ಸಾವನ್ನಪ್ಪಿದ ಪತಿಯ ಎರಡನೇ ಪತ್ನಿಯು ಮೋಟಾರು ಅಪಘಾತ ಪರಿಹಾರಕ್ಕೆ ಅರ್ಹಳು: ಹೈಕೋರ್ಟ್‌

“ಪ್ರಕರಣದಲ್ಲಿ ಮೃತರ ಎರಡನೇ ಪತ್ನಿ & ಮಕ್ಕಳಿಗೂ ಪರಿಹಾರ ದಕ್ಕಬೇಕು. ಆದ್ದರಿಂದ, ಈಗಿನ ಪರಿಹಾರದ ಮೊತ್ತ ₹15 ಲಕ್ಷಕ್ಕೆ ಹೆಚ್ಚುವರಿಯಾಗಿ ಇನ್ನೂ ₹15 ಲಕ್ಷ ಸೇರಿಸಿ ₹30 ಲಕ್ಷ ಪಾವತಿಸಬೇಕು” ಎಂದು ವಿಮಾ ಕಂಪನಿಗೆ ನಿರ್ದೇಶಿಸಿದ ಹೈಕೋರ್ಟ್.‌
ಸಾವನ್ನಪ್ಪಿದ ಪತಿಯ ಎರಡನೇ ಪತ್ನಿಯು ಮೋಟಾರು ಅಪಘಾತ ಪರಿಹಾರಕ್ಕೆ ಅರ್ಹಳು: ಹೈಕೋರ್ಟ್‌
Published on

“ರಸ್ತೆ ಅಪಘಾತಗಳಲ್ಲಿ ಪರಿಹಾರ ಘೋಷಣೆ ಮಾಡುವಾಗ ಮೃತರ ಅವಲಂಬಿತರನ್ನು ಗಹನವಾಗಿ ಪರಿಗಣಿಸಬೇಕಾಗುತ್ತದೆ” ಎಂದು ಈಚೆಗೆ ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್, ಪ್ರಕರಣವೊಂದರಲ್ಲಿ ಮೃತರ ಎರಡನೇ ಪತ್ನಿಗೂ ಸಮಾನ ಪರಿಹಾರ ನೀಡಬೇಕು ಎಂದು ಆದೇಶಿಸಿದೆ.

ದಾವಣಗೆರೆಯ ಮೋಟಾರು ವಾಹನ ಅಪಘಾತಗಳ ಪರಿಹಾರ ನ್ಯಾಯಮಂಡಳಿ ಆದೇಶವನ್ನು ಪ್ರಶ್ನಿಸಿ ಮೃತರ ಪತ್ನಿ ಹಾಗೂ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜಯಂತ್ ಬ್ಯಾನರ್ಜಿ ಮತ್ತು ತಾರಾ ವಿತಾಸ್ತಾ ಗಂಜು ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

Justices Jayant Banerji and Tara Vitasta Ganju
Justices Jayant Banerji and Tara Vitasta Ganju

ಪರಿಹಾರದ ಮೊತ್ತವನ್ನು ದುಪ್ಪಟ್ಟುಗೊಳಿಸಿರುವ ಪೀಠವು “ಈ ಪ್ರಕರಣದಲ್ಲಿ ಮೃತರ ಎರಡನೇ ಪತ್ನಿ ಮತ್ತು ಮಕ್ಕಳಿಗೂ ಪರಿಹಾರ ದಕ್ಕಬೇಕು. ಆದ್ದರಿಂದ, ಈಗಿನ ಪರಿಹಾರದ ಮೊತ್ತ ₹15 ಲಕ್ಷಕ್ಕೆ ಹೆಚ್ಚುವರಿಯಾಗಿ ಇನ್ನೂ ₹15 ಲಕ್ಷ ಸೇರಿಸಿ ಒಟ್ಟ ₹30 ಲಕ್ಷ ಪಾವತಿಸಬೇಕು” ಎಂದು ವಿಮಾ ಕಂಪನಿಗೆ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ನಂದಿಗಾವಿ ಗ್ರಾಮದ ಪಾಂಡುರಂಗಪ್ಪ 2016ರ ಮಾರ್ಚ್ 9 ರಂದು ರಾತ್ರಿ ಮೋಟಾರ್ ಸೈಕಲ್‌ನಲ್ಲಿ ಹಿಂಬದಿ ಸವಾರರಾಗಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಮಾರುತಿ ಆಲ್ಟೊ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದರು.

ಮೃತರ ಮೊದಲ ಪತ್ನಿ ಆಶಾ ಮತ್ತು ತಾಯಿ ಮಹಾಂತಮ್ಮ ಪರಿಹಾರ ಕೋರಿ ಮೋಹಾರು ವಾಹನಗಳ ಪರಿಹಾರ ನ್ಯಾಯಮಂಡಳಿಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ದಾವೆಯಲ್ಲಿ ಮೃತರಿಗೆ ಗೀತಾ ಎಂಬ ಎರಡನೇ ಪತ್ನಿ ಹಾಗೂ ಖುಷಿ ಎಂಬ ಅಪ್ರಾಪ್ತ ವಯಸ್ಸಿನ ಮಗಳು ಇರುವುದನ್ನು ದಾಖಲಿಸಲಾಗಿತ್ತು. ಅದರಂತೆ ಅವರನ್ನೂ ಪ್ರತಿವಾದಿಗಳನ್ನಾಗಿ ಸೇರ್ಪಡೆ ಮಾಡಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ್ದ ದಾವಣಗೆರೆಯ ಸಿವಿಲ್ ನ್ಯಾಯಾಲಯವು “ಕೌಟುಂಬಿಕ ಸಂಬಂಧಗಳ ಕಾನೂನು ಬದ್ಧತೆಯನ್ನು ನಿರ್ಧರಿಸುವುದು ಈ ನ್ಯಾಯಾಲಯದ ವ್ಯಾಪ್ತಿಗೆ ಒಳಪಡುವುದಿಲ್ಲ” ಎಂಬ ಅಭಿಪ್ರಾಯ ವ್ಯಕ್ತಪಡಿಸಿ, ಒಟ್ಟು 8 ಜನ ಆಶ್ರಿತರಿಗೆ ₹15.10 ಲಕ್ಷ ಪರಿಹಾರ ನೀಡಲು ಆದೇಶಿಸಿತ್ತು. ಆದರೆ, ಪರಿಹಾರದ ಮೊತ್ತವನ್ನು ಪರಸ್ಪರ ಹಂಚಿಕೆ ಮಾಡಿರಲಿಲ್ಲ. ಇದನ್ನು ಪ್ರಶ್ನಿಸಿ ಮೊದಲ ಪತ್ನಿ ಮತ್ತು ತಾಯಿ ಹೈಕೋರ್ಟ್ ಮೆಟ್ಟಿಲೇರಿದ್ದರು.

Attachment
PDF
Asha Anr v Ramakrishna S Ghatge Ors
Preview
Kannada Bar & Bench
kannada.barandbench.com