ರಾಜಕಾರಣಿಗಳು, ರೈತರು, ಹೋರಾಟಗಾರರ ವಿರುದ್ಧದ 60 ಪ್ರಕರಣ ಹಿಂತೆಗೆತ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

“ಹೈಕೋರ್ಟ್‌ನ ಈ ಆದೇಶವನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ತೋರಿಸಿದರೆ ಪ್ರಕರಣ ಹಿಂಪಡೆಯಲು ಯಾವುದೇ ನ್ಯಾಯಾಲಯ ಅನುಮತಿಸುವುದಿಲ್ಲ. ಒಂದೊಮ್ಮೆ ಸಕ್ಷಮ ನ್ಯಾಯಾಲಯ ಅದಕ್ಕೆ ಅನುಮತಿಸಿದರೆ ಅಪಾಯ ತಂದುಕೊಳ್ಳಲಿದೆ” ಎಂದ ಪೀಠ.
ರಾಜಕಾರಣಿಗಳು, ರೈತರು, ಹೋರಾಟಗಾರರ ವಿರುದ್ಧದ 60 ಪ್ರಕರಣ ಹಿಂತೆಗೆತ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌
Published on

ಹಾಲಿ ಕೇಂದ್ರ ಮತ್ತು ರಾಜ್ಯ ಸಚಿವರು, ಮಾಜಿ ಸಚಿವರು, ಹಾಲಿ ಮತ್ತು ಮಾಜಿ ಶಾಸಕರು, ಕನ್ನಡಪರ ಹೋರಾಟಗಾರರು, ರೈತ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳಿಗೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವ 60 ಕ್ರಿಮಿನಲ್‌ ಪ್ರಕರಣಗಳನ್ನು ಹಿಂಪಡೆಯುವುದಕ್ಕೆ ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಗುರುವಾರ ನೋಟಿಸ್‌ ಜಾರಿ ಮಾಡಿದೆ.

ಸರ್ಕಾರಿ ಅಭಿಯೋಜಕರಿಗೆ ಅಪರಾಧ ಪ್ರಕ್ರಿಯಾ ಸಂಹಿತೆ ಸೆಕ್ಷನ್‌ 321ರ ಅಡಿ ರಾಜ್ಯದ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ 60 ಪ್ರಕರಣಗಳನ್ನು ಹಿಂಪಡೆಯುವಂತೆ ರಾಜ್ಯ ಸರ್ಕಾರವು 2024ರ ಅಕ್ಟೋಬರ್‌ 10ರಂದು ಮಾಡಿರುವ ಆದೇಶ ಬದಿಗೆ ಸರಿಸಲು ಕೋರಿ ಬೆಂಗಳೂರಿನ ವಕೀಲ ಗಿರೀಶ್‌ ಭಾರದ್ವಾಜ್‌ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ ಐ ಅರುಣ್‌ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರು ಮೇಲ್ನೋಟಕ್ಕೆ ಗಂಭೀರ ಪ್ರಕರಣ ಎಂದು ಮನದಟ್ಟು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದಿರುವ ನ್ಯಾಯಾಲಯವು ರಾಜ್ಯ ಸರ್ಕಾರ, ಅಭಿಯೋಜನೆ, ಕಾನೂನು ಮತ್ತು ಪೊಲೀಸ್‌ ಇಲಾಖೆಗೆ ನೋಟಿಸ್‌ ಜಾರಿಗೊಳಿಸಿದ್ದು, ವಿಚಾರಣೆಯನ್ನು ಮಾರ್ಚ್‌ 17ಕ್ಕೆ ಮುಂದೂಡಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ವೆಂಕಟೇಶ್‌ ದಳವಾಯಿ ಅವರು “ರಾಜ್ಯ ಸರ್ಕಾರವು ಸರ್ಕಾರಿ ಅಭಿಯೋಜಕರಿಗೆ ನಿರ್ದೇಶನ ನೀಡಲಾಗದು, ಸಿಆರ್‌ಪಿಸಿ ಸೆಕ್ಷನ್‌ 321ರ ಅಡಿ ಸರ್ಕಾರಿ ಅಭಿಯೋಜಕರಿಗೆ ಅಂತಿಮ ನಿರ್ಣಯ ತೆಗೆದುಕೊಳ್ಳುವ ಅಧಿಕಾರವಿದೆ. ಸರ್ಕಾರಿ ಅಭಿಯೋಜಕರ ಕಚೇರಿಯು ಅಂಚೆ ಕಚೇರಿಯ ರೀತಿ ನಡೆದುಕೊಳ್ಳಲಾಗದು ಎಂದು ಸುಪ್ರೀಂ ಕೋರ್ಟ್‌ ತೀರ್ಪೊಂದರಲ್ಲಿ ಹೇಳಿದೆ. ಪ್ರಕರಣ ಹಿಂಡೆಯುವಂತೆ ಅಭಿಯೋಜಕರಿಗೆ ಸರ್ಕಾರ ಒತ್ತಡ ಹಾಕಲಾಗದು. ಪ್ರಕರಣಗಳನ್ನು ಹಿಂಪಡೆಯಲು ಅರ್ಹವಾಗಿಲ್ಲ ಎಂದು ಕಾನೂನು ಮತ್ತು ಅಭಿಯೋಜನಾ ಇಲಾಖೆಯು ಟಿಪ್ಪಣಿಯಲ್ಲಿ ಹೇಳಿವೆ. ಅದಾಗ್ಯೂ, ಸರ್ಕಾರ ಆದೇಶ ಮಾಡಿದೆ” ಎಂದರು.

“ಹಲವು ಆರೋಪಿಗಳ ಮೇಲೆ ದೊಂಬಿ, ಕೊಲೆ ಪ್ರಯತ್ನ, ಪೊಲೀಸ್‌ ಅಧಿಕಾರಿಗಳ ಮೇಲೆ ಹಲ್ಲೆ ಮತ್ತು ಅತಿಕ್ರಮ ಪ್ರವೇಶದಂಥ ಗಂಭೀರ ಆರೋಪಗಳಿವೆ. ಸಾಮಾಜಿಕ ಮಾಧ್ಯಮದಲ್ಲಿನ ಪೋಸ್ಟ್‌ಗೆ ಆಕ್ಷೇಪಿಸಿ ಹುಬ್ಬಳ್ಳಿಯಲ್ಲಿ ಒಂದು ಕೋಮಿನವರು ಹಳೇಹುಬ್ಬಳ್ಳಿ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ್ದ ಸಂಬಂಧ ದಾಖಲಾಗಿರುವ ಪ್ರಕರಣವೂ ಇದರಲ್ಲಿ ಸೇರಿದೆ” ಎಂದರು.

ಕೊನೆಯಲ್ಲಿ ದಳವಾಯಿ ಅವರು 2024ರ ಅಕ್ಟೋಬರ್‌ರ ಆಕ್ಷೇಪಾರ್ಹವಾದ ಆದೇಶವನ್ನು ಅಮಾನತುಗೊಳಿಸಬೇಕು ಎಂದು ಕೋರಿದರು. ಇದಕ್ಕೆ ಪೀಠವು “ವಿಚಾರಣಾಧೀನ ನ್ಯಾಯಾಲಯುವ ಇನ್ನಷ್ಟೇ ಸರ್ಕಾರಿ ಅಭಿಯೋಜಕರ ಅರ್ಜಿಯನ್ನು ಪರಿಶೀಲಿಸಬೇಕಿದೆ. ಇದಕ್ಕೂ ಮೊದಲೇ ನಾವು ನಿರ್ಧರಿಸಲಾಗದು. ಈ ಆದೇಶವನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ತೋರಿಸಿದರೆ ಪ್ರಕರಣ ಹಿಂಪಡೆಯಲು ಯಾವುದೇ ನ್ಯಾಯಾಲಯ ಅನುಮತಿಸುವುದಿಲ್ಲ. ಒಂದೊಮ್ಮೆ ಸಕ್ಷಮ ನ್ಯಾಯಾಲಯ ಅದಕ್ಕೆ ಅನುಮತಿಸಿದರೆ ಅಪಾಯ ತಂದುಕೊಳ್ಳಲಿದೆ” ಎಂದು ಮೌಖಿಕವಾಗಿ ಹೇಳಿತು.

ಯಾರೆಲ್ಲರ ವಿರುದ್ಧ ಪ್ರಕರಣ ಹಿಂಪಡೆಯಲಾಗಿದೆ: ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ್‌, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ, ವಿಧಾನ ಪರಿಷತ್‌ ಸದಸ್ಯ ಸಿ ಟಿ ರವಿ, ನರಗುಂದದ ಬಿ ಆರ್‌ ಯಾವಗಲ್‌, ಹಿರೇಕೆರೂರು ಶಾಸಕ ಯು ಬಿ ಬಣಕಾರ್‌, ಕಾಂಗ್ರೆಸ್‌ ಕಲಬುರ್ಗಿ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ, ಮಾಜಿ ಶಾಸಕರಾದ ದಾವಣಗೆರೆಯ ಎಸ್‌ ಎ ರವೀಂದ್ರನಾಥ್‌, ಬೆಳಗಾವಿಯ ಸಂಜಯ್‌ ಪಾಟೀಲ್, ಬಾಗಲಕೋಟೆಯ ಡಾ. ವೀರಣ್ಣ ಚರಂತಿಮಠ ಅವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಲಾಗಿದೆ.

Also Read
ರಾಜಕಾರಣಿಗಳು, ರೈತರು, ಹೋರಾಟಗಾರರ ವಿರುದ್ಧದ ಪ್ರಕರಣ ವಾಪಸಾತಿ ಪ್ರಶ್ನಿಸಿದ್ದ ಅರ್ಜಿ ಹಿಂಪಡೆಯಲು ಹೈಕೋರ್ಟ್‌ ಅನುಮತಿ

ಅಲ್ಲದೆ, ಹೊನ್ನಾಳಿ ಎಂ ಪಿ ರೇಣುಕಾಚಾರ್ಯ, ಬೆಳಗಾವಿಯ ಅನಿಲ ಬೆನಕೆ, ಡಾ. ಎಸ್‌ ಸಿದ್ದಯ್ಯ, ಬೆಂಗಳೂರು ಗಾಮಾಂತರ ಜಿಲ್ಲೆಯ ಬಿ ಶಿವಣ್ಣ, ಭದ್ರಾವತಿಯ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಎಚ್‌ ಆರ್‌ ಬಸವರಾಜಪ್ಪ, ತುಮಕೂರಿನ ಯುವ ಕಾಂಗ್ರೆಸ್‌ ಅಧ್ಯಕ್ಷ ಶಶಿ ಹುಲಿಕುಂಟೆ, ಕಲಬುರ್ಗಿ ಜಿಲ್ಲೆಯ ದರ್ಗಾ ಹಜರತ್‌ ಮಲಿಕುಲ್‌ ಮಶಾಲ್‌ಕಹ್‌ ಮಕ್ದೂಮ್‌ ಲಾಡಿ ಅನ್ಸಾರಿ (ಸುನ್ನಿ) ಅಧ್ಯಕ್ಷರು ಮತ್ತು ಕಾರ್ಯದರ್ಶಿ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘ, ಅಖಿಲ ಕರ್ನಾಟಕ ಡಿ ಕೆ ಶಿವಕುಮಾರ್‌ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಎಂ ಎಸ್‌ ಅಂಗಡಿ, ಮೈಸೂರಿನ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎನ್‌ ಭಾಸ್ಕರ್‌, ಭೀಮ್‌ ಆರ್ಮಿ ಜಿಲ್ಲಾ ಸಮಿತಿಯ ಅಧ್ಯಕ್ಷ ರಾಘು ಚಾಕ್ರಿ ಅವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಲಾಗಿದೆ.

ಅದೇ ರೀತಿ, ಕರವೇ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ, ಚಿಕ್ಕಬಳ್ಳಾಪುರದ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆಂಜನೇಯರೆಡ್ಡಿ, ಹುಬ್ಬಳ್ಳಿಯ ಅಂಜುಮಾನ ಇ-ಇಸ್ಲಾಂ ಅಡಿ ರಚಿಸಲಾಗಿದ್ದ ಪರಿಹಾರ ಸಮಿತಿಯ ಸದಸ್ಯರು, ರಾಯಚೂರಿನ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಎಸ್‌ ಪ್ರಸಾದ್‌, ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪರವಾಗಿ ಚುಕ್ಕಿ ನಂಜುಂಡಸ್ವಾಮಿ ಅವರು ಶಿವಮೊಗ್ಗ, ಹಾವೇರಿ, ಬಾಗಲಕೋಟೆ, ಉತ್ತರ ಕನ್ನಡದ ರೈತರ ವಿರುದ್ಧದ ಪ್ರಕರಣ ಹಿಂಪಡೆಯಲು ರಾಜ್ಯ ಸರ್ಕಾರ ಆದೇಶಿಸಿದೆ.

Kannada Bar & Bench
kannada.barandbench.com