ಹೈಕೋರ್ಟ್‌ ಕಚೇರಿಗಳಿಗೆ ಎರಡು ಕಟ್ಟಡ ನೀಡಲು ರಾಜ್ಯ ಸರ್ಕಾರಕ್ಕೆ ಮನವಿ; ಸ್ಥಳಾವಕಾಶದ ಕೊರತೆ ನೀಗಿಸಲು ನಿರ್ದೇಶನ

ಹೈಕೋರ್ಟ್‌ ಕಟ್ಟಡದ ನೆಲಮಾಳಿಗೆಯ ಜಾಗವನ್ನು ಕಚೇರಿಗಳನ್ನಾಗಿ ಬಳಸುವುದು ಕಾನೂನಿಗೆ ವಿರುದ್ಧವಾಗಿದೆ. ಹೈಕೋರ್ಟ್‌ಗೆ ಹೆಚ್ಚುವರಿ ಜಾಗ ನೀಡಿದರೆ ನೆಲಮಾಳಿಗೆಯಲ್ಲಿನ ಕಚೇರಿಗಳನ್ನು ಸ್ಥಳಾಂತರಿಸಬಹುದಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
Karnataka High Court
Karnataka High Court

ನ್ಯಾಯಾಲಯದ ಕಚೇರಿಗಳನ್ನು ಸ್ಥಳಾಂತರಿಸುವ ಸಂಬಂಧ ಹೈಕೋರ್ಟ್‌ ಸಮೀಪದಲ್ಲಿರುವ ಹಳೆಯ ಚುನಾವಣಾ ಕಟ್ಟಡ ಮತ್ತು ಕರ್ನಾಟಕ ಸರ್ಕಾರದ ವಿಮಾ ಇಲಾಖೆಯ ಕಟ್ಟಡವನ್ನು ಹೈಕೋರ್ಟ್‌ಗೆ ನೀಡಲು ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ಮಂಗಳವಾರ ಕರ್ನಾಟಕ ಹೈಕೋರ್ಟ್‌ ಮನವಿ ಮಾಡಿತು.

ವಕೀಲ ರಮೇಶ್‌ ನಾಯ್ಕ್‌ ಎಲ್‌ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಹೈಕೋರ್ಟ್‌ ಕಟ್ಟಡದ ನೆಲಮಾಳಿಗೆಯ ಜಾಗವನ್ನು ಕಚೇರಿಗಳನ್ನಾಗಿ ಬಳಸುವುದು ಕಾನೂನಿಗೆ ವಿರುದ್ಧ ಎಂದು ಮನವಿಯಲ್ಲಿ ವಿವರಿಸಲಾಗಿದೆ. ಹೈಕೋರ್ಟ್‌ಗೆ ಹೆಚ್ಚುವರಿ ಜಾಗ ನೀಡಿದರೆ ನೆಲಮಾಳಿಗೆಯಲ್ಲಿನ ಕಚೇರಿಗಳನ್ನು ಸ್ಥಳಾಂತರಿಸಬಹುದಾಗಿದೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಲಾಗಿದೆ.

“ಹಳೆಯ ಚುನಾವಣಾ ಕಟ್ಟಡ ಮತ್ತು ಕರ್ನಾಟಕ ಸರ್ಕಾರ ವಿಮಾ ಇಲಾಖೆಯ ಕಟ್ಟಡಗಳನ್ನು ಹೈಕೋರ್ಟ್‌ಗೆ ವರ್ಗಾಯಿಸುವಂತೆ ರಾಜ್ಯ ಸರ್ಕಾರಕ್ಕೆ ನಾವು ಮನವಿ ಮಾಡುತ್ತೇವೆ. ವಿಶೇಷವಾಗಿ ಸ್ಥಳಾವಕಾಶದ ಸಮಸ್ಯೆಯನ್ನು ಪರಿಗಣಿಸಿ ನಿರ್ಧಾರ ಮಾಡಬೇಕು. ರಾಜ್ಯ ಸರ್ಕಾರವು ಸಕಾರಾತ್ಮಕ ಉತ್ತರದ ಮೂಲಕ ವಾಪಸಾಗುತ್ತದೆ ಎಂದು ಭಾವಿಸುತ್ತೇವೆ” ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿಕೊಂಡಿದೆ.

“ಹೈಕೋರ್ಟ್‌ ಎದುರಿಸುತ್ತಿರುವ ಸ್ಥಳಾವಕಾಶದ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಅಡ್ವೊಕೇಟ್‌ ಜನರಲ್‌ ಅವರೂ ತಮ್ಮ ಕಚೇರಿಯನ್ನು ಬಳಸಿಕೊಳ್ಳಬೇಕು ಎಂದು ನಾವು ಕೋರುತ್ತೇವೆ” ಎಂದು ಪೀಠ ಹೇಳಿದೆ.

ವಿಚಾರಣೆ ಆರಂಭವಾಗುತ್ತಿದ್ದಂತೆ ಸರ್ಕಾರದ ಪರ ವಕೀಲರು “ಈಗಾಗಲೇ ಸ್ಥಳಾವಕಾಶ ನೀಡಿರುವ ತಾಂತ್ರಿಕ ಶಿಕ್ಷಣ ಇಲಾಖೆಯ ಕಟ್ಟಡದಲ್ಲಿ ಖಾಲಿ ಸ್ಥಳಾವಕಾಶ ಇಲ್ಲದಿರುವುದರಿಂದ ಹೈಕೋರ್ಟ್‌ಗೆ ನೀಡಲಾಗುತ್ತಿಲ್ಲ” ಎಂದರು.

Also Read
ಶತಮಾನದ ಹಿಂದೆ ಹೈಕೋರ್ಟ್‌ ಮೂಲ ಕಟ್ಟಡ ನಿರ್ಮಾಣ: ಹೈಕೋರ್ಟ್‌ ಕಟ್ಟಡ ತಪಾಸಣೆ ಕೋರಿದ್ದ ಮನವಿ ವಜಾ ಮಾಡಿದ ಹೈಕೋರ್ಟ್‌

ಹೈಕೋರ್ಟ್‌ ಆಡಳಿತವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಸ್‌ ಎಸ್‌ ನಾಗಾನಂದ್‌ ಅವರು “ಹೈಕೋರ್ಟ್‌ಗೆ ಸಮೀಪದಲ್ಲಿರುವ ಹಳೆಯ ಚುನಾವಣಾ ಕಟ್ಟಡ ಮತ್ತು ಕರ್ನಾಟಕ ಸರ್ಕಾರ ವಿಮಾ ಕಟ್ಟಡವನ್ನು ಹೈಕೋರ್ಟ್‌ಗೆ ಹಸ್ತಾಂತರಿಸಿದರೆ ತಕ್ಷಣದ ಸಮಸ್ಯೆ ಬಗೆಹರಿಯಲಿದೆ” ಎಂದರು.

ನ್ಯಾಯಾಲಯದ ಹಿಂದಿನ ಆದೇಶದಂತೆ ಹೈಕೋರ್ಟ್‌ನ ಕೆಲವು ಕಚೇರಿಗಳನ್ನು ಸ್ಥಳಾಂತರಿಸುವ ಸಂಬಂಧ ತಾಂತ್ರಿಕ ಶಿಕ್ಷಣ ಇಲಾಖೆಯ ಕಟ್ಟಡದಲ್ಲಿ ಎರಡು ಕೊಠಡಿಗಳನ್ನು ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ನೀಡಿತ್ತು. ಹೆಚ್ಚಿನ ಸ್ಥಳಾವಕಾಶ ನೀಡುವ ಭರವಸೆಯನ್ನೂ ರಾಜ್ಯ ಸರ್ಕಾರವು ಹಿಂದೆ ಹೈಕೋರ್ಟ್‌ಗೆ ನೀಡಿತ್ತು.

ಪ್ರಕರಣದ ವಿಚಾರಣೆಯನ್ನು 2022ರ ಜನವರಿ 6ಕ್ಕೆ ಮುಂದೂಡಲಾಗಿದೆ.

Related Stories

No stories found.
Kannada Bar & Bench
kannada.barandbench.com