
ತಮ್ಮ ವಿರುದ್ಧದ ಮನೆಕೆಲಸದಾಕೆಯ ಮೇಲಿನ ಅತ್ಯಾಚಾರ ಪ್ರಕರಣದ ದೈನಂದಿನ ವಿಚಾರಣೆಯನ್ನು ಮುಂದೂಡಲು ವಿಚಾರಣಾಧೀನ ನ್ಯಾಯಾಲಯಕ್ಕೆ ನಿರ್ದೇಶಿಸುವಂತೆ ಕೋರಿ ಮಾಜಿ ಸಂಸದ ಪ್ರಜ್ವಲ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಪ್ರಜ್ವಲ್ ಪರವಾಗಿ ಅವರ ತಾಯಿ ಭವಾನಿ ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ನಡೆಸಿತು.
ಪ್ರಜ್ವಲ್ ಪ್ರತಿನಿಧಿಸುತ್ತಿದ್ದ ವಕೀಲ ಜಿ ಅರುಣ್ ಅವರು ಹಿಂದೆ ಸರಿದಿದ್ದು, ಅವರ ಸ್ಥಾನಕ್ಕೆ ಮತ್ತೊಬ್ಬರನ್ನು ನೇಮಕ ಮಾಡುವವರೆಗೆ ವಿಚಾರಣೆ ಮುಂದೂಡಲು ವಿಶೇಷ ನ್ಯಾಯಾಲಯಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ಪೀಠವು ನಿರಾಕರಿಸಿತು.
“ಅತ್ಯಾಚಾರ ಪ್ರಕರಣದ ವಿಚಾರಣೆ ಮುಂದೂಡುವಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ನೀಡುವ ಯಾವುದೇ ನಿರ್ದೇಶನವು ವಿಶೇಷ ನ್ಯಾಯಾಲಯದ ಸ್ಥೈರ್ಯ ಕುಂದಿಸಲಿದೆ. ಹೀಗಾಗಿ, ಅರ್ಜಿಯನ್ನು ಪರಿಗಣಿಸುವುದಿಲ್ಲ” ಎಂದು ನ್ಯಾಯಾಲಯ ಹೇಳಿತು.
ಇದಕ್ಕೂ ಮುನ್ನ, ಪ್ರಾಸಿಕ್ಯೂಷನ್ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್ ಅವರು “ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವ ಮಹಿಳೆಯನ್ನು ಅಪಹರಣ ನಡೆಸಿರುವ ಕಿಂಗ್‌ಪಿನ್ ಭವಾನಿ ಅವರು ವಿಚಾರಣೆ ಮುಂದೂಡುವಂತೆ ಕೋರಿದ್ದಾರೆ. ವಿಚಾರಣೆಯನ್ನು ವಿಳಂಬಗೊಳಿಸುವ ಏಕೈಕ ಉದ್ದೇಶ ಈ ಅರ್ಜಿ ಸಲ್ಲಿಸಿರುವುದರ ಹಿಂದೆ ಇದೆ” ಎಂದು ತೀವ್ರ ವಿರೋಧ ದಾಖಲಿಸಿದರು.
ಪ್ರಜ್ವಲ್ ಪ್ರತಿನಿಧಿಸಿದ್ದ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ ಅವರು “ಪ್ರಜ್ವಲ್ ಜೈಲಿನಲ್ಲಿರುವುದರಿಂದ ಅವರ ಪರವಾಗಿ ಭವಾನಿ ಅರ್ಜಿ ಸಲ್ಲಿಸಿದ್ದಾರೆ. ಪ್ರಜ್ವಲ್‌ರನ್ನು ವಿಚಾರಣಾಧೀನ ನ್ಯಾಯಾಲಯದಲ್ಲಿ ಹಿಂದೆ ಪ್ರತಿನಿಧಿಸಿದ್ದ ವಕೀಲ ಅರುಣ್ ಅವರು ಹಿಂದೆ ಸರಿದಿರುವುದರಿಂದ ಬೇರೊಬ್ಬರು ವಕೀಲರನ್ನು ನೇಮಕ ಮಾಡಿಕೊಳ್ಳುವವರೆಗೆ ವಿಚಾರಣೆ ಮುಂದೂಡಬೇಕು” ಎಂದು ಮನವಿ ಮಾಡಿದರು.
ಏಪ್ರಿಲ್ 3ರಂದು ವಿಚಾರಣಾಧೀನ ನ್ಯಾಯಾಲಯವು ಪ್ರಜ್ವಲ್ ವಿರುದ್ಧ ಆರೋಪ ನಿಗದಿಪಡಿಸಿದ್ದು, ಇಂದಿನಿಂದ ಅಧಿಕೃತವಾಗಿ ದೈನಂದಿನ ವಿಚಾರಣೆ ಆರಂಭಿಸಿದೆ.
ಹಾಲಿ ಅತ್ಯಾಚಾರ ಪ್ರಕರಣವನ್ನು ಬೇರೊಂದು ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಪ್ರಜ್ವಲ್ ಹಿಂದಿನ ವಕೀಲ ಜಿ ಅರುಣ್ ಅವರು ಅರ್ಜಿ ಸಲ್ಲಿಸಿದ್ದರು. ಇದನ್ನು ವಿಶೇಷ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ತಿರಸ್ಕರಿಸಿದರು. ಹೀಗಾಗಿ, ಏಪ್ರಿಲ್ 23ರಂದು ಅರುಣ್ ಪ್ರಕರಣದಿಂದ ಹಿಂದೆ ಸರಿದಿದ್ದರು.
ಆನಂತರ ನ್ಯಾ. ಭಟ್ ಅವರು ಏಪ್ರಿಲ್ 28ರಂದು ಪ್ರಜ್ವಲ್‌ಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ವಕೀಲರನ್ನು ನೇಮಿಸಿಕೊಳ್ಳಲು ಬಯಸುತ್ತೀರಾ ಎಂದು ಕೇಳಿದ್ದರು. ಇದಕ್ಕೆ ಪ್ರಜ್ವಲ್ ಅವರು ಬೇರೊಬ್ಬ ವಕೀಲರನ್ನು ನೇಮಿಸಿಲು ತಮ್ಮ ಕುಟುಂಬದವರು ಪ್ರಯತ್ನಿಸುತ್ತಿದ್ದಾರೆ ಎಂದು ಪೀಠಕ್ಕೆ ತಿಳಿಸಿದ್ದರು. ಆದರೆ, ಏಪ್ರಿಲ್ 29ರಂದು ವಿಚಾರಣಾಧೀನ ನ್ಯಾಯಾಲಯವು ಪ್ರಜ್ವಲ್ ಪ್ರತಿನಿಧಿಸಲು ಅಮಿಕಸ್ ಕ್ಯೂರಿಯನ್ನಾಗಿ ಪ್ರಧಾನ ಕಾನೂನು ಡಿಫೆನ್ಸ್ ವಕೀಲೆ ಆರ್ ಎಸ್ ಜಯಶ್ರೀ ಅವರನ್ನು ನೇಮಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತವಾಗಿದ್ದು, ಪ್ರಜ್ವಲ್ ಒಪ್ಪಿಗೆ ಇಲ್ಲದೇ ಹೊಸ ನೇಮಕಾತಿ ಮಾಡಲಾಗಿದ್ದು, ಬೇರೊಬ್ಬ ವಕೀಲರನ್ನು ನೇಮಿಸಲು ಕನಿಷ್ಠ ಒಂದು ಅವಕಾಶವನ್ನು ನೀಡಿಲ್ಲ. ಇದರ ಜೊತೆಗೆ ಇಂದಿನಿಂದ ವಿಚಾರಣೆ ಆರಂಭಿಸಲಾಗಿದೆ ಎಂದು ಆರೋಪಿಸಿ ಭವಾನಿ ರೇವಣ್ಣ ಇಂದು ಹೈಕೋರ್ಟ್‌ಗೆ ಅರ್ಜಿ ಹಾಕಿದ್ದರು.
ಈ ನೆಲೆಯಲ್ಲಿ ಹೊಸದಾಗಿ ಬೇರೆ ವಕೀಲರನ್ನು ನೇಮಿಸಿಕೊಳ್ಳಲು ಕಾಲಾವಕಾಶ ನೀಡಬೇಕು. ಅಮಿಕಸ್ ಕ್ಯೂರಿಗೆ ಪ್ರಕರಣದಲ್ಲಿ ಸಿದ್ಧತೆ ನೀಡಲು ಎರಡು ದಿನ ಕಾಲಾವಕಾಶ ಮಾತ್ರ ನೀಡಲಾಗಿದೆ. ಆದರೆ, ಹಾಲಿ ಪ್ರಕರಣದಲ್ಲಿ ಹಲವು ಸಾಕ್ಷಿಗಳು ಮತ್ತು ಹತ್ತಾರು ದಾಖಲೆಗಳಿವೆ ಎಂದು ಆಕ್ಷೇಪಿಸಲಾಗಿದೆ.
ವಕೀಲ ಅರುಣ್ ಅವರು ಪ್ರಕರಣದಿಂದ ಹಿಂದೆ ಸರಿಯುವುದಕ್ಕೂ ಮುನ್ನ ಜೈಲಿನಲ್ಲಿ ಪ್ರಜ್ವಲ್ ಭೇಟಿ ಮಾಡಿ, ಕಲಾಪದ ಚಟುವಟಿಕೆಗಳನ್ನು ನ್ಯಾಯಾಧೀಶರು ಸರಿಯಾಗಿ ದಾಖಲಿಸುತ್ತಿಲ್ಲ ಎಂದು ತಿಳಿಸಿರುವುದಾಗಿ ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ. ಇದು ತಿಳಿಯುತ್ತಿದ್ದಂತೆ ಕಲಾಪದ ಪ್ರಕ್ರಿಯೆಯ ಪ್ರತಿಗಳನ್ನು ನೀಡುವಂತೆ ಭವಾನಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇದನ್ನು ವಿಚಾರಣಾಧೀನ ನ್ಯಾಯಾಲಯ ಪುರಸ್ಕರಿಸಿಲ್ಲ.
ಭವಾನಿ ಅವರ ಕೋರಿಕೆಯನ್ನು ಪರಿಗಣಿಸುವ ಬದಲಿಗೆ ನ್ಯಾಯಾಲಯವು ಆಕೆಯನ್ನು ಗೇಲಿ ಮಾಡಿದ್ದು, ವಿಚಾರಣೆ ಮುಂದುವರಿಸಿದೆ. ನ್ಯಾಯಾಲಯದ ಕಲಾಪ ಪ್ರಕ್ರಿಯೆಯ ಪ್ರಮಾಣೀಕೃತ ದಾಖಲೆಗಳ ಕೋರಿಕೆಯನ್ನೂ ತಿರಸ್ಕರಿಸಲಾಗಿದೆ. ಹೀಗಾಗಿ, ಈ ಸಂಬಂಧ ವಿಚಾರಣಾಧೀನ ನ್ಯಾಯಾಲಯಕ್ಕೆ ನಿರ್ದೇಶಿಸಬೇಕು ಎಂದು ಭವಾನಿ ಕೋರಿದ್ದರು. ಆದರೆ, ಹೈಕೋರ್ಟ್ ಭವಾನಿ ಅವರ ಅರ್ಜಿಗೆ ಅಸಮ್ಮತಿಸಿದೆ.
ಲೀಗಲ್ ಕೇರ್ ಇಂಕ್‌ನ ವಕೀಲ ಮಯೂರ್ ಡಿ. ಭಾನು ಅವರು ಭವಾನಿ ಪರವಾಗಿ ವಕಾಲತ್ತು ಹಾಕಿದ್ದರು.