ಹುಕ್ಕಾ ಮತ್ತು ಹುಕ್ಕಾ ಬಾರ್ ನಿಷೇಧ ಪ್ರಶ್ನಿಸಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ವಿಚಾರಣೆ ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್ ಸೋಮವಾರ ಆದೇಶ ಕಾಯ್ದಿರಿಸಿದೆ.
ಹುಕ್ಕಾ ಬಳಕೆಯನ್ನು ಸರ್ಕಾರವು ಅತಿರೇಕವಾಗುವ ಮೊದಲು ನಿಭಾಯಿಸಿದ್ದರೆ ಉತ್ತಮವಾಗಿ ನಿಯಂತ್ರಿಸಬಹುದಿತ್ತು ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ಹೇಳಿತು.
“ನೀವು ಅದನ್ನು ಅತಿರೇಕವಾಗಲು ಅನುಮತಿಸಿದರೆ, ಅದನ್ನು ನಿಯಂತ್ರಿಸಲು ಕಷ್ಟವಾಗುತ್ತದೆ. 10 ಅಥವಾ 20 ವರ್ಷಗಳ ಹಿಂದೆ ಇದೆಲ್ಲಾ ಎಲ್ಲಿತ್ತು (ನಿಯಂತ್ರಣ ಅಥವಾ ನಿಷೇಧ)? ಇದು ಅತಿರೇಕವಾದ ನಂತರ ಎಚ್ಚೆತ್ತುಕೊಂಡಿದ್ದೀರಾ?” ಎಂದು ಪೀಠ ಪ್ರಶ್ನಿಸಿತು. ಆದರೆ, ಕ್ರಮಕೈಗೊಂಡಿರುವುದು ತಡವಾದರೂ ಒಳ್ಳೆಯದು ಎಂದಿತು.
ಇಂಡೊ-ಚೈನೀಸ್ ಖಾದ್ಯವಾದ ಗೋಬಿ ಮಂಚೂರಿಯನ್‌ಗೆ ಬಣ್ಣದ ಮಿಶ್ರಣ ಬಳಸುವುದನ್ನು ರಾಜ್ಯ ಸರ್ಕಾರ ನಿಷೇಧಿಸಿರುವುದನ್ನೂ ಪೀಠ ಉಲ್ಲೇಖಿಸಿತು. “ಮಿಶ್ರಣ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂಬುದು ಇಂದಲ್ಲ 25 ವರ್ಷದ ಹಿಂದೆಯೂ ಇತ್ತು. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಅದಕ್ಕೆ ನಿಷೇಧ ವಿಧಿಸಲಾಗಿದೆ. ಗೋಬಿ ಮಂಚೂರಿಯನ್‌ನಲ್ಲಿ ಬಳಸುವ ಬಣ್ಣವನ್ನು ಬಟ್ಟೆ ತೊಳೆಯಲೂ ಅವರು ಬಳಸುತ್ತಾರೆ” ಎಂದು ಪೀಠ ಹೇಳಿದೆ.
ಅರ್ಜಿದಾರರ ಪರ ಹಿರಿಯ ವಕೀಲ ಕೆ ಸುಮನ್ ಅವರು “ಸಿಗರೇಟುಗಳು ಮತ್ತು ಇತರೆ ತಂಬಾಕು ಉತ್ಪನ್ನಗಳ ಜಾಹೀರಾತು ನಿಷೇಧ ಮತ್ತು ವ್ಯಾಪಾರ, ವಹಿವಾಟು, ಉತ್ಪಾದನೆ, ಪೂರೈಕೆ ಮತ್ತು ಹಂಚಿಕೆ ಕಾಯಿದೆ 2003 (ಸಿಒಟಿಪಿಎ) ಕೇಂದ್ರ ಸರ್ಕಾರದ ಕಾನೂನಾಗಿದ್ದು, ಇಲ್ಲಿ ಹುಕ್ಕಾ ನಿಷೇಧಕ್ಕೆ ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಆಹಾರ ಪೂರೈಸದ ನಿರ್ದಿಷ್ಟ ಸ್ಥಳಗಳಲ್ಲಿ ಹುಕ್ಕಾ ಸೇದಲು ಅವಕಾಶವಿದೆ” ಎಂದರು.
ಇದಕ್ಕೆ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ಸಿಒಟಿಪಿಎ ಸಿಗರೇಟುಗಳಿಗೆ ಸಂಬಂಧಿಸಿದ್ದು, ಹುಕ್ಕಾಗೂ ಇದಕ್ಕೂ ಸಂಬಂಧವಿಲ್ಲ. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಹುಕ್ಕಾಗೆ ನಿಷೇಧ ವಿಧಿಸಲು ಸರ್ಕಾರಕ್ಕೆ ಅಧಿಕಾರವಿದೆ. ಸಂವಿಧಾನದ 47ನೇ ವಿಧಿಯ ಅನ್ವಯ ಸಾರ್ವಜನಿಕ ಆರೋಗ್ಯ ಸುಧಾರಿಸಲು ರಾಜ್ಯ ಸರ್ಕಾರ ಕ್ರಮಕೈಗೊಳ್ಳುವ ಹೊಣೆಗಾರಿಕೆ ಹೊಂದಿದೆ” ಎಂದರು.
ಇದಕ್ಕೆ ಅರ್ಜಿದಾರರ ಪರ ಮತ್ತೊಬ್ಬ ವಕೀಲರು “ಹುಕ್ಕಾ ನಿಷೇಧವು ಸಂವಿಧಾನದ 14ನೇ ವಿಧಿಯಡಿ ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಿದೆ. ಇದು ಸಿಗರೇಟು ಉತ್ಪಾದಕರ ಪರವಾಗಿದೆ. ಹುಕ್ಕಾ ಅಮಲು ಪಾನೀಯ ಅಥವಾ ಮಾದಕ ವಸ್ತುವಲ್ಲ. ಹುಕ್ಕಾ ನಿಷೇಧದಿಂದ ಸಂವಿಧಾನದ 14ನೇ ವಿಧಿ ಉಲ್ಲಂಘನೆಯಾಗಿದೆ. ಒಮ್ಮೆ ಗ್ರಾಹಕರ ಹುಕ್ಕಾ ನಿಷೇಧಿಸಿದರೆ ಅವರು ಸಿಗರೇಟು ಸೇದಲಿದ್ದಾರೆ… ಹುಕ್ಕಾದಲ್ಲಿ ಕನಿಷ್ಠ ಹರ್ಬಲ್ ಸಾರ ಸೇದುತ್ತಾರೆ.. ಆದರೆ, ಯಾವುದೇ ತೆರನಾದ ಹರ್ಬಲ್ ಸಿಗರೇಟು ಇಲ್ಲ (ತಂಬಾಕನ್ನೇ ಸೇದಬೇಕು)” ಎಂದರು.
ಇದಕ್ಕೆ ಧ್ವನಿಗೂಡಿಸಿದ ಹಿರಿಯ ವಕೀಲ ಕಿರಣ್ ಜವಳಿ ಅವರು “ತಂಬಾಕು ಉತ್ಪನ್ನ ಬಳಸದ ಹರ್ಬಲ್ ಹುಕ್ಕಾ ಸೇದಲು ನಿಷೇಧ ಹೇರಬಾರದು” ಎಂದರು.
ಈ ನಡುವೆ ರಾಜ್ಯ ಸರ್ಕಾರದ ನಿಷೇಧ ಆದೇಶ ಬೆಂಬಲಿಸಿದ ಇನ್ನೊಬ್ಬ ವಕೀಲರು “ಹುಕ್ಕಾ ಸೇವೆಯು ಅಕ್ರಮ ವಹಿವಾಟು. ತಂಬಾಕು ಉತ್ಪಾದಕರು ಸರ್ಕಾರಕ್ಕೆ ತೆರಿಗೆ ಪಾವತಿಸುತ್ತಾರೆ. ಆದರೆ, ಹುಕ್ಕಾ ವಹಿವಾಟು ನಡೆಸುವವರು ಯಾವುದೇ ತೆರಿಗೆ ಪಾವತಿಸುವುದಿಲ್ಲ. ಹತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ಹುಕ್ಕಾ ವಹಿವಾಟು ನಡೆಯುತ್ತಿದ್ದು, ಒಂದು ಹುಕ್ಕಾಗೆ ದಿನಕ್ಕೆ ₹250 ಆದರೆ, ದಿನಕ್ಕೆ 1000 ಕೋಟಿ ವ್ಯವಹಾರ ನಡೆಯಲಿದೆ. ವರ್ಷಕ್ಕೆ ₹36 ಲಕ್ಷ ಕೋಟಿ ವ್ಯವಹಾರ ನಡೆಯಲಿದೆ” ಎಂದರು.
ಎಜಿ ಶೆಟ್ಟಿ ಅವರು “ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಹುಕ್ಕಾ ನಿಷೇಧಿಸಲಾಗಿದೆ. ಹುಕ್ಕಾ ನಿಷೇಧ ಕುರಿತಾದ ಅಧಿಸೂಚನೆಯ ಜೊತೆಗೆ ಮಸೂದೆಯನ್ನೂ ಸದನದಲ್ಲಿ ಪಾಸು ಮಾಡಲಾಗಿದೆ. ಹುಕ್ಕಾ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹಾಗೆಂದು ನಾವು ಸಿಗರೇಟು ಬಳಕೆಗೆ ಆದ್ಯತೆ ನೀಡುತ್ತಿಲ್ಲ” ಎಂದರು.
ಹುಕ್ಕಾ, ತಂಬಾಕು ಅಥವಾ ನಿಕೋಟಿನ್ ಒಳಗೊಂಡ ನಿಕೋಟಿನ್ ರಹಿತ, ತಂಬಾಕು ರಹಿತ, ಸ್ವಾದಭರಿತ, ಸ್ವಾದರಹಿತ ಹುಕ್ಕಾ ಮೊಲಾಸಸ್ ಇದೇ ಮಾದರಿಯ ಇನ್ನಿತರ ಹೆಸರುಗಳಿಂದ ಕರೆಯಲ್ಪಡುವ ಹುಕ್ಕಾ ಉತ್ಪನ್ನಗಳ ಮಾರಾಟ, ಸೇವನೆ, ಜಾಹೀರಾತು, ಪ್ರಚೋದನೆ, ಸಂಗ್ರಹಣೆ, ವ್ಯಾಪಾರವನ್ನು ರಾಜ್ಯದಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿದವರ ವಿರುದ್ಧ ಸಿಒಟಿಪಿಎ, ಮಕ್ಕಳ ಆರೈಕೆ ಮತ್ತು ರಕ್ಷಣೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆಗಳು, ಭಾರತೀಯ ದಂಡ ಸಂಹಿತೆ ಹಾಗೂ ಅಗ್ನಿ ನಿಯಂತ್ರಣ ಹಾಗೂ ಅಗ್ನಿಸುರಕ್ಷತೆ ಕಾಯಿದೆ ಪ್ರಕಾರ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಫೆಬ್ರವರಿ 7ರಂದು ಅಧಿಸೂಚನೆ ಹೊರಡಿಸಿತ್ತು.