Karnataka HC
Karnataka HC

ಎನ್‌ಐಎ ಆರೋಪಗಳಿಂದ ಮುಕ್ತಗೊಳಿಸಲು ಕೋರಿದ್ದ ಡಾ. ಸಬೀಲ್‌ ಅಹಮದ್‌ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

ಬೆಂಗಳೂರಿನ ಪ್ರಕರಣದಲ್ಲಿ ಹೊರಿಸಲಾಗಿರುವ ಆರೋಪಗಳು ಈ ಹಿಂದೆ ದೆಹಲಿಯಲ್ಲಿನ ಪ್ರಕರಣವೊಂದರಲ್ಲಿ ನನ್ನ ವಿರುದ್ಧ ಹೊರಿಸಲಾದ ಆರೋಪದ ರೀತಿಯಲ್ಲೇ ಇದೆ. ದೆಹಲಿ ಪ್ರಕರಣದಲ್ಲಿ ನಾನು ಈಗಾಗಲೇ ದೋಷಮುಕ್ತಗೊಂಡಿದ್ದೇನೆ ಎಂದು ವಾದಿಸಿದ್ದ ಸಬೀಲ್‌.
Published on

ಹಿಂದೂ ಮುಖಂಡರು ಹಾಗೂ ಸರ್ಕಾರಿ ಅಧಿಕಾರಿಗಳ ಕೊಲೆಗೆ ಸಂಚು ರೂಪಿಸಿದ್ದೇನೆ ಎನ್ನುವ ಎನ್‌ಐಎ ದೋಷಾರೋಪದಿಂದ ತನ್ನನ್ನು ಮುಕ್ತಗೊಳಿಸಬೇಕು ಎಂದು ಬೆಂಗಳೂರಿನ ಡಾ.ಸಬೀಲ್‌ ಅಹಮದ್‌ ಅಲಿಯಾಸ್ ಮೋಟು ಡಾಕ್ಟರ್‌ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಈ ಸಂಬಂಧ ಡಾ.ಸಬೀಲ್‌ ಅಹಮದ್‌ (39) ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್ ಹಾಗೂ ನ್ಯಾ. ಜೆ.ಎಂ.ಖಾಜಿ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ಪ್ರಕಟಿಸಿದೆ.

"ಹಿಂದೂ ಸಮಾಜದ ಮುಖಂಡರು ಹಾಗೂ ಸರ್ಕಾರಿ ಅಧಿಕಾರಿಗಳ ಕೊಲೆಗೆ ಸಂಚು ರೂಪಿಸಲಾಗಿದೆ ಎಂದು ನನ್ನ ವಿರುದ್ಧ ಎನ್‌ಐಎ ಹೊರಿಸಿರುವ ದೋಷಾರೋಪಗಳಿಂದ ಬಿಡುಗಡೆ ಮಾಡಬೇಕು" ಎಂದು ಸಬೀಲ್‌ ಅವರು ತಮ್ಮ ಅರ್ಜಿಯಲ್ಲಿ ಕೋರಿದ್ದರು.

ನನ್ನ ವಿರುದ್ಧ ಬೆಂಗಳೂರಿನ ಪ್ರಕರಣದಲ್ಲಿ ಹೊರಿಸಲಾಗಿರುವ ಆರೋಪಗಳು ಮತ್ತು ಈ ಹಿಂದೆ ದೆಹಲಿಯಲ್ಲಿನ ಪ್ರಕರಣವೊಂದರಲ್ಲಿ ನನ್ನ ವಿರುದ್ಧ ಹೊರಿಸಲಾದ ಆರೋಪಗಳೆರಡೂ ಒಂದೇ ರೀತಿ ಇವೆ. ದೆಹಲಿಯ ಪ್ರಕರಣದಲ್ಲಿ ನಾನು ಈಗಾಗಲೇ ದೋಷಮುಕ್ತಗೊಂಡಿದ್ದೇನೆ. ಹೀಗಾಗಿ, ಏಕರೂಪದ ಆರೋಪಗಳಿಗೆ ಎರಡೆರಡು ಬಾರಿ ಸಿಆರ್‌ಪಿಸಿ ಆಡಿಯಲ್ಲಿ ವಿಚಾರಣೆ ನಡೆಸುವುದು ಕಾನೂನು ಬಾಹಿರ ಎಂದು ಸಬೀಲ್‌ ಪ್ರತಿಪಾದಿಸಿದ್ದರು.

ನ್ಯಾಯಾಲಯವು ಈ ವಾದವನ್ನು ತಳ್ಳಿಹಾಕಿದ್ದು, ‘ಅರ್ಜಿದಾರರ ವಿರುದ್ಧದ ದೆಹಲಿ ಮತ್ತು ಬೆಂಗಳೂರಿನ ಪ್ರಕರಣಗಳೆರಡೂ ಬೇರೆ ಬೇರೆ ಸ್ವರೂಪದ್ದವು. ಆರೋಪಿಯು ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್‌ ಎ ತೊಯ್ಬಾ (ಎಲ್‌ಇಟಿ) ಸದಸ್ಯನಾಗಿದ್ದು ಅರ್ಜಿ ವಜಾ ಮಾಡಬೇಕು’ ಎಂಬ ಪ್ರಾಸಿಕ್ಯೂಷನ್‌ ವಾದವನ್ನು ಮಾನ್ಯ ಮಾಡಿದೆ. ಎನ್‌ಐಎ ಪರ ಪಿ.ಪ್ರಸನ್ನ ಕುಮಾರ್ ಮತ್ತು ಆರೋಪಿ ಪರ ಹಿರಿಯ ವಕೀಲ ಕಿರಣ್‌ ಎಸ್‌.ಜವಳಿ ವಾದ ಮಂಡಿಸಿದ್ದರು. ಈ ಮೊದಲು ಸಬೀಲ್‌ ಸಲ್ಲಿಸಿದ್ದ ಅರ್ಜಿಯನ್ನು ನಗರದ ಎನ್‌ಐಎ ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು.  

ಸಬೀಲ್‌ ವಿರುದ್ಧ ಭಾರತೀಯ ದಂಡ ಸಂಹಿತೆ–1860ರ ಕಲಂ 153ಎ, 121ಎ, 120ಬಿ, 121, 122, 379, 153ಬಿ ಮತ್ತು 307, ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ–1959ರ ಕಲಂ 3 ಮತ್ತು 25 ಹಾಗೂ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ–1967ರ ಕಲಂ 10,12,13,15, 16, 18 ಮತ್ತು 20ರ ಅಡಿಯಲ್ಲಿ ಬಸವೇಶ್ವರ ನಗರ ಪೊಲೀಸ್‌ ಠಾಣೆಯಲ್ಲಿ 2012ರ ಆಗಸ್ಟ್‌ 29ರಂದು ದೂರು ದಾಖಲಾಗಿತ್ತು. ಈ ಪ್ರಕರಣವನ್ನು 2012ರ ನವೆಂಬರ್ 16ರಂದು ಎನ್‌ಐಎ ತನಿಖೆಗೆ ವಹಿಸಲಾಗಿತ್ತು.

Kannada Bar & Bench
kannada.barandbench.com