
ಆರ್‌ಸಿಬಿ ವಿಜಯೋತ್ಸವದ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬುಧವಾರ ನಡೆದ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಗುರುವಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ಪೀಠವು ಈ ವಿಷಯದ ಕುರಿತು ರಾಜ್ಯ ಸರ್ಕಾರದಿಂದ ವಸ್ತುಸ್ಥಿತಿ ವರದಿಯನ್ನು ಕೋರಿದೆ. ಪ್ರಕರಣದ ಮುಂದಿನ ವಿಚಾರಣೆ ಜೂನ್ 10, ಮಂಗಳವಾರ ನಡೆಯಲಿದೆ.
ಘಟನೆಯ ಬಗ್ಗೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಅರ್ಜಿಗಳು ದಾಖಲಾಗಿವೆ. ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಪಕ್ಷಪಾತವಿಲ್ಲದ ತನಿಖೆ ನಡೆಸಬೇಕೆಂದು ಪಿಐಎಲ್ ಒಂದರಲ್ಲಿ ಕೋರಲಾಗಿದೆ.
"ಘಟನೆಯ ಗಂಭೀರತೆ ಮತ್ತು ವ್ಯವಸ್ಥಿತ ಆಡಳಿತಾತ್ಮಕ ವೈಫಲ್ಯಗಳ ಸಾಧ್ಯತೆಯನ್ನು ಗಮನದಲ್ಲಿರಿಸಿಕೊಂಡು, ಗೌರವಾನ್ವಿತ ನ್ಯಾಯಾಲಯವು ಹಾಲಿ ನ್ಯಾಯಮೂರ್ತಿಯೊಬ್ಬರ ಮೇಲ್ವಿಚಾರಣೆಯಲ್ಲಿ ನಿಷ್ಪಕ್ಷಪಾತ ನ್ಯಾಯಾಂಗ ತನಿಖೆ ನಡೆಸುವುದು ಅತ್ಯಗತ್ಯ" ಎಂದು ವಕೀಲ ಲೋಹಿತ್ ಜಿ ಹನುಮಾಪುರ ಅವರು ತಮ್ಮ ವಕೀಲ ಲೋಹಿತಾಶ್ವ ಬಣಕರ್ ಮೂಲಕ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೋರಿದ್ದಾರೆ.
ಇದಲ್ಲದೆ, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ರಾಜ್ಯ ಖಾತೆ ಸಚಿವೆಯಾದ ಶೋಭಾ ಕರಂದ್ಲಾಜೆ ಅವರು ಸಹ ಈ ವಿಷಯದ ಬಗ್ಗೆ ಮುಖ್ಯ ನ್ಯಾಯಮೂರ್ತಿಯವರಿಗೆ ಪತ್ರ ಬರೆದು ಸ್ವಯಂಪ್ರೇರಿತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.
ಇಂದು ಬೆಳಗ್ಗೆ ಘಟನೆಯ ಬಗ್ಗೆ ಹಂಗಾಮಿ ಸಿಜೆ ವಿ ಕಾಮೇಶ್ವರ ರಾವ್ ಅವರ ಪೀಠದ ಮುಂದೆ ಉಲ್ಲೇಖಿಸಲಾಯಿತು. ಈ ವೇಳೆ ನ್ಯಾಯಾಲಯವು ಮಧ್ಯಾಹ್ನ ವಿಚಾರಣೆ ನಡೆಸುವುದಾಗಿ ತಿಳಿಸಿತ್ತು. ಇದೇ ವೇಳೆ ಕಾಲ್ತುಳಿತದ ನಂತರ ಇಲ್ಲಿಯವರೆಗೆ ತೆಗೆದುಕೊಂಡಿರುವ ಕ್ರಮಗಳ ಕುರಿತು ವಿವರಗಳನ್ನು ಸಲ್ಲಿಸುವುದಾಗಿ ರಾಜ್ಯದ ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ ಅವರು ಪೀಠಕ್ಕೆ ವಿವರಿಸಿದರು.
ಪ್ರಕರಣದ ವಿಚಾರಣೆ ಮಧ್ಯಾಹ್ನ ಆರಂಭವಾದಾಗ ನೆರೆದಿದ್ದ ಹಲವು ವಕೀಲರು ಕಾಲ್ತುಳಿದ ದುರಂತದ ಬಗ್ಗೆ ಸ್ವತಂತ್ರ ತನಿಖೆಗೆ ಆದೇಶಿಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು. ಹಿರಿಯ ವಕೀಲ ಅರುಣ ಶ್ಯಾಮ್ ವಾದ ಮಂಡಿಸಿ ರಾಜ್ಯ ಸರ್ಕಾರವು ಘಟನಾ ಸ್ಥಳದಲ್ಲಿ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಳ್ಳದೆ ಇದ್ದ ಬಗ್ಗೆ ಬೆರಳು ಮಾಡಿದರು. ಅಲ್ಲದೇ ಮ್ಯಾಜಿಸ್ಟೀರಿಯಲ್ ವಿಚಾರಣೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
"ಘಟನಾ ಸ್ಥಳದಲ್ಲಿ ರಾಜ್ಯ ಸರ್ಕಾರವು ಆಂಬ್ಯುಲೆನ್ಸ್ ಇತ್ಯಾದಿಗಳನ್ನು ಎಲ್ಲಿ ನಿಯೋಜಿಸಿತ್ತು ಎಂಬುದನ್ನು ಸ್ಪಷ್ಟಪಡಿಸಲಿ. ಜನಜಂಗುಳಿಯನ್ನು ನಿಯಂತ್ರಿಸಬೇಕಾದ ವ್ಯಕ್ತಿಯನ್ನೇ ಈಗ ವಿಚಾರಣೆ ನಡೆಸಲು ನಿಯೋಜಿಸಲಾಗಿದೆ. ನ್ಯಾಯಾಲಯವು ಸ್ವತಂತ್ರ ತನಿಖಾ ಸಂಸ್ಥೆಯನ್ನು ನೇಮಿಸುವಂತೆ ಆದೇಶಿಸಬೇಕು" ಎಂದು ಶ್ಯಾಮ್ ವಾದಿಸಿದರು.
ಕಾರ್ಯಕ್ರಮದ ಆಯೋಜನೆಯ ಬಗ್ಗೆ, ತರಾತುರಿಯ ಬಗ್ಗೆಯೂ ನೆರೆದಿದ್ದ ವಕೀಲರು ನ್ಯಾಯಾಲಯದ ಗಮನಸೆಳೆದರು. ಕಾರ್ಯಕ್ರಮವನ್ನು ಯಾರು ನಡೆಸಲು ನಿರ್ಧರಿಸಿದರು, ಅದು ರಾಜ್ಯ ಸರ್ಕಾರವೇ ಅಥವಾ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಈ ನಿರ್ಧಾರ ಕೈಗೊಂಡಿತ್ತೇ? ಸಾರ್ವಜನಿಕರಿಗೆ ಈ ಪ್ರಶ್ನೆಗಳಿಗೆ ಉತ್ತರಗಳು ಬೇಕು ಎಂದರು.
ಇದೇ ವೇಳೆ, ಖಾಸಗಿ ಸಂಸ್ಥೆಯೊಂದರ ಪ್ರಾಯೋಜತ್ವದ ತಂಡದ ಗೆಲುವನ್ನು ಸರ್ಕಾರವು ಸಂಭ್ರಮಿಸಲು ಮುಂದಾದ ಬಗ್ಗೆಯೂ ಆಕ್ಷೇಪಗಳು ಕೇಳಿ ಬಂದವು. ವಕೀಲರೊಬ್ಬರು, "ದೇಶ ಅಥವಾ ರಾಜ್ಯಕ್ಕಾಗಿ ಆಡದ ಆಟಗಾರರನ್ನು ಸನ್ಮಾನಿಸಲು ರಾಜ್ಯ ಸರ್ಕಾರವು ಹೊಂದಿರುವ ಬಾಧ್ಯತೆಯಾದರೂ ಏನು? ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣ - ಹೀಗೆ ಎರಡು ಸ್ಥಳಗಳಲ್ಲಿ ಕಾರ್ಯಕ್ರಮವನ್ನು ಏಕೆ ಆಯೋಜಿಸಲಾಯಿತು? ರಾಜ್ಯವು ತೆಗೆದುಕೊಂಡ ಸುರಕ್ಷತಾ ಕ್ರಮಗಳೇನು?" ಎಂದು ಪೀಠದ ಮುಂದೆ ಪ್ರಶ್ನೆಗಳನ್ನಿರಿಸಿದರು.
ಏತನ್ಮಧ್ಯೆ, ಈ ವಿಚಾರದಲ್ಲಿ ರಾಜ್ಯವು ಪ್ರತಿಕೂಲ ಧೋರಣೆ ಅನುಸರಿಸುತ್ತಿಲ್ಲ ಎಂದು ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ನ್ಯಾಯಾಲಯಕ್ಕೆ ಸ್ಪಷ್ಟನೆ ನೀಡಿದರು. ಅಲ್ಲದೆ, ಮ್ಯಾಜಿಸ್ಟೀರಿಯಲ್ ವಿಚಾರಣೆಯನ್ನು ಸಮರ್ಥಿಸಿಕೊಂಡ ಅವರು, ಈ ಬಗೆಯ ವಿಚಾರಣೆ ತ್ವರಿತವಾಗಿ ನಡೆಯುವುದರಿಂದ ಹಾಗೂ 15 ದಿನಗಳಲ್ಲಿ ವರದಿಯನ್ನು ಸಲ್ಲಿಸಬಹುದಾದ್ದರಿಂದ ಮ್ಯಾಜಿಸ್ಟೀರಿಯಲ್ ವಿಚಾರಣೆಗೆ ಆದೇಶಿಸಲಾಗಿದೆ ಎಂದು ಹೇಳಿದರು.
ವಿಚಾರಣಾ ಅಧಿಕಾರಿಗೆ ಮಾಹಿತಿ ನೀಡಲು ಸಾರ್ವಜನಿಕರು ಮತ್ತು ಸಾಕ್ಷಿಗಳನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದರು. "ನಾವು ಎಲ್ಲವನ್ನೂ ಪೀಠದ ಮುಂದಿರಿಸುತ್ತೇವೆ, ವಿಡಿಯೋ ರೆಕಾರ್ಡ್ ಮಾಡುತ್ತೇವೆ. ಏನನ್ನೂ ಮರೆಮಾಚುವ ಪ್ರಶ್ನೆಯೇ ಇಲ್ಲ" ಎಂದು ಎಜಿ ನ್ಯಾಯಾಲಯಕ್ಕೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನ್ಯಾಯಾಲಯವು, ಕಾಲ್ತುಳಿತ ಅಥವಾ ಅಂತಹ ಘಟನೆಗಳ ಸಾಧ್ಯತೆಯನ್ನು ಕಡಿಮೆ ಮಾಡಲು ಸರ್ಕಾರವು ಪ್ರಮಾಣಿತ ಕಾರ್ಯಾಚರಣಾ ಶಿಷ್ಟಾಚಾರ (ಎಸ್‌ಒಪಿ) ಹೊಂದುವುದು ಮುಖ್ಯ ಎಂದು ಒತ್ತಿ ಹೇಳಿತು. ಸಮೀಪದಲ್ಲಿಯೇ ಆಂಬ್ಯುಲೆನ್ಸ್‌ಗಳ ವ್ಯವಸ್ಥೆ ಮಾಡುವುದು, ಹತ್ತಿರದ ಆಸ್ಪತ್ರೆಗಳ ಮಾಹಿತಿ ಸುಲಭವಾಗಿ ಲಭ್ಯವಿರುವಂತೆ ನೋಡಿಕೊಳ್ಳುವುದು ಮುಂತಾದ ಕ್ರಮಗಳನ್ನು ಇದು ಒಳಗೊಳ್ಳಬೇಕು ಎಂದು ತಿಳಿ ಹೇಳಿತು.
ಈ ಸಂದರ್ಭದಲ್ಲಿ ಉತ್ತರಿಸಿದ ಎಜಿ, ಘಟನಾ ಸ್ಥಳದಲ್ಲಿ ಆಂಬ್ಯುಲೆನ್ಸ್‌ಗಳಿದ್ದವು. ಆದರೆ ಸುಮಾರು 30,000 ಜನರಿಗೆ ಮಾತ್ರ ಸ್ಥಳಾವಕಾಶ ಸಾಮರ್ಥ್ಯವಿರುವ ಕ್ರೀಡಾಂಗಣದ ಹೊರಗೆ 2.5 ಲಕ್ಷಕ್ಕೂ ಹೆಚ್ಚು ಜನ ಅನಿರೀಕ್ಷಿತವಾಗಿ ನೆರೆದರು ಎಂದರು.
ಈ ಪ್ರಮಾಣದಲ್ಲಿ ಜನ ನೆರೆದಿದ್ದರಿಂದ ಸ್ಥಳದಲ್ಲಿ ಆಂಬ್ಯುಲೆನ್ಸ್‌ಗಳು ಸಾಕಾಗಲಿಲ್ಲ. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ನಿಭಾಯಿಸಲು ಕ್ರಮಗಳನ್ನು ತೆಗೆದುಕೊಳ್ಳುವತ್ತ ರಾಜ್ಯವು ಗಮನಹರಿಸಲಿದೆ ಎಂದು ಅವರು ಭರವಸೆ ನೀಡಿದರು. ಘಟನೆಯನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ವಿಷಯದಲ್ಲಿ ರಾಜ್ಯವು ಪ್ರತಿಕೂಲ ನಿಲುವು ತೆಳೆಯುತ್ತಿಲ್ಲ. ಪ್ರಕರಣವು ಕೆಸರೆರಚಾಟಕ್ಕೆ ಕಾರಣವಾಗಬಾರದು ಎಂದು ಹೇಳಿದರು.
ಅಂತಿಮವಾಗಿ ನ್ಯಾಯಾಲಯವು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದ ಪ್ರಕರಣದ ಕುರಿತು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಲು ನಿರ್ಧರಿಸಿತು.
ಹಿನ್ನೆಲೆ: ಅಹಮದಾಬಾದ್‌ನಲ್ಲಿ ಮಂಗಳವಾರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸ್ಪರ್ಧೆಯಲ್ಲಿ ಅಂತಿಮ ಪಂದ್ಯ ಗೆದ್ದು ಪ್ರಶಸ್ತಿ ಪಡೆದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕ್ರಿಕೆಟ್ ತಂಡ ಬುಧವಾರ ಬೆಂಗಳೂರಿಗೆ ಆಗಮಿಸಿತ್ತು. ತಂಡವನ್ನು ಸ್ವಾಗತಿಸಲು ಬೃಹತ್ ಪ್ರಮಾಣದಲ್ಲಿ ಆರ್‌ಸಿಬಿ ಅಭಿಮಾನಿಗಳು, ಕುತೂಹಲಿಗಳು ಸೇರಿದ್ದರು. 18 ವರ್ಷಗಳ ಕಾಯುವಿಕೆಯ ನಂತರ ಆರ್‌ಸಿಬಿ ಪ್ರಶಸ್ತಿ ಗೆದ್ದಿದ್ದು ಅಭಿಮಾನಿಗಳಲ್ಲಿ ಉನ್ಮಾದಕ್ಕೆ ಕಾರಣವಾಗಿತ್ತು.
ಗೆದ್ದು ಬಂದಿರುವ ತಂಡವನ್ನು ಸ್ವಾಗತಿಸುವಲ್ಲಿ ಕಾರ್ಯಕ್ರಮವನ್ನು ಎಲ್ಲಿ, ಹೇಗೆ ಆಯೋಜಿಸಬೇಕು ಎನ್ನುವ ವಿಚಾರದಲ್ಲಿ ಗೊಂದಲಗಳೆದ್ದಿದ್ದವು. ಅಂತಿಮವಾಗಿ ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ಆಟಗಾರರನ್ನು ಸನ್ಮಾನಿಸುವ, ಆನಂತರ ಅವರನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಮತ್ತೊಮ್ಮೆ ಅಭಿನಂದಿಸುವ ಕಾರ್ಯಕ್ರಮಗಳು ನಿಗದಿಯಾಗಿದ್ದವು. ಆದರೆ, ನಿರೀಕ್ಷೆಗೂ ಮೀರಿ ಎರಡೂ ಕಡೆ ಜನಸಮೂಹ ನೆರೆಯಿತು. ಚಿನ್ನಸ್ವಾಮಿ ಕ್ರೀಡಾಂಗಣ ಭರ್ತಿಯಾಗಿ, ಹೊರಗೆ ಲಕ್ಷಾಂತರ ಜನರು ನೆಚ್ಚಿನ ಆಟಗಾರರನ್ನು ನೋಡಲು ಕಾತರದಿಂದ ಕಾಯತೊಡಗಿದರು. ಈ ವೇಳೆ ಕ್ರೀಡಾಂಗಣದ ಪ್ರವೇಶ ದ್ವಾರಗಳಲ್ಲಿ ಸಂಭವಿಸಿದ ನೂಕು ನುಗ್ಗಲಿನಲ್ಲಿ ಹನ್ನೊಂದು ಜನ ಮೃತಪಟ್ಟು, ಐವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡರು.
ಘಟನೆಯಲ್ಲಿ ಮೃತರಾದವರ ಕುಟುಂಬಗಳಿಗೆ ಸರ್ಕಾರ ತಲಾ ಹತ್ತು ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿತು. ಅಲ್ಲದೆ, ಘಟನೆಗೆ ಕಾರಣವಾದ ಅಂಶಗಳ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿಯವರಿಂದ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿತು. ಹದಿನೈದು ದಿನಗಳಲ್ಲಿ ವರದಿ ಸಲ್ಲಿಸಲು ಸೂಚಿಸಿತು.