ʼಹಿಂದೂ ಧಾರ್ಮಿಕ ಸಭೆಗಳಿಂದ ಮಾಲಿನ್ಯವಾಗದೇ?ʼ: ಕ್ರೈಸ್ತರ ಸಭೆ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್

“ಧಾರ್ಮಿಕ ಸಭೆಗಳು ಮಾಲಿನ್ಯಕ್ಕೆ ಕಾರಣವಾಗುತ್ತವೆಯೇ? ನೀವು ಒಂದು ನಿರ್ದಿಷ್ಟ ಧರ್ಮವನ್ನು ಗುರಿ ಮಾಡುತ್ತಿದ್ದೀರಿ. ಹಿಂದೂ ಧಾರ್ಮಿಕ ಸಭೆಗಳಿಂದ ಮಾಲಿನ್ಯವಾಗದೇ?ʼ” ಎಂದು ನ್ಯಾಯಾಲಯ ಪ್ರಶ್ನಿಸಿತು.
ʼಹಿಂದೂ ಧಾರ್ಮಿಕ ಸಭೆಗಳಿಂದ ಮಾಲಿನ್ಯವಾಗದೇ?ʼ: ಕ್ರೈಸ್ತರ ಸಭೆ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್
Published on

ಅಕ್ರಮವಾಗಿ ನಿರ್ಮಿಸಲಾದ ಶಿಲುಬೆಯಿಂದಾಗಿ ಕೋಮು ಸಾಮರಸ್ಯಕ್ಕೆ ಧಕ್ಕೆಯಾಗುತ್ತದೆ ಮತ್ತು ಮಾಲಿನ್ಯ ಉಂಟಾಗುತ್ತದೆ. ಹೀಗಾಗಿ ಅದಕ್ಕೆ ಅವಕಾಶ ನೀಡಬಾರದು ಎಂದು ಕೋರಿ ಸಲ್ಲಿಸಿದ್ದ ಅರ್ಜಿಗೆ ಕರ್ನಾಟಕ ಹೈಕೋರ್ಟ್‌ ಕಟುವಾಗಿ ಪ್ರತಿಕ್ರಿಯಿಸಿದೆ. ಇದು ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸುವ ಯತ್ನ ಎಂದು ಅದು ಅಸಮಾಧಾನ ವ್ಯಕ್ತಪಡಿಸಿದೆ.

ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ರೂಪದಲ್ಲಿರುವ ಮನವಿ ʼಪೂರ್ವಾಗ್ರಹ ಪೀಡಿತʼ ಅರ್ಜಿದಾರರಿಂದ ʼಪ್ರೇರೇಪಿತʼವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ತಿಳಿಸಿತು.

“ಸುಮ್ಮನೆ ಅರ್ಜಿಯನ್ನು ನೋಡಿ. [ಇದು ಹೇಳುತ್ತದೆ] ಅಲ್ಲಿ ನಿರ್ಮಿಸಲಾಗಿರುವ ಶಿಲುಬೆಯ ಎದುರು ನಡೆಸುವ ಧಾರ್ಮಿಕ ಸಭೆ ಮಾಲಿನ್ಯಕ್ಕೆ ಕಾರಣವಾಗುತ್ತದೆ [ಎಂದು]. ಸಭೆಗಳು ಮಾಲಿನ್ಯಕ್ಕೆ ಕಾರಣವಾಗುತ್ತವೆಯೇ? ನೀವು ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸುತ್ತಿದ್ದೀರಿ. ಹಿಂದೂ ಧಾರ್ಮಿಕ ಸಭೆಗಳು ಮಾಲಿನ್ಯಕ್ಕೆ ಕಾರಣವಾಗುವುದಿಲ್ಲವೇ?” ಎಂದು ಪ್ರಶ್ನಿಸಿತು.

Also Read
ಧಾರ್ಮಿಕ ಭಾವನೆಗೆ ಧಕ್ಕೆ ಮಾಡುವ ಉದ್ದೇಶವಿಲ್ಲದ ಅಜಾಗರೂಕ ಧಾರ್ಮಿಕ ಅಪಮಾನ ಅಪರಾಧವಲ್ಲ: ತ್ರಿಪುರ ಹೈಕೋರ್ಟ್‌

ಸಾರ್ವಜನಿಕ ಆಸ್ತಿಯಲ್ಲಿ ಶಿಲುಬೆ ನಿರ್ಮಾಣವಾಗಿದ್ದು ಅದನ್ನು ತೆರವುಗೊಳಿಸಬೇಕೆಂದು ಕೋರಿ ಅರ್ಜಿದಾರ ಪಿ ರುದ್ರೇಶ್‌ ನ್ಯಾಯಾಲಯದ ಮೊರೆ ಹೋಗಿದ್ದರು. ಧಾರ್ಮಿಕ ಸಭೆಗಳಿಂದ ಮಾಲಿನ್ಯ ಉಂಟಾಗುತ್ತದೆ ಮತ್ತು ಅವು ಕೋಮು ಸಾಮರಸ್ಯವನ್ನು ಕೂಡ ಕದಡುತ್ತವೆ ಎಂದು ಅವರು ಅರ್ಜಿಯಲ್ಲಿ ಆರೋಪಿಸಿದ್ದರು. ಮನವಿಯನ್ನು ಸುಮ್ಮನೆ ಓದಿದರೆ ಸಾಕು ಅರ್ಜಿದಾರರು ಸಾರ್ವಜನಿಕ ಹಿತಾಸಕ್ತಿಯ (Pro bono) ಪರವಾಗಿ ದಾವೆ ಹೂಡಿದವರಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.

“ಅರ್ಜಿದಾರರು ನಿರ್ದಿಷ್ಟ ಧರ್ಮವೊಂದನ್ನು ಗುರಿಯಾಗಿಸಲು ಬಯಸಿದ್ದಾರೆ. ಅಕ್ರಮವಾಗಿ ನಿರ್ಮಿಸಲಾದ ಶಿಲುಬೆಯಿಂದಾಗಿ ಕೋಮು ಸಾಮರಸ್ಯಕ್ಕೆ ಧಕ್ಕೆಯಾಗುತ್ತದೆ ಮತ್ತು ಮಾಲಿನ್ಯ ಉಂಟಾಗುತ್ತದೆ ಎಂದು ಅವರು ವಾದಿಸಿದ್ದಾರೆ. ವಿವಿಧ ಧರ್ಮ ಮತ್ತು ಜಾತಿಗಳಿಗೆ ಸೇರಿದ ದೊಡ್ಡ ದೊಡ್ಡ ಪ್ರಮಾಣದ ಅಕ್ರಮ ಧಾರ್ಮಿಕ ಕಟ್ಟಡಗಳು ಇವೆ. ಹಿಂದೂ ಸಮುದಾಯಗಳು ಕೂಡ ಅಕ್ರಮ ಕಟ್ಟಡಗಳನ್ನು ನಿರ್ಮಿಸಿವೆ. ಆದ್ದರಿಂದ ಅರ್ಜಿದಾರರು ಸಾರ್ವಜನಿಕ ಹಿತಾಸಕ್ತಿಯ ಪರವಾಗಿ ದಾವೆ ಹೂಡಿದವರಲ್ಲ ಮತ್ತು ಅವರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪುರಸ್ಕರಿಸಲು ಆಗದು” ಎಂದಿತು.

ಅರ್ಜಿದಾರರ ಆಶಯವನ್ನು ಒರೆಗೆ ಹಚ್ಚುವುದು ನ್ಯಾಯಾಲಯದ ಕರ್ತವ್ಯ ಎಂದು ಕೂಡ ನ್ಯಾ. ಓಕಾ ತಿಳಿಸಿದರು. “ಇದೊಂದು ಪ್ರೇರೇಪಿತ ಮನವಿ. ಮನವಿದಾರರ ಆಶಯವನ್ನು ನಾವು ಗಮನಿಸಬೇಕಿದೆ. ನಾವು ಇದನ್ನು ಪುರಸ್ಕರಿಸುವುದಿಲ್ಲ” ಎಂದು ಹೇಳಿ ಪೀಠ ಅರ್ಜಿಯನ್ನು ವಜಾಗೊಳಿಸಿತು.

Kannada Bar & Bench
kannada.barandbench.com