ತೆರಿಗೆ ಇಲಾಖೆ ಹೊರಡಿಸಿದ್ದ ಶಓಮಿ ಇಂಡಿಯಾದ ₹3,700 ಕೋಟಿ ತಾತ್ಕಾಲಿಕ ಜಪ್ತಿ ಆದೇಶ ಬದಿಗೆ ಸರಿಸಿದ ಕರ್ನಾಟಕ ಹೈಕೋರ್ಟ್
ಶಓಮಿ ಇಂಡಿಯಾಗೆ ಸೇರಿದ ನಿಶ್ಚಿತ ಠೇವಣಿಯಲ್ಲಿರುವ ₹3,700 ಕೋಟಿಗಳನ್ನು ಆರು ತಿಂಗಳ ಕಾಲ ಜಪ್ತಿ ಮಾಡಿ ತಾತ್ಕಾಲಿಕ ಆದೇಶ ಮಾಡಿದ್ದ ಆದಾಯ ತೆರಿಗೆ ಇಲಾಖೆಯ ಆದೇಶವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ಬದಿಗೆ ಸರಿಸಿದೆ.
“ಆದಾಯ ತೆರಿಗೆ ಇಲಾಖೆಯು ಹೊರಡಿಸಿರುವ ಆಕ್ಷೇಪಾರ್ಹ ಆದೇಶವು ಅಕ್ರಮ, ಸ್ವೇಚ್ಛೆ ಮತ್ತು ಕಾನೂನಿಗೆ ವಿರುದ್ಧವಾಗಿದ್ದು, ಅದು ವಜಾಕ್ಕೆ ಅರ್ಹವಾಗಿದೆ” ಎಂದು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶದಲ್ಲಿ ಹೇಳಿದೆ.
ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ವಿದೇಶದ ಯಾವುದೇ ಸಂಸ್ಥೆಗೆ ರಾಜಧನ ಅಥವಾ ಯಾವುದೇ ತೆರನಾದ ಹಣ ಪಾವತಿಸದಂತೆ ಶಓಮಿಗೆ ನ್ಯಾಯಾಲಯ ನಿರ್ದೇಶಿಸಿದೆ.
ಪರಿಶೀಲನೆಯ ಬಳಿಕ ಬೃಹತ್ ಮೊತ್ತದ ತೆರಿಗೆ ಬೇಡಿಕೆ ಇಡುವ ಸಾಧ್ಯತೆ ಇರುತ್ತದೆ ಎಂಬ ಅಳುಕಿನ ಹಿನ್ನೆಲೆಯಲ್ಲಿ ತಾತ್ಕಾಲಿಕ ಜಪ್ತಿ ಆದೇಶ ಮಾಡಲಾಗದು ಎಂದು ಆದಾಯ ತೆರಿಗೆ ಇಲಾಖೆಯನ್ನು ಕುರಿತು ನ್ಯಾಯಾಲಯ ಹೇಳಿದೆ.
“ಆಕ್ಷೇಪಾರ್ಹವಾದ ಆದೇಶವನ್ನು ಯಾಂತ್ರಿಕವಾಗಿ ಹೊರಡಿಸಲಾಗಿದ್ದು, ಎರವಲು ಪಡೆದ ಅಭಿಪ್ರಾಯದ ಆಧಾರದ ಮೇಲೆ ರೂಪಿತವಾಗಿದೆ. ಮೌಲ್ಯಮಾಪನ ಅಧಿಕಾರಿಯ ತನ್ನ ಅಭಿಪ್ರಾಯ ರೂಪಿಸಿಕೊಳ್ಳಬೇಕೆನ್ನುವ ಪರೀಕ್ಷೆಯನ್ನು ಆದೇಶ ಪೂರೈಸುವುದಿಲ್ಲ” ಎಂದು ನ್ಯಾಯಾಲಯ ಹೇಳಿದ್ದು, ಆದಾಯ ತೆರಿಗೆ ಇಲಾಖೆಯ ಆದೇಶವನ್ನು ಬದಿಗೆ ಸರಿಸಿದೆ.
ಭಾರತದ ಹೊರಗಿನ ಹಣ ಪಾವತಿಗೆ ಸಂಬಂಧಿಸಿದಂತೆ ಶಓಮಿ ಇಂಡಿಯಾಕ್ಕೆ ಷರತ್ತುಗಳನ್ನು ವಿಧಿಸಲಾಗಿದೆ. ಪ್ರತಿವಾದಿಗಳು 2023ರ ಮಾರ್ಚ್ 31ರ ಒಳಗೆ ಕರಡು ಪರಿಶೀಲನೆ ಮುಗಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಶಓಮಿ ಇಂಡಿಯಾ ಸಂಸ್ಥೆಯು ರಾಜಧನ ಪಾವತಿಸಬೇಕು ಎಂದು ಕಾರಣ ನೀಡಿ ಲಾಭವನ್ನು ವಿದೇಶಕ್ಕೆ ವರ್ಗಾಯಿಸುವ ಕೆಲಸದಲ್ಲಿ ನಿರತವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಪ್ತಿ ಆದೇಶ ಮಾಡಲಾಗಿತ್ತು.
ಜಪ್ತಿ ಏತಕ್ಕಾಗಿ ಮಾಡಲಾಗುತ್ತಿದೆ ಎಂದು ಆದೇಶದಲ್ಲಿ ಹೇಳಲಾಗಿಲ್ಲ. ಸೂಕ್ತ ಕಾರಣಗಳನ್ನು ನೀಡದೇ ಇರುವುದರಿಂದ ಜಪ್ತಿ ಆದೇಶ ಮಾಡಿರುವುದಕ್ಕೆ ಹೊಸ ಆಧಾರವನ್ನು ಸೇರಿಸುವಂತಿಲ್ಲ ಎಂದು ಶಓಮಿ ವಾದಿಸಿತ್ತು.
ಶಓಮಿಯು ತೆರಿಗೆ ಪಾವತಿಯಿಂದ ಪಾರಾಗಲು ತೆರಿಗೆ ವಿಧಿಸಬಹುದಾದ ಆದಾಯವನ್ನು ಕಡಿತ ಮಾಡುವ ಪ್ರಯತ್ನ ಮಾಡುತ್ತಿದೆ ಎಂಬುದು ಆದಾಯ ತೆರಿಗೆ ಇಲಾಖೆಯ ವಾದವಾಗಿತ್ತು.