ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್‌ ಶೋಗೆ ತಡೆ ನೀಡಲು ಹೈಕೋರ್ಟ್‌ ನಕಾರ

ರೋಡ್‌ ಶೋನಲ್ಲಿ ಅಹಿತಕರ ಘಟನೆ ನಡೆದರೆ ಯಾವುದೇ ರಾಜಕೀಯ ಪಕ್ಷವಾದರೂ ಅದರ ಸಂಘಟಕರನ್ನು ಜವಾಬ್ದಾರನ್ನಾಗಿ ಮಾಡಲಾಗುವುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
PM Modi and Karnataka HC
PM Modi and Karnataka HC
Published on

ಕರ್ನಾಟಕ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಮತ್ತು ಭಾನುವಾರ ಬೆಂಗಳೂರಿನಲ್ಲಿ ನಡೆಸಲಿರುವ ಸುಮಾರು 32.5 ಕಿ ಮೀ ಉದ್ದದ ರೋಡ್‌ ಶೋ ತಡೆ ಹಿಡಿಯಲು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ನಿರಾಕರಿಸಿದೆ.

ಪ್ರಧಾನಿಯವರ ರೋಡ್‌ ಶೋ ಇಂದ ಸಾರ್ವಜನಿಕರಿಗೆ ಭಾರಿ ಸಮಸ್ಯೆಯಾಗಲಿದೆ ಎಂದು ಆಕ್ಷೇಪಿಸಿ ವಕೀಲ ಎನ್‌ ಪಿ ಅಮೃತೇಶ್‌ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಮಾರು ಎರಡು ತಾಸು ವಿಚಾರಣೆ ನಡೆಸಿ ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್‌ ಮತ್ತು ವಿಜಯಕುಮಾರ್‌ ಎ. ಪಾಟೀಲ್‌ ಅವರ ನೇತೃತ್ವದ ವಿಶೇಷ ರಜಾಕಾಲೀನ ವಿಭಾಗೀಯ ಪೀಠವು ಇತ್ಯರ್ಥಪಡಿಸಿತು.

“ಅಗತ್ಯವಾದವರನ್ನು ಪಕ್ಷಕಾರರನ್ನಾಗಿಸಿಲ್ಲ ಎಂದು ನಾವು ಅರ್ಜಿ ವಿಚಾರಣೆಗೆ ನಿರಾಕರಿಸಬಹುದಿತ್ತು. ಅದಾಗ್ಯೂ, ನಾಳೆಯ ಕಾರ್ಯಕ್ರಮವನ್ನು ನಿರ್ಬಂಧಿಸುವ ಯಾವುದೇ ಉದ್ದೇಶ ಹೊಂದಿಲ್ಲ ಎಂದು ಅರ್ಜಿದಾರರು ಹೇಳಿರುವ ಹಿನ್ನೆಲೆಯಲ್ಲಿ ಹಾಗೂ ಅವರು ನ್ಯಾಯಯುತ ನಿಯಂತ್ರಣ ಕ್ರಮ ಕೋರಿದ್ದಾರೆ. ಅರ್ಜಿಯಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅಂಶಗಳು ಇರುವುದರಿಂದ ನಾವು ಅಂಥ ಗಂಭೀರ ಕ್ರಮಕ್ಕೆ ಮುಂದಾಗಿಲ್ಲ. ಈ ಮೂಲಕ ಅರ್ಜಿಯನ್ನು ಇತ್ಯರ್ಥಪಡಿಸಲಾಗಿದೆ” ಎಂದು ಆದೇಶದಲ್ಲಿ ದಾಖಲಿಸಿತು.

“ರೋಡ್‌ ಶೋನಲ್ಲಿ ಅಹಿತಕರ ಘಟನೆ ನಡೆದರೆ ಯಾವುದೇ ರಾಜಕೀಯ ಪಕ್ಷವಾದರೂ ಸಂಘಟಕರನ್ನು ಜವಾಬ್ದಾರನ್ನಾಗಿ ಮಾಡಲಾಗುವುದು” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

“ಭಾರತದಲ್ಲಿ ಚುನಾವಣೆಯು ಹಬ್ಬದ ಸಂಭ್ರಮವನ್ನಾಗಿ ಆಚರಿಸುತ್ತಿದ್ದು, 1952ರ ಸಾರ್ವತ್ರಿಕ ಚುನಾವಣೆಯಿಂದಲೂ ರ್ಯಾಲಿಗಳನ್ನು ನಡೆಸಲಾಗುತ್ತಿದೆ. ತಮ್ಮ ಆಯ್ಕೆ ಮಾಡುವ ನಿಟ್ಟಿನಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ರಾಜಕೀಯ ರ್ಯಾಲಿಗಳು ಜ್ಞಾನ ಮತ್ತು ಮಾಹಿತಿ ರವಾನಿಸುವ ವಾಹಕವಾಗಿವೆ. ಲಿಲಿ ಥಾಮಸ್‌ ವರ್ಸಸ್‌ ಭಾರತ ಸರ್ಕಾರ ಪ್ರಕರಣದಲ್ಲಿ ಮಾಹಿತಿ ರವಾನೆಯ ಮಹತ್ವವನ್ನು ಸಾರಲಾಗಿದೆ. ಚುನಾವಣೆಯ ಸಂದರ್ಭದಲ್ಲಿ ರ್ಯಾಲಿಗಳನ್ನು ನಡೆಸಲು ಕೇರಳ ಮತ್ತು ಕಲ್ಕತ್ತಾ ಹೈಕೋರ್ಟ್‌ ಅನುಮತಿಸಿವೆ” ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಪಾರ್ಟಿ ಇನ್‌ ಪರ್ಸನ್‌ ವಕೀಲ ಎನ್‌ ಪಿ ಅಮೃತೇಶ್‌ ಅವರು “ಇದುವರೆಗೆ 36 ಕಿ ಮೀ ರೋಡ್‌ ಶೋ ಅನ್ನು ನಡೆಸಿಲ್ಲ. ಇದರಿಂದ ಕೆಲಸಕ್ಕೆ ಹೋಗುವವರು, ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳು, ಉದ್ಯಮ ಹಾಗೂ ಸಾಮಾನ್ಯ ಜನರ ಓಡಾಟಕ್ಕೆ ಭಾರಿ ಸಮಸ್ಯೆಯಾಗಲಿದೆ. ಸುಮಾರು 10 ಲಕ್ಷ ಕಾರ್ಯಕರ್ತರು ರೋಡ್‌ ಶೋ ನಲ್ಲಿ ಭಾಗಿಯಾಗಲಿದ್ದಾರೆ ಎಂದು ಬಿಜೆಪಿಯ ಮುಖಂಡರು ಹೇಳಿದ್ದಾರೆ. ಇದನ್ನು ನಿಭಾಯಿಸುವುದು ಕಷ್ಟ ಸಾಧ್ಯ. ಸಂಚಾರ ದಟ್ಟಣೆ ವ್ಯಾಪಕವಾಗಲಿದೆ. 3-6 ಕಿ ಮೀ ರೋಡ್‌ ಶೋ ಆದರೆ ಪರವಾಗಿಲ್ಲ” ಎಂದರು.

ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಆರ್‌ ಸುಬ್ರಹ್ಮಣ್ಯ ಅವರು “ಹಲವು ವರ್ಷಗಳಿಂದ ಪ್ರಚಾರದ ಭಾಗವಾಗಿ ಚುನಾವಣಾ ರ್ಯಾಲಿಗಳನ್ನು ನಡೆಸಲಾಗುತ್ತದೆ. ಇದುವರೆಗೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಚುನಾವಣೆ ಘೋಷಣೆಯಾದಾಗಿನಿಂದ 2,517 ರ್ಯಾಲಿಗಳು ನಡೆದಿದ್ದು, ಬೆಂಗಳೂರಿನಲ್ಲಿ 371 ರ್ಯಾಲಿಗಳು ನಡೆದಿವೆ. ಆದರೆ, ಒಂದೇ ಒಂದು ಅಹಿತಕರ ಘಟನೆ ವರದಿಯಾಗಿಲ್ಲ” ಎಂದರು.

ಜಿಲ್ಲಾ ಚುನಾವಣಾಧಿಕಾರಿ ಪ್ರತಿನಿಧಿಸಿದ್ದ ಹಿರಿಯ ವಕೀಲ ವಿಕ್ರಂ ಹುಯಿಲಗೋಳ ಅವರು “ಚುನಾವಣೆಯ ಸಂದರ್ಭದಲ್ಲಿ ರ್ಯಾಲಿ ನಡೆಸುವುದು ವಾಕ್‌ ಸ್ವಾತಂತ್ರ್ಯ ಮತ್ತು ಒಂದು ಕಡೆ ನೆರೆಯುವ ಹಕ್ಕಿನ ಭಾಗವಾಗಿದೆ. ಇದಕ್ಕೆ ಸಂವಿಧಾನದ 19ನೇ ವಿಧಿಯಡಿ ಹಕ್ಕು ಖಾತರಿಯಾಗಿದೆ. ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರೂಢಿಗತ ಆಧಾರದಲ್ಲಿ ಅರ್ಜಿ ಅಥವಾ ರೋಡ್‌ ಶೋಗೆ ಅನುಮತಿ ನೀಡುವುದನ್ನು ಪರಿಗಣಿಸಲಾಗುತ್ತದೆ. ನೀಟ್‌ ಪರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು ಶನಿವಾರ 26 ಕಿ ಮೀ ರೋಡ್‌ ಶೋ ಅನುಮತಿ ನೀಡಲಾಗುತ್ತದೆ. ಮೇ 7ರಂದು 6.5 ಕಿ ಮೀ ರೋಡ್‌ ಷೋಗೆ ಅನುಮತಿ ನೀಡಲಾಗುವುದು ಎಂದರು.

ಭಾರತೀಯ ಚುನಾವಣಾ ಆಯೋಗವನ್ನು ಪ್ರತಿನಿಧಿಸಿದ್ದ ವಕೀಲ ಶರತ್‌ ದೊಡ್ಡವಾಡ ಅವರು “ನೋಂದಾಯಿತ ರಾಜಕೀಯ ಪಕ್ಷಗಳನ್ನು ಪಕ್ಷಕಾರರನ್ನಾಗಿಸಿಲ್ಲ. ಹೀಗಾಗಿ, ಪರಿಹಾರ ಕೋರಲಾಗದು. ಚುನಾವಣೆಯ ಸಂದರ್ಭದಲ್ಲಿ ದೇಶಾದ್ಯಂತ ರ್ಯಾಲಿಗಳು ನಡೆಯುತ್ತವೆ” ಎಂದರು.

ಬೆಂಗಳೂರು ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿ ಅವರನ್ನು ಕುರಿತು ಪೀಠವು ರೋಡ್‌ ಶೋ ಸಂದರ್ಭದಲ್ಲಿ ಭಾವನೆಗಳನ್ನು ನಿಭಾಯಿಸುವುದಕ್ಕೆ ಯಾವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಪ್ರಶ್ನಿಸಿತು. ಇದಕ್ಕೆ ರೆಡ್ಡಿ ಅವರು ಸಭಿಕರ ಸ್ಕ್ರೀನಿಂಗ್‌, ಕಾಲ್ತುಳಿತ ತಪ್ಪಿಸಲು ಬ್ಯಾರಿಕೇಡ್‌ ಹಾಕುವುದು ಮತ್ತು ಸಂಚಾರದಲ್ಲಿ ಬದಲಾವಣೆ ಇತ್ಯಾದಿ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಾರ್ವಜನಿಕರಿಗೆ ಮಾಹಿತಿ ನೀಡಲು ಮಾಧ್ಯಮ, ಸಾಮಾಜಿಕ ಮಾಧ್ಯಮಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಯಾವುದಾದರೂ ಆಂಬುಲೆನ್ಸ್‌ ಸಿಲುಕಿಕೊಂಡರೆ ಅದನ್ನು ನಿಯಂತ್ರಣ ಕೊಠಡಿಗೆ ತಿಳಿಸಲಾಗುವುದು. ಈ ಮೂಲಕ ಆ ಹಾದಿಯನ್ನು ಮುಕ್ತಗೊಳಿಸಲಾಗುವುದು. ಸುರಕ್ಷಿತವಾಗಿ ರೋಡ್‌ ಶೋ ನಡೆಸಲು ಸಾಕಷ್ಟು ಸಿಬ್ಬಂದಿಯೂ ಇದ್ದಾರೆ ಎಂದು ರೆಡ್ಡಿ ಅವರು ಪೀಠಕ್ಕೆ ತಿಳಿಸಿದರು.

ರಾಜ್ಯ ಬಿಜೆಪಿ ವತಿಯಿಂದ ರೋಡ್‌ ಶೋ ನಡೆಸುವುದಕ್ಕೆ ನೀಡಿರುವ ಅನುಮತಿ, ಸಂಚಾರ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳಿಗೆ ಸಂಬಂಧಿಸಿದ ದಾಖಲೆ ಸಲ್ಲಿಸಲು ರಾಜ್ಯ ಸರ್ಕಾರ, ಪೊಲೀಸ್‌ ಮಹಾನಿರ್ದೇಶಕರು ಮತ್ತು ಬೆಂಗಳೂರು ಪೊಲೀಸ್‌ ಆಯುಕ್ತರಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ಬೆಂಗಳೂರಿನಲ್ಲಿ ರೋಡ್‌ ಶೋ ನಡೆಸಲು ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆಗೆ ಅನುಮತಿ ನೀಡದಂತೆ ಪೊಲೀಸ್‌ ಮಹಾನಿರ್ದೇಶಕರು ಮತ್ತು ಬೆಂಗಳೂರು ಪೊಲೀಸ್‌ ಆಯುಕ್ತರಿಗೆ ನಿರ್ದೇಶಿಸಬೇಕು. ರೋಡ್‌ ಶೋ ನಿರ್ಬಂಧ ಮತ್ತು ಫಲಿತಾಂಶ ಪ್ರಕಟವಾದ ಬಳಿಕ ವಿಜಯೋತ್ಸವ ನಡೆಸದಂತೆ ಸರ್ಕಾರ, ಪೊಲೀಸರು ಮತ್ತು ಚುನಾವಣಾ ಆಯೋಗಕ್ಕೆ ನಿರ್ದೇಶಿಸಬೇಕು. ಇದರಿಂದ ರಾಜಕೀಯ ಪಕ್ಷಗಳ ನಡುವಿನ ಕಿತ್ತಾಟಕ್ಕೆ ಅವಕಾಶವಿರುವುದಿಲ್ಲ. ಅಲ್ಲದೇ, ಸಮಾಜಘಾತುಕ ಶಕ್ತಿಗಳಿಂದ ಅಹಿತಕರ ಘಟನೆಗೆ ಅವಕಾಶ ಇರುವುದಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.

Also Read
ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್‌ ಶೋಗೆ ತಡೆ ನೀಡಲು ಕೋರಿಕೆ; ವಿಶೇಷ ಪೀಠದಿಂದ ವಿಚಾರಣೆ

ಬೆಂಗಳೂರಿನಲ್ಲಿ 36 ಕಿ ಮೀ ವ್ಯಾಪ್ತಿಯಲ್ಲಿ ಮೋದಿ ರೋಡ್‌ ಶೋ ನಡೆಸಲು ಉದ್ದೇಶಿಸಲಾಗಿದ್ದು, ಇದು ಮೂರು ಲೋಕಸಭಾ ಕ್ಷೇತ್ರಗಳನ್ನು ಒಳಗೊಳ್ಳಲಿದೆ. ಬೆಳಗ್ಗೆ 10 ಗಂಟೆಗೆ ರೋಡ್‌ ಶೋ ಆರಂಭವಾಗಲಿದ್ದು, 45 ವಿಧಾನಸಭಾ ಕ್ಷೇತ್ರಗಳನ್ನು ಇದು ಒಳಗೊಳ್ಳಲಿದೆ. ಸಂಜೆ 4ಕ್ಕೆ ಮತ್ತೆ ರೋಡ್‌ ಶೋ ಆರಂಭವಾಗಲಿದ್ದು, 13 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿದೆ. ಬೆಂಗಳೂರಿನ ಪ್ರಮುಖ 18 ವಿಧಾನಸಭಾ ಕ್ಷೇತ್ರಗಳಲ್ಲಿ ರೋಡ್‌ ಶೋ ಹಾದು ಹೋಗಲಿದ್ದು, ಇಲ್ಲಿ ಹಲವು ವಾಣಿಜ್ಯ ಮತ್ತು ಜನವಸತಿ ಪ್ರದೇಶಗಳು ಇವೆ. ರೋಡ್‌ ಶೋನಲ್ಲಿ 10 ಲಕ್ಷಕ್ಕೂ ಹೆಚ್ಚು ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಸಂಸದ ಪಿ ಸಿ ಮೋಹನ್‌ ಹೇಳಿದ್ದಾರೆ. ಇದರಿಂದ ಭಾರಿ ಸಂಚಾರ ದಟ್ಟಣೆ ಉಂಟಾಗಲಿದ್ದು, ಜನರು ಓಡಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದರಿಂದ ಉಂಟಾಗುವ ನಷ್ಟವನ್ನು ರಾಜಕೀಯ ಪಕ್ಷಗಳು ತುಂಬಿಕೊಡುವುದಿಲ್ಲ ಎಂದು ವಿವರಿಸಲಾಗಿದೆ.

ಬೀದಿ ಬದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ಕಚೇರಿಗೆ ಹೋಗುವವರಿಗೆ ಭಾರಿ ಸಮಸ್ಯೆಯಾಗಲಿದೆ. ಹೀಗಾಗಿ ರೋಡ್‌ ಶೋ ನಿರ್ಬಂಧಿಸಬೇಕು ಎಂದು ಕೋರಲಾಗಿತ್ತು.

Kannada Bar & Bench
kannada.barandbench.com