ಪತ್ನಿಯ ನಡತೆ ಶಂಕಿಸಿ, ತಮ್ಮಿಬ್ಬರಿಗೆ ಜನಿಸಿದ ಮಗುವನ್ನು ಎರಡನೇ ಬಾರಿಗೆ ವಂಶವಾಹಿ (ಡಿಎನ್‌ಎ) ಪರೀಕ್ಷೆಗೊಳಪಡಿಸಲು ಅನುಮತಿ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ವಜಾಗೊಳಿಸಿದೆ.
ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್‌ಎಸ್‌ಎಲ್) ಮೊದಲ ಬಾರಿ ನಡೆಸಲಾಗಿರುವ ಡಿಎನ್‌ಎ ಪರೀಕ್ಷೆಯಲ್ಲಿ ಲೋಪವಾಗಿದ್ದು, ಎರಡನೇ ಬಾರಿ ಪರೀಕ್ಷೆಗಾಗಿ ಡಿಎನ್‌ಎ ಮಾದರಿಯನ್ನು ಹೈದರಾಬಾದ್‌ನ ಎಫ್‌ಎಸ್‌ಎಲ್‌ಗೆ ಕಳುಹಿಸುವಂತೆ ಕೋರಿ ಬೆಂಗಳೂರಿನ ಮುನಿ ಆಂಜನಪ್ಪ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠವು ವಜಾಗೊಳಿಸಿದೆ.
ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ನುರಿತ ತಜ್ಞರಿಂದ ಡಿಎನ್‌ಎ ಮಾದರಿ ಪರೀಕ್ಷೆಗೊಳಪಡಿಸಿ, ವರದಿಯನ್ನು ನಿರ್ದೇಶಕರು ಅನುಮೋದಿಸಿರುತ್ತಾರೆ. ಸರ್ಕಾರಿ ಆಸ್ಪತ್ರೆ ಅಥವಾ ಪ್ರಯೋಗಾಲಯದಿಂದ ಬರುವ ವರದಿಗಳ ಫಲಿತಾಂಶವನ್ನು ಅನುಮಾನದಿಂದ ನೋಡಲು ಸಾಧ್ಯವಿಲ್ಲ. ಫಲಿತಾಂಶ ಅರ್ಜಿದಾರರ ವಿರುದ್ಧವಿದೆ ಎಂಬ ಕಾರಣಕ್ಕೆ ಅವರ ಆರೋಪಗಳನ್ನು ಪರಿಗಣಿಸಲು ಅವಕಾಶವಿಲ್ಲ ಎಂದು ಪೀಠವು ಆದೇಶದಲ್ಲಿ ಹೇಳಿದೆ.
ಒಂದು ವೇಳೆ ಅರ್ಜಿದಾರರ ಮನವಿ ಮಾನ್ಯ ಮಾಡಿ, 2ನೇ ಬಾರಿ ಡಿಎನ್‌ಎ ಪರೀಕ್ಷೆಗೆ ಅನುಮತಿಸಿದರೆ, ಅರ್ಜಿದಾರರು ತಮ್ಮ ಪರವಾಗಿ ಫಲಿತಾಂಶ ಬರುವರೆಗೂ ಮತ್ತೆ ಮತ್ತೆ ಅರ್ಜಿ ಸಲ್ಲಿಸಲು ಉತ್ತೇಜಿಸಿದಂತಾಗುತ್ತದೆ. ಆದ್ದರಿಂದ, ಎರಡನೇ ಬಾರಿಗೆ ಡಿಎನ್‌ಎ ಪರೀಕ್ಷೆ ನಡೆಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹೇಗಾದರೂ ಮಾಡಿ ಹೆಂಡತಿಯ ನಡತೆ ಕೆಟ್ಟದು ಎಂದು ಬಿಂಬಿಸಿ, ಪತ್ನಿ ಹಾಗೂ ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿಯಿಂದ ನುಣಚಿಕೊಳ್ಳುವ ಏಕೈಕ ಉದ್ದೇಶದಿಂದ ಅರ್ಜಿ ಸಲ್ಲಿಸಲಾಗಿದೆ. ಆದ್ದರಿಂದ, ಅರ್ಜಿದಾರರ ಮನವಿ ಮಾನ್ಯ ಮಾಡಲಾಗದು ಎಂದು ಹೈಕೋರ್ಟ್ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಕೆಂಗೇರಿ ಹೋಬಳಿಯ ಅಗರ ಗ್ರಾಮದ ನಿವಾಸಿಯಾಗಿರುವ ಅರ್ಜಿದಾರರು 2010ರ ಮೇ ತಿಂಗಳಲ್ಲಿ ವಿವಾಹವಾಗಿದ್ದರು. ಅವರ ಪತ್ನಿ 2011ರ ಸೆಪ್ಟೆಂಬರ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಪತಿ ಮೊದಲಿನಿಂದಲೂ ಪತ್ನಿಯ ನಡತೆಯ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದ ಕಾರಣಕ್ಕೆ ಇಬ್ಬರ ನಡುವಿನ ಸಂಬಂಧ ಹಳಸಿತ್ತು. ಇದರಿಂದ, ಪತಿ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಆ ಅರ್ಜಿ ವಿಚಾರಣಾ ಹಂತದಲ್ಲಿದ್ದಾಗಲೇ, 2019ರಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದ ಪತಿ, ಪತ್ನಿ ಬೇರೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಮಗುವಿನ ನಿಜವಾದ ತಂದೆ ಯಾರೆಂದು ಪತ್ತೆ ಹಚ್ಚಲು ಡಿಎನ್‌ಎ ಪರೀಕ್ಷೆ ನಡೆಸಬೇಕೆಂದು ಕೋರಿದ್ದರು. ಪತ್ನಿಯ ಒಪ್ಪಿಗೆಯ ಮೇರೆಗೆ ಮಧ್ಯಂತರ ಅರ್ಜಿಯನ್ನು 2021ರಲ್ಲಿ ಮಾನ್ಯ ಮಾಡಿದ್ದ ನ್ಯಾಯಾಲಯವು ಮಗುವಿನ ಡಿಎನ್‌ಎ ಪರೀಕ್ಷೆಗೆ ಅನುಮತಿಸಿತ್ತು.
ದಂಪತಿಯ ರಕ್ತದ ಮಾದರಿಗಳನ್ನು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಪರೀಕ್ಷೆಯಲ್ಲಿ ಅರ್ಜಿದಾರರೇ ಮಗುವಿನ ತಂದೆ ಎನ್ನುವುದು ಸಾಬೀತಾಗಿತ್ತು. ವರದಿಗೆ ಆಕ್ಷೇಪಿಸಿದ್ದ ಅರ್ಜಿದಾರರು, ನ್ಯಾಯಾಲಯದ ನಿರ್ದೇಶನದಂತೆ ಎಫ್‌ಎಸ್‌ಎಲ್‌ನ ನಿರ್ದೇಶಕರು ಡಿಎನ್‌ಎ ಮಾದರಿ ಪರೀಕ್ಷೆಗೊಳಪಡಿಸಬೇಕಾಗಿತ್ತು. ಆದರೆ, ಅವರ ಅಧೀನ ವೈದ್ಯರು ಪರೀಕ್ಷೆಗೊಳಪಡಿಸಿದ್ದಾರೆ. ಆದ್ದರಿಂದ, ಮತ್ತೊಮ್ಮೆ ಡಿಎನ್‌ಎ ಪರೀಕ್ಷೆಗೊಳಪಡಿಸಬೇಕು ಎಂದು ಕೋರಿದ್ದರು. ಆ ಮನವಿಯನ್ನು ಕೌಟುಂಬಿಕ ನ್ಯಾಯಾಲಯ ತಿರಸ್ಕರಿಸಿತ್ತು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.