ಹೊಸ ವರ್ಷಾಚರಣೆ ನಿರ್ಬಂಧಕ್ಕೆ ಕರ್ನಾಟಕ ಹೈಕೋರ್ಟ್‌ ನಕಾರ

ಸರ್ಕಾರ ಈ ನಿಟ್ಟಿನಲ್ಲಿ ಈಗಾಗಲೇ ಸರಣಿ ಸಭೆ ನಡೆಸಿದೆ. ಇನ್ನೂ ತೀರ್ಮಾನ ಕೈಗೊಂಡಿಲ್ಲ. ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಕಾನೂನು ಶಾಂತಿ ಪಾಲನೆಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು ಎಂದು ತಿಳಿಸಿದ ರಾಜ್ಯ ಸರ್ಕಾರ.
High Court of Karnataka
High Court of Karnataka

ಕೋವಿಡ್ ರೂಪಾಂತರಿ ಜೆಎನ್.1 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಹೊಸ ವರ್ಷಾಚರಣೆ ನಿರ್ಬಂಧಿಸಬೇಕು ಎಂದು ಕೋರಿದ್ದ ಮನವಿಗೆ ಪೂರಕವಾಗಿ ಸ್ಪಂದಿಸಲು ಗುರುವಾರ ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.

ಬೆಂಗಳೂರಿನ ವಕೀಲ ಎನ್ ಪಿ ಅಮೃತೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಆರ್ ನಟರಾಜ್ ಮತ್ತು ಕೆ ವಿ ಅರವಿಂದ್‌ ಅವರ ನೇತೃತ್ವದ ರಜಾಕಾಲೀನ ವಿಭಾಗೀಯ ಪೀಠವು ನಡೆಸಿತು.

ವಿಚಾರಣೆ ವೇಳೆ ಅಮೃತೇಶ್ ಅವರು "ರಾಜ್ಯದ ವಿವಿಧೆಡೆ ಕೋವಿಡ್ ರೂಪಾಂತರಿ ಸೋಂಕು ಪುನಾ ಹರಡುತ್ತಿರುವ ಬಗ್ಗೆ ವರದಿಗಳಿವೆ. ಹೀಗಾಗಿ, ಬೆಂಗಳೂರಿನ ಎಂ ಜಿ ರಸ್ತೆ, ಬ್ರಿಗೇಡ್ ರಸ್ತೆ, ಕಮರ್ಶಿಯಲ್ ಸ್ಟ್ರೀಟ್ ಹಾಗೂ ಇತರೆಡೆ ಹೊಸ ವರ್ಷಾಚರಣೆಗೆ ಹೆಚ್ಚಿನ ಜನ ಸೇರುವುದನ್ನು ತಡೆಯಬೇಕಿದೆ. ಇಂತಹ ಜಮಾವಣೆಯಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಸಾಧ್ಯವಿಲ್ಲ. ಆದ್ದರಿಂದ, ಮುಂಜಾಗ್ರತಾ ಕ್ರಮವಾಗಿ ಹೊಸ ವರ್ಷಾಚರಣೆ ನಿರ್ಬಂಧಿಸುವಂತೆ ನಿರ್ದೇಶಿಸಬೇಕು" ಎಂದು ಕೋರಿದರು.

ಇದಕ್ಕೆ ಸರ್ಕಾರದ ವಕೀಲರು "ಸರ್ಕಾರ ಈ ನಿಟ್ಟಿನಲ್ಲಿ ಈಗಾಗಲೇ ಸರಣಿ ಸಭೆ ನಡೆಸಿದೆ. ಇನ್ನೂ ತೀರ್ಮಾನ ಕೈಗೊಂಡಿಲ್ಲ. ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಕಾನೂನು ಶಾಂತಿ ಪಾಲನೆಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು" ಎಂದರು.

ಇದಕ್ಕೆ ಪೀಠವು "ಒಂದು ವೇಳೆ ಬೆಂಗಳೂರಿನಲ್ಲಿ ನಿರ್ಬಂಧಿಸಿದರೆ ಸಂಭ್ರಮಿಸುವ ಜನರು ಹೊರ ಪ್ರದೇಶಗಳಿಗೆ ತೆರಳುತ್ತಾರೆ. ಸರ್ಕಾರ ಈ ಬಗ್ಗೆ ಯಾವುದೇ ನಿಯಂತ್ರಣಗಳನ್ನು ವಿಧಿಸಿಲ್ಲ. ಅದಾಗ್ಯೂ, ಸದ್ಯಕ್ಕೆ ಕೋವಿಡ್‌ಗೆ ಹೆದರಬೇಕಾದ ಪ್ರಮೇಯ ಕಾಣುತ್ತಿಲ್ಲ" ಎಂಬ ಅಭಿಪ್ರಾಯ ವ್ಯಕ್ತಪಡಿಸಿತು. ವಿಚಾರಣೆಯನ್ನು ಜನವರಿ ತಿಂಗಳಿಗೆ ಮುಂದೂಡಿತು.

Related Stories

No stories found.
Kannada Bar & Bench
kannada.barandbench.com