ಭಿಕ್ಷಾಟನೆ ತಡೆಗೆ ಕೈಗೊಂಡ ಕ್ರಮಗಳ ಸಮಗ್ರ ವರದಿ ಸಲ್ಲಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಭಿಕ್ಷುಕನನ್ನು ಶಿಕ್ಷಿಸಬಾರದು; ಆದರೆ ಜನರನ್ನು ಬಲವಂತವಾಗಿ ಭಿಕ್ಷಾಟನೆಗೆ ತಳ್ಳುತ್ತಿರುವ ಗ್ಯಾಂಗ್‌ಗಳ ವಿರುದ್ಧ ಸರ್ಕಾರ ಗಂಭೀರವಾಗಿ ಚಿಂತಿಸಬೇಕು ಎಂದು ನ್ಯಾಯಾಲಯದ ಮೌಖಿಕ ಅಭಿಪ್ರಾಯ.
Karnataka High Court
Karnataka High Court
Published on: 

ಭಿಕ್ಷಾಟನೆಯನ್ನು ಅಪರಾಧ ಎಂದು ಪರಿಗಣಿಸಿ ಭಿಕ್ಷುಕರನ್ನು ಶಿಕ್ಷಿಸುವ ಬದಲು, ಜನರನ್ನು ಬಲವಂತವಾಗಿ ಭಿಕ್ಷೆ ಬೇಡುವಂತೆ ಮಾಡುತ್ತಿರುವ ಜಾಲವನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್, ರಾಜ್ಯದಲ್ಲಿ ಭಿಕ್ಷಾಟನೆ ತಡೆಗಟ್ಟಲು ಹಾಗೂ ನಿರ್ಗತಿಕರ ಪುನರ್ವಸತಿಗೆ ಕೈಗೊಂಡಿರುವ ಕ್ರಮಗಳ ಕುರಿತು ಸಮಗ್ರ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಭಿಕ್ಷಾಟನೆಯನ್ನು ಅಪರಾಧ ಎಂದು ಪರಿಗಣಿಸುವ ಕರ್ನಾಟಕ ಭಿಕ್ಷಾಟನೆ ನಿಷೇಧ ಕಾಯಿದೆ, 1975ರ ಹಲವು ಸೆಕ್ಷನ್‌ಗಳನ್ನು ರದ್ದುಗೊಳಿಸುವಂತೆ ಹಾಗೂ ಭಿಕ್ಷುಕರ ಆಶ್ರಯ ತಾಣಗಳ ಸುಧಾರಣೆ, ಭಿಕ್ಷುಕರ ಸೆಸ್ ಸಂಗ್ರಹ ಮತ್ತು ಅದರ ಲೆಕ್ಕಪತ್ರ ನಿರ್ವಹಣೆಗೆ ಸಂಬಂಧಿಸಿದಂತೆ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) 2020ರಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಮತ್ತು ಕೆ ಎಸ್ ಭರತ್ ಕುಮಾರ್ ಅವರ ವಿಭಾಗೀಯ ಪೀಠ ನಡೆಸಿತು.

ವಿಚಾರಣೆ ವೇಳೆ, “ಭಿಕ್ಷುಕನನ್ನು ಶಿಕ್ಷಿಸಬಾರದು. ಆದರೆ, ಜನರನ್ನು ಭಿಕ್ಷೆ ಬೇಡುವಂತೆ ಒತ್ತಾಯಿಸಲಾಗುತ್ತಿದೆ ಎಂಬ ದೊಡ್ಡ ಸಮಸ್ಯೆಯ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸಬೇಕು. ಏಕೆಂದರೆ, ಈ ದಂಧೆಯ ಹಿಂದೆ ಗ್ಯಾಂಗ್‌ಗಳು ಕಾರ್ಯನಿರ್ವಹಿಸುತ್ತಿವೆ” ಎಂದು ಪೀಠ ಮೌಖಿಕವಾಗಿ ಅಭಿಪ್ರಾಯಪಟ್ಟಿತು.

ಹಸಿವಿನಿಂದ ಭಿಕ್ಷೆ ಬೇಡುವುದನ್ನು ಅಪರಾಧ ಎಂದು ಪರಿಗಣಿಸಲಾಗದು. ಅದು ಬದುಕುವ ಹಕ್ಕಿನ ಭಾಗವಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಬಡತನದ ಕಾರಣಕ್ಕೆ ಭಿಕ್ಷೆ ಬೇಡುವುದನ್ನು ಅರ್ಥಮಾಡಿಕೊಳ್ಳಬಹುದು. ಆದರೆ, ಭಿಕ್ಷಾಟನೆಯನ್ನೇ ಸಂಘಟಿತ ದಂಧೆಯನ್ನಾಗಿ ಮಾಡಿಕೊಳ್ಳುವುದನ್ನು ಸಹಿಸಲಾಗದು ಎಂಬ ಅಭಿಪ್ರಾಯ ವ್ಯಕ್ತಪಡಿಸಿತು.

ಇದೇ ವೇಳೆ, ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿರುವ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳುವಂತೆ 2021ರ ಸೆಪ್ಟೆಂಬರ್ 8ರಂದು ನ್ಯಾಯಾಲಯ ನೀಡಿದ್ದ ಆದೇಶವನ್ನು ರಾಜ್ಯ ಸರ್ಕಾರ ಪಾಲಿಸಿದೆಯೇ ಎಂಬುದರ ಕುರಿತು ಸಮಗ್ರ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ನಿರ್ದೇಶಿಸಿತು.

ಅಂತಿಮವಾಗಿ, ವಿಚಾರಣೆಯನ್ನು 2027ರ ಜನವರಿ 12ಕ್ಕೆ ಮುಂದೂಡಿತು.