ಕೇರಳ-ಕರ್ನಾಟಕ ನಡುವಿನ ಸಂಚಾರ ನಿರ್ಬಂಧ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟಿಸ್‌ ಜಾರಿಗೊಳಿಸಿದ ಕರ್ನಾಟಕ ಹೈಕೋರ್ಟ್‌

ಉದ್ಯೋಗ, ವ್ಯಾಪಾರ, ವಾಣಿಜ್ಯ ಚಟುವಟಿಕೆಗಳು, ಶಿಕ್ಷಣ ಮತ್ತು ಆಸ್ಪತ್ರೆ ವಿಚಾರಗಳಲ್ಲಿ ಕೇರಳದ ಕಾಸರಗೋಡು ಮತ್ತು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಗಳ ಜನರು ಪರಸ್ಪರ ಒಬ್ಬರನ್ನೊಬ್ಬರು ಅವಲಂಬಿಸಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
Karnataka Kerala border
Karnataka Kerala border
Published on

ಕೋವಿಡ್‌ ಹಿನ್ನೆಲೆಯಲ್ಲಿ ಕೇರಳ-ಕರ್ನಾಟಕ ಗಡಿಯಲ್ಲಿನ ಓಡಾಟಕ್ಕೆ ನಿರ್ಬಂಧ ವಿಧಿಸಿರುವ ಕರ್ನಾಟಕ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕರ್ನಾಟಕ ಹೈಕೋರ್ಟ್‌ ಗುರುವಾರ ನೋಟಿಸ್‌ ಜಾರಿಗೊಳಿಸಿದ್ದು ಪ್ರತಿಕ್ರಿಯಿಸುವಂತೆ ಆದೇಶಿಸಿದೆ.

ಕರ್ನಾಟಕ-ಕೇರಳ ಗಡಿಯಲ್ಲಿ ನೆಲೆಸಿರುವವರು ಮತ್ತು ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯಲ್ಲಿ ನೆಲೆಸಿರುವ ಜನರ ಪರವಾಗಿ ವಕೀಲ ಬಿ ಸುಬ್ಬಯ್ಯ ರೈ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರಿದ್ದ ವಿಭಾಗೀಯ ಪೀಠ ನಡೆಸಿತು.

ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಜನರು ಪರಸ್ಪರ ಒಬ್ಬರನ್ನೊಬ್ಬರು ಅವಲಂಬಿಸಿದ್ದು, ಉದ್ಯೋಗ, ವ್ಯಾಪಾರ-ವಾಣಿಜ್ಯ ಚಟುವಟಿಕೆಗಳು, ಶಿಕ್ಷಣ ಮತ್ತು ಮಂಗಳೂರಿನಲ್ಲಿರುವ ಪ್ರಮುಖ ಆಸ್ಪತ್ರೆಗಳನ್ನು ಹೆಚ್ಚಿಗೆ ನೆಚ್ಚಿಕೊಂಡಿದ್ದಾರೆ. ಈ ಎಲ್ಲಾ ಕಾರಣಗಳಿಗಾಗಿ ಗಡಿಯಲ್ಲಿ ನೆಲೆಸಿರುವ 80,000ಕ್ಕೂ ಹೆಚ್ಚು ಜನರು ಅಥವಾ ಶೇ. 35 ರಿಂದ 40ರಷ್ಟು ಜನರು ದಿನನಿತ್ಯ ಅತ್ತಿಂದಿತ್ತ ಓಡಾಡುತ್ತಾರೆ. ಕೇರಳ-ಕರ್ನಾಟಕ ಗಡಿಯ ತಲಪ್ಪಾಡಿ, ನೆಟ್ಟಣಗೆ, ಮುದ್ನೂರು, ಮೊನಲಾ, ಸರಡಕ್ಕ ಮತ್ತು ಕಾಸರಗೋಡಿನ ಜಲಸೂರು ಪ್ರದೇಶಗಳಲ್ಲಿನ ಆರ್‌ಟಿ-ಪಿಸಿಆರ್‌ ನೆಗೆಟಿವ್‌ ವರದಿಗಳನ್ನು ಹೊಂದಿರುವ ಜನರ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಉಳಿದ ಎಲ್ಲಾ ಚೆಕ್‌ಪೋಸ್ಟ್‌ಗಳನ್ನು ಬಂದ್‌ ಮಾಡಲಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

Also Read
ಕೋವಿಡ್‌ ವಿರುದ್ಧದ ಹೋರಾಟ: 2020ರಲ್ಲಿ ಸುಪ್ರೀಂ ಕೋರ್ಟ್‌ ಹೊರಡಿಸಿದ ಹತ್ತು ಪ್ರಮುಖ ಆದೇಶಗಳು

ಕೇರಳದಿಂದ ಕರ್ನಾಟಕಕ್ಕೆ ಆಗಮಿಸುವ ಜನರ ಮೇಲೆ ವಿಶೇಷ ನಿಗಾ ಇಡುವಂತೆ ಕರ್ನಾಟಕವು ಫೆಬ್ರವರಿ 16ರಂದು ಸುತ್ತೋಲೆ ಹೊರಡಿಸಿದೆ. ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥರಾದ ಜಿಲ್ಲಾಧಿಕಾರಿಯು ಡಿಎಂ ಕಾಯಿದೆಯ ಅನ್ವಯ ಫೆಬ್ರವರಿ 18ರಂದು ಕಾಸರಗೋಡಿನಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಓಡಾಡುವವರಿಗೆ ನಿರ್ಬಂಧ ವಿಧಿಸಿತ್ತು. ಈ ಆಕ್ಷೇಪಾರ್ಹ ಆದೇಶವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾರ್ಗಸೂಚಿಗೆ ವಿರುದ್ಧವಾಗಿದೆ ಎಂಬುದು ಅರ್ಜಿದಾರರ ವಾದವಾಗಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿ ಮತ್ತು ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ಗಡಿ ಪ್ರದೇಶಗಳ ಜನರ ಓಡಾಟಕ್ಕೆ ನಿರ್ಬಂಧ ವಿಧಿಸುವುದಿಲ್ಲ. ಆದರೆ, ಆರ್‌ಟಿ-ಪಿಸಿಆರ್‌ ನೆಗೆಟಿವ್‌ ವರದಿ ಸಲ್ಲಿಸುವಂತೆ ನಿಯಮ ವಿಧಿಸಲಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ 16ರ ಕರ್ನಾಟಕ ಸರ್ಕಾರದ ಆದೇಶ ವಜಾಗೊಳಿಸುವಂತೆ ಮನವಿದಾರರು ಕೋರಿದ್ದಾರೆ. ವಿಚಾರಣೆಯನ್ನು ಮಾರ್ಚ್‌ 5ಕ್ಕೆ ಮುಂದೂಡಲಾಗಿದೆ.

Kannada Bar & Bench
kannada.barandbench.com