

ಕಳಪೆ ಗುಣಮಟ್ಟದ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ3 ಮಾತ್ರೆಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಔಷಧ ತಯಾರಿಕಾ ಸಂಸ್ಥೆ ಮತ್ತು ಅದರ ಪಾಲುದಾರರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ಈಚೆಗೆ ನಿರಾಕರಿಸಿದೆ.
ಬೆಂಗಳೂರಿನ ಸಹಾಯಕ ಔಷಧ ನಿಯಂತ್ರಕರು ತಮ್ಮ ವಿರುದ್ಧ ದಾಖಲಿಸಿರುವ ಖಾಸಗಿ ದೂರಿನ ಭಾಗವಾದ ಪ್ರಕರಣ ರದ್ದತಿ ಕೋರಿ ಮೆಸರ್ಸ್ ಲೈಫ್ ವಿಷನ್ ಹೆಲ್ತ್ಕೇರ್ ಮತ್ತು ಅದರ ವ್ಯವಸ್ಥಾಪಕ ಪಾಲುದಾರ ನವೀನ್ ಕುಮಾರ್ ಬನ್ಸಾಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ರಾಜೇಶ್ ರೈ ಕೆ ಅವರು ನವೆಂಬರ್ 2ರಂದು ವಜಾಗೊಳಿಸಿದ್ದಾರೆ.
“ಆರೋಪಗಳು ಸಾಬೀತಾದಲ್ಲಿ ಅವು ಸಾರ್ವಜನಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತವೆ. ಈ ಹಂತದಲ್ಲಿ ಅವುಗಳನ್ನು ಲಘುವಾಗಿ ತಳ್ಳಿಹಾಕಲು ಸಾಧ್ಯವಿಲ್ಲ” ಎಂದು ಹೈಕೋರ್ಟ್ ಹೇಳಿದೆ.
ಪ್ರಕರಣವು 2019ರ ಸೆಪ್ಟೆಂಬರ್ನಲ್ಲಿ ಕಂಪನಿ ತಯಾರಿಸಿದ್ದ 'ಇಂಪ್ಕಲ್ ಮಾತ್ರೆ' (ಕ್ಯಾಲ್ಸಿಯಂ ಒರೊಟೇಟ್ ವಿಥ್ ವಿಟಮಿನ್ ಡಿ3 ಟ್ಯಾಬ್ಲೆಟ್ಸ್ ಐಪಿ)ಗೆ ಸಂಬಂಧಿಸಿದೆ. ಎಲ್ಟಿಎ-2497 ಬ್ಯಾಚ್ ಸಂಖ್ಯೆಯ ಈ ಮಾತ್ರೆಗಳ ರಾಸಾಯನಿಕ ವಿಶ್ಲೇಷಣೆ ನಡೆಸಿದಾಗ, ವಿಶೇಷವಾಗಿ ವಿಟಮಿನ್ ಡಿ3 ಅಂಶಕ್ಕೆ ಸಂಬಂಧಿಸಿದಂತೆ ಅವು ನಿಗದಿತ ಗುಣಮಟ್ಟವನ್ನು ಹೊಂದಿಲ್ಲ ಎಂದು ವರದಿಯಾಗಿತ್ತು.
2020ರ ಆಗಸ್ಟ್ 28ರಂದು ಅಧಿಕಾರಿಗಳು ಈ ಪರೀಕ್ಷಾ ವರದಿಯ ಕುರಿತು ಕಂಪನಿಗೆ ಮಾಹಿತಿ ನೀಡಿದ್ದರು. ಇದಕ್ಕೆ ಮರುಪರೀಕ್ಷೆ ನಡೆಸುವಂತೆ ಕಂಪನಿ ಮನವಿ ಮಾಡಿತ್ತು. ಆದರೆ, 2021ರ ಏಪ್ರಿಲ್ 15ರಂದು ಮರುಪರೀಕ್ಷೆಗೆ ಕೋರಿಕೆ ಸಲ್ಲಿಸುವಷ್ಟರಲ್ಲಿ ಮಾತ್ರೆಗಳ ಅವಧಿ ಮುಗಿದಿತ್ತು. ಅವುಗಳ ಬಳಕೆಯ ಅವಧಿ 2021ರ ಫೆಬ್ರವರಿಯಲ್ಲೇ ಮುಕ್ತಾಯಗೊಂಡಿತ್ತು.
ಔಷಧ ಮತ್ತು ಸೌಂದರ್ಯವರ್ಧಕಗಳ ಕಾಐದೆ 1940ರ ಸೆಕ್ಷನ್ 23(4)(i)ರ ಪ್ರಕಾರ, ವಶಪಡಿಸಿಕೊಂಡ ಔಷಧದ ಮಾದರಿಯನ್ನು ತಕ್ಷಣವೇ ರಾಸಾಯನಿಕ ವಿಶ್ಲೇಷಣೆಗೆ ಕಳುಹಿಸಬೇಕಿತ್ತು. ಆದರೆ, ಮಾದರಿಯನ್ನು ವಶಪಡಿಸಿಕೊಂಡ ಎರಡು ದಿನಗಳ ನಂತರ ಕಳುಹಿಸಿರುವುದು ಕಾನೂನುಬಾಹಿರ ಎಂದು ಅರ್ಜಿದಾರರು ವಾದಿಸಿದ್ದರು. ಈ ವಿಳಂಬದಿಂದ ಕೇಂದ್ರ ಔಷಧ ಪ್ರಯೋಗಾಲಯದಲ್ಲಿ ಮರುಪರೀಕ್ಷೆ ಕೋರುವ ತಮ್ಮ ಶಾಸನಬದ್ಧ ಹಕ್ಕಿಗೆ ಧಕ್ಕೆಯಾಗಿದೆ ಎಂದೂ ಪ್ರತಿಪಾದಿಸಿದ್ದರು.
ಈ ವಾದವನ್ನು ತಿರಸ್ಕರಿಸಿರುವ ಹೈಕೋರ್ಟ್, 2020ರ ಫೆಬ್ರವರಿ 18ರಂದು ಮಾದರಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಫೆಬ್ರವರಿ 20ರಂದು ವಿಶ್ಲೇಷಣೆಗೆ ಕಳುಹಿಸಲಾಗಿದೆ ಎಂದು ಹೇಳಿದೆ.
'ತಕ್ಷಣವೇ' ಎಂಬ ಪದದ ಅರ್ಥ ಕಾಯಿದೆಯಡಿ ಅಗತ್ಯವಿರುವ ಇತರ ಪ್ರಕ್ರಿಯೆಗಳನ್ನು ಪೂರ್ಣಗೊಳಿಸದೆ ಮಾದರಿಯನ್ನು ಕೂಡಲೇ ಕಳುಹಿಸಬೇಕು ಎಂದಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
“ಹಾಲಿ ಪ್ರಕರಣದ ವಾಸ್ತವಾಂಶಗಳು ಮತ್ತು ಸನ್ನಿವೇಶಗಳನ್ನು ಪರಿಗಣಿಸಿದಾಗ, ವಶಪಡಿಸಿಕೊಂಡ ಔಷಧದ ಮಾದರಿಯನ್ನು ಎರಡು ದಿನಗಳೊಳಗೆ ರಾಸಾಯನಿಕ ವಿಶ್ಲೇಷಣೆಗೆ ಕಳುಹಿಸಿರುವುದನ್ನು ಅನಗತ್ಯ ಅಥವಾ ವಿವರಣೆಯಿಲ್ಲದ ವಿಳಂಬ ಎಂದು ಪರಿಗಣಿಸಲಾಗದು” ಎಂದು ನ್ಯಾಯಾಲಯ ಹೇಳಿದೆ.
ಇನ್ನು ಸಂಸ್ಥೆಯ ವ್ಯವಸ್ಥಾಪಕ ಪಾಲುದಾರ ಎಂಬ ಹುದ್ದೆಯಲ್ಲಿರುವ ಕಾರಣಕ್ಕೆ ಮಾತ್ರ ತಮ್ಮನ್ನು ವಿಚಾರಣೆಗೆ ಒಳಪಡಿಸಲಾಗದು ಎಂಬ ನವೀನ್ ಕುಮಾರ್ ಬನ್ಸಾಲ್ ಅವರ ವಾದವನ್ನೂ ನ್ಯಾಯಾಲಯ ತಿರಸ್ಕರಿಸಿದೆ. ದೂರು ಮತ್ತು ದಾಖಲೆಗಳು ಕಂಪನಿಯ ದೈನಂದಿನ ವ್ಯವಹಾರಗಳಲ್ಲಿ ಅವರ ಸಕ್ರಿಯ ಪಾತ್ರವಿದ್ದುದನ್ನು ಪ್ರಾಥಮಿಕವಾಗಿ ಸೂಚಿಸುತ್ತವೆ ಎಂದು ಅಭಿಪ್ರಾಯಪಟ್ಟಿದೆ.
ಆರೋಪಗಳ ಕುರಿತು ಪೂರ್ಣ ಪ್ರಮಾಣದ ವಿಚಾರಣೆ ನಡೆಯಬೇಕಾದ ಅಗತ್ಯವಿದೆ ಎಂದು ಹೇಳಿರುವ ಹೈಕೋರ್ಟ್, ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಲೈಫ್ ವಿಷನ್ ಹೆಲ್ತ್ಕೇರ್ ಮತ್ತು ಬನ್ಸಾಲ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.