ವಕೀಲೆಗೆ ಒದ್ದಿದ್ದ ಇನ್‌ಸ್ಪೆಕ್ಟರ್‌ ಪದ್ಮಾವತಿಗೆ ₹1 ಲಕ್ಷ ದಂಡ ವಿಧಿಸಿದ ಹೈಕೋರ್ಟ್‌; ಅರ್ಜಿ ವಜಾ

ಇಲಾಖಾ ವಿಚಾರಣೆಗೆ ಆದೇಶಿಸಿದ್ದ ನ್ಯಾಯಾಲಯದ ಆದೇಶ ಮರೆಮಾಚಿ ರಜಾಕಾಲದ ಪೀಠದಿಂದ ಪ್ರಕರಣಕ್ಕೆ ತಡೆ ಪಡೆದಿದ್ದ ಇನ್‌ಸ್ಪೆಕ್ಟರ್‌ ಪದ್ಮಾವತಿ ನಡೆಗೆ ತೀವ್ರ ಅಸಮಾಧಾನ ದಾಖಲಿಸಿದ ಹೈಕೋರ್ಟ್‌.
Police officer
Police officer
Published on

ರಸ್ತೆಯಲ್ಲಿ ನಡೆದಿದ್ದ ಜಗಳದ (ರೋಡ್‌ ರೇಜ್‌) ಕುರಿತು ಪ್ರಕರಣ ದಾಖಲಿಸಲು ಪೊಲೀಸ್ ಠಾಣೆಗೆ ಬಂದಿದ್ದ ಮಹಿಳಾ ವಕೀಲಿಗೆ ಒದ್ದ ಆರೋಪ ಎದುರಿಸುತ್ತಿರುವ ಮಹಿಳಾ ಸಬ್​ಇನ್​ಸ್ಪೆಕ್ಟರ್ ಟಿ ಬಿ ಪದ್ಮಾವತಿ ಅವರು ಹಿಂದಿನ ಆದೇಶ ಮರೆ ಮಾಚಿ ರಜಾಕಾಲದ ಪೀಠದಿಂದ ತಮ್ಮ ವಿರುದ್ಧದ ತನಿಖೆಗೆ ತಡೆ ಪಡೆದುಕೊಂಡಿದ್ದ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇನ್‌ಸ್ಪೆಕ್ಟರ್‌ಗೆ ₹1 ಲಕ್ಷ ದಂಡ ವಿಧಿಸಿ ಅರ್ಜಿ ವಜಾಗೊಳಿಸಿದೆ.

ಬೆಂಗಳೂರಿನ ಇನ್‌ಸ್ಪೆಕ್ಟರ್‌ ಪದ್ಮಾವತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಎರಡು ತಿಂಗಳಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಲು ನಿರ್ದೇಶಿಸಿದೆ.

ವಿಚಾರಣೆಯ ವೇಳೆ ಪೀಠವು ಪದ್ಮಾವತಿ ಅವರನ್ನು ಕುರಿತು “ಅಷ್ಟಕ್ಕೂ ಆಕೆ ತಮ್ಮನ್ನು ಏನೆಂದುಕೊಂಡಿದ್ದಾರೆ? ಈ ಪೀಠವು ಎಫ್‌ಐಆರ್ ದಾಖಲಿಸಲು ನೀಡಿದ್ದ ಆದೇಶವನ್ನು ಅರ್ಜಿಯಲ್ಲಿ ಉಲ್ಲೇಖಿಸದೆ ರಜಾಕಾಲದ ಪೀಠದ ಮುಂದೆ ಮುಚ್ಚಿಟ್ಟಿರುವುದು ಸತ್ಯದ ಮರೆಮಾಚುವಿಕೆ ಅಲ್ಲವೇ? ಇದಕ್ಕಾಗಿಯೇ ದುಬಾರಿ ದಂಡ ವಿಧಿಸಲಾಗುವುದು” ಎಂದಿತು.

ಮುಂದುವರಿದು, ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರನ್ನು ಕುರಿತು ಪೀಠವು “ಪದ್ಮಾವತಿ ವಿರುದ್ಧ ಇಲಾಖಾ ತನಿಖೆ ಪ್ರಾರಂಭಿಸಲಾಗಿದೆಯೇ? ಎಫ್​ಐಆರ್​ ದಾಖಲಿಸಲಾಗಿದೆಯೇ?” ಎಂದು ವಿಚಾರಣೆ ವೇಳೆ ಹಾಜರಿದ್ದ ಸರ್ಕಾರಿ ವಕೀಲರನ್ನು ಪ್ರಶ್ನಿಸಿತು.

ತನಿಖೆ ನಡೆಸಿ, ಅಂತಿಮ ವರದಿ ಸಲ್ಲಿಸುವ ಮುನ್ನ ತನಿಖಾ ವರದಿಯನ್ನು ಈ ನ್ಯಾಯಾಲಯದ ಮುಂದಿಡಬೇಕು ಎಂದು ನಿರ್ದೇಶಿಸಿತು.

“ಪದ್ಮಾವತಿ ಅವರು ವಕೀಲೆಯೊಬ್ಬರನ್ನು ಬೂಟ್​ ಕಾಲಿನಿಂದ ಒದ್ದಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ಕೇವಲ ಮೇಜಿನ ಮೇಲಿದ್ದ ಕಡತಗಳನ್ನು ತಳ್ಳಿದ ಕಾರಣಕ್ಕೆ ಈ ರೀತಿಯಲ್ಲಿ ವರ್ತಿಸಿದ್ದಾರೆ. ಅದಕ್ಕೆ ಕಾನೂನಿನಲ್ಲಿ ಅವಕಾಶವಿದೆಯೇ? ರಜಾಕಾಲದ ಪೀಠಕ್ಕೆ ಹೋಗಿ ತಡೆ ತರಲು ತುರ್ತು ಏನಿತ್ತು?”  ಎಂದು ಅರ್ಜಿದಾರರ ವಕೀಲರನ್ನು ಪ್ರಶ್ನಿಸಿದ ಪೀಠವು “ಮುಂದೊಂದು ದಿನ ನಿಮಗೂ ಇದೇ ಸ್ಥಿತಿ ಬರಬಹುದು” ಎಂದು ಮಾರ್ಮಿಕವಾಗಿ ನುಡಿಯಿತು.

ಅಲ್ಲದೆ, ಈ ಪೀಠದ ಆದೇಶವನ್ನು ಮರೆಮಾಚಿ ರಜಾಕಾಲದ ಪೀಠಕ್ಕೆ ಯಾವ ಕಾರಣಕ್ಕಾಗಿ ಅರ್ಜಿ ಸಲ್ಲಿಸಲಾಯಿತು. ತಮ್ಮ ಕ್ರಮವನ್ನು ಇದೇ ಪೀಠದ ಮುಂದೆ ಸಮರ್ಥನೆ ಮಾಡಿಕೊಂಡು ತನಿಖೆಗೆ ತಡೆ ಕೋರಬಹುದಾಗಿತ್ತಲ್ಲವೇ? ಎಂದು ಅಸಮಾಧಾನ ವ್ಯಕ್ತಪಡಿಸಿತು.

“ಅರ್ಜಿಯಲ್ಲಿ ಪ್ರಕರಣಕ್ಕೆ ಯಾವುದೇ ಸಂಬಂಧವಿಲ್ಲದ ವ್ಯಕ್ತಿಗಳ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಈ  ಅರ್ಜಿಯನ್ನು ಸಿದ್ದಪಡಿಸಿದ್ದು ಯಾರು? ಬೇರೆ ಯಾವುದೋ ಪ್ರಕರಣದ ವಿವರಗಳನ್ನು ಇಲ್ಲಿ ಕಾಪಿ-ಪೇಸ್ಟ್ ಮಾಡಲಾಗಿದೆಯೇ? ಒದ್ದಿರುವುದಕ್ಕೂ ಇವರಿಗೂ ಏನು ಸಂಬಂಧ? ಎಂಬುದನ್ನು ತಿಳಿಸಿಲ್ಲ” ಎಂದು ಪೀಠ ತರಾಟೆಗೆ ತೆಗೆದುಕೊಂಡಿತು.

ಪ್ರಕರಣ ಸಂಬಂಧ ಈ ಹಿಂದೆ ನಡೆದಿದ್ದ ವಿಚಾರಣೆ ವೇಳೆ ಪೀಠ, ಪ್ರಕರಣದ ತನಿಖೆಗೆ ಹಾಗೂ ಇಲಾಖಾ ವಿಚಾರಣೆಗೆ ಆದೇಶಿಸಿತ್ತು. ಆದರೆ, ಅರ್ಜಿದಾರರು ಈ ಆದೇಶದ ಪ್ರತಿಯನ್ನು ಲಗತ್ತಿಸದೇ, ಸತ್ಯ ಮರೆಮಾಚಿ ರಜಾಕಾಲದ ಪೀಠದಿಂದ ತನಿಖೆಗೆ ಮಧ್ಯಂತರ ತಡೆ ಪಡೆದುಕೊಂಡಿದ್ದರು.

ಪ್ರಕರಣದ ಹಿನ್ನೆಲೆ: ರಸ್ತೆ ಜಗಳದ ಸಂತ್ರಸ್ತೆಯಾಗಿದ್ದ ಮಹಿಳಾ ವಕೀಲರೊಬ್ಬರು ದೂರು ನೀಡಲು ಪೊಲೀಸ್ ಠಾಣೆಗೆ ಬಂದಾಗ ತಾಸುಗಟ್ಟಲೆ ಕಾಯಿಸಲಾಗಿತ್ತು. ಇದರಿಂದ ಆಕ್ರೋಶಗೊಂಡು ಅವರು ಮೇಜಿನ ಮೇಲಿದ್ದ ಕಡತಗಳನ್ನು ಕೆಳಗೆ ತಳ್ಳಿದ್ದರು. ಈ ವೇಳೆ ಅಲ್ಲಿಗೆ ಬಂದಿದ್ದ ಇನ್‌ಸ್ಪೆಕ್ಟರ್‌ ಪದ್ಮಾವತಿ ಅವರು ವಕೀಲರ ಮೇಲೆ ಹಲ್ಲೆ ನಡೆಸಿ ಬೂಟು ಕಾಲಿನಿಂದ ಒದ್ದಿದ್ದರು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಈ ಸಂಬಂಧ ದಾಖಲಾಗಿದ್ದ ಎಫ್​ಐಆರ್ ರದ್ದುಕೋರಿ ವಕೀಲರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಪೀಠವು ಅರ್ಜಿದಾರ ವಕೀಲೆಯ ವಿರುದ್ಧದ ಎಫ್​ಐಆರ್​ ರದ್ದುಪಡಿಸಲು ನಿರಾಕರಿಸಿತ್ತು. ಅಲ್ಲದೆ, ಬೂಟ್​ ಕಾಲಿನಿಂದ ಒದ್ದಿದ್ದ ಮಹಿಳಾ ಪಿಎಸ್​ಐ ವಿರುದ್ಧ ಎಫ್​ಐಆರ್​ ದಾಖಲಿಸಿ ತನಿಖೆ ನಡೆಸಬೇಕು. ಜೊತೆಗೆ ಇಲಾಖಾ ತನಿಖೆ ನಡೆಸಬೇಕು ಎಂದು ನಿರ್ದೇಶನ ನೀಡಿತ್ತು. ಆದರೆ, ಮಹಿಳಾ ಪಿಎಸ್​ಐ, ಈ ಆದೇಶವನ್ನು ಮರೆಮಾಚಿ ಹೈಕೋರ್ಟ್​ನ ರಜಾಕಾಲಿದ ಪೀಠದಲ್ಲಿ ತನಿಖೆಗೆ ತಡೆ ಪಡೆದುಕೊಂಡಿದ್ದರು.

Kannada Bar & Bench
kannada.barandbench.com