ಮುಸ್ಲಿಮ್‌ ಪ್ರಿಯಕರನ ಜೊತೆ ಬದುಕಲು ಬಯಸಿದ ಪುತ್ರಿಯ ಮಾನಸಿಕ ಆರೋಗ್ಯ ಮೌಲ್ಯಮಾಪನ ಕೋರಿದ ತಾಯಿ ಅರ್ಜಿ ವಜಾ

“ನನ್ನ ತಂದೆ ಮತ್ತು ತಾಯಿಯು ಆರ್‌ಎಸ್‌ಎಸ್‌ನವರನ್ನು ಭೇಟಿ ಮಾಡಿಸಿದ್ದು, ಪ್ರಿಯತಮನ ವಿರುದ್ದ ಪತ್ರ ಬರೆಸಿದ್ದರು. ಪತ್ರದಲ್ಲಿ ಬರೆದಿರುವ ಮತಾಂತರ ಮತ್ತು ಅತ್ಯಾಚಾರ ಆರೋಪ ಯಾವುದೂ ಸತ್ಯವಲ್ಲ” ಎಂದ ಯುವತಿ.
Mental Health, Karnataka High Court
Mental Health, Karnataka High Court
Published on

ಮುಸ್ಲಿಮ್‌ ಸಮುದಾಯದ ಪ್ರಿಯಕರನ ಜೊತೆ ಬದುಕಲು ನಿಶ್ಚಿಯಿಸಿರುವ 21 ವರ್ಷದ ಪುತ್ರಿಯ ಮಾನಸಿಕ ಆರೋಗ್ಯ ಮೌಲ್ಯಮಾಪನಕ್ಕೆ ಕೋರಿದ ತಾಯಿಯ ಮನವಿಯನ್ನು ಕರ್ನಾಟಕ ಹೈಕೋರ್ಟ್‌ ಮಂಗಳವಾರ ತಿರಸ್ಕರಿಸಿದೆ.

ಪುತ್ರಿ ನಾಪತ್ತೆಯಾಗಿರುವುದರಿಂದ ಆಕೆಯನ್ನು ಪತ್ತೆ ಮಾಡಲು ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಕೋರಿ ತಾಯಿ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸೂರಜ್‌ ಗೋವಿಂದರಾಜ್‌ ಮತ್ತು ಡಾ. ಕೆ ಮನ್ಮಥ ರಾವ್‌ ಅವರ ರಜಾಕಾಲೀನ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

Justices Suraj Govindaraj and K Manmadha Rao
Justices Suraj Govindaraj and K Manmadha Rao

“ಪುತ್ರಿಯು ಸ್ವಚ್ಛೆಯಿಂದ ಪ್ರಿಯತಮನ ಜೊತೆ ವಾಸಿಸುತ್ತಿರುವುದಾಗಿ ಸ್ಪಷ್ಟಪಡಿಸಿರುವುದರಿಂದ, ವಯಸ್ಕ ಮಹಿಳೆಯ ಒಪ್ಪಿಗೆಗೆ ವಿರುದ್ಧವಾಗಿ ಮಾನಸಿಕ ಆರೋಗ್ಯ ಮೌಲ್ಯಮಾಪನ ನಡೆಸಲಾಗದು” ಎಂದು ಪೀಠ ಆದೇಶಿಸಿತು.

“ನೀವು (ತಾಯಿ) ಕೇಳುತ್ತೀರಿ ಎಂದ ಮಾತ್ರಕ್ಕೆ ಯಾಕೆ ಆಕೆ ಮಾನಸಿಕ ಆರೋಗ್ಯ ತಪಾಸಣೆಗೆ ಒಳಗಾಗಬೇಕು? ಮಾನಸಿಕ ಆರೋಗ್ಯ ಕಾಯಿದೆಯ ಅಡಿ ನೀವು ಮನವಿ ಮಾಡಿ, ಪ್ರಕ್ರಿಯೆ ಪಾಲಿಸಬೇಕು. ಇಲ್ಲವಾದಲ್ಲಿ ನಾವು ನಿಮ್ಮ ಕೋರಿಕೆಯನ್ನು ಒಪ್ಪಲಾಗದು” ಎಂದು ಪೀಠ ಹೇಳಿತು.

ನ್ಯಾಯಾಲಯದ ಮುಂದೆ ಹಾಜರಾದ ಯುವತಿಯು ತನ್ನ ಪೋಷಕರು ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಕೆಲವರು ಒತ್ತಾಯಪಡಿಸಿದ್ದರಿಂದ ತನ್ನ ಪ್ರಿಯತಮನ ವಿರುದ್ಧ ಈ ಹಿಂದೆ ಪತ್ರ ಬರೆದಿದ್ದೆ ಎಂದು ಹೇಳಿದರು.

“ಭಾರಿ ಒತ್ತಡ ಹಿನ್ನೆಲೆಯಲ್ಲಿ ಪತ್ರ (ಪ್ರಿಯತಮ ಅತ್ಯಾಚಾರ ಮಾಡಿ, ಮತಾಂತರಕ್ಕೆ ಒತ್ತಾಯಿಸಿದ್ದಾನೆ) ಬರೆದಿದ್ದೆ. ನನ್ನ ತಂದೆ ಮತ್ತು ತಾಯಿಯು ಆರ್‌ಎಸ್‌ಎಸ್‌ನವರನ್ನು ಭೇಟಿ ಮಾಡಿಸಿದ್ದು, ಆ ಪತ್ರ ಬರೆಸಿದ್ದರು. ಪತ್ರದಲ್ಲಿ ಬರೆದಿರುವ ಮತಾಂತರ ಮತ್ತು ಅತ್ಯಾಚಾರ ಆರೋಪ ಯಾವುದೂ ಸತ್ಯವಲ್ಲ. ನನಗೆ ಬೆದರಿಕೆ ಹಾಕಿ, ಆ ಪತ್ರ ಬರೆಯುವಂತೆ ಮಾಡಿದ್ದರು” ಎಂದು ಹೇಳಿದಳು. ಇದನ್ನು ಪರಿಗಣಿಸಿದ ನ್ಯಾಯಾಲಯವು ಮಾನಸಿಕ ಆರೋಗ್ಯ ಮೌಲ್ಯಮಾಪನಕ್ಕೆ ಸ್ಪಷ್ಟವಾಗಿ ನಿರಾಕರಿಸಿತು.

ವಯಸ್ಕಳಾದ ಪುತ್ರಿಯು ತನ್ನ ಪ್ರಿಯತಮನ ಜೊತೆ ಸ್ವಚ್ಛೆಯಿಂದ ಬದುಕಲು ಬಯಸಿರುವುದರಿಂದ ನ್ಯಾಯಾಲಯವು ಮಧ್ಯಪ್ರವೇಶಿಸಲಾಗದು ಎಂದು ಪೀಠ ಆದೇಶಿಸಿತು.

“ಸ್ವಚ್ಛೆಯಿಂದ ಪ್ರಿಯಕರನ ಜೊತೆ ಬದುಕಲು ನಾಪತ್ತೆಯಾಗಿದ್ದಾರೆ ಎನ್ನಲಾದ ಪುತ್ರಿ ಬಯಸಿದ್ದಾಳೆ. ಹೀಗಾಗಿ, ಇಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲು ಯಾವುದೇ ಆಧಾರವಿಲ್ಲ. ಪುತ್ರಿಯ ಮಾನಸಿಕ ಆರೋಗ್ಯ ತಪಾಸಣೆಗೆ ತಾಯಿ ಕೋರಿದ್ದು, ಪುತ್ರಿಯ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ ಮಾನಸಿಕ ಆರೋಗ್ಯ ತಪಾಸಣೆಗೆ ಆದೇಶಿಸಲಾಗದು ಎಂಬುದು ನ್ಯಾಯಾಲಯದ ಸ್ಪಷ್ಟ ಅಭಿಪ್ರಾಯವಾಗಿದೆ” ಎಂದು ಆದೇಶಿಸಿತು.

ಸಿಖ್‌ ಸಮುದಾಯಕ್ಕೆ ಸೇರಿದ ತಾಯಿಯು ಮುಸ್ಲಿಮ್‌ ಪ್ರಿಯತಮನ ಜೊತೆ ಪುತ್ರಿ ಬದುಕುವುದಕ್ಕೆ ತಾಯಿ ಆಕ್ಷೇಪಿಸಿದ್ದರು.

ತಾಯಿ ಪ್ರತಿನಿಧಿಸಿದ್ದ ವಕೀಲ ರಾಹುಲ್‌ ರೆಡ್ಡಿ ಅವರು “ಪುತ್ರಿಯು ಈ ಹಿಂದೆ ಥೆರಪಿಗೆ ಒಳಗಾಗಿದ್ದು, ಮಾನಸಿಕ ಸಮಸ್ಯೆಗೆ ಚಿಕಿತ್ಸೆ ಪಡೆದಿದ್ದಾಳೆ. ಹೀಗಾಗಿ, ಆಕೆಯ ಒಪ್ಪಿಗೆಯು ತಿಳಿವಳಿಕೆಯುಕ್ತವಾಗಿ ಸ್ವಇಚ್ಛೆಯಿಂದ ಮಾಡಿರುವುದೇ ಎಂಬುದನ್ನು ಅರಿಯಲು ಮಾನಸಿಕ ಆರೋಗ್ಯ ಮೌಲ್ಯಮಾಪನಕ್ಕೆ ಆದೇಶಿಸಬೇಕು” ಎಂದು ಕೋರಿದರು.

ವೈದ್ಯಕೀಯ ದಾಖಲೆ ಮತ್ತು ನಿಮ್ಹಾನ್ಸ್‌ ಆಸ್ಪತ್ರೆಯಲ್ಲಿನ ವೈದ್ಯಕೀಯ ದಾಖಲೆಗಳನ್ನು ಉಲ್ಲೇಖಿಸಿ "ಪುತ್ರಿಗೆ ಥೆರಪಿ ಮುಂದುವರಿಸಲು ಮತ್ತು ಸಮಾಲೋಚನೆ, ಚಿಕಿತ್ಸೆ ಮುಂದುವರಿಸಲು ಸೂಚಿಸಿದ್ದಾರೆ. ಆಕೆಗೆ ಮಾನಸಿಕ ಮೌಲ್ಯಮಾಪನ ಮಾಡಿಸಿರುವ ಇತಿಹಾಸವಿದೆ. ಹೀಗಾಗಿ, ಆಕೆಯ ಮಾನಸಿಕ ಸ್ಥಿತಿಗತಿಯ ಕುರಿತು ಸ್ವತಂತ್ರ ಮೌಲ್ಯಮಾಪನ ಅಗತ್ಯವಿದೆ. ಪುತ್ರಿಯ ಹಿಂದಿನ ಹೇಳಿಕೆಗಳಲ್ಲಿ ವಿರೋಧಾಭಾಸವಿದೆ. ಈ ಹಿಂದೆ ಆಕೆ ಅತ್ಯಾಚಾರ, ಬಲವಂತವಾಗಿ ಮತಾಂತರ ಮಾಡಲಾಗಿದೆ ಮತ್ತು ತನ್ನ ಜೀವಕ್ಕೆ ಅಪಾಯವಿದೆ ಎಂದು ವೈದ್ಯರಿಗೆ ಪತ್ರ ಬರೆದಿದ್ದಳು” ಎಂದರು.

ವಿಚಾರಣೆಯಲ್ಲಿ ಖುದ್ದು ಹಾಜರಿದ್ದ ಪುತ್ರಿಯು ಇದನ್ನು ಸ್ಪಷ್ಟವಾಗಿ ನಿರಾಕರಿಸಿದ್ದು, ಪೋಷಕರ ಜೊತೆ ತೆರಳಲು ನಿರಾಕರಿಸಿದಳು. “ನಾನು ಹುಚ್ಚಿ, ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ ಎಂಬುದು ಸೇರಿ ಎಲ್ಲಾ ಆರೋಪಗಳು ಸುಳ್ಳು. ನಾನು ಆರೋಗ್ಯವಂತಳಾಗಿದ್ದು, ನನಗೇಕೆ ಈ ರೀತಿಯ ಕಿರುಕುಳ ನೀಡುತ್ತಿದ್ದಾರೋ ಗೊತ್ತಿಲ್ಲ” ಎಂದಳು.

ಆರ್‌ಎಸ್‌ಎಸ್‌ನ ಕೆಲವು ಸದಸ್ಯರ ಬಲವಂತದಿಂದಾಗಿ ತಾನು ತನ್ನ ಪ್ರಿಯತಮನ ವಿರುದ್ಧ ಪತ್ರ ಬರೆದಿರುವುದಾಗಿ ಆಕೆ ಆರೋಪಿಸಿದಳು.

ಈ ಮಧ್ಯೆ, ತಾಯಿ ಪರ ವಕೀಲರು “ಕನಿಷ್ಠ ಪುತ್ರಿಯನ್ನು ಚೇಂಬರ್‌ನಲ್ಲಿ ಕರೆದು ಗೌಪ್ಯವಾಗಿ ವಿಚಾರಣೆ ನಡೆಸುವಂತೆ ಕೋರಿದರು. ಇದಕ್ಕೂ ನಿರಾಕರಿಸಿದ ಪೀಠವು “ಅತ್ಯಂತ ಸ್ಪಷ್ಟವಾಗಿ ಉತ್ತರಿಸುತ್ತಿರುವ ಪುತ್ರಿಯ ಹೇಳಿಕೆಗಳನ್ನು ನೋಡಿದರೆ ತಾಯಿಯ ಆರೋಪ ಸರಿಯಲ್ಲ ಎಂದೆನಿಸುತ್ತದೆ” ಎಂದು, ಹೇಳಿ ಅರ್ಜಿಯನ್ನು ವಜಾಗೊಳಿಸಿತು.

Kannada Bar & Bench
kannada.barandbench.com