ಅಪರಾಧ ಪ್ರಕರಣಗಳ ತನಿಖೆ ಪೂರ್ಣಗೊಳಿಸಲು ಪೊಲೀಸರಿಗೆ ಗಡುವು ವಿಧಿಸಿದ ಕರ್ನಾಟಕ ಹೈಕೋರ್ಟ್‌

ಹಣಕಾಸಿನ ವಂಚನೆ, ಹವಾಲಾ ಹಣ ಮತ್ತು ಡಿಜಿಟಲ್‌ ಕರೆನ್ಸಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆ ನಡೆಸಲು ಪೊಲೀಸ್‌ ಸಿಬ್ಬಂದಿಗೆ ತರಬೇತಿ ನೀಡುವ ಅಗತ್ಯತೆಯ ಬಗ್ಗೆಯೂ ಹೈಕೋರ್ಟ್‌ ಒತ್ತಿ ಹೇಳಿದೆ.
Justice S Sunil Dutt Yadav and Karnataka High Court
Justice S Sunil Dutt Yadav and Karnataka High Court

ಸಣ್ಣಪುಟ್ಟ ಮತ್ತು ಗಂಭೀರ ಅಪರಾಧಗಳ ತನಿಖೆಯನ್ನು ಕ್ರಮವಾಗಿ 60 ಮತ್ತು 90 ದಿನಗಳ ಒಳಗೆ ಪೂರ್ಣಗೊಳಿಸಬೇಕು ಎಂದು ಪೊಲೀಸ್‌ ಮತ್ತು ತನಿಖಾ ಸಂಸ್ಥೆಗಳಿಗೆ ಕರ್ನಾಟಕ ಹೈಕೋರ್ಟ್‌ಗೆ ಈಚೆಗೆ ಗಡುವು ವಿಧಿಸುವ ಮೂಲಕ ಅನಿರೀಕ್ಷಿತ ಮತ್ತು ಮಹತ್ವದ ಆದೇಶ ಮಾಡಿದೆ (ಸುಜಿತ್‌ ಮುಳಗುಂದ ವರ್ಸಸ್‌ ಪೊಲೀಸ್‌ ವರಿಷ್ಠಾಧಿಕಾರಿ).

ಬೆಳಗಾವಿಯ ಸುಜಿತ್‌ ಮುಳಗುಂದ ಎಂಬವರು ಸಲ್ಲಿಸಿದ್ದ ಖಾಸಗಿ ದೂರು ಆಧರಿಸಿ ಎಫ್‌ಐಆರ್‌ ದಾಖಲಿಸುವಂತೆ ಮ್ಯಾಜಿಸ್ಟ್ರೇಟ್‌ ಮಾಡಿದ್ದ ಆದೇಶ ಪ್ರಶ್ನಿಸಿ ಬೆಳಗಾವಿ ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಅಭಯ್‌ಕುಮಾರ್‌ ಪಾಟೀಲ್‌ ದಾಖಲಿಸಿದ್ದ ಮೇಲ್ಮನವಿ ಒಳಗೊಂಡ ಎರಡು ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಸ್‌ ಸುನಿಲ್‌ಕುಮಾರ್‌ ಯಾದವ್‌ ಅವರ ನೇತ್ವತ್ವದ ಏಕಸದಸ್ಯ ಪೀಠವು ಮಾರ್ಗಸೂಚಿಗಳನ್ನು ಹೊರಡಿಸಿದೆ.

ದೂರುದಾರರು ಅಥವಾ ಆರೋಪಿಗಳಲ್ಲಿ ಯಾವುದೇ ಪೂರ್ವಾಗ್ರಹ ಉಂಟಾಗದಂತೆ ಮಾಡಲು ತಡ ಮಾಡದೇ ತನಿಖೆ ನಡೆಸುವಂತೆ ಪೊಲೀಸ್‌ ಮತ್ತು ಮ್ಯಾಜಿಸ್ಟ್ರೇಟ್‌ಗಳನ್ನು ಕೇಂದ್ರೀಕರಿಸಿ ನ್ಯಾಯಾಲಯವು ವಿಸ್ತೃತವಾದ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಹಣಕಾಸಿನ ವಂಚನೆ, ಹವಾಲಾ ಹಣ ಮತ್ತು ಡಿಜಿಟಲ್‌ ಕರೆನ್ಸಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆ ನಡೆಸಲು ಪೊಲೀಸ್‌ ಸಿಬ್ಬಂದಿಗೆ ತರಬೇತಿ ನೀಡುವ ಅಗತ್ಯತೆಯ ಬಗ್ಗೆಯೂ ನ್ಯಾಯಾಲಯ ಒತ್ತಿ ಹೇಳಿದೆ.

“ಸಣ್ಣ, ಗಂಭೀರ ಮತ್ತು ಹೇಯ ಅಪರಾಧಗಳು ಎಂದು ವರ್ಗೀಕರಿಸಿ, ಸಣ್ಣ ಅಪರಾಧಗಳಿಗೆ ತನಿಖೆ ನಡೆಸಲು 60 ದಿನಗಳ ಗಡುವು ವಿಧಿಸಬಹುದಾಗಿದೆ. ತನಿಖೆ ಪೂರ್ಣಗೊಳಿಸಲು ಕಾರಣಗಳನ್ನು ಉಲ್ಲೇಖಿಸಿರುವುದನ್ನು ಆಧರಿಸಿ ವಿಶೇಷ ನ್ಯಾಯಾಧೀಶರು ಅಥವಾ ಮ್ಯಾಜಿಸ್ಟ್ರೇಟ್‌ ಅವರು ಸಮಯ ವಿಸ್ತರಿಸಬಹುದಾಗಿದೆ. ಗಂಭೀರ ಮತ್ತು ಹೇಯ ಅಪರಾಧಗಳ ತನಿಖೆಯನ್ನು 90 ದಿನಗಳಲ್ಲಿ ಪೂರ್ಣಗೊಳಿಸಬೇಕು” ಎಂದು ನ್ಯಾಯಾಧೀಶರು ಕಟ್ಟಪಟ್ಟಣೆ ವಿಧಿಸಿದ್ದಾರೆ.

ನಿರ್ದಿಷ್ಟ ಕಾಲಾವಧಿಯಲ್ಲಿ ತನಿಖೆ ಮುಗಿಯದಿದ್ದರೆ, ತನಿಖೆ ಪೂರ್ಣಗೊಳಿಸಲು ಸಮರ್ಥನೆ ನೀಡಬಹುದಾದ ಕಾರಣಗಳು ಇಲ್ಲದಿದ್ದರೆ ಸಿಆರ್‌ಪಿಸಿ ಸೆಕ್ಷನ್‌ 36ರ ಅನ್ವಯ ಮೇಲಧಿಕಾರಿಯು ತಮ್ಮ ಅಧಿಕಾರ ಚಲಾಯಿಸಬಹುದಾಗಿದೆ ಎಂದು ಪೀಠ ಸ್ಪಷ್ಟವಾಗಿ ಹೇಳಿದೆ.

ಠಾಣಾಧಿಕಾರಿ ಶ್ರೇಣಿಗೆ ಸರಿಸಮನಾದ ಹುದ್ದೆಯಲ್ಲಿರುವ ಪೊಲೀಸ್‌ ಅಧಿಕಾರಿಯು ತಮ್ಮ ಠಾಣೆಯ ವ್ಯಾಪ್ತಿಯಲ್ಲಿ ಸೆಕ್ಷನ್‌ 36ರ ಅಡಿ ಅಧಿಕಾರ ಚಲಾಯಿಸಬಹುದಾಗಿದೆ. ನಿರ್ದಿಷ್ಟ ಕಾಲಮಿತಿಯಲ್ಲಿ ತನಿಖೆ ಮುಗಿಸದಿದ್ದರೆ ಕರ್ನಾಟಕ ಪೊಲೀಸ್‌ ಕಾಯಿದೆ ಸೆಕ್ಷನ್‌ 20(ಸಿ) ಮತ್ತು (ಡಿ) ಅಡಿ ಮೇಲಧಿಕಾರಿಗಳು ಕ್ರಮಕೈಗೊಳ್ಳಬಹುದಾಗಿದೆ ಎಂದು ನ್ಯಾಯಾಲಯ ನಿರ್ದೇಶಿಸಿದೆ.

“ತನಿಖಾಧಿಕಾರಿಯು ನಿರ್ದಿಷ್ಟ ಕಾಲಮಿತಿಯಲ್ಲಿ ತನಿಖೆ ಮುಗಿಸದಿದ್ದರೆ ರಾಜ್ಯ ಮತ್ತು ಜಿಲ್ಲಾ ಪೊಲೀಸ್‌ ದೂರು ಪ್ರಾಧಿಕಾರಕ್ಕೆ ದೂರು ನೀಡಬಹುದಾಗಿದೆ. ತನಿಖೆ ನಡೆಸುವುದು ವಿಳಂಬವಾದರೆ 20(ಸಿ) ಅಡಿ ಕ್ರಮ ಜರುಗಿಸಬಹುದಾಗಿದ್ದು, ಸೆಕ್ಷನ್‌ 20(ಸಿ)(7) ಅಡಿ ವಿವರಣೆ ಕೇಳಬಹುದಾಗಿದೆ. ಇದು ತನಿಖಾಧಿಕಾರಿಯು ಹೊಣೆಗಾರಿಕೆ ಪ್ರದರ್ಶಿಸುವಂತೆ ಮಾಡಲು ಅನುಕೂಲವಾಗಲಿದೆ” ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಪೊಲೀಸ್‌ ಸಿಬ್ಬಂದಿಯನ್ನು ಎರಡು ರೀತಿಯಲ್ಲಿ ವಿಭಾಗ ಮಾಡುವ ಅಗತ್ಯವನ್ನು ನ್ಯಾಯಾಲಯ ವಿಸ್ತೃತವಾದ ಮಾರ್ಗಸೂಚಿಯಲ್ಲಿ ವಿವರಿಸಿದೆ. ಅಪರಾಧಗಳ ತನಿಖೆ ನಡೆಸುವುದು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಎರಡು ವಿಭಾಗಗಳನ್ನು ಮಾಡಿದೆ.

“ತನಿಖೆಯಲ್ಲಿ ವೃತ್ತಿಪರತೆ ಕಾಪಾಡಲು ಅಗತ್ಯ ತರಬೇತಿಯೊಂದಿಗೆ ಪೊಲೀಸ್ ಠಾಣೆಗಳಲ್ಲಿ ನಿರ್ದಿಷ್ಟ ಸಿಬ್ಬಂದಿಯೊಂದಿಗೆ ಪ್ರತ್ಯೇಕ ತನಿಖಾ ವಿಭಾಗ ಸ್ಥಾಪಿಸಬೇಕು. ಅಪರಾಧದ ಕಾರ್ಯತಂತ್ರ, ಅಪರಾಧ ಪತ್ತೆಹಚ್ಚುವ ತಂತ್ರ, ಸೈಬರ್ ಅಪರಾಧ, ಹವಾಲಾ ಹಣ ಮತ್ತು ಭ್ರಷ್ಟಾಚಾರ ಅಪರಾಧಗಳಿಗೆ ಸಂಬಂಧಿಸಿದಂತೆ ತಂತ್ರಜ್ಞಾನಕ್ಕೆ ಸಂಬಂಧಿಸಿದ ಅಗತ್ಯ ತಿಳಿವಳಿಕೆ ನೀಡಲು ಪೊಲೀಸ್‌ ಸಿಬ್ಬಂದಿಗೆ ತರಬೇತಿಗೆ ನೀಡಬೇಕು” ಎಂದು ಪೀಠ ಹೇಳಿದೆ.

ಸಾಕ್ಷಿ ನುಡಿಯುವ ಸಾರ್ವಜನಿಕರಲ್ಲಿ ಮನೆ ಮಾಡುವ ಆತಂಕ ದೂರ ಮಾಡಲು ಸಾಕ್ಷಿ ಸಂರಕ್ಷಣಾ ಯೋಜನೆಯನ್ನು ಪರಿಣಾಮಕಾರಿಯ ಜಾರಿ ಮಾಡಬೇಕಿದೆ ಎಂದು ನ್ಯಾಯಾಲಯ ಹೇಳಿದೆ. “ತನಿಖೆಯಲ್ಲಿನ ವಿಳಂಬ ಮತ್ತು ಅದರ ಪರಿಣಾಮವಾಗಿ ವಿಚಾರಣೆ ವಿಳಂಬವಾಗುತ್ತದೆ. ಇದರಿಂದ ದೂರುದಾರರು ಹಾಗೂ ಸಾಕ್ಷಿಗಳಲ್ಲಿ ಆತಂಕ ಮನೆ ಮಾಡುತ್ತದೆ. ಹೀಗಾಗಿ, ಸಾಕ್ಷಿ ಸಂರಕ್ಷಣಾ ಯೋಜನೆಯನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ” ಎಂದು ನ್ಯಾಯಾಲಯ ಸಮರ್ಥಿಸಿದೆ.

ನ್ಯಾಯಾಲಯ ಹೊರಡಿಸಿರುವ ಇತರೆ ಮಾರ್ಗಸೂಚಿಗಳು:

  • ತನಿಖೆ ತುರ್ತಾಗಿ ನಡೆಯಲು ಮತ್ತು ಎಲ್ಲಿ ತನಿಖೆ ಪೂರ್ವಾಗ್ರಹ ಪೀಡಿತವಾಗಿ ನಡೆಯುತ್ತದೆ ಹಾಗೂ ಹಳಿ ತಪ್ಪುತ್ತಿದೆ ಎಂಬುದನ್ನು ಗಮನಿಸಿ ಮ್ಯಾಜಿಸ್ಟ್ರೇಟ್‌ ಅಥವಾ ವಿಶೇಷ ನ್ಯಾಯಾಧೀಶರು ಸಿಆರ್‌ಪಿಸಿ ಸೆಕ್ಷನ್‌ 156(3) ರ ಅಡಿ ಆದೇಶ ಮಾಡಬಹುದು.

  • ಎಫ್‌ಐಆರ್‌ ದಾಖಲಿಸದ ಅಹವಾಲು ಮತ್ತು ಸೆಕ್ಷನ್‌ 156(3)ರ ಅಡಿ ಮನವಿ ಸಲ್ಲಿಸದಾಗ ಅದನ್ನು 30 ದಿನಗಳ ಒಳಗಾಗಿ ವಿಲೇವಾರಿ ಮಾಡಬೇಕು.

  • ಸಿಆರ್‌ಪಿಸಿ ಸೆಕ್ಷನ್‌ 167ರ ಅಡಿ ರಿಮ್ಯಾಂಡ್‌ ವಿಸ್ತರಿಸುವ ಹಂತದಲ್ಲಿ ಮ್ಯಾಜಿಸ್ಟ್ರೇಟ್‌ ಅವರು ತನಿಖೆ ಯಾವ ಹಂತದಲ್ಲಿದೆ ಎಂಬುದನ್ನು ತಿಳಿಯಬಹುದು.

  • ಹಲವು ಸಾಕ್ಷಿಗಳ ದಾಖಲು ಅಗತ್ಯತೆ ಸೇರಿದಂತೆ ಪ್ರಕರಣದ ಇತರೆ ವಿಚಾರಗಳ ಕುರಿತು ಅಭಿಯೋಜಕರು ನಿರ್ಧಾರ ಕೈಗೊಳ್ಳುವ ಅಗತ್ಯವಿದೆ.

  • ಕರ್ನಾಟಕ ಪೊಲೀಸ್‌ ಕೈಪಿಡಿ ಆದೇಶದ 1550, 1550 (2), 1551 (2) ಮತ್ತು (3) ಅನ್ನು ಜಾರಿ ಮಾಡಲು ಅಗತ್ಯ ಯೋಜನೆ ರೂಪಿಸಬೇಕು.

  • 1943ರ ಪೊಲೀಸ್ ನಿಯಮಾವಳಿಗಳ ಅನ್ವಯ ನಿಯಮ ರೂಪಿಸುವ ಮೂಲಕ ತ್ವರಿತ ಮತ್ತು ಪರಿಣಾಮಕಾರಿ ತನಿಖೆಯ ಉದ್ದೇಶಕ್ಕಾಗಿ ನಿಬಂಧನೆ ಹೊಂದುವುದನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಗಣಿಸಬಹುದು.

  • ಸಾರ್ವಜನಿಕ ಕ್ಷೇತ್ರದಲ್ಲಿರುವ ವ್ಯಕ್ತಿಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಸಿಆರ್‌ಪಿಸಿ ಸೆಕ್ಷನ್‌ 164 ಅನ್ನು ಮೇಲಿಂದ ಮೇಲೆ ಬಳಕೆ ಮಾಡಬೇಕು.

  • ತನಿಖೆಗೆ ಅಡ್ಡಿಪಡಿಸಲು ಆರೋಪಿಗಳು ಮಾಡುತ್ತಿರುವ ಪ್ರಯತ್ನಗಳು ಸೇರಿದಂತೆ ತ್ವರಿತ ತನಿಖೆಗೆ ಅಡ್ಡಿಯಾಗುತ್ತಿರುವ ಅಡಚಣೆಗಳನ್ನು ಮ್ಯಾಜಿಸ್ಟ್ರೇಟ್ ಅವರ ಗಮನಕ್ಕೆ ತನಿಖಾಧಿಕಾರಿ ತರಬೇಕು. ಮ್ಯಾಜಿಸ್ಟ್ರೇಟ್, ಕಾನೂನಿನಡಿಯಲ್ಲಿ ಅನುಮತಿಸಬಹುದಾದಂತಹ ಕ್ರಮಗಳನ್ನು ತೆಗೆದುಕೊಳ್ಳುವುದರ ಹೊರತಾಗಿ, ಉದಾಹರಣೆಗೆ, ಶಂಕಿತ, ಆರೋಪಿ ಅಥವಾ ಮೂರನೇ ವ್ಯಕ್ತಿಯ ವಶದಲ್ಲಿರುವ ದಾಖಲೆಗಳನ್ನು ಸಲ್ಲಿಸಲು ಸಮನ್ಸ್ ನೀಡುವುದು, ಸೂಕ್ತ ಕ್ರಮಕ್ಕಾಗಿ ಜಿಲ್ಲಾ ನ್ಯಾಯಾಧೀಶರಿಗೆ ವರದಿಯನ್ನು ಕಳುಹಿಸುವ ಮೂಲಕ ಆಡಳಿತಾತ್ಮಕವಾಗಿ ವಿಳಂಬ ತಡೆಯಬಹುದು.

  • ಮಹೇಂದ್ರ ಚಾವ್ಲಾ ಮತ್ತು ಇತರರು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಸಾಕ್ಷಿ ಸಂರಕ್ಷಣಾ ಯೋಜನೆಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರವು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಪೀಠವು ವಿವರಿಸಿದೆ.

Related Stories

No stories found.
Kannada Bar & Bench
kannada.barandbench.com