ಮಾಜಿ ಸಂಸದ, ಬಿಜೆಪಿ ನಾಯಕ ಪ್ರತಾಪ್ ಸಿಂಹ ವಿರುದ್ಧದ ದ್ವೇಷ ಭಾಷಣ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ

ಮುಸ್ಲಿಮರ ವಿರುದ್ಧ ಕಲ್ಲು ತೂರಾಟ ಮತ್ತು ಪೆಟ್ರೋಲ್ ಬಾಂಬ್ ಬಳಕೆ ಕುರಿತು ಪ್ರತಾಪ್ ಸಿಂಹ ನೀಡಿದ್ದ ಹೇಳಿಕೆಗಳ ಬಗ್ಗೆ ತನಿಖೆ ಅಗತ್ಯವಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
Pratap Simha
Pratap Simha
Published on: 

ಹಿಂದೂ ಧಾರ್ಮಿಕ ಮೆರವಣಿಗೆಗಳ ಮೇಲೆ ಕಲ್ಲು ತೂರಾಟ ನಡೆಸುವ ಘಟನೆಗಳನ್ನು ಪ್ರಶ್ನಿಸಿ, ಹಿಂದೂಗಳು ಕೂಡ ಕಲ್ಲು ತೂರಾಟ ನಡೆಸಬಹುದು ಹಾಗೂ ಪೆಟ್ರೋಲ್ ಬಾಂಬ್ ತಯಾರಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿಕೆ ನೀಡಿದ್ದ ಮಾಜಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ಈಚೆಗೆ ನಿರಾಕರಿಸಿದೆ.

2024ರ ಸೆಪ್ಟೆಂಬರ್‌ನಲ್ಲಿ ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ ಮಾಡಿದ ಭಾಷಣದ ಅಂಶಗಳು ಗಲಭೆಗೆ ಪ್ರಚೋದನೆ ನೀಡಿದ ಮತ್ತು ಧಾರ್ಮಿಕ ಭಾವನೆಗಳಿಗೆ ಉದ್ದೇಶಪೂರ್ವಕವಾಗಿ ಧಕ್ಕೆ ತಂದ ಆರೋಪಗಳ ಕುರಿತು ತನಿಖೆ ನಡೆಸುವ ಅಗತ್ಯವಿದೆ ಎಂದು ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗಡೆ ಅವರ ಏಕಸದಸ್ಯ ಪೀಠ ಹೇಳಿದೆ.

Justice Anant Ramanath Hegde
Justice Anant Ramanath Hegde

ಕಾರ್ಯಕ್ರಮ ಆಯೋಜಿಸಿದ್ದ ಇತರ ಮೂವರು ಆರೋಪಿಗಳ ವಿರುದ್ಧದ ಪ್ರಕರಣವನ್ನು ನ್ಯಾಯಾಲಯ ರದ್ದುಗೊಳಿಸಿದೆ. ಪ್ರತಾಪ್ ಸಿಂಹ ಅವರು ವಿವಾದಾತ್ಮಕ ಹೇಳಿಕೆ ನೀಡುವಂತೆ ಆಯೋಜಕರು ಪ್ರಚೋದಿಸಿದ್ದರು ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ ಎಂದು ಪೀಠ ಹೇಳಿದೆ.

2024ರ ಸೆಪ್ಟೆಂಬರ್ 21ರಂದು ಗಣೇಶ ಮೂರ್ತಿಗಳ ವಿಸರ್ಜನೆ ದಿನದಂದು ಶಹಾಪುರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮ ನಡೆಸಲು ಆಯೋಜಕರು ಅನುಮತಿಯನ್ನೂ ಪಡೆದಿದ್ದರು.

ದೂರಿನಲ್ಲಿ ಉಲ್ಲೇಖಿಸಿರುವಂತೆ, ಭಾಷಣದ ವೇಳೆ ಪ್ರತಾಪ್ ಸಿಂಹ ಅವರು ಹಿಂದೂ ಧಾರ್ಮಿಕ ಮೆರವಣಿಗೆಗಳ ಮೇಲೆ ಕಲ್ಲು ತೂರಾಟ ನಡೆಸುವವರನ್ನು ಪ್ರಶ್ನಿಸಿದ್ದರು. ಈದ್ ಮಿಲಾದ್ ಮೆರವಣಿಗೆಗಳ ಸಂದರ್ಭದಲ್ಲಿ ಹಿಂದೂಗಳು ಕಲ್ಲು ತೂರಾಟ ನಡೆಸಿರುವ ಉದಾಹರಣೆಗಳನ್ನು ತೋರಿಸುವಂತೆ ಸವಾಲು ಹಾಕಿದ್ದರು.

ದೇಶದ ಶೇ.80ರಷ್ಟು ಜನಸಂಖ್ಯೆ ಹಿಂದೂಗಳಾಗಿದ್ದು, ಅವರೂ ಕೈಗೆ ಕಲ್ಲು ತೆಗೆದುಕೊಂಡರೆ ಏನಾಗಬಹುದು ಎಂದು ಪ್ರಶ್ನಿಸಿದ್ದರು. ಭಾರತ ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯ ಹೊಂದಿರುವಾಗ ಹಿಂದೂಗಳು ಪೆಟ್ರೋಲ್ ಬಾಂಬ್ ತಯಾರಿಸಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದ್ದರು ಎನ್ನಲಾಗಿದೆ.

ಜಾತಿ ಭೇದಗಳನ್ನು ಬದಿಗಿಟ್ಟು ಹಿಂದೂಗಳು ಒಗ್ಗಟ್ಟಾಗಬೇಕು. ಇಲ್ಲದಿದ್ದರೆ ಬಾಂಗ್ಲಾದೇಶದಲ್ಲಿ ಹಿಂದೂಗಳು ಎದುರಿಸುತ್ತಿರುವ ಪರಿಸ್ಥಿತಿಯಂತಹ ಅಪಾಯಗಳನ್ನು ಎದುರಿಸಬೇಕಾಗಬಹುದು ಎಂದು ಅವರು ಎಚ್ಚರಿಕೆ ನೀಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಸಂಬಂಧ ಸೆಪ್ಟೆಂಬರ್ 23, 2024ರಂದು ಸಲ್ಲಿಕೆಯಾದ ದೂರಿನ ಮೇರೆಗೆ ಶಹಾಪುರ ಪೊಲೀಸರು ಪ್ರತಾಪ್ ಸಿಂಹ ಹಾಗೂ ಕಾರ್ಯಕ್ರಮದ ಆಯೋಜಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 192 (ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು) ಮತ್ತು ಸೆಕ್ಷನ್ 299 (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದ ದುರುದ್ದೇಶಪೂರಿತ ಕೃತ್ಯ) ಅಡಿ ಎಫ್‌ಐಆರ್ ದಾಖಲಿಸಿದ್ದರು.

ಪ್ರಕರಣ ರದ್ದುಗೊಳಿಸುವಂತೆ ಪ್ರತಾಪ್ ಸಿಂಹ ಸೇರಿದಂತೆ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ತಮ್ಮ ಭಾಷಣದಲ್ಲಿ ಯಾವುದೇ ಅಪರಾಧದ ಅಂಶಗಳಿಲ್ಲ. ಅಲ್ಲದೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್) ಸೆಕ್ಷನ್ 173(3) ಅಡಿ ನಿಗದಿಪಡಿಸಿರುವ ಪ್ರಕ್ರಿಯೆಯನ್ನೂ ಪೊಲೀಸರು ಪಾಲಿಸಿಲ್ಲ ಎಂದು ವಾದಿಸಿದ್ದರು.

MV Anoo Kumar, ASPP
MV Anoo Kumar, ASPP

ಇದಕ್ಕೆ ಆಕ್ಷೇಪಿಸಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಎಂ ವಿ ಅನೂಪ್ ಕುಮಾರ್ ಅವರು ಪ್ರತಾಪ್ ಸಿಂಹ ಅವರ ಭಾಷಣವು ಕೋಮು ಸೌಹಾರ್ದತೆಗೆ ಧಕ್ಕೆ ತರುವ ಮತ್ತು ನಿರ್ದಿಷ್ಟ ಸಮುದಾಯದ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶ ಹೊಂದಿತ್ತು ಎಂದು ವಾದಿಸಿತ್ತು.

ವಾದ ಆಲಿಸಿದ ಹೈಕೋರ್ಟ್, ಪ್ರತಾಪ್ ಸಿಂಹ ಅವರ ಭಾಷಣದ ಉದ್ದೇಶ ಮತ್ತು ಅದರ ಹಿಂದಿನ ಮನಸ್ಥಿತಿಯನ್ನು ತನಿಖೆಯ ವೇಳೆ ಪರಿಶೀಲಿಸಬೇಕಿದೆ ಎಂದು ಹೇಳಿದೆ.

“ದೂರಿನಲ್ಲಿರುವ ಅಂಶಗಳು ಮತ್ತು ಅದರಲ್ಲೂ ವಿಶೇಷವಾಗಿ ಭಾಷಣದ ವಿಷಯಗಳನ್ನು ಗಮನಿಸಿದಾಗ, ಮೊದಲನೇ ಅರ್ಜಿದಾರ ವಿರುದ್ಧದ ಪ್ರಕರಣದ ಕುರಿತು ತನಿಖೆ ನಡೆಸುವ ಅಗತ್ಯವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಗಲಭೆ ಉಂಟು ಮಾಡುವ ಉದ್ದೇಶ ಅರ್ಜಿದಾರರಿಗೆ ಇತ್ತೇ ಎಂಬುದನ್ನು ತನಿಖೆಯ ಸಂದರ್ಭದಲ್ಲಿ ಪರಿಗಣಿಸಬೇಕಿದೆ” ಎಂದು ನ್ಯಾಯಾಲಯ ಹೇಳಿದೆ.

ಭಾಷಣದ ಬಳಿಕ ವಾಸ್ತವವಾಗಿ ಯಾವುದೇ ಗಲಭೆ ನಡೆದಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿದೆ. ಹೀಗಾಗಿ ಬಿಎನ್‌ಎಸ್ ಸೆಕ್ಷನ್ 192ರ ಮೊದಲ ಭಾಗ ಅನ್ವಯಿಸುವುದಿಲ್ಲ ಎಂದು ಹೇಳಿದೆ.

ಆದರೆ, ಗಲಭೆ ಸಂಭವಿಸದಿದ್ದರೂ ಆ ಸೆಕ್ಷನ್‌ನ ಎರಡನೇ ಭಾಗ ಅನ್ವಯಿಸುವ ಸಾಧ್ಯತೆಯಿದೆ ಎಂದು ಸ್ಪಷ್ಟಪಡಿಸಿದೆ.

“ಅಂತಹ ಗಲಭೆಗೆ ಕಾರಣವಾಗುವ ದುರುದ್ದೇಶಪೂರಿತ ಉದ್ದೇಶ ಅರ್ಜಿದಾರರಿಗೆ ಇತ್ತೇ ಎಂಬುದನ್ನು ತನಿಖೆ ನಡೆಸಬೇಕಿದೆ. ತನಿಖೆಯ ಆಧಾರದ ಮೇಲೆ ಸೂಕ್ತ ವರದಿ ಸಲ್ಲಿಸಬೇಕು” ಎಂದು ಪೀಠ ತಿಳಿಸಿದೆ.

ಅಲ್ಲದೆ, ಬಿಎನ್‌ಎಸ್ ಸೆಕ್ಷನ್ 299ರ ಅಡಿ ಅಪರಾಧದ ಮೂಲಭೂತ ಅಂಶಗಳು ದೂರಿನಲ್ಲಿ ವ್ಯಕ್ತವಾಗಿರುವುದರಿಂದ ಪ್ರತಾಪ್ ಸಿಂಹ ವಿರುದ್ಧ ತನಿಖೆ ಮುಂದುವರಿಸುವ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರ ಪರ ವಕೀಲ ಚೈತನ್ಯಕುಮಾರ್ ಚಂದ್ರಿಕಿ ವಾದ ಮಂಡಿಸಿದ್ದರು.

Attachment
PDF
Pratap Simha & others v. State of Karnataka
Preview