ಎಂಟು ನಾಯಿಮರಿಗಳ ಸಾವಿನ ಹೊಣೆ: ವೃದ್ಧ ಮಹಿಳೆಗೆ ವಿಧಿಸಿದ್ದ ₹1,000 ದಂಡ ಹೆಚ್ಚಳಕ್ಕೆ ಹೈಕೋರ್ಟ್‌ ನಕಾರ

ಆರೋಪಿ ಪೊನ್ನಮ್ಮಗೆ ಸದ್ಯ 72 ವಯಸ್ಸಾಗಿದ್ದು, ತಪ್ಪೊಪ್ಪಿಕೊಂಡಿದ್ದಾರೆ. ವಿಚಾರಣಾಧೀನ ನ್ಯಾಯಾಲಯದ ನ್ಯಾಯಾಧೀಶರು ವಿವೇಚನಾಧಿಕಾರ ಬಳಸಿ ಆಕೆಗೆ ಶಿಕ್ಷೆ (₹1,000 ದಂಡ) ವಿಧಿಸಿದ್ದಾರೆ ಎಂದು ನ್ಯಾ. ಖಾಜಿ ಅವರು ಆದೇಶಿಸಿದ್ದಾರೆ.
Stray dog
Stray dog

ಎಂಟು ನಾಯಿಮರಿಗಳ ಸಾವಿಗೆ ಕಾರಣವಾಗಿದ್ದ 72 ವರ್ಷದ ವೃದ್ಧೆಗೆ ವಿಚಾರಣಾಧೀನ ನ್ಯಾಯಾಲಯ ವಿಧಿಸಿದ್ದ ₹1,000 ದಂಡ ಹೆಚ್ಚಳ ಮಾಡುವಂತೆ ಕೋರಿದ್ದ ಅರ್ಜಿಯನ್ನು ಈಚೆಗೆ ವಜಾ ಮಾಡಿರುವ ಕರ್ನಾಟಕ ಹೈಕೋರ್ಟ್, ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ.

ನಾಯಿಮರಿಗಳ ಸಾವಿಗೆ ಕಾರಣವಾಗಿದ್ದ ಆರೋಪಿ ಮಹಿಳೆಗೆ ಕೇವಲ ಒಂದು ಸಾವಿರ ರೂಪಾಯಿ ದಂಡ ವಿಧಿಸಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪ್ರಾಣಿ ಕಲ್ಯಾಣ ಅಧಿಕಾರಿ ಕೆ ಬಿ ಹರೀಶ್​ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಜೆ ಎಂ ಖಾಜಿ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಆರೋಪಿ ಪೊನ್ನಮ್ಮಗೆ ಸದ್ಯ 72 ವಯಸ್ಸಾಗಿದ್ದು, ತಪ್ಪೊಪ್ಪಿಕೊಂಡಿದ್ದಾರೆ. ವಿಚಾರಣಾಧೀನ ನ್ಯಾಯಾಲಯದ ನ್ಯಾಯಾಧೀಶರು ವಿವೇಚನಾಧಿಕಾರ ಬಳಸಿ ಆಕೆಗೆ ಶಿಕ್ಷೆ (₹1,000 ದಂಡ) ವಿಧಿಸಿದ್ದಾರೆ. ದಂಡದ ಮೊತ್ತವನ್ನೂ ಪಾವತಿ ಮಾಡಲಾಗಿದೆ ಎಂದು ತಿಳಿಸಿರುವ ಪೀಠವು ಶಿಕ್ಷೆ ಪ್ರಮಾಣ ಹೆಚ್ಚಳಕ್ಕೆ ನಿರಾಕರಿಸಿದೆ.

ಪ್ರಕರಣದ ಹಿನ್ನೆಲೆ: 2016 ರ ಮಾರ್ಚ್‌ 15ರಂದು ಆರೋಪಿ ಪೊನ್ನಮ್ಮ ಮನೆಯ ಮುಂದೆ ಚರಂಡಿಯಲ್ಲಿ ನಾಯಿಯೊಂದು ಎಂಟು ಮರಿಗಳನ್ನು ಹಾಕಿತ್ತು. ಅದರ ಗದ್ದಲದಿಂದ ಬೇಸತ್ತಿದ್ದ ಆಕೆಯು 20 ದಿನದ ನಾಯಿ ಮರಿಗಳನ್ನು ಖಾಲಿ ನಿವೇಶನದಲ್ಲಿರಿಸಿದ್ದರು. ಇದರಿಂದ ನಾಯಿ ಮರಿಗಳ ಬಳಿ ಬರಲಾಗಿರಲಿಲ್ಲ. ಬದಲಿಗೆ ಮರಿಗಳು ತಾಯಿಯಲ್ಲಿಗೆ ಹೋಗುವುದಕ್ಕೆ ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಮರಿಗಳಿಗೆ ಸೂಕ್ತ ಸಮಯಕ್ಕೆ ಹಾಲು ಸಿಗದೆ ಸಾವನ್ನಪ್ಪಿದ್ದವು.

ಪ್ರಕರಣ ಸಂಬಂಧ ಹರೀಶ್​ ಅವರು ಪೊಲೀಸರಿಗೆ ದೂರು ನೀಡಿದ್ದರು. ದೂರಿಗೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದರು. ಬಳಿಕ ಮ್ಯಾಜಿಸ್ಟ್ರೇಟ್​ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ಐಪಿಸಿ, ಕರ್ನಾಟಕ ಪೊಲೀಸ್​ ಕಾಯಿದೆ, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆಯ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣಾಧೀನ ನ್ಯಾಯಾಲಯದಲ್ಲಿ ಆರೋಪಿ ಮಹಿಳೆಯು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರು. ಈ ಅಂಶ ದಾಖಲಿಸಿಕೊಂಡಿದ್ದ ಮ್ಯಾಜಿಸ್ಟ್ರೇಟ್​ ಅವರು ಒಂದು ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಹರೀಶ್​ ಸತ್ರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ್ದ ಸತ್ರ​ ನ್ಯಾಯಾಲಯ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡುವುದಕ್ಕೆ ನಿರಾಕರಿಸಿ, ಮ್ಯಾಜಿಸ್ಟ್ರೇಟ್​ ನ್ಯಾಯಾಧೀಶರ ವಿವೇಚನಾಧಿಕಾರ ಬಳಸಿ ಶಿಕ್ಷೆ ವಿಧಿಸಿದ್ದಾರೆ. ಹೀಗಾಗಿ, ಆದೇಶದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಪುನರ್​ ಪರಿಶೀಲನಾ ಅರ್ಜಿ ಸಲ್ಲಿಸಲಾಗಿತ್ತು.

ಅರ್ಜಿಯ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಆರೋಪಿಯ ಅಪರಾಧಕ್ಕೆ ಅನುಗುಣವಾಗಿ ಆರೋಪಿತರಿಗೆ ಶಿಕ್ಷೆ ವಿಧಿಸಿಲ್ಲ. ಜಗತ್ತಿನ ಎಲ್ಲ ಜೀವಿಯ ಕುರಿತು ಕರುಣೆ ಹಾಗೂ ಸಹಾನೂಭೂತಿ ತೋರುವುದು ನಾಗರಿಕರ ಕರ್ತವ್ಯ. ಆದ್ದರಿಂದ, ಆಕೆಗೆ ವಿಧಿಸಿದ್ದ ದಂಡ ಹೆಚ್ಚಿಸಬೇಕು ಎಂದು ಪೀಠಕ್ಕೆ ಕೋರಿದ್ದರು. ಇದನ್ನು ಹೈಕೋರ್ಟ್‌ ಪುರಸ್ಕರಿಸಿಲ್ಲ.

Related Stories

No stories found.
Kannada Bar & Bench
kannada.barandbench.com