
ದ್ವಿಚಕ್ರ ವಾಹನ ತಯಾರಿಕಾ ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ ವಿರುದ್ಧದ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರದ (ಸಿಸಿಪಿಎ) ತನಿಖೆಯ ಭಾಗವಾಗಿ ಹೆಚ್ಚುವರಿ ದಾಖಲೆಗಳನ್ನು ಒದಗಿಸುಂತೆ ಕೇಳಿರುವ ಸಂವಹನವನ್ನು ರದ್ದುಪಡಿಸಲು ಮಂಗಳವಾರ ನಿರಾಕರಿಸಿರುವ ಕರ್ನಾಟಕ ಹೈಕೋರ್ಟ್, ಅಗತ್ಯ ದಾಖಲೆಗಳನ್ನು ಮುಂದಿನ ಆರು ವಾರಗಳಲ್ಲಿ ಒದಗಿಸುವಂತೆ ಓಲಾ ಎಲೆಕ್ಟ್ರಿಕ್ ಕಂಪೆನಿಗೆ ಸೂಚಿಸಿದೆ.
ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್ ದೇವದಾಸ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಾದ-ಪ್ರತಿವಾದ ಆಲಿಸಿದ ಪೀಠವು “ಹೆಚ್ಚುವರಿ ದಾಖಲೆಗಳನ್ನು ಒದಗಿಸುವಂತೆ ಓಲಾ ಎಲೆಕ್ಟ್ರಿಕ್‌ಗೆ ನಿರ್ದೇಶನ ನೀಡುವ ಸಂವಹನವನ್ನು ಗ್ರಾಹಕರ ಹಿತದೃಷ್ಟಿಯಿಂದ ತನಿಖಾ ಅಧಿಕಾರಿಯಿಂದ ನೀಡಲಾಗಿದೆ ಮತ್ತು ದಾಖಲೆಗಳನ್ನು ಒದಗಿಸಲು ಓಲಾ ಬದ್ಧವಾಗಿರಬೇಕು” ಎಂದು ಹೇಳಿತು.
ಅದಕ್ಕೆ ಅರ್ಜಿದಾರರ ಪರ ವಕೀಲ ಉದಯ್ ಹೊಳ್ಳ ಅವರು “ಕಂಪೆನಿಯು ತನಿಖಾಧಿಕಾರಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದರೆ, ಕಂಪೆನಿಯ ವಿರುದ್ಧ ತನಿಖೆ ನಡೆಸಲಾಗುತ್ತಿದೆ ಎಂಬ ಸುದ್ದಿ ಹರಡಿ ಅಪಖ್ಯಾತಿಗೆ ಕಾರಣವಾಗುತ್ತದೆ” ಎಂದು ಆತಂಕ ವ್ಯಕ್ತಪಡಿಸಿದರು.
ಇದನ್ನು ತಳ್ಳಿ ಹಾಕಿದ ಪೀಠವು “ಅಗತ್ಯ ಹೆಚ್ಚುವರಿ ದಾಖಲೆ ಒದಗಿಸಲು ತನಿಖಾಧಿಕಾರಿ ಹೊರಡಿಸಿರುವ ಪತ್ರ (ಸಂವಹನ) ಅಧಿಕಾರಬದ್ಧವಾಗಿದೆ. ಅಗತ್ಯ ದಾಖಲೆಗಳನ್ನು ಒದಗಿಸುವುದು ಅರ್ಜಿದಾರ ಸಂಸ್ಥೆಯ ಜವಾಬ್ದಾರಿಯಾಗಿದೆ. ಗ್ರಾಹಕರ ರಕ್ಷಣಾ ಕಾಯಿದೆ-2019ರ ನಿಬಂಧನೆಗಳ ಪ್ರಕಾರ ವೈಯುಕ್ತಿಕ ವಿಚಾರಣೆಯ ಅಗತ್ಯವಿದ್ದಲ್ಲಿ, ಅದಕ್ಕೆ ಅನುಗುಣವಾಗಿ ಅರ್ಜಿದಾರರಿಗೆ ವೈಯುಕ್ತಿಕ ವಿಚಾರಣೆ ಅಥವಾ ಅವಕಾಶ ನೀಡಲು ಪ್ರಾಧಿಕಾರ ಬದ್ಧವಾಗಿದೆ. ಪರಿಶೀಲನೆಯ ಉದ್ದೇಶಗಳಿಗೆ ದಾಖಲೆಗಳನ್ನು ಕೇಳಲಾಗಿದೆ. ದಾಖಲೆಗಳನ್ನು ಒಗದಿಸುವುದರಿಂದ ಅರ್ಜಿದಾರರಿಗೆ ಹಾನಿ ಅಥವಾ ಪೂರ್ವಾಗ್ರಹ ಉಂಟಾಗುವುದಿಲ್ಲ” ಎಂದು ಹೇಳಿತು.
ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ 10 ಸಾವಿರಕ್ಕೂ ಅಧಿಕ ಗ್ರಾಹಕರು ದೂರುಗಳನ್ನು ನೀಡಿದ್ದರ ಹಿನ್ನೆಲೆಯಲ್ಲಿ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರದಿಂದ ಓಲಾ ಎಲೆಕ್ಟ್ರಿಕ್‌ಗೆ ಷೋಕಾಸ್ ನೋಟಿಸ್ ನೀಡಲಾಗಿತ್ತು. ಅಲ್ಲದೇ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿತ್ತು. ಅದನ್ನು ಪ್ರಶ್ನಿಸಿ ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ ಹೈಕೋರ್ಟ್ ಮೆಟ್ಟಿಲೇರಿದೆ.