ಕೈಗಾರಿಕಾ ಪ್ರದೇಶ ಮತ್ತು ಹೆಚ್ಚು ಜನಸಂದಣಿಯ ಪ್ರದೇಶದಲ್ಲಿ ಸ್ವಯಂಚಾಲಿತ ನಿರಂತರ ವಾಯು ಗುಣಮಟ್ಟ ನಿಗಾ ವ್ಯವಸ್ಥೆಗಳನ್ನು ಕಡ್ಡಾಯವಾಗಿ ರಾಜ್ಯ ಪರಿಸರ ನಿಯಂತ್ರಣ ಮಂಡಳಿಯು (ಕೆಎಸ್‌ಪಿಸಿಬಿ) ಅಳವಡಿಸಬೇಕು ಎಂದು ಈಚೆಗೆ ಕರ್ನಾಟಕ ಹೈಕೋರ್ಟ್ ಹೇಳಿದೆ.
ದೇಶದ ನಾಗರಿಕರಿಗೆ ಮಾಲಿನ್ಯ ಮುಕ್ತ ವಾತಾವರಣವನ್ನು ಲಭ್ಯವಾಗುವಂತೆ ಮಾಡಲು ಕೆಎಸ್‌ಪಿಸಿಬಿಯು ವಾಯು ಮತ್ತು ಜಲ ಕಾಯಿದೆಯನ್ನು ನಿರ್ವಹಿಸುವ ಸೂಕ್ತ ವ್ಯವಸ್ಥೆ ತರಬೇಕಾಗಿದೆ ಎಂದು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ಆದೇಶಿಸಿದೆ.
ಜನಸಂಖ್ಯೆಯ ಮೇಲೆ ಪರಿಣಾಮ ಬೀರುವ ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯ ಯುಗದಲ್ಲಿ ಕೆಎಸ್‌ಪಿಸಿಬಿ ಅಥವಾ ರಾಜ್ಯಕ್ಕೆ ವೆಚ್ಚವು ಅಡ್ಡಿಯಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
“ಮಾಲಿನ್ಯ ರಹಿತ ಪರಿಸರದ ಹಕ್ಕು ಸಂವಿಧಾನದ 21ನೇ ವಿಧಿಯಡಿ ಮೂಲಭೂತ ಜೀವಿಸುವ ಹಕ್ಕಾಗಿದೆ. ದೇಶದ ನಿವಾಸಿಗಳನ್ನು ಮಾಲಿನ್ಯಗೊಂಡಿರುವ ಪರಿಸರದಲ್ಲಿ ವಾಸಿಸುವ ಮೂಲಕ ರೋಗದಿಂದ ಬಳಲುವಂತೆ ಮಾಡಲಾಗದು” ಎಂದು ನ್ಯಾಯಾಲಯ ಹೇಳಿದೆ.
ಈ ಹಿನ್ನೆಲೆಯಲ್ಲಿ, ಕೆಎಸ್‌ಪಿಸಿಬಿ ಅಧ್ಯಕ್ಷರಿಗೆ ಆರು ವಾರಗಳಲ್ಲಿ ರಾಜ್ಯದಾದ್ಯಂತ ವಾಯು ಗುಣಮಟ್ಟ ನಿಗಾ ವ್ಯವಸ್ಥೆಯ ಕುರಿತಾದ ವಿಸ್ತೃತ ಯೋಜನಾ ವರದಿ ಸಲ್ಲಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ.
ಅಧಿಕೃತ ಪರವಾನಗಿ ಪಡೆಯದೇ ಬಾಳೆಕಾಯಿ ಚಿಪ್ಸ್ ಉತ್ಪಾದನಾ ಘಟಕ ನಡೆಸಲಾಗುತ್ತಿದ್ದು, ಅದನ್ನು ನಿರ್ಬಂಧಿಸುವಂತೆ ಕೋರಿ ಶೃಂಗೇರಿ ನಿವಾಸಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಆದೇಶ ಮಾಡಿದೆ.
ದೂರು ಸ್ವೀಕಾರವಾದ ತಕ್ಷಣ ಕೆಎಸ್‌ಪಿಸಿಬಿಯು ಸ್ಥಳ ಪರಿಶೀಲನೆ ನಡೆಸಿ, ಅಗತ್ಯವಾದ ಪರೀಕ್ಷೆಗಳು ನಡೆಸಬೇಕು ಮತ್ತು ಅವುಗಳ ಪರಿಶೀಲನೆಗಾಗಿ ಮಾದರಿಗಳನ್ನು ಸಂಬಂಧಿತ ಪ್ರಯೋಗಾಲಯಕ್ಕೆ ರವಾನಿಸಬೇಕು ಎಂದು ನ್ಯಾಯಾಲಯ ಹೇಳಿದೆ. ದೂರುಗಳನ್ನು ಆಧರಿಸಿ ಮಾತ್ರವೇ ಮಾಲಿನ್ಯದ ಮೇಲೆ ನಿಗಾ ಇಡುವುದಲ್ಲ. ಈ ಸಂಬಂಧ ಕೆಎಸ್‌ಪಿಸಿಬಿಯು ನಿರಂತರವಾಗಿ ನಿಗಾ ವ್ಯವಸ್ಥೆ ರೂಪಿಸಬೇಕಿದೆ ಎಂದಿದೆ.
ಈ ನೆಲೆಯಲ್ಲಿ ಉದ್ಯಮಗಳು ಮಾಲಿನ್ಯ ಮಟ್ಟ ಅಳೆಯಲಯ ಸೂಕ್ತ ವ್ಯವಸ್ಥೆ ಮಾಡಬೇಕು. ಅಲ್ಲಿ ಅಳವಡಿಸಲಾದ ಸಾಧನಗಳು ನೈಜ ಸಮಯದಲ್ಲಿ ವರದಿ ನೀಡಲಿದ್ದು, ಅದನ್ನು ಸಂಬಂಧಿತ ಕೆಎಸ್‌ಪಿಸಿಬಿ ದತ್ತಾಂಶಕ್ಕೆ ಕಳುಹಿಸಿಕೊಡಬೇಕು ಎಂದಿದೆ.
ಕೆಂಪು ಮತ್ತು ಕೇಸರಿ ವಿಭಾಗದ ಪರಿಸರ ವಲಯದಲ್ಲಿ ಬರುವ ಕಾರ್ಖಾನೆಗಳಲ್ಲಿ ಸ್ವಯಂಚಾಲಿತ ಮತ್ತು ನಿರಂತರ ಕಾರ್ಯನಿರ್ವಹಿಸುವ ಸ್ಟೇಶನ್‌ಗಳನ್ನು ಸ್ಥಾಪಿಸಬೇಕು. ಇವುಗಳು ಸುತ್ತಲಿನ ವಾಯು ಮತ್ತು ಗಾಳಿಯ ಗುಣಮಟ್ಟ ಪರಿಶೀಲಿಸಲಿವೆ. ಮುಂದಿನ ಆರು ತಿಂಗಳಲ್ಲಿ ಸರ್ಕಾರವು ಇವುಗಳ ಸ್ಥಾಪನೆ ಮತ್ತು ಕಾರ್ಯನಿರ್ವಹಣೆಯನ್ನು ಹೇಗೆ ಸಾಧಿಸಲಿದೆ ಎಂಬುದಕ್ಕೆ ಸಂಬಂಧಿಸಿದಂತೆ ವಿಸ್ತೃತ ವರದಿಯನ್ನು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯು ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.