ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣಗೆ ಜಾಮೀನು ಮಂಜೂರು ಮಾಡಿರುವ ಆದೇಶದಲ್ಲಿ ಕಾನೂನು ನಿಬಂಧನೆಯನ್ನು ತಪ್ಪಾಗಿ ವ್ಯಾಖ್ಯಾನಿಸಿದಂತಿದೆ ಎಂದು ಶುಕ್ರವಾರ ಕರ್ನಾಟಕ ಹೈಕೋರ್ಟ್ ಮೌಖಿಕವಾಗಿ ಹೇಳಿದೆ.
ರೇವಣ್ಣಗೆ ಜಾಮೀನು ಮಂಜೂರು ಮಾಡಿರುವುದನ್ನು ರದ್ದುಪಡಿಸುವಂತೆ ಕೋರಿ ವಿಶೇಷ ತನಿಖಾ ದಳ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
ಎಸ್‌ಐಟಿ ಪರವಾಗಿ ಹಾಜರಾಗಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್ ಅವರು “ಸಂತ್ರಸ್ತೆಯನ್ನು ಅಪಹರಿಸಿರುವ ಈ ಪ್ರಕರಣ ಅತ್ಯಂತ ಗಂಭೀರವಾಗಿದೆ” ಎಂದರು.
ವಾದ ಮಂಡನೆಯ ವೇಳೆ ಪ್ರೊ. ರವಿವರ್ಮ ಕುಮಾರ್ ಅವರು “ಜಾಮೀನು ನೀಡಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶ ತಪ್ಪಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ವಿಚಾರಣಾಧೀನ ನ್ಯಾಯಾಲಯವು ಐಪಿಸಿ ಸೆಕ್ಷನ್ 364ಎ ಅರ್ಜಿಯಲ್ಲಿ ಪ್ರಮಾದ ಎಸಗಿದೆ” ಎಂದರು.
ಆಗ ಪೀಠವು ವಾದದಲ್ಲಿ ಬಲ ಇದೆ. ದಾಖಲೆಯನ್ನು ಪರಿಶೀಲಿಸಿದರೆ ದೋಷ ಇದ್ದಂತಿದೆ” ಎಂದಿತು. ಆಗ ಪ್ರೊ. ರವಿವರ್ಮ ಕುಮಾರ್ ಅವರು “ದೂರು ನೀಡುವುದರಿಂದ ಆಕೆಯನ್ನು ತಡೆಯಲು ಅಪಹರಿಸಲಾಗಿದೆ. ಸಾಕ್ಷಿಯನ್ನು ಅಪಹರಿಸಲಾಗಿದೆ. ಪ್ರಕರಣವನ್ನು ತುರ್ತಾಗಿ ಆಲಿಸಬೇಕು. ಈ ನಡೆಗೆ ಅನುಮತಿಸಿದರೆ ಯಾರೂ ಕ್ರಿಮಿನಲ್ ಪ್ರಕರಣ ದಾಖಲಿಸಲಾಗದು” ಎಂದರು.
ಆಗ ನ್ಯಾಯಮೂರ್ತಿ ದೀಕ್ಷಿತ್ ಅವರು “ವಾದ ಆಲಿಸಲು ಇದು ಸೂಕ್ತ ಪ್ರಕರಣವಾಗಿದೆ. ನೋಟಿಸ್ ಜಾರಿ ಮಾಡಲಾಗಿದೆ. ಈ ಪೀಠ ಪ್ರತ್ಯೇಕವಾಗಿ ಕುಳಿತಾಗ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಬೇಕು” ಎಂದು ಆದೇಶಿಸಿತು.
ಹೊಳೆನರಸೀಪುರದಲ್ಲಿ ಏಪ್ರಿಲ್ 28ರಂದು ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ದೂರುದಾರೆಯನ್ನು ಅಪಹರಿಸಿದ ಸಂಬಂಧ ಆಕೆಯ ಪುತ್ರ ನೀಡಿದ ದೂರು ಆಧರಿಸಿ ಮೈಸೂರು ಜಿಲ್ಲೆಯ ಕೆ ಆರ್ ನಗರ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ. ಈ ಎರಡೂ ಪ್ರಕರಣಗಳಲ್ಲಿ ರೇವಣ್ಣಗೆ ಜಾಮೀನು ಮಂಜೂರಾಗಿದೆ.
ಕೆ ಆರ್ ನಗರ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ರೇವಣ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನೂ ನ್ಯಾಯಾಲಯವು ಇಂದು ನಡೆಸಿತು. ಪ್ರಾಸಿಕ್ಯೂಷನ್‌ಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು
ರೇವಣ್ಣ ಪರವಾಗಿ ಹಿರಿಯ ವಕೀಲ ಸಿ ವಿ ನಾಗೇಶ್ ಅವರು “ದೂರಿನ ಆರೋಪವನ್ನು ಪರಿಗಣಿಸಿದರೆ ಐಪಿಸಿ 364ಎ ಅಡಿ ರೇವಣ್ಣ ವಿರುದ್ಧ ಪ್ರಕರಣ ದಾಖಲಿಸಲಾಗದು. ಈ ನಿಬಂಧನೆ ಉಲ್ಲೇಖಿಸಲು ಅಪಹರಣ ನಡೆಸಲಾಗಿದೆ ಎಂದು ಆರೋಪಿಸುವುದು ಸಾಕಾಗುವುದಿಲ್ಲ. ಸೆಕ್ಷನ್ 364ಎ ಅನ್ವಯಿಸಲು ಬೇಡಿಕೆ ಅಥವಾ ಬೆದರಿಕೆಯೂ ದೂರಿನ ಭಾಗವಾಗಬೇಕು. ಆದರೆ, ದೂರಿನಲ್ಲಿ ಆ ಆರೋಪವಿಲ್ಲ” ಎಂದರು.
ಮುಂದುವರಿದು, “ಸಂತ್ರಸ್ತೆ ಮಹಿಳೆಯು ಹತ್ತು ವರ್ಷಗಳಿಂದ ರೇವಣ್ಣ ಮನೆಯಲ್ಲಿ ಮನೆಕೆಲಸ ಮಾಡಿದ್ದಾರೆ ಎಂದು ಪ್ರಾಸಿಕ್ಯೂಷನ್ ಹೇಳಿದೆ. ರೇವಣ್ಣ ಆಕೆಯನ್ನು ಅಪಹರಿಸಿಲ್ಲ. ನಾನು ಆಕೆಯನ್ನು ಬರುವಂತೆ ಸೂಚಿಸಿದ್ದರೆ ಆಕೆ ಬರುತ್ತಿದ್ದರು” ಎಂದರು.
ಅಂತಿಮವಾಗಿ ಪೀಠವು ಜೂನ್ 3ರಂದು ವಿಚಾರಣೆ ನಡೆಸಲಾಗುವುದು ಎಂದಿತು. ಇದು ಮುಖ್ಯ ನ್ಯಾಯಮೂರ್ತಿಗಳ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದರು.