ಕೋವಿಡ್ ಸಂಖ್ಯೆಯಲ್ಲಿ ವ್ಯಾಪಕ ಹೆಚ್ಚಳ: ನೂತನ ಮಾರ್ಗಸೂಚಿ ಅಧಿಸೂಚನೆ ಹೊರಡಿಸಿದ ಹೈಕೋರ್ಟ್
ದೇಶಾದ್ಯಂತ ಕೋವಿಡ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ಹಾಗೂ ಇತರೆ ಜಿಲ್ಲೆಗಳಿಗೆ ಕರ್ನಾಟಕ ಹೈಕೋರ್ಟ್ ಕಟ್ಟುನಿಟ್ಟಾದ ಪ್ರತ್ಯೇಕ ಮಾರ್ಗದರ್ಶಿ ಸೂತ್ರಗಳನ್ನು ಮಂಗಳವಾರದಿಂದ ಜಾರಿಗೆ ಬರುವಂತೆ ಅಧಿಸೂಚನೆ ಹೊರಡಿಸಿದೆ. ಮಾರ್ಗದರ್ಶಿ ಸೂತ್ರಗಳು ಏಪ್ರಿಲ್ 27ರಿಂದ ಮೇ 22ರ ವರೆಗೆ ಜಾರಿಯಲ್ಲಿರಲಿವೆ.
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ನ್ಯಾಯಾಲಯ ಕೇಂದ್ರಿತ ಮಾರ್ಗಸೂಚಿಗಳು ಇಂತಿವೆ:
ಏಪ್ರಿಲ್ 22ರಂದು ಹೊರಡಿಸಿರುವ ನೋಟಿಸ್ ಅನ್ನು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಮತ್ತು ವಿಚಾರಣಾಧೀನ ನ್ಯಾಯಾಲಯಗಳು ಅನುಸರಿಸಬೇಕು.
ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದ ಸಾಕ್ಷ್ಯ ದಾಖಲೀಕರಣವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತ್ರ ಮಾಡಿಕೊಳ್ಳಬೇಕು. ನಿರ್ದಿಷ್ಟ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ಭೌತಿಕವಾಗಿ ಸಾಕ್ಷಿ ದಾಖಲಿಸಿಕೊಳ್ಳಲು ಕಾಲಮಿತಿ ನಿಗದಿಗೊಳಿಸಿದ್ದರೆ ಆಗ ಮಾತ್ರ ಸಾಕ್ಷಿಗಳನ್ನು ಆಹ್ವಾನಿಸಿ ಸಾಕ್ಷಿ ದಾಖಲಿಸಿಕೊಳ್ಳಬಹುದಾಗಿದೆ.
ಪೊಲೀಸ್ ಅಧಿಕಾರಿಗಳು ಮತ್ತು ಆರೋಪಿಗಳನ್ನು ಹೊರತುಪಡಿಸಿ ಕಕ್ಷಿದಾರರು ನ್ಯಾಯಾಲಯದ ಕಟ್ಟಡ ಪ್ರವೇಶಿಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಆರೋಪಿಯನ್ನು ಕಸ್ಟಡಿಗೆ ಪಡೆಯುವುದಕ್ಕೆ ಸಂಬಂಧಿಸಿದಂತೆ ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಬೇಕು.
ವಕೀಲರು ಹಾಗೂ ಜಾಮೀನಿನ ಮೇಲೆ ಹೊರಗಿರುವ ಆರೋಪಿಗಳ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ಪ್ರತಿಕೂಲ ಆದೇಶಗಳನ್ನು ಹೊರಡಿಸದಂತೆ ನ್ಯಾಯಾಲಯಗಳಿಗೆ ಮನವಿ ಮಾಡಲಾಗಿದೆ.
ರಜಾಕಾಲದ ಪೀಠಗಳು ತುರ್ತು ಸಿವಿಲ್ ಪ್ರಕರಣಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಿವೆ. ಭೌತಿಕ ವಿಚಾರಣೆಯನ್ನು ನಿಲ್ಲಿಸಬೇಕು.
ಗುರುನಾನಕ್ ಭವನದಲ್ಲಿರುವ ರಿಮ್ಯಾಂಡ್ ನ್ಯಾಯಾಲಯವು ಮೇ 29ರಿಂದ ಕಾರ್ಯನಿರ್ವಹಿಸಲಿದೆ.
ಕಕ್ಷಿದಾರರ ಪ್ರವೇಶವನ್ನು ನಿಷೇಧಿಸಲಾಗಿದೆ.
ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳು ಶೇ. 50 ನ್ಯಾಯಿಕ ಅಧಿಕಾರಿಗಳು ಮತ್ತು ಶೇ. 50 ಸಿಬ್ಬಂದಿಯ ಜೊತೆ ಪಾಳಿಯಲ್ಲಿ ಕೆಲಸ ಮಾಡಬೇಕು.
ನಿಗದಿತ ಗುರುನಾನಕ್ ಭವನದಲ್ಲಿ ಆರೋಪಿತ ವ್ಯಕ್ತಿಯ ಪ್ರಸ್ತುತಪಡಿಸುವ ಪ್ರಕರಣಗಳನ್ನು ರಿಮ್ಯಾಂಡ್ ನ್ಯಾಯಾಲಯದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್/ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನಡೆಸಲಿದ್ದಾರೆ. ಭೌತಿಕವಾಗಿ ವಿಚಾರಣಾಧೀನ ಕೈದಿಗಳನ್ನು ಹಾಜರುಪಡಿಸುವಾಗ ಕೋವಿಡ್ ಶಿಷ್ಟಾಚಾರಗಳನ್ನು ಪಾಲಿಸಬೇಕು.
ಜಿಲ್ಲಾ ಮತ್ತು ವಿಚಾರಣಾಧೀನ ನ್ಯಾಯಾಲಯಗಳಿಗೆ ಮಾರ್ಗಸೂಚಿ ಅನ್ವಯ:
ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದ ಸಾಕ್ಷ್ಯ ದಾಖಲೀಕರಣವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತ್ರ ಮಾಡಿಕೊಳ್ಳಬೇಕು. ನಿರ್ದಿಷ್ಟ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ಭೌತಿಕವಾಗಿ ಸಾಕ್ಷಿ ದಾಖಲಿಸಿಕೊಳ್ಳಲು ಕಾಲಮಿತಿ ನಿಗದಿಗೊಳಿಸಿದ್ದರೆ ಆಗ ಮಾತ್ರ ಸಾಕ್ಷಿಗಳನ್ನು ಆಹ್ವಾನಿಸಿ ಸಾಕ್ಷಿ ದಾಖಲಿಸಿಕೊಳ್ಳಬಹುದಾಗಿದೆ.
ಪೊಲೀಸ್ ಅಧಿಕಾರಿಗಳು ಮತ್ತು ಆರೋಪಿಗಳನ್ನು ಹೊರತುಪಡಿಸಿ ಕಕ್ಷಿದಾರರು ನ್ಯಾಯಾಲಯದ ಕಟ್ಟಡ ಪ್ರವೇಶಿಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಆರೋಪಿಯನ್ನು ಕಸ್ಟಡಿಗೆ ಪಡೆಯುವುದಕ್ಕೆ ಸಂಬಂಧಿಸಿದಂತೆ ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಬೇಕು.
ವಕೀಲರು ಹಾಗೂ ಜಾಮೀನಿನ ಮೇಲೆ ಹೊರಗಿರುವ ಆರೋಪಿಗಳ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ಪ್ರತಿಕೂಲ ಆದೇಶಗಳನ್ನು ಹೊರಡಿಸದಂತೆ ನ್ಯಾಯಾಲಯಗಳಿಗೆ ಮನವಿ ಮಾಡಲಾಗಿದೆ.
ಆರೋಪಿಗಳು/ವ್ಯಕ್ತಿಗಳ ಕಸ್ಟಡಿಗೆ ಸಂಬಂಧಿಸಿದಂತೆ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಪ್ರತ್ಯೇಕ ಖಾಲಿ ನ್ಯಾಯಾಲಯದ ಸಭಾಂಗಣಗಳನ್ನು ಗುರುತಿಸಬೇಕು.
ಮೇ ತಿಂಗಳ ಅಂತ್ಯದವರೆಗೆ ಯಾವುದೇ ತೆರನಾದ ಚುನಾವಣೆಗಳನ್ನು ನಡೆಸದಂತೆ ವಕೀಲರ ಸಂಘಕ್ಕೆ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಮನವಿ ಮಾಡಬೇಕು.