ಟ್ವಿಟರ್ ಇಂಡಿಯಾದ ಮನೀಶ್ ಮಹೇಶ್ವರಿ ಪ್ರಕರಣ: ಆದೇಶ ಕಾಯ್ದಿರಿಸಿದ ಕರ್ನಾಟಕ ಹೈಕೋರ್ಟ್

ಜುಲೈ 13ಕ್ಕೆ ಪ್ರಕರಣದ ತೀರ್ಪು ಪ್ರಕಟಿಸುವುದಾಗಿ ತಿಳಿಸಿದ ನ್ಯಾಯಾಲಯ.
ಟ್ವಿಟರ್ ಇಂಡಿಯಾದ ಮನೀಶ್ ಮಹೇಶ್ವರಿ ಪ್ರಕರಣ: ಆದೇಶ ಕಾಯ್ದಿರಿಸಿದ ಕರ್ನಾಟಕ ಹೈಕೋರ್ಟ್
Published on

ಗಾಜಿಯಾಬಾದ್ ಹಲ್ಲೆ ವಿಡಿಯೋ ಕುರಿತು ಉತ್ತರ ಪ್ರದೇಶ ಪೊಲೀಸರು ಸಿಆರ್‌ಪಿಸಿ ಸೆಕ್ಷನ್ 41 ಎ ಅಡಿಯಲ್ಲಿ ನೀಡಿರುವ ನೋಟಿಸ್ ಪ್ರಶ್ನಿಸಿ ಟ್ವಿಟರ್‌ ಇಂಡಿಯಾದ ಮನೀಶ್ ಮಹೇಶ್ವರಿ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಆದೇಶ ಕಾಯ್ದಿರಿಸಿತು.

ಮನೀಶ್‌ ಅವರು ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಲ್ಲದಿದ್ದರೆ (ಎಂಡಿ), ಅವರು ಅದನ್ನು ನ್ಯಾಯಾಲಯದ ಮುಂದೆ ಹೇಳಬೇಕು ಎಂದು ಉತ್ತರಪ್ರದೇಶ ರಾಜ್ಯ ಪೊಲೀಸರ ಪರ ಹಾಜರಾದ ವಕೀಲ ಪ್ರಸನ್ನ ಕುಮಾರ್ ವಿಚಾರಣೆ ವೇಳೆ ವಾದಿಸಿದರು. ಮನೀಶ್‌ ಅವರು ಟ್ವಿಟ್ಟರ್ ಪ್ರತಿನಿಧಿ ಮಾತ್ರವಾದ್ದರಿಂದ ಅವರನ್ನು ಬಂಧಿಸಲಾಗುವುದಿಲ್ಲ ಎಂದು ಕೂಡ ಅವರು ಈ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಭರವಸೆ ನೀಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿ ಜಿ ನರೇಂದರ್ ಅವರು “ತಾನು ಎಂಡಿ ಅಲ್ಲ ಎಂದು ಅವರು (ಮನೀಶ್‌) ಎಷ್ಟು ಬಾರಿ ಹೇಳಬೇಕು? ಅವರು ಈಗಾಗಲೇ ಜೂನ್ 18 ರಂದು (ಆ ಕುರಿತು) ಉತ್ತರಿಸಿದ್ದಾರೆ” ಎಂದರು. ಅಂತಿಮವಾಗಿ ಆದೇಶ ಕಾಯ್ದಿರಿಸಿದ ನ್ಯಾಯಾಲಯ ಜುಲೈ 13ಕ್ಕೆ ಪ್ರಕರಣದ ತೀರ್ಪು ಪ್ರಕಟಿಸುವುದಾಗಿ ತಿಳಿಸಿತು.

Also Read
ಉತ್ತರಪ್ರದೇಶ ಪೊಲೀಸರೇ ನನ್ನ ಬಳಿ ಬರಲಿ: ಕರ್ನಾಟಕ ಹೈಕೋರ್ಟ್‌ನಲ್ಲಿ ಟ್ವಿಟರ್ ಇಂಡಿಯಾ ಉದ್ಯೋಗಿ ಮನೀಶ್ ಪರ ವಾದ

ವಿಚಾರಣೆ ವೇಳೆ ಉತ್ತರ ಪ್ರದೇಶ ಪೊಲೀಸರ ಪರ ವಾದ ಮಂಡಿಸಿದ ವಕೀಲ ಪ್ರಸನ್ನ ಕುಮಾರ್‌ ಅವರು ಪ್ರಕರಣದ ನ್ಯಾಯವ್ಯಾಪ್ತಿ ಕುರಿತಂತೆಯೂ ಪ್ರಶ್ನೆಗಳನ್ನು ಎತ್ತಿದರು. ಬೆಂಗಳೂರಿನಲ್ಲಿ ಇಮೇಲ್‌ ಓಪನ್‌ ಮಾಡಿದ ಮಾತ್ರಕ್ಕೆ ಅದು ವ್ಯಾಜ್ಯ ಕಾರಣವಾಗುತ್ತದೆಯೇ ಎಂದು ಅವರು ಪ್ರಶ್ನಿಸಿದರು. ಸಿಆರ್‌ಪಿಸಿ ಸೆಕ್ಷನ್‌ 160 ಅನ್ನು ಪ್ರತ್ಯೇಕವಾಗಿ ಓದಿಕೊಳ್ಳಲಾಗದು. ಸೆಕ್ಷನ್ 161ರೊಂದಿಗೆ ಓದಿಕೊಳ್ಳಬೇಕು ಎಂದೂ ಅವರು ಮನವಿ ಮಾಡಿದರು.

ಇತ್ತ ಮನೀಶ್‌ ಮಹೇಶ್ವರಿ ಪರ ವಾದಿಸಿದ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು, "ಮನೀಶ್‌ ಅವರು ಎಫ್‌ಐಆರ್‌ ರದ್ದುಪಡಿಸಲು ಕೋರಿಲ್ಲ. ಮನೀಶ್‌ ಪ್ರಕರಣದಲ್ಲಿ ಮೂರನೇ ವ್ಯಕ್ತಿಯಾಗಿದ್ದಾರೆ. ನೋಟಿಸ್‌ ಅನ್ನು ಸೆಕ್ಷನ್‌ 41ಎ ಹಾಗೂ ಸಿಆರ್‌ಪಿಸಿ 160ರ ಅಡಿ ಮೂರನೇ ವ್ಯಕ್ತಿಗೆ ನೀಡಲಾಗಿದೆ," ಎಂದು ವಾದಿಸಿದರು. ಸೆಕ್ಷನ್‌ 41ಎ ಅನ್ನು ಅರ್ಜಿದಾರರಂತಹ ವ್ಯಕ್ತಿಗಳಿಗೆ ಬೆದರಿಸಲು, ಹೆದರಿಸಲು, ಕಿರುಕುಳ ನೀಡಲು ಬಳಸದಂತೆ ಖಾತರಿಪಡಿಸುವ ಅಗತ್ಯವಿದೆ ಎಂದು ಹೇಳಿದರು.

Kannada Bar & Bench
kannada.barandbench.com