ಕರ್ತವ್ಯ ನಿರತ ಸಂಚಾರಿ ಪೊಲೀಸರ ಮೇಲೆ ಕಾರು ಹರಿಸಿದ ಆರೋಪ; ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ

‘ಪೊಲೀಸ್ ಅಧಿಕಾರಿಯ ಮೇಲೆ ಕಾರು ಚಲಾಯಿಸಿ ದುರಹಂಕಾರ ಪ್ರದರ್ಶಿಸಿದ ಆರೋಪಿಗೆ ರಿಯಾಯಿತಿ ತೋರಲಾಗದು’ ಎಂದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ.
Karnataka High Court
Karnataka High Court
Published on: 

ಕರ್ತವ್ಯ ನಿರತ ಸಂಚಾರಿ ಪೊಲೀಸ್ ಅಧಿಕಾರಿಯ ಮೇಲೆ ಕಾರು ಹರಿಸಿ ಗಾಯಗೊಳಿಸಿದ ಆರೋಪ ಎದುರಿಸುತ್ತಿರುವ ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ಈಚೆಗೆ ನಿರಾಕರಿಸಿದೆ.

“ಕಾರನ್ನು ಬೆದರಿಕೆ ಅಥವಾ ಹಿಂಸೆಯ ಸಾಧನವಾಗಿ ಪರಿವರ್ತಿಸಲು ಅನುಮತಿ ನೀಡಲಾಗುವುದಿಲ್ಲ. ಪ್ರಕರಣದಲ್ಲಿನ ಆರೋಪಗಳನ್ನು ಪರೀಕ್ಷಿಸದೆಯೇ ವಿಚಾರಣೆ ರದ್ದುಗೊಳಿಸಿದರೆ ಕಾನೂನಿನ ನಿಯಮವೇ ತನ್ನ ಅರ್ಥ ಕಳೆದುಕೊಳ್ಳುತ್ತದೆ” ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.

Justice M Nagaprasanna
Justice M Nagaprasanna

ತನ್ನ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ನಾಗರಭಾವಿಯ ರಾಮಾಂಜಲು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

“ಕಾನೂನುಬದ್ಧವಾಗಿ ತನ್ನ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಯ ಮೇಲೆ ಕಾರು ಚಲಾಯಿಸಿ ದುರಹಂಕಾರ ಪ್ರದರ್ಶಿಸಿರುವ ಆರೋಪಿಯ ನಡೆಗೆ ರಿಯಾಯಿತಿ ತೋರಲು ಸಾಧ್ಯವೇ ಇಲ್ಲ” ಎಂದು ನ್ಯಾಯಾಲಯ ಕಟುವಾಗಿ ನುಡಿದಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರ ರಾಮಾಂಜಲು ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶುರೆನ್ಸ್ ಕಂಪನಿಯಲ್ಲಿ ಜನರಲ್ ಮ್ಯಾನೇಜರ್ ಆಗಿದ್ದಾರೆ. 2021ರ ಅಕ್ಟೋಬರ್ 23ರಂದು ಅವರು ಹುಂಡೈ ಕ್ರೆಟಾ ಕಾರನ್ನು ಎಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದರು.

ಆ ಸಂದರ್ಭದಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುವವರನ್ನು ಪತ್ತೆಹಚ್ಚಿ ತಡೆಯುವ ಉದ್ದೇಶದಿಂದ ಸಂಚಾರಿ ಪೊಲೀಸರನ್ನು ವಿಶೇಷ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

ಎಚ್‌ಎಎಲ್ ವಿಮಾನ ನಿಲ್ದಾಣ ಸಂಚಾರಿ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಕಾರನ್ನು ತಡೆಯಲು ಮುಂದಾದಾಗ, ರಾಮಾಂಜಲು ವಾಹನ ನಿಲ್ಲಿಸದೆ ವೇಗವಾಗಿ ಮುಂದೆ ಚಲಾಯಿಸಿ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ ಎಂಬುದು ಆರೋಪ.

ಘಟನೆಯ ಮರುದಿನ ಹೆಡ್ ಕಾನ್‌ಸ್ಟೆಬಲ್ ದೂರು ದಾಖಲಿಸಿದ್ದರು. ತಾವು ಅಧಿಕೃತ ಕರ್ತವ್ಯ ನಿರ್ವಹಿಸುತ್ತಿದ್ದಾಗ ಕಾರನ್ನು ತಡೆಯಲು ಮುಂದಾದರೂ, ಚಾಲಕ ವಾಹನ ನಿಲ್ಲಿಸದೆ ತಮ್ಮ ಮೈಮೇಲೆ ಹರಿಸುವ ರೀತಿಯಲ್ಲಿ ಚಲಾಯಿಸಿದ್ದರಿಂದ ತೊಡೆಗಳು ಮತ್ತು ಪಾದಗಳಿಗೆ ಗಾಯಗಳಾಗಿವೆ ಎಂದು ದೂರಿನಲ್ಲಿ ಆರೋಪಿಸಿದ್ದರು.

ಅಲ್ಲದೆ, ಮದ್ಯಪಾನ ಮಾಡಿ ವಾಹನ ಚಲಾಯಿಸುವುದನ್ನು ಪತ್ತೆಹಚ್ಚಲು ಬಳಸುವ ಡಿಡಿ ಯಂತ್ರಕ್ಕೂ ಹಾನಿಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ದೂರಿನ ಆಧಾರದ ಮೇಲೆ ಎಚ್‌ಎಎಲ್ ಠಾಣೆ ಪೊಲೀಸರು ರಾಮಾಂಜಲು ವಿರುದ್ಧ ಐಪಿಸಿ ಸೆಕ್ಷನ್ 353 (ಸಾರ್ವಜನಿಕ ಸೇವಕನ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಲು ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ), 307 (ಕೊಲೆ ಯತ್ನ), 279 (ಅಜಾಗರೂಕ ಅಥವಾ ನಿರ್ಲಕ್ಷ್ಯದ ಚಾಲನೆ), 427 (ಹಾನಿ ಉಂಟುಮಾಡುವುದು) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸುವಂತೆ ರಾಮಾಂಜಲು ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯ ಮೇಲೆ ಕಾರು ಚಲಾಯಿಸಿದ ಗಂಭೀರ ಆರೋಪಗಳಿರುವ ಪ್ರಕರಣವನ್ನು ಈ ಹಂತದಲ್ಲೇ ರದ್ದುಗೊಳಿಸಲು ನ್ಯಾಯಾಲಯ ನಿರಾಕರಿಸಿ ಅರ್ಜಿಯನ್ನು ವಜಾಗೊಳಿಸಿದೆ. 

Attachment
PDF
Ramanjalu Vs State of Karnataka
Preview
Kannada Bar & Bench
kannada.barandbench.com