ಕೆಎಸ್‌ಪಿಸಿಬಿ ಅಧ್ಯಕ್ಷರಾಗಿ ಶಾಸಕ ಬಿ ಶಿವಣ್ಣ ನಾಮನಿರ್ದೇಶನ: ಸರ್ಕಾರದ ಪ್ರತಿಕ್ರಿಯೆ ಬಯಸಿದ ಹೈಕೋರ್ಟ್‌

ಜಲ ಮಾಲಿನ್ಯ ತಡೆಗಟ್ಟುವಿಕೆ & ನಿಯಂತ್ರಣ ಕಾಯಿದೆ–1974ರ ಸೆಕ್ಷನ್ 4(2)(ಎ) ಪ್ರಕಾರ, ಅಧ್ಯಕ್ಷ ಹುದ್ದೆ ಅಲಂಕರಿಸುವವರು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ವಿಶೇಷ ಜ್ಞಾನ ಅಥವಾ ಪ್ರಾಯೋಗಿಕ ಅನುಭವವನ್ನು ಹೊಂದಿರಬೇಕು ಎಂಬುದು ಅರ್ಜಿದಾರರ ವಾದ.
KSPCB and Karnataka HC
KSPCB and Karnataka HC
Published on: 

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ಅಧ್ಯಕ್ಷ ಆನೇಕಲ್ ವಿಧಾನಸಭಾ ಕ್ಷೇತ್ರದ ಶಾಸಕ ಬಿ ಶಿವಣ್ಣ ಅವರ ನಾಮನಿರ್ದೇಶನ ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ.

ವಕೀಲೆ ಸುಧಾ ಕಾಟ್ವ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅನು ಶಿವರಾಮನ್‌ ಮತ್ತು ಕೆ ಎಸ್‌ ಭರತ್‌ ಕುಮಾರ್‌ ಅವರ ವಿಭಾಗೀಯ ಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಸ್‌ ಉಮಾಪತಿ ಅವರ ವಾದ ಆಲಿಸಿದ ಪೀಠವು ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಕೆಎಸ್‌ಪಿಸಿಬಿ ಅಧ್ಯಕ್ಷರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ. ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಲಾಗಿದೆ. 

ಜಲ ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾಯಿದೆ–1974ರ ಸೆಕ್ಷನ್ 4(2)(ಎ) ಪ್ರಕಾರ, ಅಧ್ಯಕ್ಷ ಹುದ್ದೆ ಅಲಂಕರಿಸುವವರು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ವಿಶೇಷ ಜ್ಞಾನ ಅಥವಾ ಪ್ರಾಯೋಗಿಕ ಅನುಭವವನ್ನು ಹೊಂದಿರಬೇಕು. ಇಲ್ಲವೇ ಅಂತಹ ವಿಷಯಗಳನ್ನು ನಿರ್ವಹಿಸುವ ಸಂಸ್ಥೆಗಳ ಆಡಳಿತದಲ್ಲಿ ಜ್ಞಾನ ಮತ್ತು ಅನುಭವ ಪಡೆದಿರಬೇಕು. ಈ ಪ್ರಕರಣದಲ್ಲಿ ನಾಮನಿರ್ದೇಶನಕ್ಕೂ ಮುನ್ನ ಶಿವಣ್ಣ ಅವರಿಗೆ ಈ ಅರ್ಹತೆಗಳು ಇವೆಯೇ ಹೇಗೆ ಎಂಬುದನ್ನು ಸಮರ್ಪಕವಾಗಿ ಪರಿಶೀಲಿಸಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಕೆಎಸ್‌ಪಿಸಿಬಿ ಅಧ್ಯಕ್ಷ, ಸದಸ್ಯರ ನಾಮನಿರ್ದೇಶನ ಹಾಗೂ ಸದಸ್ಯ ಕಾರ್ಯದರ್ಶಿಯ ನೇಮಕಾತಿಗೆ ಸಂಬಂಧಿಸಿದ 2024ರ ನಿಯಮಗಳ ಪ್ರಕಾರ, ಆಯ್ಕೆ ಸಮಿತಿಯು, ಕನಿಷ್ಠ ಮೂರು ರಾಷ್ಟ್ರೀಯ ದಿನಪತ್ರಿಕೆಗಳಲ್ಲಿ (ಅವುಗಳಲ್ಲಿ ಒಂದು ಕನ್ನಡ) ಮುಕ್ತ ಜಾಹೀರಾತು ನೀಡಬೇಕು. ಆದರೆ, ಈ ಕಡ್ಡಾಯ ಕ್ರಮವನ್ನು ಅನುಸರಿಸಲಾಗಿದೆಯೇ ಎಂಬುದನ್ನು ನಾಮ ನಿರ್ದೇಶನದಲ್ಲಿ ಸ್ಪಷ್ಟಪಡಿಸಿಲ್ಲ ಎಂದು ದೂರಲಾಗಿದೆ.

ಹಿಂದಿನ ಅಧ್ಯಕ್ಷರ ರಾಜೀನಾಮೆಯಿಂದ ಉಂಟಾದ ಖಾಲಿ ಹುದ್ದೆಯನ್ನು ಭರ್ತಿ ಮಾಡಲು ಈ ನಾಮನಿರ್ದೇಶನ ಮಾಡಿದ್ದರೆ, ಕಾಯಿದೆಯ ಸೆಕ್ಷನ್‌ 5(6)ರ ಅನ್ವಯ ಹೊಸದಾಗಿ ನಾಮನಿರ್ದೇಶನಗೊಂಡ ವ್ಯಕ್ತಿಯ ಅಧಿಕಾರಾವಧಿ ಹಿಂದಿನ ಅಧ್ಯಕ್ಷರ ಉಳಿದ ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ. ಹೊಸದಾಗಿ ಪೂರ್ಣ ಮೂರು ವರ್ಷಗಳ ಅವಧಿಗೆ ನೀಡಲಾಗುವುದಿಲ್ಲ ಎಂಬ ಅಂಶವನ್ನೂ ಅರ್ಜಿದಾರರು ಮುನ್ನೆಲೆಗೆ ತಂದಿದ್ದಾರೆ.