಿರಾ ಕ್ಯಾಂಟೀನ್‌ಗಳಿವೆ, 1000 ಕೊಳಗೇರಿಗಳಿವೆ. ಇಂದಿರಾ ಕ್ಯಾಂಟೀನ್‌ಗೆ ಲಾಕ್‌ಡೌನ್‌ ಸಂದರ್ಭದಲ್ಲಿ ಜನ ಹೇಗೆ ಬರಲು ಸಾಧ್ಯ ಎಂದು ಪ್ರಶ್ನಿಸಿತು.

ಸರ್ಕಾರದೊಂದಿಗೆ ಸಹಭಾಗಿತ್ವ ಹೊಂದಿರುವ ಎನ್‌ಜಿಒಗಳ ಪಾತ್ರವೇನು ಎಂದು ಕೇಳಿದ ಪೀಠ. ಅಗತ್ಯವಿರುವ ಎಲ್ಲರಿಗೂ ಆಹಾರ ದೊರೆಯಬೇಕು. ದೈನಂದಿನ ಕೂಲಿ ಲಭ್ಯವಾಗದ ಎಲ್ಲರಿಗೂ ಆಹಾರ ಸಿಗಬೇಕು. ಯಾರೊಬ್ಬರಿಗೂ ಆಹಾರ ಇಲ್ಲದಂತಾಗಬಾರದು. ವ್ಯವಸ್ಥಿತವಾಗಿ, ಕ್ರಮಬದ್ಧವಾಗಿ ಇದು ಸಾಧ್ಯವಾಗಬೇಕು ಎಂದು ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿತು.

ಆದ್ಯತಾ ರಹಿತ ಪಡಿತರ ಚೀಟಿ (ಎನ್‌ಪಿಎಚ್‌ಎಚ್) ಹೊಂದಿರುವವರಿಗೆ 10 ಕೆಜಿ ಆಹಾರ ಧಾನ್ಯವನ್ನು ರೂ. 50ಕ್ಕೆ ಕೊಡಬೇಕು ಎನ್ನುವ ಪ್ರಸ್ತಾಪವಿದೆ. ಈ ಸಂಬಂಧ ಸರ್ಕಾರ ತಕ್ಷಣ ನಿರ್ಧಾರ ತೆಗೆದುಕೊಂಡು ಕೂಡಲೇ ಅನುಷ್ಠಾನಗೊಳಿಸಬೇಕು. ಸ್ಥಳೀಯ ಸಂಸ್ಥೆಗಳು ಆಹಾರ ವಿತರಣೆಗೆ ಮುಂದಾಗಿ ತಮ್ಮ ಚಟುವಟಿಕೆ ಮುಂದುವರೆಸಬೇಕು. ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಹಾರವನ್ನು ಉಚಿತವಾಗಿ ನೀಡಬೇಕು. ಪಡಿತರ ಧಾನ್ಯದ ಕಿಟ್‌ಗಳನ್ನು ಅರ್ಹ ವ್ಯಕ್ತಿಗಳ ಮನೆಬಾಗಿಲಿಗೇ ತಲುಪಿಸಬೇಕು. ಅದರಲ್ಲಿರುವ ಆಹಾರ ವಸ್ತುಗಳ ಪ್ರಮಾಣ 21 ದಿನಕ್ಕೆ ಸಾವಕಾಶವಾಗಿ ಆಗುವಂತಿರಬೇಕು ಎಂದು ನ್ಯಾಯಾಲಯ ಆದೇಶಿಸಿತು.

ಇದೇ ಸಂದರ್ಭದಲ್ಲಿ ನ್ಯಾಯಾಲಯ ಆತ್ಮ ನಿರ್ಭರ ಯೋಜನೆ ಇನ್ನೂ ಅಸ್ತಿತ್ವದಲ್ಲಿದೆಯೇ ಎನ್ನುವ ಕುರಿತಾಗಿ ರಾಜ್ಯವು ಗುರುವಾರದೊಳಗೆ ತನಗೆ ಮಾಹಿತಿ ನೀಡಬೇಕು ಎಂದಿತು.

ಆಮ್ಲಜನಕ ಸೌಲಭ್ಯ ಕುರಿತು…

ವಿಚಾರಣೆ ವೇಳೆ ರಾಜ್ಯ ಸರ್ಕಾರ, “ಕೇಂದ್ರವು ರಾಜ್ಯಕ್ಕೆ 1015 ಮೆ.ಟನ್‌ ಆಮ್ಲಜನಕ ಪೂರೈಸಿದೆ. ಈ ಮೊದಲುಇದರ ಪ್ರಮಾಣ 865 ಮೆ.ಟನ್‌ ಇತ್ತು ಎಂದು ಪೀಠಕ್ಕೆ ಮಾಹಿತಿ ನೀಡಿತು. ಆಗ ನ್ಯಾಯಾಲಯ “ಕೇಂದ್ರವು ನಾಳೆಯ ವೇಳೆಗೆ ಹೇಗೆ 1200 ಮೆ.ಟನ್‌ ಆಮ್ಲಜನಕ ಪೂರೈಸಲಿದೆ ಎನ್ನುವ ಬಗ್ಗೆ ಅಧಿಕೃತ ಹೇಳಿಕೆ ಸಲ್ಲಿಸಲಿ. ಮುಂದಿನ 4-5 ದಿನಗಳಿಗೆ ಎಷ್ಟು ಆಮ್ಲಜನಕದ ಅಗತ್ಯವಿದೆ ಎನ್ನುವ ಬಗ್ಗೆ ರಾಜ್ಯ ಸರ್ಕಾರವು ಒಂದು ಸರಳ ಅಂದಾಜನ್ನು ನೀಡಬೇಕು. ಎಷ್ಟು ಪ್ರಮಾಣದ ಆಮ್ಲಜನಕದ ಅಗತ್ಯವಿದೆ ಎಂದು ನಮಗೆ ನಾಳೆ ತಿಳಿಸಿ” ಎಂದಿತು.

ಇದೇ ವೇಳೆ ಎಜಿ ನಾವದಗಿ ಹೆಚ್ಚುವರಿ ಆಮ್ಲಜನಕ ದೊರಕಿಸಿಕೊಟ್ಟ ಕುರಿತು ನ್ಯಾಯಾಲಯಕ್ಕೆ ಕೃತಜ್ಞತೆ ಸಲ್ಲಿಸಿತು. ಈ ಹಂತದಲ್ಲಿ ಪೀಠ “ರಾಜ್ಯದಲ್ಲಿ ಯಾರೊಬ್ಬರೂ ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಬಾರದು” ಎಂದಿತು.

ಪ್ರಕರಣದಲ್ಲಿ ಅಮಿಕಸ್‌ ಕ್ಯೂರಿಯಾಗಿ ನ್ಯಾಯಾಲಯಕ್ಕೆ ಸಹಕರಿಸುತ್ತಿರುವ ವಿಕ್ರಮ್‌ ಹುಯಿಲಗೋಳ, ಕೇಂದ್ರ ಸರ್ಕಾರದ ಪರ ವಕೀಲ ಶಿವಕುಮಾರ್‌ ಕೂಡ ವಿಚಾರಣೆಯಲ್ಲಿ ಪಾಲ್ಗೊಂಡರು.

Related Stories

No stories found.
Kannada Bar & Bench
kannada.barandbench.com